ಬೆಂಗಳೂರು: ಕೊರೊನಾ ಸೋಂಕು ವಿರುದ್ಧದ ಸಮರದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದಾಗ ಜಾಲಿ ರೈಡ್ ಮಾಡುತ್ತಾ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದು, ವಾಹನ ಸೀಜ್ ಮಾಡಿಸಿಕೊಂಡಿದ್ದ ವಾಹನ ಮಾಲೀಕರಿಗೆ ಹೈಕೋರ್ಟ್ ಸಮಾಧಾನಕರ ಆದೇಶ ನೀಡಿದೆ.
ಲಾಕ್ ಡೌನ್ ಅವಧಿಯಲ್ಲಿ ಸೀಜ್ ಆದ ವಾಹನಗಳ ಬಿಡುಗಡೆಗೆ ಪೊಲೀಸರಿಗೆ ಅಧಿಕಾರ ನೀಡಿದ ಹೈಕೋರ್ಟ್ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ರೂ. 500 ದಂಡ, ನಾಲ್ಕು ಚಕ್ರ ವಾಹನಗಳಿಗೆ ರೂ. 1000 ದಂಡ ಕಟ್ಟಿಸಿಕೊಳ್ಳುವುದು ಜತೆಗೆ ಬಾಂಡ್ ಬರೆಸಿಕೊಂಡು ಬಿಡುಗಡೆ ಮಾಡಲು ಹೈಕೋರ್ಟ್ ಸೂಚನೆ ನೀಡಿದೆ.
ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಾಹನ ವಾಪಸ್:
ಲಾಕ್ ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿ 35 ಸಾವಿರ ವಾಹನಗಳು ಸೀಜ್ ಮಾಡಲಾಗಿತ್ತು. ಕೋರ್ಟ್ ಗೆ ಅರ್ಜಿ ಸಲ್ಲಿಸಿದರೆ ಜನದಟ್ಟಣೆ ಉಂಟಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಿಆರ್ ಪಿಸಿ 102(3) ಅಡಿ ವಾಹನ ಬಿಡುಗಡೆಗೆ ತಮಗೇ ಅಧಿಕಾರ ನೀಡಬೇಕು ಎಂದು ಬೆಂಗಳೂರು ಪೊಲೀಸರು ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಾಹನಗಳನ್ನು ವಾಪಸ್ ನೀಡಬಹುದು. ಜೊತೆಗೆ, ಮತ್ತೆ ಲಾಕ್ ಡೌನ್ ಉಲ್ಲಂಘಿಸದಂತೆ ವಾಹನ ಸವಾರರಿಗೆ ಷರತ್ತು ವಿಧಿಸಲು ಸಹ ಹೈಕೋರ್ಟ್ ಸೂಚನೆ ನೀಡಿ, ಇಂದು ಮೇಲಿನ ಆದೇಶ ಹೊರಡಿಸಿದೆ.
ವಾಹನಗಳ ಹಸ್ತಾಂತರ ಪ್ರಕ್ರಿಯೆ ಮೇ 1ರ ನಂತರ ಪ್ರಾರಂಭ
ಬೆಂಗಳೂರಿನಾದ್ಯಂತ ವಶಕ್ಕೆ ಪಡೆದಿದ್ದ ವಾಹನಗಳ ಹಸ್ತಾಂತರ ಪ್ರಕ್ರಿಯೆ ಮೇ 1ರ ನಂತರ ಪ್ರಾರಂಭವಾಗಲಿದೆ. ಈಗಾಗಲೇ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ತಿರುವ ಪೊಲೀಸರು, ವಾಹನ ದಾಖಲೆ ತಂದು ಆಯಾ ಠಾಣೆಗಳಲ್ಲಿ ಪಡೆಯಬೇಕು. ಅಂತರ ಕಾಯ್ದುಕೊಂಡು ವಾಹಗಳನ್ನು ಪಡೆದುಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
Published On - 3:21 pm, Thu, 30 April 20