ಚಿಕ್ಕಬಳ್ಳಾಪುರ: ಅಲಯನ್ಸ್ ಯುನಿವರ್ಸಿಟಿಯ ಉಚ್ಚಾಟಿತ ಚಾನ್ಸಲರ್ ಮಧುಕರ್ ಅಂಗೂರ್, ಜಮೀರ್ ಅಹ್ಮದ್ ಬಳಿ ಬರೋಬ್ಬರಿ ₹50 ಕೋಟಿ ಸಂದಾಯ ಮಾಡಿರುವುದಾಗಿ ಇಡಿ ತನಿಖೆ ವೇಳೆ ಬಾಯ್ಬಿಟ್ಟಿದ್ದರು. ಆದರೆ ಮಧುಕರ್ ಹೇಳಿಕೆಯನ್ನು ಜಮೀರ್ ಅಹ್ಮದ್ ಖಾನ್ ತಳ್ಳಿ ಹಾಕಿದ್ದಾರೆ.
ನನಗೂ, ಮಧುಕರ್ ಅಂಗೂರ್‌ಗೂ ಪರಿಚಯವಿರುವುದು ನಿಜ. ಆದರೆ ಅವರ ಹಣವನ್ನು ನಾನ್ಯಾಕೆ ತೆಗೆದುಕೊಳ್ಳಲಿ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅಲಯನ್ಸ್ ವಿವಿ ವಿಚಾರವಾಗಿ ಸಹೋದರರು ಜಗಳ ಮಾಡಿಕೊಂಡು ನನ್ನ ಬಳಿ ಬಂದಿದ್ದರು.
ಸಿದ್ದರಾಮಯ್ಯ ಬಳಿ ನಾನು ಕರೆದುಕೊಂಡು ಹೋಗಿದ್ದು ನಿಜ. ನಂತರ ಮೂರ್ನಾಲ್ಕು ವರ್ಷಗಳಿಂದ ಅವರು ನನಗೆ ಸಿಕ್ಕಿಲ್ಲ. ಅವರ ಹಣವನ್ನು ನಾನ್ಯಾಕೆ ತೆಗೆದುಕೊಳ್ಳಲಿ. ಅವರನ್ನ EDಯಿಂದ ಬಚಾವ್ ಮಾಡುವುದಕ್ಕೆ ನಾನ್ಯಾರು? ನನಗೂ EDಗೂ ಏನ್ ಸಂಬಂಧ, ಆ ರೀತಿ ಯಾವುದೂ ಇಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಮಧುಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ದರ್ಗಾದಲ್ಲಿ ಜಮೀರ್ ಪ್ರಾರ್ಥನೆ:
ಇನ್ನು ಈ ವೇಳೆ ಚಿಕ್ಕಬಳ್ಳಾಪುರದ ಹಜರತ್ ಸೈಯದ್ ಸರ್ಕಾರ್ ಮಿಸ್ಕಿನ್ ಷಾ ಅವ್ಲಿಯ ಸೈಲಾನಿ ದರ್ಗಾಗೆ ಜಮೀರ್ ಭೇಟಿ ನೀಡಿದ್ದು ಬೆಂಬಲಿಗರ ಜೊತೆ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: 107 ಕೋಟಿ ಅಕ್ರಮ ಹಣ ವರ್ಗಾವಣೆ ಕೇಸ್: ಮಧುಕರ್ ಅಂಗೂರ್ ಬಾಯ್ಬಿಟ್ರು ಮತ್ತೊಬ್ಬ ಮಾಜಿ ಸಚಿವನ ಹೆಸರು