ಕೋಲಾರ: ಆನೆಗಳ ಹಾವಳಿ ಜೋರಾಗಿದ್ದು, ಜಿಲ್ಲೆಯ ಮುಳಬಾಗಿಲು ತಾಲೂಕಿನ ಮದ್ದೇರಿ ಗ್ರಾಮದ ಹೊರವಲಯದ ಕೆರೆಯಲ್ಲಿ ಬೀಡು ಬಿಟ್ಟಿರುವ 13 ಕಾಡಾನೆಗಳ ಹಿಂಡನ್ನು ನೋಡಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯ ಬಂಗಾರಪೇಟೆ, ಕೆಜಿಎಫ್ ಮತ್ತು ಮಾಲೂರು ತಾಲೂಕಿನ ಗಡಿಭಾಗದಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡನ್ನು ಕಂಡ ಗ್ರಾಮಸ್ಥರಿಗೆ ಜೀವ ಭಯ ಹೆಚ್ಚಾಗಿದೆ. ಆನೆಗಳು ಯಾವ ಸಮಯದಲ್ಲಿ ಏನು ಮಾಡುತ್ತದೆಯೋ ಎಂಬ ಭಯದೊಂದಿಗೆ ರೈತರು ಹೊಲಗಳಿಗೆ ಹೋಗುತ್ತಿದ್ದಾರೆ.
ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾಡಾನೆಗಳನ್ನು ಆಂಧ್ರ ಭಾಗದ ಅರಣ್ಯಕ್ಕೆ ಅಟ್ಟಲು ಪ್ರಯತ್ನ ನಡೆಯುತ್ತಿದ್ದು, ಜನರು ರಾತ್ರಿ ವೇಳೆ ಮನೆ ಬಿಟ್ಟು ಹೊರಗಡೆ ಬಾರದಂತೆ ಜಾಗೃತಿಯಿಂದ ಇರಲು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದೆ.