ಪೆಂಡಾಲ್ ಹಾಕುವವನ ಮಗ ಯುಪಿಎಸ್‌ಸಿಯಲ್ಲಿ ದೇಶಕ್ಕೆ 446ನೇ ಱಂಕ್
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಆನಂದ ಕಲಾದಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೆ 446 ಱಂಕ್ ಪಡೆಯುವ ಮೂಲಕ ಬಾಗಲಕೋಟೆ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾನೆ. ಆನಂದ ತಂದೆ ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ಕಡೆ ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಿಗೆ ಶಾಮಿಯಾನಾ ಹಾಕುವ ಕಾರ್ಯ ಮಾಡುತ್ತಾರೆ. ಮಗ ಆನಂದ ಕಲಾದಗಿ ಬಿಇ ಮುಗಿಸಿದ್ದು, ಸದ್ಯ ಯುಪಿಎಸ್‌ಸಿ ಪಾಸ್ ಆಗಿದ್ದಾರೆ. ತಂದೆ ರಾಜ್ ಪೆಂಡಾಲ್ ಹೆಸರಲ್ಲಿ ಪೆಂಡಾಲ್ ಹಾಕುವ ಕಾರ್ಯ […]

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಆನಂದ ಕಲಾದಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೆ 446 ಱಂಕ್ ಪಡೆಯುವ ಮೂಲಕ ಬಾಗಲಕೋಟೆ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾನೆ.
ಆನಂದ ತಂದೆ ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ಕಡೆ ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಿಗೆ ಶಾಮಿಯಾನಾ ಹಾಕುವ ಕಾರ್ಯ ಮಾಡುತ್ತಾರೆ. ಮಗ ಆನಂದ ಕಲಾದಗಿ ಬಿಇ ಮುಗಿಸಿದ್ದು, ಸದ್ಯ ಯುಪಿಎಸ್‌ಸಿ ಪಾಸ್ ಆಗಿದ್ದಾರೆ. ತಂದೆ ರಾಜ್ ಪೆಂಡಾಲ್ ಹೆಸರಲ್ಲಿ ಪೆಂಡಾಲ್ ಹಾಕುವ ಕಾರ್ಯ ಮಾಡುತ್ತಾ ಮೇಲೆ ಬಂದವರು.
ಚಿಕ್ಕಂದಿನಲ್ಲಿ ಆನಂದ ತಂದೆ ವೀರೇಶ್ ಅವರು ಚಿಕ್ಕ ಪುಟ್ಟ ಹೊಟೆಲ್‌ಗಳಲ್ಲಿ ಕೆಲಸ ನಂತರ ಸಣ್ಣ ಚಹಾದ ಅಂಗಡಿ, ನಂತರ ರಾಜ್ ಪೆಂಡಾಲ್ ಹೆಸರಲ್ಲಿ ಸ್ವಂತ ಶಾಮಿಯಾನಾ ಹಾಕಿದರು. ಮಗನನ್ನು ಅವನಿಚ್ಚೆಯಂತೆ ಓದಿಸಿದ ತಂದೆ ಮಗನ ಯುಪಿಎಸ್‌ಸಿ ಕನಸಿಗೆ ನೀರೆರೆದು ಪೋಷಿಸಿದ್ದಾರೆ. ತಂದೆ ಕೇವಲ ಮೂರನೇ ತರಗತಿ ಓದಿದ್ದು ತಾಯಿ ಏಳನೇ ತರಗತಿ ಓದಿದ್ದಾರೆ.

ಆನಂದ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕನ್ನಡ ಮಾದ್ಯಮದಲ್ಲೇ ಓದಿದ್ದಾರೆ. ನನ್ನ ಸಾಧನೆಗೆ ನಮ್ಮ ತಂದೆತಾಯಿ ಕಾರಣ ಎನ್ನುವ ಆನಂದ ಪಿಯುಸಿವರೆಗೂ ಜಮಖಂಡಿ ನಗರದಲ್ಲೇ ಶಿಕ್ಷಣ ಮುಗಿಸಿ, ಬೆಳಗಾವಿಯಲ್ಲಿ ಬಿಇ ಮುಗಿಸಿದ್ದಾರೆ. ಎರಡನೇ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪಾಸ್ ಆಗಿದ್ದು, 446 ನೇ ಱಂಕ್ ಗಳಿಸಿದ್ದಾರೆ. ಈಗ ಐಪಿಎಸ್ ಕ್ಯಾಡರ್‌ನ ನಿರೀಕ್ಷೆಯಲ್ಲಿದ್ದು, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಆಸಕ್ತಿ ಹೊಂದಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯನ್ನು ಆಂಗ್ಲ ಮಾಧ್ಯಮದಲ್ಲಿ ಬರೆದಿದ್ದು, ಆಪ್ಷನಲ್ ಆಗಿ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡಿದ್ದರು. ದಿನಕ್ಕೆ ಎಂಟು ತಾಸು ಓದುತ್ತಿದ್ದ ಆನಂದ್, ಪರಿಣಾಮಕಾರಿಯಾಗಿ ಅಧ್ಯಯನ ಮಾಡಿದರೆ ಯುಪಿಎಸ್‌ಸಿ ಪಾಸ್ ಆಗಬಹುದೆನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.-ರವಿ ಮೂಕಿ



