ಯುಕೆ ನೂತನ ಪ್ರಧಾನಿ ಲಿಜ್ ಟ್ರಸ್ ಸಂಪುಟದಲ್ಲಿರುವ ಇಬ್ಬರು ಭಾರತೀಯ ಮೂಲದ ಸಚಿವರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2022 | 8:08 AM

ಯುರೋಪಿಯನ್ ಯೂನಿಯನ್ ನಿಂದ ಇಂಗ್ಲೆಂಡ್ ಸಂಬಂಧ ಕಡಿದುಕೊಳ್ಳಬೇಕು ಎಂದು ಪ್ರತಿಪಾದಿಸುವ ಮತ್ತೊಬ್ಬ ಭಾರತೀಯ ಮೂಲದ ಪ್ರೀತಿ ಪಟೇಲ್ ಅವರಿಂದ ಈ ಗುರುತರವಾದ ಜವಾಬ್ದಾರಿಯನ್ನು ಸ್ಯೂಲಾ ಬ್ರೇವರ್ಮನ್ ವಹಿಸಿಕೊಂಡಿದ್ದಾರೆ.

ಯುಕೆ ನೂತನ ಪ್ರಧಾನಿ ಲಿಜ್ ಟ್ರಸ್ ಸಂಪುಟದಲ್ಲಿರುವ ಇಬ್ಬರು ಭಾರತೀಯ ಮೂಲದ ಸಚಿವರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ
ಸ್ಯೂಯೆಲ್ಲಾ ಬ್ರೆವರ್ಮನ್ ಮತ್ತು ಅಲೋಕ್ ಶರ್ಮ
Follow us on

ಲಂಡನ್: ಹೊಸದಾಗಿ ರಚನೆಯಾಗಿರುವ ಬ್ರಿಟಿಷ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಮಂತ್ರಿಗಳಾಗಿರುವ ಸ್ಯೂಲಾ ಬ್ರೇವರ್ಮನ್ (Suella Braverman) ಮತ್ತು ಅಲೋಕ ಶರ್ಮ (Liz Truss) ಅವರು ಬುಧವಾರದಂದು ನೂತನ ಬ್ರಿಟಿಷ್ ಪ್ರಧಾನ ಮಂತ್ರಿ ಲಿಜ್ ಟ್ರಸ್ (Liz Truss) ಅವರ ನೇತೃತ್ವದಲ್ಲಿ 10 ಡೌನಿಂಗ್ ಸ್ಟ್ರೀಟ್ನಲ್ಲಿ ನಡೆದ ಮೀಟಿಂಗೊಂದರಲ್ಲಿ ಮೊದಲ ಬಾರಿಗೆ ಭಾಗಿಯಾದರು.

ಅಟಾರ್ನಿ ಜನರಲ್ ಕಚೇರಿಯಿಂದ ಮಂತ್ರಿಮಂಡಲದಲ್ಲಿ ಗೃಹ ಸಚಿವೆಯಾಗಿ ಜವಾಬ್ದಾರಿ ಹೊತ್ತುಕೊಂಡಿರುವ 47-ವರ್ಷ-ವಯಸ್ಸಿನ ಸ್ಯೂಲಾ ಬ್ರೇವರ್ಮನ್ ಅವರಿಗೆ ಇದು ಹೊಸ ಮತ್ತು ಭಿನ್ನ ಅನುಭವವಾಗಿದೆ.

ತಮಿಳು ಮತ್ತು ಗೋವನ್ ಸಂಸ್ಕೃತಿ ಹಿನ್ನೆಲೆಯವಾರಾದರೂ ಲಂಡನಲ್ಲಿ ಹುಟ್ಟಿ ಬೆಳೆದಿರುವ ವಕೀಲೆ ಮತ್ತು ಬ್ರಿಟನ್ನಿನ ಸಂಸತ್ತಿಗೆ ಇಂಗ್ಲೆಂಡ್ ನ ಆಗ್ನೇಯ ಭಾಗದ ಫರೆಹಮ್ ನ ಪ್ರತಿನಿಧಿಯಾಗಿರುವ ಸ್ಯೂಲಾ ಬ್ರೇವರ್ಮನ್ ಮಂಗಳವಾರ ಸಾಯಂಕಾಲ ಲಿಜ್ ಟ್ರಸ್ ಅವರಿಂದ ಗೃಹಖಾತೆ ಸಚಿವೆಯಾಗಿ ನೇಮಕಾತಿ ಪಡೆದ ಕೂಡಲೇ ಅಧಿಕಾರ ವಹಿಸಿಕೊಂಡರು.

ನಂತರ ಟ್ವೀಟ್ ಮಾಡಿದ್ದ ಅವರು, ‘ಯುಕೆ ಗೃಹ ಇಲಾಖೆ ಕಚೇರಿಯನ್ನು ಪ್ರವೇಶಿಸಿ ಟೀಮನ್ನು ಭೇಟಿ ಮಾಡಿ ಕೆಲಸ ಆರಂಭಿಸುತ್ತಿರುವುದು ರೋಮಾಂಚನ ಮೂಡಿಸಿದೆ. ನಗರಗಳಲ್ಲಿನ ಬೀದಿಗಳನ್ನು ನಾವು ಸುರಕ್ಷಿತಗೊಳಿಸಬೇಕಿದೆ, ನಮ್ಮ ಭದ್ರತಾ ಸೇವೆಗಳಿಗೆ ಬೆಂಬಲ ಒದಗಿಸಬೇಕಿದೆ, ಅಕ್ರಮವಾಗು ವಲಸೆ ಬರುವವರ ಮೇಲೆ ನಿಯಂತ್ರಣ ಸಾಧಿಸಬೇಕಿದೆ,’ ಅಂತ ಹೇಳಿದ್ದರು.

ಯುರೋಪಿಯನ್ ಯೂನಿಯನ್ ನಿಂದ ಇಂಗ್ಲೆಂಡ್ ಸಂಬಂಧ ಕಡಿದುಕೊಳ್ಳಬೇಕು ಎಂದು ಪ್ರತಿಪಾದಿಸುವ ಮತ್ತೊಬ್ಬ ಭಾರತೀಯ ಮೂಲದ ಪ್ರೀತಿ ಪಟೇಲ್ ಅವರಿಂದ ಈ ಗುರುತರವಾದ ಜವಾಬ್ದಾರಿಯನ್ನು ಸ್ಯೂಲಾ ಬ್ರೇವರ್ಮನ್ ವಹಿಸಿಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ ಟ್ರಸ್ ಅವರು ಡೌನಿಂಗ್ ಸ್ಟ್ರೀಟ್ ನಲ್ಲಿ ಬೊರಿಸ್ ಜಾನ್ಸನ್ ಅವರ ಉತ್ತರಾಧಿಕಾರಿ ಅಂತ ಖಚಿತಗೊಂಡ ಬಳಿಕ ಪ್ರೀತಿ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಅಧಿಕಾರಲ್ಲಿದ್ದಾಗ, ಆಶ್ರಯ ಕೇಳಿಕೊಂಡು ಬಂದ ಕೆಲವರನ್ನು ಆಫ್ರಿಕಾದಲ್ಲಿರುವ ರ್ವಾಂಡಾಗೆ ಉಚ್ಛಾಟಿಸುವುದಕ್ಕೆ ಪ್ರೀತಿ ಪಟೇಲ್ ನೀಡಿದ ಸಮ್ಮತಿಯ ನ್ಯಾಯಪರತೆಯನ್ನು ಇಂಗ್ಲೆಂಡ್ ನ ಹೈಕೋರ್ಟ್ ನಲ್ಲಿ ಪರಾಮರ್ಶಿಸಲಾಗುತ್ತಿದೆ.

ಅಕ್ರಮ ವಲಸೆಗಾರರನ ಅಂಕಿ-ಅಂಶಗಳನ್ನು ನಿಯಂತ್ರಣ ಸಾಧನೆ ಗುರಿ ಹೊಂದಿರುವ ವಿವಾದಾತ್ಮಕ ಒಪ್ಪಂದವನ್ನು ರದ್ದುಗೊಳಿಸುವಂತೆ ಮಾನವೀಯ ಹಕ್ಕುಗಳಿಗಾಗಿ ಹೋರಾಡುವ ಸಂಸ್ಥೆಗಳು ಹೊಸ ಆಡಳಿತವನ್ನು ಆಗ್ರಹಿಸಿವೆ. ಆದರೆ ಲಿಜ್ ಟ್ರಸ್ ಈ ಕ್ರಮವನ್ನು ಬೆಂಬಲಿಸುತ್ತಿರುವುದರಿಂದ ಅವರ ಹೊಸ ಗೃಹ ಕಾರ್ಯದರ್ಶಿ ಅದನ್ನು ಕಾರ್ಯಗತಗೊಳಿಸುವೆಡೆ ಶ್ರಮಿಸಬೇಕಾಗುತ್ತದೆ.

ಬ್ರೇವರ್ಮನ್ ಅವರು ಗೃಹಖಾತೆಯೊಂದಿಗೆ ಇತರ ಜವಾಬ್ದಾರಿಗಳನ್ನೂ ನಿಭಾಯಿಸಬೇಕಾಗುತ್ತದೆ. ರಾಷ್ಟ್ರದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅದನ್ನು ನಿಯಂತ್ರಿಸಲು ಮತ್ತು ಪೊಲೀಸ್ ವ್ಯವಸ್ಥೆಯನ್ನಯ ಬಲಪಡಿಸಲು ಅವರು ಶ್ರಮಿಸಬೇಕಿದೆ. ಕಾನೂನು ಸುವ್ಯವಸ್ಥೆಯ ಬಗ್ಗೆ ಬ್ರಿಟನ್ ನಾಗರಿಕರು ಪ್ರಶ್ನೆಯೆತ್ತುತ್ತಿದ್ದಾರೆ.

ಅಲೋಕ್ ಶರ್ಮ ಅವರ ಬಗ್ಗೆ ಹೇಳುವುದಾದರೆ, ಆಗ್ರಾದಲ್ಲಿ ಹುಟ್ಟಿದ 55-ವರ್ಷ ವಯಸ್ಸಿನ ಅವರಿಗೆ ಯಥಾಸ್ಥಿತಿ ಕಾಯ್ದುಕೊಂಡಂತಾಗಿದೆ. ವಿಶ್ವಸಂಸ್ಥೆಯ ಕ್ಲೈಮೇಟ್ ಚೇಂಜ್ ಕಾನ್ಪರೆನ್ಸ್ ಸಿಒಪಿ26 ಅಧ್ಯಕ್ಷರನ್ನಾಗಿ ಅವರನ್ನು ಮುಂದುವರಿಸಲಾಗಿದೆ. ಸ್ಕಾಟ್ಲೆಂಡ್ ನ ಗ್ಲ್ಯಾಸ್ಗೋ ನಲ್ಲಿ ಆಯೋಜಿಸಲಾಗಿದ್ದ ಸಿಒಪಿ26 ಸಮ್ಮೇಳನವನ್ನು ಅವರು ನಿರ್ವಹಿಸಿದ ರೀತಿಗೆ ಭಾರೀ ಪ್ರಶಂಸೆ ದಕ್ಕಿದೆ. ಹೆಚ್ಚು ಸುಸ್ಥಿರ ಮತ್ತು ಹಸಿರು ಶಕ್ತಿಯ ಮೂಲಗಳ ಕಡೆ ಜಾಗತಿಕ ಪರಿವರ್ತನೆಗಾಗಿ ಅವರು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

‘ಗ್ಲ್ಯಾಸ್ಗೋ ಕ್ಲೈಮೇಟ್ ಪ್ಯಾಕ್ಟ್ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರೊಂದಿಗೆ ಕೆಲಸ ಮುಂದುವರಿಸುವ ಅವಕಾಶ ಸಿಕ್ಕಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ,’ ಎಂದು ಅವರು ಟ್ವೀಟ್ ಮಾಡಿದ್ದಾರೆ.

2010 ರಲ್ಲಿ ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ನಂತರ ದಕ್ಷಿಣ ಇಂಗ್ಲೆಂಡ್ ಪ್ರಾಂತ್ಯದ ರೀಡಿಂಗ್ ವೆಸ್ಟ್ ನಿಂದ ಕನ್ಸರ್ವೇಟಿವ್ ಪಕ್ಷದ ಪ್ರತಿನಿಧಿಯಾಗಿರುವ ಶರ್ಮ ಯುಕೆ ಸರ್ಕಾರದಲ್ಲಿ ವ್ಯಾಪಾರ, ಉದ್ಯಮ, ವಸತಿ ಉದ್ಯೋಗ ಖಾತೆಗಳನ್ನು ನಿರ್ವಹಿಸಿದ್ದಾರೆ.

ರಾಜಕೀಯ ಪ್ರವೇಶಿಸುವ ಮೊದಲು ಅವರು ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಮತ್ತು ಕಳೆದ ವರ್ಷ ಸಿಒಪಿ26 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದ್ದಾರೆ.