ಈಗಂತೂ ಬ್ಯಾಂಕ್, ಕೋ-ಆಪರೇಟಿವ್ ಸೊಸೈಟಿಗಳು, ಹಣಕಾಸು ಸಂಸ್ಥೆಗಳನ್ನು ನಂಬುವುದೇ ಕಷ್ಟ ಆಗತೊಡಗಿದೆ. ಹಾಗಂತ ಎಲ್ಲ ಬ್ಯಾಂಕ್ಗಳೂ ಅಸಮರ್ಪಕವಾಗಿಯೇ ಕಾರ್ಯನಿರ್ವಹಿಸುತ್ತವೆ ಎಂದಲ್ಲ. ಆದರೆ ಇತ್ತೀಚೆಗಂತೂ ನಷ್ಟಕ್ಕೀಡಾದ, ಅವ್ಯವಹಾರ ನಡೆಸಿದ, ಗೋಲ್ಮಾಲ್ ಮಾಡಿ ಸಿಕ್ಕಿಬಿದ್ದ ಹಣಕಾಸು ಸಂಸ್ಥೆಗಳ ಸಂಖ್ಯ ಹೆಚ್ಚುತ್ತಿದೆ. ಅದರಲ್ಲೂ ವಾರದ ಹಿಂದೆ ಲಕ್ಷ್ಮೀ ವಿಲಾಸ ಬ್ಯಾಂಕ್ ಮೇಲೆ ಆರ್ಬಿಐ ಒಂದು ತಿಂಗಳ ನಿರ್ಬಂಧ ಹೇರಿ, ಠೇವಣಿ ದಾರರಿಗೆ ತಿಂಗಳಿಗೆ ₹ 25,000 ವಿತ್ ಡ್ರಾ ಮಿತಿ ಹೇರಿದ ನಂತರ ಗ್ರಾಹಕರಿಗೆ ಸಹಜವಾಗಿಯೇ ಅಭದ್ರತೆ ಹೆಚ್ಚಾಗಿದೆ.
ಠೇವಣಿ ಇಡುವಾಗ ಬ್ಯಾಂಕ್ಗಳ ಆಯ್ಕೆ ಹೇಗಿರಬೇಕು?
ಹಣ ಡಿಪೋಸಿಟ್ ಇಡುವಾಗ ಆತುರದ ನಿರ್ಧಾರ ಮಾಡಬೇಡಿ ಎನ್ನುತ್ತಾರೆ ಹಿರಿಯ ಲೆಕ್ಕ ಪರಿಶೋಧಕ ವಿವೇಕ್ ಮಲ್ಯ. ಟಿವಿ9 ಜೊತೆ ಫೇಸ್ಬುಕ್ ಲೈವ್ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದ ಕಾನೂನುಗಳು ಸಾಲ ಕೊಡುವವರ ವಿರುದ್ಧ ಹಾಗೂ ಸಾಲ ಪಡೆದವರ ಮೇಲಿನ ದಬ್ಬಾಳಿಕೆ ತಡೆಯುವುದಕ್ಕೋಸ್ಕರ ಇದೆ. ಆದರೆ ಠೇವಣಿ ಇಟ್ಟವರ ಭದ್ರತೆಗಾಗಿ ಯಾವುದೇ ಪ್ರಬಲ ಕಾನೂನುಗಳು ಇಲ್ಲ ಎಂದು ವಿಷಾದಿಸಿದರು.
ನಾವು ಬ್ಯಾಂಕ್ ಮೇಲೆಯೇ ಅವಲಂಬಿತರಾಗಬೇಕಾಗುತ್ತದೆ. ನೀವು ಠೇವಣಿ ಇಟ್ಟ ಬ್ಯಾಂಕ್ ಒಂದೊಮ್ಮೆ ಬಾಗಿಲು ಮುಚ್ಚಿದರೆ ನಿಮ್ಮ ಹಣಕ್ಕೆ ₹ 5 ಲಕ್ಷ ರೂ. ಇನ್ಶೂರೆನ್ಸ್ ನೀಡಬೇಕು ಎಂಬ ನಿಯಮವಿದೆ. ಆದರೆ ಕಾನೂನು ಕ್ರಮಗಳೆಲ್ಲ ಮುಗಿದ ಮೇಲೆ ನಿಮ್ಮ ಹಣ ಕೈಗೆ ಸೇರುತ್ತದೆ. ನೀವು ಒಂದೇ ಬ್ಯಾಂಕ್ನ ನಾಲ್ಕು ಬ್ರ್ಯಾಂಚ್ಗಳಲ್ಲಿ ಠೇವಣಿ ಹಣ ಇಟ್ಟಿದ್ದರೆ ನಿಮಗೆ ಸಿಗುವ ಇನ್ಶೂರೆನ್ಸ್ ಮಿತಿ ₹ 5 ಲಕ್ಷ ಮಾತ್ರ. ಆದರೆ ನಾಲ್ಕು ಬೇರೆ ಬೇರೆ ಬ್ಯಾಂಕ್ಗಳಲ್ಲೇ ಠೇವಣಿ ಇಟ್ಟು, ಆ ಬ್ಯಾಂಕ್ಗಳಿಗೆ ತೊಂದರೆಯಾದರೆ ಪ್ರತಿ ಬ್ಯಾಂಕ್ನಿಂದ ನಿಮ್ಮ ಠೇವಣಿಗೆ ತಲಾ ₹ 5 ಲಕ್ಷ ಇನ್ಶೂರೆನ್ಸ್ ರಕ್ಷಣೆ ಇರುತ್ತದೆ. ನೀವು ಇರಿಸಿದ ಠೇವಣಿಯ ಮೊತ್ತ ₹ 5 ಲಕ್ಷಕ್ಕಿಂತಲೂ ಹೆಚ್ಚಾಗಿದ್ದರೂ ಠೇವಣಿಯ ಮಿತಿ ₹ 5 ಲಕ್ಷಕ್ಕೇ ಸೀಮಿತವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು ಎಂದು ಎಚ್ಚರಿಸುತ್ತಾರೆ ಅವರು.
ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಏನಾದರೂ ತೊಂದರೆಯಾದರೆ ಸರ್ಕಾರ ಮಧ್ಯ ಪ್ರವೇಶ ಮಾಡುತ್ತದೆ. ಕಾನೂನಿನ ಅನ್ವಯ ಕ್ರಮ ತೆಗೆದುಕೊಂಡು ಗ್ರಾಹಕರಿಗೆ ಮೋಸವಾಗದಂತೆ ನೋಡಿಕೊಳ್ಳುತ್ತದೆ. ಆದರೆ ಖಾಸಗಿ ಬ್ಯಾಂಕ್ಗಳಲ್ಲಿ ಠೇವಣಿ ಇಡುವಾಗ ಎಚ್ಚರ ಇರಲಿ. ಶೇ 1 ಅಥವಾ 2 ರಷ್ಟು ಬಡ್ಡಿ ಹೆಚ್ಚು ಕೊಡುತ್ತಿದ್ದರೂ ಆತುರದ ನಿರ್ಧಾರ ಮಾಡಬಾರದು. ಈಗಿನ ದಿನಗಳಲ್ಲಂತೂ ಬ್ಯಾಂಕ್ಗಳ ಆಯ್ಕೆ ಅತ್ಯಂತ ಮಹತ್ವ ಎಂದು ಹೇಳಿದರು.
Published On - 6:20 pm, Tue, 24 November 20