My first salary.. ಮೊದಲ ಸಂಬಳದ ಸಂಭ್ರಮ.. ಇದು ಯುವ ಮನಗಳ ಖುಷಿಯ ಕಥೆ!

|

Updated on: Nov 25, 2020 | 3:11 PM

ಓದು ಮುಗಿಸಿ ಕೆಲಸ ಪಡೆಯುವುದೆಂದರೆ ಬದುಕು ಮಗ್ಗುಲು ಬದಲಿಸಿದಂತೆ! ಕೆಲಸವೆಂಬುದು ಸಂಭ್ರಮದ ಜೊತೆಗೆ ದೊಡ್ಡ ಜವಾಬ್ದಾರಿಯನ್ನೂ ಕೊಡುತ್ತದೆ. ಮೊದಲ ಸಂಬಳವನ್ನು ಹೇಗೆಲ್ಲಾ ಖರ್ಚು ಮಾಡಬಹುದೆಂದು ಯುವ ಮನಸ್ಸುಗಳು ಕಟ್ಟಿಕೊಂಡಿರುವ ಆಶಯಗಳಿವು..

My first salary.. ಮೊದಲ ಸಂಬಳದ ಸಂಭ್ರಮ.. ಇದು ಯುವ ಮನಗಳ ಖುಷಿಯ ಕಥೆ!
Follow us on

ನಾನು ಚೆನ್ನಾಗಿ ಕಲಿಯಬೇಕು. ದೊಡ್ಡ ಕೆಲಸ ಪಡೆಯಬೇಕು.. ಇದು ಪುಟ್ಟ ಮಕ್ಕಳ ದೊಡ್ಡ ಕನಸು. ಇದೇ ಆಶಯ ಹೊತ್ತು ಶಿಕ್ಷಣ ಪಡೆದು ಕೆಲಸಕ್ಕೆ ಹೊರಟಾಗ ಒಂದಲ್ಲಾ ಎರಡಲ್ಲಾ ನೂರು ಆಸೆಗಳು ಚಿಗುರಿಕೊಂಡಿರುತ್ತವೆ. ಹೊಸ ವೃತ್ತಿ, ಹೊಸ ಸ್ಥಳ, ಹೊಸ ಜನರು, ಹೊಸ ವಾತಾವರಣ.. ಎಲ್ಲವೂ ಹೊಸದು ಹೊಸದು. ಆಗಷ್ಟೇ ಕೆಲಸ ಪಡೆದ ಸಂಭ್ರಮ ಒಂದೆಡೆಯಾದರೆ, ವೃತ್ತಿಯನ್ನು ಎದುರಿಸಿ ಗೆಲ್ಲುವ ಸಣ್ಣ ಅಳುಕು ಮತ್ತೊಂದು ಕಡೆ.

ಕೆಲಸ ಸಿಕ್ಕಿತು ಅಂದಾಕ್ಷಣ ಬರುವ ಮುಖ್ಯ ಯೋಚನೆ ಸಂಬಳದ್ದು. ನಾನು ಇಷ್ಟು ಸಂಬಳ ಪಡೆಯಬೇಕು, ಮನೆಗೆ ಇಂತಿಷ್ಟು ಕೊಡಬೇಕು, ಅಮ್ಮ, ಅಪ್ಪ, ತಮ್ಮ, ತಂಗಿ.. ಎಲ್ಲರನ್ನೂ ಚೆನ್ನಾಗಿ ಕಾಣಬೇಕು.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೊಸ ಕೆಲಸ ಎಂಬ ಬದುಕಿನ ಹೆಜ್ಜೆಯೊಂದು ಎಷ್ಟೊಂದು ದೊಡ್ಡ ಜವಾಬ್ದಾರಿಯನ್ನು ಕೊಡುತ್ತದೆ. ಬದುಕಿನ ನೋಟವನ್ನೇ ಬದಲಿಸುತ್ತದೆ. ಈ ಬಗ್ಗೆ ಯುವ ಮನಗಳು ಏನು ಹೇಳುತ್ತವೆ…

ಮೊದಲ ಸಂಬಳ ಬಗ್ಗೆ ಅವರಿಗಿರುವ ಕನಸು-ಸಂಭ್ರಮವನ್ನು ಅವರೇ ಹಂಚಿಕೊಂಡಿದ್ದಾರೆ ನೋಡಿ…

ಗೆಳೆಯರ ಬಾಯಿ ಮುಚ್ಚಿಸುವುದೇ ದೊಡ್ಡ ಸವಾಲು. ಸಂಬಳ ಬರುವ ಮೊದಲೇ ಸ್ವೀಟ್, ಪಾರ್ಟಿ, ಸೆಲಬ್ರೇಷನ್ ಎಂದು ರಂಪ ಮಾಡಿರುತ್ತಾರೆ. ಇನ್ನು ಸಂಬಳ ಬಂದೇಬಿಟ್ಟರೆ ಕೇಳಬೇಕೆ? ಸದಾ ಜೊತೆಗಿರುವ ಅವರನ್ನು ಬಿಡಲಾಗುವುದಿಲ್ಲ. ಹೆತ್ತವರನ್ನೂ ಮರೆಯುವುದಿಲ್ಲ. ತಂದೆ, ತಾಯಿ, ಮನೆಯವರು ಮತ್ತು ಗೆಳೆಯರೊಂದಿಗೆ ಮೊದಲ ಸಂಭ್ರಮಾಚರಣೆ. ಈ ಸಂಭ್ರಮದ ನಡುವೆ ಕಲಿಕೆಗಾಗಿ ಮಾಡಿದ ಬ್ಯಾಂಕ್ ಲೋನ್ ಮರೆಯುವಂತಿಲ್ಲ. ಆ ಬಗ್ಗೆ ಹೆಚ್ಚಿನ ಗಮನ ಹರಿಸುವೆ. ಹೆತ್ತವರಿಗೆ ದೇವರು, ಭಕ್ತಿ, ಪೂಜೆಯ ನಂಬಿಕೆ ತುಸು ಹೆಚ್ಚು. ಒಂದೆರಡು ಸಣ್ಣ ಹರಕೆ ತೀರಿಸುವುದು ಕೂಡ ಸಂಬಳ ಬಂದನಂತರ ಮಾಡಬೇಕಾದ ಕೆಲಸದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
-ಸ್ವಾತಿ ಎಂ. ಪೂಜಾರಿ, ದಕ್ಷಿಣ ಕನ್ನಡ

ಕೆಲಸಕ್ಕೆ ಸೇರಿ, ಸಿಗುವ ಮೊದಲ ಸಂಬಳವನ್ನು ನನ್ನ ತಾಯಿಗೆ ಕೊಡಬೇಕೆಂದು ಬಯಸುತ್ತೇನೆ. ಎಷ್ಟೇ ದೊಡ್ಡ ಸಂಬಳ ಬಂದರೂ ನಾಲ್ಕು ಸಾವಿರದಷ್ಟು ಹಣವನ್ನು ಉಳಿಸಿಕೊಳ್ಳುವೆ. ಉಳಿದೆಲ್ಲವನ್ನೂ ಅಮ್ಮನಿಗೆ ಅರ್ಪಿಸುತ್ತೇನೆ. ಅವರ ಖುಷಿಯಲ್ಲಿ ನಾನೂ ಭಾಗಿಯಾಗುತ್ತೇನೆ.
-ರಾಘವೇಂದ್ರ ಶಾಂತಗೇರಿ, ಗದಗ

ಮೊದಲ ಸಂಬಳವನ್ನು ಮನೆಗೆ ಕೊಡಬೇಕು ಎಂಬ ಯೋಚನೆ ಇದೆ. ಅದರ ಹೊರತಾಗಿ ವಿಶೇಷ ಪ್ಲಾನ್​ಗಳು, ಬೇಕು-ಬೇಡಗಳು ಸದ್ಯಕ್ಕಿಲ್ಲ. ಸಂಬಳದ ಮೊತ್ತದಲ್ಲಿ ಹೆಚ್ಚಿನ ಹಣವನ್ನು ನನ್ನ ಹವ್ಯಾಸಗಳಿಗೆ ವಿನಿಯೋಗಿಸುವ ಆಶಯ ಇದೆ.
-ಮುರಳಿ ಮೋಹನ, ಕಾಸರಗೋಡು

ಸಿನಿಮಾ ಪ್ರೇಮಿಯಾಗಿರುವ ನನಗೆ ಒಳ್ಳೆಯ ಸೌಂಡ್ ಎಫೆಕ್ಟ್ ಕೊಡುವ ಇಯರ್ ಫೋನ್ ಬೇಕು. ಹಾಗಾಗಿ, ಸಂಬಳ ಬಂದ ತಕ್ಷಣವೇ ಇಷ್ಟದ ಇಯರ್ ಫೋನ್ ತೆಗೆದುಕೊಳ್ಳುವ ಆಸೆ ಇದೆ. ಜೊತೆಗೆ ಬಟ್ಟೆ ಒಗೆಯುವುದು ಎಂದರೆ ನನಗೆ ಆಲಸ್ಯ. ಬೆಂಗಳೂರಿನ ಬದುಕಲ್ಲಿ ಬಟ್ಟೆ ಒಗೆಯುತ್ತಾ ಒಂದು ದಿನ ಕಳೆಯುವುದು ತುಂಬಾ ಬೋರು. ಆ ಕೆಲಸ ಮಾಡಲು ವಾಷಿಂಗ್ ಮೆಷಿನ್ ಬೇಕೆಂಬ ಆಸೆ ಇದೆ.
-ಪ್ರಶಾಂತ್ ಕೆಳಗೂರ್, ಕಳಸ

ಮೊದಲ ಸಂಬಳ ಹೆತ್ತವರಿಗೇ ಸೀಮಿತ. ಈ ಬಗ್ಗೆ ನನಗೆ ನಾನೇ ಕಂಡೀಶನ್ ಹಾಕಿಕೊಂಡಿದ್ದೇನೆ. ಪದವಿ ಶಿಕ್ಷಣ ಮುಗಿಸಿ ಮೂರು ತಿಂಗಳು ಒಂದೆಡೆ ಕೆಲಸ ಮಾಡಿದ್ದೆ. ಆಗ ಸಿಕ್ಕ ಸಂಬಳವನ್ನು ಹೆತ್ತವರಿಗೆ ನೀಡಬೇಕು ಎಂಬ ಆಸೆ ಇತ್ತು. ಆದರೆ ಕಾರಣಾಂತರಗಳಿಂದ ಆ ಕನಸು ಈಡೇರಿರಲಿಲ್ಲ. ಇನ್ನೀಗ ಸ್ನಾತಕೋತ್ತರ ಶಿಕ್ಷಣ ಮುಗಿಸಿ, ಕೆಲಸ ಸಿಕ್ಕಾಗ ಮೊದಲ ಸಂಬಳ ಹೆತ್ತವರಿಗೇ ಸೀಮಿತ. ಜೊತೆಗೆ ಒಂದಷ್ಟು ತಿಂಡಿ ತಿನಿಸುಗಳಿಗೆ ಹಣ ಖಚಾರ್ಗಬಹುದು. ಅಣ್ಣ, ಗೆಳೆಯರು, ಕುಟುಂಬದ ಜೊತೆ ಪ್ರಕೃತಿ ರಮಣೀಯ ತಾಣಗಳಿಗೆ ಭೇಟಿ ಕೊಡಬಹುದು.
-ಭಾರತಿ ಸಜ್ಜನ್, ಬಳ್ಳಾರಿ

ಕೆಲಸ ಇದ್ದರೂ ಕಛೇರಿಗೆ ಹೋಗುವಂತಿಲ್ಲ. ಮನೆಯಲ್ಲೇ ಕೂತು ಆಫೀಸ್ ಕೆಲಸ ಮಾಡುತ್ತಿದ್ದೇನೆ. ಹೀಗಿದೆ ನಮ್ಮ ಐಟಿ ಲೈಫು! ವರ್ಕ್ ಫ್ರಂ ಹೋಮ್ ರೂಪದಲ್ಲಿ ಕೆಲಸ ನಡೆಯುತ್ತಿದ್ದು, ಹೆಚ್ಚಿನ ಖರ್ಚೇನೂ ಬರುತ್ತಿಲ್ಲ. ಮೊದಲ ಸಂಬಳ ಬಂದಾಕ್ಷಣ ಅದರಲ್ಲಿ ಮೂರು ವಿಂಗಡಣೆ ಮಾಡಿಕೊಳ್ಳಬೇಕೆಂದು ಯೋಜಿಸಿದ್ದೇನೆ. ಅದರಲ್ಲಿ ಒಂದು ಭಾಗವನ್ನು ನನ್ನ ಉಳಿತಾಯವಾಗಿ, ಮತ್ತೊಂದನ್ನು ಹೆತ್ತವರಿಗೆ ಉಡುಗೊರೆ ನೀಡಿ ವಿನಿಯೋಗಿಸುತ್ತೇನೆ. ಮೂರನೆಯ ಭಾಗದ ಮೊತ್ತವನ್ನು ನನ್ನ ಕನಸಿನ ಕ್ಯಾಮರಾ ಕೊಳ್ಳಲು ಕೂಡಿಡುತ್ತೇನೆ.
-ಮನೋಜ್ ಶರ್ಮ, ಶೃಂಗೇರಿ

ಈಗ ನಿಮ್ಮ ಮೊದಲ ಸಂಬಳದ ಬಗ್ಗೆ ನೀವು ಯೋಚಿಸಿ. ಈಗಾಗಲೇ ಸಂಬಳ ಪಡೆದವರಾಗಿದ್ದರೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳಿ.. ಏನನ್ನಿಸ್ತು? ನಮ್ಮ ಜೊತೆಗೆ ಹಂಚಿಕೊಳ್ಳಿ.

Published On - 2:32 pm, Wed, 25 November 20