ಉಡುಪಿಯ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ವಿವಾದಗಳ ಸುಳಿಯಲ್ಲಿ ಅಸ್ತಿತ್ವಕ್ಕೆ ಬಂದ ಕಂಪನಿ. ಈಗ ಮತ್ತೊಂದು ವಿವಾದ ಕಂಪನಿಯ ಸುತ್ತ ಸುತ್ತಿಕೊಂಡಿದೆ. ಎಲ್ಲವೂ ನಿರೀಕ್ಷೆಯಂತೆ ಆಗಿದ್ರೆ, ಅನೇಕ ಯುವಕರು ಯುಪಿಸಿಎಲ್ ಕಂಪನಿಯಲ್ಲಿ ಉದ್ಯೋಗಿಗಳಾಗಿರ್ತಿದ್ರು.
ಶೈಕ್ಷಣಿಕ ಅರ್ಹತೆಗೆ ಯೋಗ್ಯವಾದ ಉದ್ಯೋಗದ ಭರವಸೆ ಕೊಟ್ಟು ಈ ಕುಟುಂಬಗಳಿಂದ ಫಲವತ್ತಾದ ಕೃಷಿ ಭೂಮಿಯನ್ನ ಭೂಸ್ವಾಧೀನ ಮಾಡಿಕೊಂಡಿತ್ತು. ಕೃಷಿ ಭೂಮಿಯನ್ನ ಮಾರಿ ಐದು ವರ್ಷ ಕಳೆದ್ರೂ ಉದ್ಯೋಗ ಮರೀಚಿಕೆಯಾಗಿದೆ. ಬಹುತೇಕ ಯುವಕರ ವಯಸ್ಸು ಮೀರುತ್ತಾ ಬಂದಿದೆ. ಭೂ ಸ್ವಾಧೀನ ಮಾಡಿಕೊಂಡ ಎರಡೇ ವರ್ಷಗಳಲ್ಲಿ ಉದ್ಯೋಗ ನೀಡೋದಾಗಿ ಕಂಪನಿ ಹೇಳಿತ್ತು. ಐದು ವರ್ಷವಾದ್ರೂ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ಉದ್ಯೋಗ ವಂಚಿತ ಯುವಕರು ಆಕ್ರೋಶಗೊಂಡಿದ್ದಾರೆ.
ದೇಶದ ಪ್ರತಿಷ್ಠಿತ ಉದ್ಯಮಿ ಅದಾನಿಗೆ ಸೇರಿದ ಯುಪಿಸಿಎಲ್, ಮೊದಲನೇ ಹಂತದಲ್ಲಿ ಸಾವಿರದ ಇನ್ನೂರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡ್ತಿದೆ. ಎರಡನೇ ಹಂತದಲ್ಲಿ 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕೆಐಎಎಡಿಬಿ ಮೂಲಕ ಹೆಚ್ಚುವರಿ ಭೂಮಿ ವಶಕ್ಕೆ ಪಡೆದಿತ್ತು. ಈ ವೇಳೆ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗದ ಭರವಸೆ ನೀಡಲಾಗಿದೆ. ಐದು ವರ್ಷ ಕಳೆದರೂ ಎರಡನೇ ಹಂತದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿಲ್ಲ. ಹೀಗಾಗಿ ಭರವಸೆ ನೀಡಿದಂತೆ ಉದ್ಯೋಗ ನೀಡಲು ಕಂಪನಿಗೆ ಸಾಧ್ಯವಾಗಿಲ್ಲ.
ಉಡುಪಿ ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಮಾತುಕತೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಮತ್ತು ಉದ್ಯೋಗದ ಭರವಸೆ ನೀಡಲಾಗಿತ್ತು. ಭೂ ಪರಿಹಾರವೇನೋ ಸಿಕ್ಕಿದೆ, ಆದರೆ ಕೃಷಿಭೂಮಿ ಮಾರಿಕೊಂಡ ಕಾರಣ ಸಂಪಾದನೆ ಇಲ್ಲದೆ ಈ ಕುಟುಂಬಗಳು ಕಂಗಾಲಾಗಿವೆ. ಹೀಗಾಗಿ ಶೀಘ್ರವೇ ಉದ್ಯೋಗ ನೀಡಲು ಆಗ್ರಹಿಸ್ತಿದ್ದಾರೆ.
ನಿಗೂಢ ಶಬ್ದ, ಭೂ ಕಂಪನ: ವಿದ್ಯುತ್ ಸ್ಥಾವರ, ಆಲಮಟ್ಟಿ ಡ್ಯಾಂ ನಡುವಿನ ಗ್ರಾಮಸ್ಥರು ಹೈರಾಣ
Published On - 7:01 am, Sun, 24 January 21