
ವಿಜಯಪುರ: ಬರ್ಥ್ಡೇ ಸೆಲೆಬ್ರೇಷನ್ ಅಂದರೆ ಅದರ ಸಂಭ್ರಮ ಸಡಗರವೇ ಬೇರೆ. ಪುಟ್ಟ ಮಕ್ಕಳ ಹುಟ್ಟು ಹಬ್ಬದ ವಾತಾವರಣ ಒಂದು ರೀತಿಯಲ್ಲಿರುತ್ತದೆ. ಇನ್ನು ನಮ್ಮ ಯುವಕ ಯುವತಿಯರ ಬರ್ಥ್ಡೇ ಬೇರೆಯೇ ತರಹದ್ದಾಗಿರುತ್ತದೆ. ವಯಸ್ಸಾದವರ ಜನ್ಮ ದಿನಾಚರಣೆ ಮತ್ತೊಂದು ರೂಪದಲ್ಲಿ ವಿಭಿನ್ನವಾಗಿರುತ್ತದೆ.
ಈ ಮಧ್ಯೆ, ನಮ್ಮ ಸಮಾಜದಲ್ಲಿ ಸಾಮಾಜಿಕ ಜಾಲತಾಣಗಳ ಆಟಾಟೋಪ ಜೋರಾಗಿದೆ. ನಡುರಾತ್ರಿ ಬೀದಿಯಲ್ಲಿ ನಿಂತು ಕೇಕ್ ಕತ್ತರಿಸಿ ಅದರ ಫೋಟೊ, ವಿಡಿಯೊಗಳನ್ನು ಹರಿಬಿಟ್ಟು ಲೈಕ್ಸ್ ಹಾಗೂ ಕಮೆಂಟ್ಗಳ ಲೆಕ್ಕ ಹಾಕೋರು ಸಹ ಬಹಳ ಜನರಿದ್ದಾರೆ. ಆದರೆ ಬಿಸಿಲನಾಡಿನ ತಿಕೋಟಾ ತಾಲೂಕಿನ ಸುರೇಶ ಕೊಣ್ಣೂರು ಎಂಬ ಯುವಕ ತನ್ನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಸುರೇಶ ಕೊಣ್ಣೂರು 28 ವರ್ಷ ಮುಗಿಸಿ 29 ಕ್ಕೆ ಕಾಲಿಡುವಾಗ ವಿಭಿನ್ನವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕು. ಅದರಿಂದ ನಾಲ್ಕಾರು ಜನರಿಗೆ ಉಪಯೋಗವಾಗಬೇಕೆಂದು ಅಂದುಕೊಂಡಿದ್ದರು. ಪಾರ್ಟಿ, ಹಾಡು ಕುಣಿತ ಮಾಡಿ ಹಣ ಖರ್ಚು ಮಾಡುವ ಬದಲು ಅದೇ ಹಣ ಇತರರಿಗೆ ಸಹಾಯವಾಗುವಂತೆ ಮಾಡಬೇಕೆಂದು ಯೋಚನೆ ಮಾಡಿದಾಗ ಆತನ ಕಣ್ಣಿಗೆ ಕಂಡಿದ್ದೇ.. ತಮ್ಮದೇ ಏರಿಯಾದಲ್ಲಿದ್ದ ಸರ್ಕಾರಿ ಶಾಲೆ.
ತನ್ನ ಹುಟ್ಟು ಹಬ್ಬಕ್ಕಾಗಿ ಯುವಕ ಶಾಲೆಯಲ್ಲಿ ಮಾಡಿದ್ದೇನು
ಸುರೇಶ ಕೊಣ್ಣೂರು ತನ್ನ 29 ಹುಟ್ಟು ಹಬ್ಬ ಇತರರಿಗೂ ಸಹಾಯ ಆಗುವ ರೀತಿಯಲ್ಲಿ ಮಾಡಬೇಕೆಂದು ತೀರ್ಮಾನಿಸಿ ತಿಕೋಟಾ ಪಟ್ಟಣದ ಶ್ರೀರಾಮ್ (ಆಶ್ರಯ) ಕಾಲೋನಿಯ ನಮ್ಮೂರ ಕಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ ಬಣ್ಣ ಬಳಿಯುವ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲು ಮುಂದಾಗಿದ್ದರು.
ಸುಣ್ಣ ಬಣ್ಣಕ್ಕಾಗಿ ಸುರೇಶ್ ಬರ್ಥ್ಡೆ ಖರ್ಚು ವಿನಿಯೋಗ, ಸಾರ್ಥಕತೆ
ನಮ್ಮೂರ ಕಿರಿಯ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳು ಹಾಗೂ ಸುತ್ತಲಿನ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಸಲು 20,000 ರೂ. ಖರ್ಚು ಮಾಡಿ, ತನ್ನ ಹುಟ್ಟು ಹಬ್ಬದ ಆಚರಣೆ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಕಾಲೋನಿಯ ಶಾಲೆಯ ಅಭಿವೃದ್ಧಿಗೆ ಕೆಲವರು ಕೈ ಜೋಡಿಸಿದ್ದಾರೆ.
ಕಂಗೊಳಿಸಿದ ಶಾಲೆ
ಮೊದಲೇ ಕೊರೊನಾ ಕಾರಣದಿಂದ ಕೆಲವು ತಿಂಗಳುಗಳಿಂದ ಶಾಲೆ ಬಂದ್ ಆಗಿದ್ದು, ಶಾಲಾ ವ್ಯವಸ್ಥೆ ಏರುಪೇರಾಗಿದೆ. ಕಟ್ಟಡದ ಬಣ್ಣವೂ ಸಹಜವಾಗಿ ಮಾಸಿದೆ. ಆದ್ರೆ ತನ್ನ ಹುಟ್ಟು ಹಬ್ಬದ ನೆಪದಲ್ಲಿ ಸುರೇಶ್ ಕಣ್ಣೆದುರಿಗೆ ಗತವೈಭವ ಕಳೆದಕೊಂಡು ಪೇಲವಾಗಿದ್ದ ಶಾಲೆಗೆ ಸುಣ್ಣ ಬಣ್ಣ ಬಳಿಸಿದ್ದು, ಶಾಲೆಗೆ ಹೊಸ ಲುಕ್ ಬರುವಂತೆ ನೋಡಿಕೊಂಡಿದ್ದಾರೆ. ಮಾಸಿ ಹೋಗಿದ್ದ ತಮ್ಮ ಶಾಲೆಯನ್ನು ಹೊಸ ಸುಣ್ಣಬಣ್ಣದಲ್ಲಿ ಕಂಡು ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರು ಹೆಮ್ಮೆ ಮತ್ತು ಸಂತಸದಿಂದ ಬೀಗಿದ್ದಾರೆ.
ಇನ್ನೇನು ಶಾಲೆಗಳು ಆರಂಭವಾದರೆ ಇಲ್ಲಿನ ವಿದ್ಯಾರ್ಥಿಗಳು ಹೊಸ ಬಣ್ಣದಲ್ಲಿ ಕಂಗೊಳಿಸುತ್ತಿರುವ ತಮ್ಮ ಶಾಲೆಯನ್ನು ಕಂಡು ಖುಷಿ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸರ್ಕಾರಿ ಶಾಲೆಯ ಬಗ್ಗೆ ಕಾಳಜಿ ಹೊಂದಿರುವ ಸ್ಥಳೀಯ ಯುವಕ ಸುರೇಶ, ನಮ್ಮ ಶಾಲೆಗೆ ಪ್ರತಿ ವರ್ಷ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುತ್ತಿದ್ದರು. ಈ ವರ್ಷ ಜನ್ಮ ದಿನದ ಪ್ರಯುಕ್ತ ಶಾಲೆಯ ಕೊಠಡಿಗಳಿಗೆ ಸುಣ್ಣ ಬಣ್ಣ ಮಾಡಿದ್ದರಿಂದ ತುಂಬಾ ಖುಷಿಯಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶಾರದಾ ಬಿರಾದಾರ ಪಾಟೀಲ ತಿಳಿಸಿದರು.
ಹುಟ್ಟು ಹಬ್ಬದಲ್ಲಿ ಅನಗತ್ಯವಾಗಿ ವೆಚ್ಚ ಮಾಡುವ ಬದಲಾಗಿ ನಮ್ಮದೇ ಏರಿಯಾದಲ್ಲಿನ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ್ದೇನೆ. ಸರ್ಕಾರಿ ಶಾಲೆಗಳೆಂದರೆ ಮೊದಲೇ ಜನರು ಮೂಗು ಮುರಿಯುತ್ತಾರೆ. ಸರ್ಕಾರಿ ಶಾಲೆಗಳತ್ತ ಮಕ್ಕಳು ಬರುವಂತಾಗಬೇಕು. ಸರ್ಕಾರಿ ಶಾಲೆಗಳ ಸುಧಾರಣೆ ಮಾಡಿದರೆ ಮಕ್ಕಳು ಬರುತ್ತಾರೆ. ಹುಟ್ಟು ಹಬ್ಬದ ಅಂಗವಾಗಿ ಶಾಲೆಗೆ ಈ ಮೂಲಕ ಪುಟ್ಟ ಸೇವೆ ಸಲ್ಲಿಸಿದ್ದೇನೆ
-ಸುರೇಶ ಕೊಣ್ಣೂರ
ಅನಾಥ ನಾಯಿಗಳಿಗೆ ಮುಕ್ತಿ: ಮೆಚ್ಚುಗೆಗೆ ಪಾತ್ರವಾಗಿದೆ ಮೈಸೂರು ಶ್ವಾನ ಪ್ರಿಯನ ಅನುಕಂಪ
Published On - 11:43 am, Fri, 8 January 21