ವಾಷಿಂಗ್ಟನ್: ಯುಟ್ಯೂಬ್ ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ನಿಮ್ಮ ಕಾಮೆಂಟ್ ಅಸಭ್ಯವಾಗಿಲ್ಲ ಎಂದು ಖಾತರಿ ಪಡಿಸಿದ ನಂತರವೇ ಮಂದುವರಿಯಿರಿ ಎಂಬ ಸಂದೇಶ ಇನ್ನು ಮುಂದೆ ಕಾಣಿಸಿಕೊಳ್ಳಲಿದೆ.
ಯುಟ್ಯೂಬ್ ಸಂಸ್ಥೆಯ ಸಮುದಾಯ ಮಾರ್ಗಸೂಚಿ ಪ್ರಕಾರ ಕಾಮೆಂಟ್ ಪೋಸ್ಟಿಸುವ ಮುನ್ನ ಅದು ಯಾವುದೇ ರೀತಿಯಲ್ಲಿ ಅಸಭ್ಯವಾಗಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಕಾಮೆಂಟ್ ಅಸಭ್ಯವಾಗಿದೆಯೇ ಎಂಬುದನ್ನು ಗೂಗಲ್ನ ಕೃತಕ ಬುದ್ಧಿಮತ್ತೆ (ಎಐ) ಪತ್ತೆ ಹಚ್ಚುತ್ತದೆ. ಹೀಗೆ ಪತ್ತೆ ಹಚ್ಚಿದ ನಂತರ ಕಾಮೆಂಟ್ ಎಡಿಟ್ ಮಾಡಲು ಅವಕಾಶ ನೀಡಲಾಗುವುದು.
ಯುಟ್ಯೂಬ್ನಲ್ಲಿ ಗೌರವಯುತ ವಿಚಾರ ವಿನಿಮಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಳಕೆದಾರರು ಕಾಮೆಂಟ್ ಮಾಡುವಾಗ ಅವರ ಕಾಮೆಂಟ್ ಇತರರನ್ನು ರೇಗಿಸುವಂತಿರಬಾರದು. ಹಾಗಾಗಿ ಪೋಸ್ಟ್ ಮಾಡುವ ಮುನ್ನ ಅದು ಹೇಗಿದೆ ಎಂಬುದನ್ನು ತೋರಿಸಿ ಎಚ್ಚರಿಕೆ ಸಂದೇಶ ನೀಡುವ ಹೊಸ ಫೀಚರ್ ಆರಂಭಿಸುವುದಾಗಿ ಯುಟ್ಯೂಬ್ ತಮ್ಮ ಬ್ಲಾಗ್ಪೋಸ್ಟ್ನಲ್ಲಿ ಹೇಳಿದೆ.
ಈ ಫೀಚರ್ ಈಗ ಅಂಡ್ರಾಯ್ಡ್ನಲ್ಲಿ ಲಭ್ಯವಾಗಿದೆ. ಕಾಮೆಂಟ್ ಅಸಭ್ಯವಾಗಿದ್ದರೆ ಯುಟ್ಯೂಬ್ ಅದನ್ನು ತೆಗೆದುಹಾಕಲಿದೆ. ಒಂದು ವೇಳೆ ಅಸಭ್ಯ ಕಾಮೆಂಟ್ ಎಂಬ ಎಚ್ಚರಿಕೆ ಬಂದರೂ ಬಳಕೆದಾರರು ಆ ಕಾಮೆಂಟ್ ಪೋಸ್ಟಿಸಿದ್ದರೆ ಅದನ್ನು ಯುಟ್ಯೂಬ್ ತೆಗೆದುಹಾಕಲೇ ಬೇಕೆಂದೇನಿಲ್ಲ. ಆದರೆ ಅಸಭ್ಯ ಪೋಸ್ಟ್ ಎಂದು ಇತರ ಬಳಕೆದಾರರು ರಿಪೋರ್ಟ್ ಮಾಡಿದ್ದರೆ ಯುಟ್ಯೂಬ್ ಅದನ್ನು ಅಸಭ್ಯ ಎಂದು ಗುರುತಿಸುತ್ತದೆ.
ತಪ್ಪು ಮಾಹಿತಿ, ಸಂಚು, ತಾರತಮ್ಯ, ಕಿರುಕುಳ, ಸಾಮೂಹಿಕ ಹತ್ಯೆ, ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಮೊದಲಾದ ವಿಷಯಗಳಿರುವ ವಿಡಿಯೊಗಳಿಗೆ ಕಡಿವಾಣ ಹಾಕಲು ಯುಟ್ಯೂಬ್ ಕ್ರಮ ಕೈಗೊಂಡಿದ್ದರೂ ಅಲ್ಲಿನ ಕಾಮೆಂಟ್ ಮಾತ್ರ ಸಭ್ಯತೆಯ ಎಲ್ಲೆ ಮೀರುತ್ತಿದ್ದವು.
ತಿಂಗಳಿಗೆ 200 ಕೋಟಿ ಬಳಕೆದಾರರು ಯೂಟ್ಯೂಬ್ ಬಳಸುತ್ತಿದ್ದು ಪ್ರತಿ ನಿಮಿಷಕ್ಕೆ 500 ಗಂಟೆಗಿಂತಲೂ ಹೆಚ್ಚು ಅವಧಿಯ ವಿಡಿಯೊಗಳು ಇಲ್ಲಿ ಅಪ್ಲೋಡ್ ಆಗುತ್ತವೆ.