ಬ್ಯಾಂಕ್, ಪೋಸ್ಟ್ ಆಫೀಸ್, ಬ್ಯಾಂಕಿಂಗೇತರ ಸಂಸ್ಥೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ಗಳ ಮೇಲಿನ ಬಡ್ಡಿ ದರ ಶೇಕಡಾ 7- 7.5ಯಷ್ಟು ಸಿಕ್ಕಿಬಿಟ್ಟರೆ ಅದೇ ಹೆಚ್ಚು ಎನ್ನುವ ಸನ್ನಿವೇಶ ಇವತ್ತಿಗೆ ಇದೆ. ಆದರೆ 2020ರ ಮಾರ್ಚ್ನಿಂದ ಒಂದು ವರ್ಷ ಈಚೆಗೆ ಷೇರು ಮಾರುಕಟ್ಟೆಯಲ್ಲಿ ಕೆಲವು ಚಿಲ್ಲರೆ ಬೆಲೆಯ ಷೇರುಗಳು ಬಂಗಾರದ ಫಸಲು ನೀಡಿವೆ. ಕಳೆದ ವರ್ಷ ಈ ಹೊತ್ತಿಗೆ ರೂ. 10ಕ್ಕಿಂತ ಕಡಿಮೆ ಬೆಲೆಯಲ್ಲಿ ವಹಿವಾಟು ನಡೆಸುತ್ತಿದ್ದ ಕೆಲವು ಷೇರುಗಳು ಈ ತನಕ ಶೇ 1000ಕ್ಕೂ ಹೆಚ್ಚು ರಿಟರ್ನ್ಸ್ ನೀಡಿವೆ. ವರ್ಷಕ್ಕೆ ಶೇಕಡಾ 1000ದಷ್ಟು ಪ್ರತಿಫಲ ನೀಡಬೇಕು ಅಂದರೆ, ತಿಂಗಳಿಗೆ ಎಷ್ಟಾಯಿತು ಗೊತ್ತಾ? ಶೇಕಡಾ 90ರ ಹತ್ತಿರ ಹತ್ತಿರ. ಇದನ್ನು ಇನ್ನೂ ಸರಳ ಮಾಡಿ ಅರ್ಥವಾಗುವಂತೆ ಹೇಳುವುದಾದರೆ, ಕಳೆದ ವರ್ಷ 10 ರೂಪಾಯಿ ಕೊಟ್ಟು ಒಂದು ಷೇರು ಖರೀದಿಸಿದಲ್ಲಿ ಅದರ ಬೆಲೆ ಈಗ 100 ರೂಪಾಯಿಗೂ ಹೆಚ್ಚಾಗಿದೆ. ಮತ್ತೂ ಒಂದು ಉದಾಹರಣೆಯಲ್ಲಿ 10 ರೂಪಾಯಿಯೇ 200 ರೂಪಾಯಿ ಆಗಿದೆ.
ಒಂದು ವರ್ಷದಲ್ಲಿ ಶೇ 1000ಕ್ಕೂ ಹೆಚ್ಚಿನ ರಿಟರ್ನ್ಸ್ ನೀಡಿದ ಚಿಲ್ಲರೆ ಷೇರುಗಳಿವು
ಈ ಲೇಖನದಲ್ಲಿ ಅಂಥ ಕೆಲವು ಉದಾಹರಣೆಗಳನ್ನು ನೀಡಲಾಗುತ್ತಿದೆ. ಡಿಜಿಸ್ಪೈಸ್ ಟೆಕ್ನಾಲಜೀಸ್ ಕಳೆದ ವರ್ಷ ರೂ. 3.46 ಇತ್ತು. ಮಾರ್ಚ್ 12ನೇ ತಾರೀಕಿಗೆ ಆ ಷೇರಿನ ಬೆಲೆ 76 ಆಗಿದೆ. ಅಂದರೆ ಶೇ 2,096ರಷ್ಟು ಏರಿದೆ. ಇನ್ನು ಸಬೆಕ್ಸ್ ಶೇ 1,1136 ಹೆಚ್ಚಳವಾಗಿದೆ. ಸಿಜಿ ಪವರ್ ಶೇ 1104, ಆರ್ಆರ್ಐಎಲ್ ಶೇ 1047, ಮೆಕ್ಲಾಯ್ಡ್ ರಸೆಲ್ ಇಂಡಿಯಾ ಶೇ 1005ರಷ್ಟು ಮೇಲೇರಿ ಪಟ್ಟಿಯ ಟಾಪ್ನಲ್ಲಿವೆ. ಇನ್ನು ಈ ಲೇಖನಕ್ಕಾಗಿ ಗಣನೆಗೆ ತೆಗೆದುಕೊಂಡಿರುವುದು ರೂ. 10ರೊಳಗೆ ಇರುವಂಥ ಷೇರುಗಳು ಮಾತ್ರ. ಇವುಗಳನ್ನು ಪೆನ್ನಿ ಸ್ಟಾಕ್ಸ್ ಎನ್ನಲಾಗುತ್ತದೆ. ಇವುಗಳ ಮೇಲೆ ಹೂಡಿಕೆ ಮಾಡುವುದು ಹೆಚ್ಚು ಅಪಾಯಕಾರಿ. ಆದ್ದರಿಂದ ರೀಟೇಲ್ ಹೂಡಿಕೆದಾರರು ಮೂಲಭೂತವಾಗಿ (ಫಂಡಮೆಂಟಲಿ) ಪ್ರಬಲವಾಗಿರುವ ಕಂಪೆನಿಯ ಷೇರುಗಳನ್ನು ಆರಿಸಿಕೊಂಡು, ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಗೆ ಆಲೋಚಿಸಬೇಕು.
ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಪೆನ್ನಿ ಸ್ಟಾಕ್ಗಳು ದೀರ್ಘಾವಧಿಯಲ್ಲಿ ಅತ್ಯುತ್ತಮ ಹೂಡಿಕೆ ಎನಿಸಬಹುದು ಎಂಬ ನಂಬಿಕೆಯಲ್ಲಿ ಹಣ ಹಾಕುತ್ತಾರೆ. ಆದರೆ ಅದು ಬಹಳ ಅಪಾಯಕಾರಿ. ಇಂಥ ಹೂಡಿಕೆಗಳು ಬಹುತೇಕ ಸಂದರ್ಭದಲ್ಲಿ ದೊಡ್ಡ ನಷ್ಟದಲ್ಲೇ ಕೊನೆಯಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಭರ್ಜರಿ ಫಸಲನ್ನು ನೀಡಿದ ಷೇರುಗಳಿವು: ಬಯೋಫಿಲ್ ಕೆಮಿಕಲ್ಸ್ (ಶೇ 966), ಹೆಕ್ಸಾ ಟ್ರೆಡೆಕ್ಸ್ (ಶೇ 963), ಕೆಲ್ಟಾನ್ ಟೆಕ್ ಸಲ್ಯೂಷನ್ಸ್ (ಶೇ 933), ಪಾಲ್ರೆಡ್ ಟೆಕ್ನಾಲಜೀಸ್ (ಶೇ 928), ಗೋಯೆಂಕಾ ಡೈಮಂಡ್ (ಶೇ 922), ಎಆರ್ಸಿ ಫೈನಾನ್ಸ್ (ಶೇ 859), ಬಿರ್ಲಾ ಟೈರ್ಸ್ (ಶೇ 859)- ಹೀಗೆ ಶೇ 500ಕ್ಕೂ ಹೆಚ್ಚು ಏರಿಕೆ ಕಂಡ 30 ಪೆನ್ನಿ ಸ್ಟಾಕ್ಗಳಲ್ಲಿ ಇವು ಒಳಗೊಂಡಿವೆ.
ಹೂಡಿಕೆದಾರರು ಷೇರಿನ ಮೇಲೆ ಹೂಡಿಕೆ ಮಾಡುವ ಮುನ್ನ ಕಂಪೆನಿಗೆ ಉತ್ತಮ ಪ್ರವರ್ತಕರು (ಪ್ರಮೋಟರ್ಸ್) ಇರುವರೇ? ಉದ್ಯಮದ ಮಾಡೆಲ್ ಚೆನ್ನಾಗಿದೆಯಾ? ಪ್ರತಿಸ್ಪರ್ಧಿಗಳಿಗಿಂತ ಅನುಕೂಲಕರ ಅಂಶಗಳಿವೆಯಾ ಇತ್ಯಾದಿಯನ್ನು ಗಮನಿಸಬೇಕು. ಅಂದಹಾಗೆ, ಇದಕ್ಕೂ ಮುಂಚೆ ಶೇಕಡಾ 500ಕ್ಕೂ ಹೆಚ್ಚು ರಿಟರ್ನ್ಸ್ ನೀಡಿದ ಕಂಪೆನಿಗಳ ಷೇರಿನ ಬಗ್ಗೆ ತಿಳಿಸಿಯಾಯಿತು. ಈಗ ಹೂಡಿಕೆದಾರರ ಸಂಪತ್ತು ಕೊಚ್ಚಿಹೋದ ಷೇರುಗಳ ಬಗ್ಗೆ ತಿಳಿದುಕೊಳದಳಿ. ದೇವ್ಹರಿ ಎಕ್ಸ್ಪೋರ್ಟ್ಸ್ (ಶೇ -82.80), ಸನ್ಕೇರ್ ಟ್ರೇಡರ್ಸ್ (ಶೇ -66), ಮೀನಾಕ್ಷಿ ಎಂಟರ್ಪ್ರೈಸಸ್ (ಶೇ -61) ಮತ್ತು ವಿಕಾಸ್ ಪ್ರೊಪಂಟ್ ಅಂಡ್ ಗ್ರಾನೈಟ್ (ಶೇ -60).
ಈ ಲೇಖನದಲ್ಲಿ ನೀಡಿರುವುದು ಷೇರುಗಳ ಏರಿಕೆ ಮತ್ತು ಇಳಿಕೆ ಬಗ್ಗೆ ಮಾಹಿತಿಯೇ ವಿನಾ ಖರೀದಿ ಅಥವಾ ಮಾರಾಟಕ್ಕೆ ಶಿಫಾರಸು ಅಲ್ಲ. ಒಂದು ವೇಳೆ ಈ ಲೇಖನದ ಆಧಾರದಲ್ಲಿ ಷೇರು ಖರೀದಿ ಮಾಡಿದಲ್ಲಿ ಆಗುವ ನಷ್ಟ- ಲಾಭಗಳಿಗೆ ಲೇಖಕರಾಗಲೀ ಟಿವಿ9ಕನ್ನಡ ಡಿಜಿಟಲ್ ಆಗಲೀ ಅಥವಾ ಅದರ ಯಾವುದೇ ಸೋದರ ಸಂಸ್ಥೆಗಳು ಜವಾಬ್ದಾರಿ ಅಲ್ಲ.
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
Published On - 1:32 pm, Tue, 16 March 21