
ಉಡುಪಿ: ಅಯೋಧ್ಯೆಯಲ್ಲಿ ನಾಳೆ ಶ್ರೀರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸುತ್ತಿದ್ದಾರೆ. ಇದರೊಂದಿಗೆ ಹಲವು ವರ್ಷಗಳ ರಾಮ ಭಕ್ತರ ಕನಸು ನನಸಾಗುತ್ತಿದೆ. ಈ ಸಂದರ್ಭದಲ್ಲಿ ಉಡುಪಿಯ ಶ್ರೀಗಳು ರಾಮಮಂದಿರಕ್ಕಾಗಿ ನಡೆದ ಹೋರಾಟವನ್ನ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರೀಗಳು ರಾಮಮಂದಿರಕ್ಕೆ ಶಿಲಾನ್ಯಾಸ ಆಗುತ್ತಿರುವುದು ನಮಗೆಲ್ಲ ಹೆಮ್ಮೆಯ ದಿನ. ಈ ದಿನಕ್ಕಾಗಿ ನಾವೆಲ್ಲ ವರ್ಷಗಳಿಂದ ಕಾಯುತ್ತಿದ್ದೇವೆ. ರಾಮ ಮಂದಿರಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಇಟ್ಟಿಗೆ ಪೂಜೆ, ರಾಮ ತಾರಕ ಮಂತ್ರ ಯಜ್ಞಗಳು ನಡೆದಿತ್ತು. ಅವುಗಳಲ್ಲಿ ಭಾಗವಹಿಸುವ ಅವಕಾಶ ನನಗೂ ಲಭಿಸಿತ್ತು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಅಯೋಧ್ಯೆಯಲ್ಲಿ ಕರಸೇವೆ ಘೋಷಣೆಯಾದಾಗ ಗುರುಗಳು, ಪೇಜಾವರ ಶ್ರೀಗಳು, ಅದಮಾರು ಶ್ರೀಗಳ ಜೊತೆಗೆ ನಾವೆಲ್ಲ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಉತ್ತರ ಪ್ರದೇಶಕ್ಕೆ ಪ್ರವೇಶವಾದಾಗಲೇ ನಮ್ಮ ವಾಹನಗಳನ್ನು ಅಡ್ಡಗಟ್ಟಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಯಾರೋ ಒಬ್ಬರು ನಾವು ಪ್ರಯಾಗಕ್ಕೆ ಹೋಗುತ್ತಿದ್ದೇವೆ ಎಂದು ಸುಳ್ಳು ಹೇಳಿದಾಗ, ಪೇಜಾವರ ಶ್ರೀಗಳು ಇಲ್ಲ ನಾವು ಅಯೋಧ್ಯೆಗೇ ಕರಸೇವೆಗೇ ಹೋಗುತ್ತಿದ್ದೇವೆ ಎಂದು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.
ಪೊಲೀಸ್ ಠಾಣೆಯಲ್ಲಿಯೇ ಪೂಜೆ
ಪೊಲೀಸ್ ಠಾಣೆಯಲ್ಲಿಯೇ ಸ್ನಾನ ಮಾಡಿ ದೇವರ ಪೂಜೆ ನಡೆಸಲಾಯಿತು. ಪೊಲೀಸರೇ ದೇವರ ಪೂಜೆ ನೋಡಿ, ಕಣ್ತುಂಬಿಕೊಂಡು ಘಂಟೆ ಭಾರಿಸಿದ್ದರು. ಜನರು ಬರದಂತೆ ತಡೆಯಬೇಕು ಎಂದು ಮುಲಾಯಂ ಸಿಂಗ್ ಪೊಲೀಸರಿಗೆ ಸೂಚಿಸಿದ್ದರು. ಆದರೆ ಅಲ್ಲಿಯೇ ರಾಮ ದೇವರು, ಪಟ್ಟದ ದೇವರಿಗೆ ರಾಮೋತ್ಸವ ನಡೆಯಿತು. ನಂತರ ನಮ್ಮನ್ನು ಶಂಕರಘಡದ ಶಾಲೆಯಲ್ಲಿ ಕೂಡಿ ಹಾಕಲಾಗಿತ್ತು ಎಂದು ಸ್ಮರಿಸಿದ್ದಾರೆ.
ಅದು ಕಾರ್ತಿಕ ಮಾಸ, ಸಂಜೆ ತುಳಸೀಪೂಜೆ, ಸಂಕೀರ್ತನೆಗಳನ್ನು ನೋಡುವುದಕ್ಕೆ ಸಾವಿರ ಸಾವಿರ ಮಂದಿ ಬರುತ್ತಿದ್ದರು. ಅದೊಂದು ರೋಚಕ ಅನುಭವ. ಅಲ್ಲಿಂದ ಅಯೋಧ್ಯೆಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿಂದಲೇ ವಾಪಸ್ ಬರಬೇಕಾಯಿತು. ಕರಸೇವೆಯಲ್ಲಿ ಭಾಗವಹಿಸದೇ ಇದ್ದರೂ ರಾಮ ದೇವರಿಗಾಗಿ ನಾವು ಕೆಲವು ದಿನ ಹೀಗೆ ಎಲ್ಲವನ್ನು ಬಿಟ್ಟು ಗೃಹ ಬಂಧನಕ್ಕೆ ಒಳಗಾಗಿದ್ದೇ ಒಂದು ಹೆಮ್ಮೆ ಎನ್ನುತ್ತಾರೆ ಶ್ರೀಗಳು.
ಕರಸೇವೆಯಲ್ಲಿ ಪೇಜಾವರ ಶ್ರೀಗಳಿಂದ ರಾಮಲಲ್ಲಾ ಪ್ರತಿಷ್ಠಾಪನೆ
ಮುಂದೆ ಕಲ್ಯಾಣಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಇನ್ನೊಮ್ಮೆ ಕರಸೇವೆ ಘೋಷಣೆಯಾಗಿತು. ಆಗಲೂ ಗುರುಗಳು, ಪೇಜಾವರ ಶ್ರೀಗಳ ನೇತ್ವದೊಂದಿಗೆ ಭಾಗವಹಿಸಿದ್ದೆವು. ಪೇಜಾವರ ಶ್ರೀಗಳು ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠೆ ಮಾಡಿದ ಕ್ಷಣಕ್ಕೆ ಸಾಕ್ಷಿಯಾಗಿದೆವು. ಆಗ ಪೂಜೆ ಮಾಡಿದ ಯೋಗವನ್ನು ಮರೆಯಲಾಗುವುದಿಲ್ಲ ಎಂದು ಶ್ರೀಗಳು ಹಳೆಯದನ್ನು ನೆನಪಿಸಿಕೊಂಡಿದ್ದಾರೆ.
ಅಯೋಧ್ಯೆ ಎಂದರೆ ಯುದ್ಧವಿಲ್ಲದ್ದು ಎಂದರ್ಥ. ನಾವು ಇದನ್ನು ಅಸಂಭವ ಎಂದು ತಿಳಿದುಕೊಂಡಿದ್ದೆವು. ಅಸಾಧ್ಯದಾದದ್ದು ಸಾಧ್ಯವಾಗುತ್ತದೆ ಎಂದಾಗ ಮೈ ರೋಮಾಂಚನವಾಗುತ್ತದೆ. ಸರ್ವೋಚ್ಚ ನ್ಯಾಯಾಲಯ ಐಕ್ಯಮತದಿಂದ ಉತ್ತಮ ತೀರ್ಪು ನೀಡಿದೆ. ಇದೀಗ ರಾಮಮಂದಿ ನಿರ್ಮಾಣದ ಸುಯೋಗ ಸನ್ನಿಹಿತವಾಗಿದೆ.
ಅಯೋಧ್ಯೆಯಲ್ಲಿ ಸುಂದರ ಮಂದಿರ
ಅಲ್ಲಿ ಒಬ್ಬ ವ್ಯಕ್ತಿ ನಿಂತು ಭೂಮಿ ಪೂಜನ ನಡೆಸುತ್ತಿಲ್ಲ. ಅಲ್ಲಿ ರಾಮ ದೇವರು, ಆಂಜನೇಯ ದೇವರೇ ಕೂತು ಶಿಲಾನ್ಯಾಸ ಮಾಡುತ್ತಿದ್ದಾರೆ ಎಂದು ನಾವು ಅನುಸಂಧಾನ ಮಾಡಬೇಕು. ನಾವೆಲ್ಲರೂ ಅಲ್ಲಿ ಹೋಗಲು ಸಾಧ್ಯವಿಲ್ಲ ಎಂದು ಚಿಂತೆ ಬೇಡ. ಇಲ್ಲೇ ಕೂತು ನಾವು ಸಂಕಲ್ಪ ಮಾಡಿದರೆ, ಅಲ್ಲಿ ಹೋಗಿ ಅದು ಕಾರ್ಯಕಾರಿಯಾಗುತ್ತದೆ. ಸುಂದರವಾದ ಮಂದಿರ ನಿರ್ಮಾಣವಾಗುತ್ತದೆ ಎಂದು ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.-ಹರೀಶ್ ಪಾಲೇಚ್ಚಾರ್
Published On - 7:14 pm, Tue, 4 August 20