
ತುಳುನಾಡು (Tulunadu) ತನ್ನ ಶ್ರೀಮಂತ ಸಂಸ್ಕೃತಿ, ಆಚಾರ ವಿಚಾರ, ನಾಗಾರಾಧನೆ, ದೈವಾರಾಧನೆ, ಧಾರ್ಮಿಕ ಆಚರಣೆ, ನಂಬಿಕೆಗಳಿಗೆ ಹೆಸರುವಾಸಿಯಾದ ಬೀಡು. ಇಲ್ಲಿ ಪ್ರತಿಯೊಂದು ಆಚರಣೆಯನ್ನು ಕೂಡಾ ಶಿಸ್ತುಬದ್ಧವಾಗಿ ಪಾಲಿಸಲಾಗುತ್ತದೆ. ಅದೇ ರೀತಿ ಅಮವಾಸ್ಯೆಯ ದಿನ ಈ ಭಾಗದಲ್ಲಿ ಪಾಲೆದ ಕಷಾಯ ಅಂದರೆ ಹಾಲೆ ಮರದ (ಸಪ್ತಪರ್ಣಿ ಮರ) ತೊಗಟೆಯ ಕಷಾಯ ಕುಡಿಯುವ ಸಂಪ್ರದಾಯವಿದೆ. ಇಂದು ಕರ್ಕಾಟಕ ಅಮವಾಸ್ಯೆ ಅಥವಾ ತುಳು ಸಂಪ್ರದಾಯದ ಆಟಿ ಅಮವಾಸ್ಯೆ (Aati Amavasya). ಆಟಿ ಅಮವಾಸ್ಯೆಯ ಈ ಶುಭ ದಿನದಂದು ಈ ಭಾಗದಲ್ಲಿ ಪಾಲೆದ ಕಷಾಯ ಕುಡಿಯುವ ಸಂಪ್ರದಾಯವಿದೆ. ಅಷ್ಟಕ್ಕೂ ಈ ವಿಶೇಷ ದಿನದಂದೇ ಏಕೆ ಈ ಕಷಾಯವನ್ನು ಕುಡಿಯಲಾಗುತ್ತದೆ? ಈ ಕಷಾಯದ ವಿಶೇಷತೆಗಳೇನು ಎಂಬುದನ್ನು ತಿಳಿಯಿರಿ.
ಬಹಳ ಹಿಂದಿನಿಂದಲೂ ತುಳುನಾಡಿನಲ್ಲಿ ಆಟಿ ತಿಂಗಳ ಅಮವಾಸ್ಯೆಯ ದಿನ ಔಷಧೀಯ ಗುಣವಿರುವ ಪಾಲೆ ಮರ ಅಂದರೆ ಹಾಲೆ ಮರದ ತೊಗಟೆಯ ಕಷಾಯವನ್ನು ಕುಡಿಯುವ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ಆಟಿ ಅಮವಾಸ್ಯೆಯ ದಿನ ಮುಂಜಾನೆ ಬೇಗ ಎದ್ದು, ಔಷಧೀಯ ಮರವಾದ ಹಾಲೆ ಮರದ ತೊಗಟೆಯನ್ನು ತಂದು ಅದರಿಂದ ಕಷಾಯ ಮಾಡಿ, ಆ ಕಷಾಯವನ್ನು ಪ್ರತಿಯೊಬ್ಬರೂ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತಾರೆ. ಹಿರಿಯರು ಆಚರಿಸಿಕೊಂಡು ಬಂದ ಇಂತಹ ಆಚರಣೆಗಳನ್ನು ಇಂದಿನ ಕಾಲದ ಜನ ಮೂಢ ನಂಬಿಕೆಗಳು ಎಂದು ದೂರಿದರೂ ಇಂತಹ ಆಚರಣೆಗಳ ಹಿಂದೆ ಅದರದ್ದೇ ಆದ ವೈಜ್ಞಾನಿಕ ಕಾರಣಗಳಿವೆ.
ಆಟಿ ಅಮವಾಸ್ಯೆಯ ಈ ಪವಿತ್ರ ದಿನದಂದೇ ಏಕೆ ಈ ಕಷಾಯವನ್ನು ಸೇವನೆ ಮಾಡಲಾಗುತ್ತದೆ ಎಂಬುದನ್ನು ನೋಡುವುದಾದರೆ, ಒಂದು ನಂಬಿಕೆಯ ಪ್ರಕಾರ, ಹಾಲೆ ಅಂದರೆ ಪಾಲೆ ಮರ ಆಟಿ ಅಮವಾಸ್ಯೆಯ ಈ ದಿನದಂದು ಮಾತ್ರ ಔಷಧೀಯ ಗುಣಗಳನ್ನು ಹೊಂದಿರುತ್ತದೆಯಂತೆ. ಹಾಗಾಗಿ ಈ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಕಷಾಯವನ್ನು ಸೇವನೆ ಮಾಡಲಾಗುತ್ತದೆ.
ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ನೋಡುವುದಾದರೆ, ಜುಲೈ ಅಂದರೆ ಆಟಿ ತಿಂಗಳಲ್ಲಿ ಎಡೆಬಿಡದೆ ಮಳೆ ಸುರಿಯುವ ಸಮಯ. ಈ ಸಮಯದಲ್ಲಿ ದೇಹದ ರೋಗ ನಿರೋಧಕ ಶಕ್ತಿ ಎನ್ನುವಂತಹದ್ದು ಕುಂಠಿತವಾಗುತ್ತದೆ, ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ರೀತಿಯ ಹೊಟ್ಟೆ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಯಲು ಆಟಿ ಅಮವಾಸ್ಯೆಯ ದಿನದಂದು ಪಾಲೆದ ಕಷಾಯವನ್ನು ಸೇವಿಸುವ ಸಂಪ್ರದಾಯ ರೂಢಿಯಲ್ಲಿದೆ. ಜುಲೈ ಅಥವಾ ಆಟಿ ತಿಂಗಳೆಂದರೆಯೇ, ಎಡೆ ಬಿಡದೆ ಸುರಿಯುವ ಮಳೆಯ ಸಮಯ. ಸಾಮಾನ್ಯವಾಗಿ ಈ ತಿಂಗಳಿನಲ್ಲಿ ಯಾವುದೇ ರೀತಿಯ ಹಬ್ಬ ಹರಿದಿನಗಳು ನಡೆಯುವುದಿಲ್ಲ. ಆಟಿ ತಿಂಗಳು ಕಳೆದು ಶ್ರಾವಣ ಆರಂಭವಾಗುತ್ತಿದ್ದಂತೆ, ಹಬ್ಬ ಹರಿದಿನಗಳು, ಜಾತ್ರೆ, ಮದುವೆ ಇತ್ಯಾದಿ ಸಂಭ್ರಮಗಳು ಅರಂಭವಾಗುತ್ತದೆ. ಆ ಸಮಯದಲ್ಲಿ ಜನರು ರುಚಿಕರವಾದ, ಸಿಹಿಯಾದ ಭಕ್ಷ್ಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಹಾಗಾಗಿ ಆಟಿ ಅಮವಾಸ್ಯೆಯ ದಿನ ಕಷಾಯ ಕುಡಿಯುವುದರಿಂದ ಅನಗತ್ಯ ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು ಎಂಬ ಕಾರಣಕ್ಕೆ ಕಷಾಯವನ್ನು ಕುಡಿಯಲಾಗುತ್ತದೆ.
ಜುಲೈ ಅಂದರೆ ಆಟಿ ತಿಂಗಳು ಧಾರಾಕಾರವಾಗಿ ಮಳೆ ಸುರಿಯುವ ಸಮಯ. ಎಡೆಬಿಡದೆ ಸುರಿಯುವ ಮಳೆಯ ಕಾರಣದಿಂದಾಗಿ ಹಿಂದಿನ ಕಾಲದಲ್ಲಿ ಜನ ಈ ಸಮಯದಲ್ಲಿ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಮಳೆಗಾಲವಾದ್ದರಿಂದ, ರೋಗನಿರೋಧಕ ಶಕ್ತಿಯ ಕೊರತೆಯ ಕಾರಣದಿಂದಾಗಿ, ವಿಶೇಷವಾಗಿ ಈ ಸಮಯದಲ್ಲಿ ಅನೇಕ ಬಾರಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಅಲ್ಲದೆ ಆ ಸಮಯದಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆಯೂ ಇರಲಿಲ್ಲ. ಜೊತೆಗೆ ಔಷಧಿಗಳನ್ನು ತರುವ ಶಕ್ತಿ ಜನರಲ್ಲೂ ಇರಲಿಲ್ಲ. ಹಾಗಾಗಿ ಈ ರೋಗಗಳು ಮತ್ತು ಕಾಯಿಲೆಗಳನ್ನು ಹೋಗಲಾಡಿಸಲು ಆಟಿ ಅಮವಾಸ್ಯೆಯ ದಿನ ವಿಶೇಷ ಶಕ್ತಿಯನ್ನು ಪಡೆಯುವ ಪಾಲೆ ಮರದ ತೊಗಟೆಯ ಕಷಾಯ ಮಾಡಿ ಜನ ಸೇವನೆ ಮಾಡುತ್ತಿದ್ದರು. ಅಂದಿನಿಂದ ಆಚರಿಸಿಕೊಂಡು ಬರಲಾಗುತ್ತಿರುವ ಈ ಆಚರಣೆ, ಸಂಪ್ರದಾಯ ಇಂದಿಗೂ ತುಳುನಾಡಿನಲ್ಲಿ ಜೀವಂತವಾಗಿದೆ.
ಹಾಲೆ ಮರದ ತೊಗಟೆಯಿಂದ ತಯಾರಿಸಲಾದ ಈ ವಿಶೇಷ ಕಷಾಯವು ಮುಂದಿನ ವರ್ಷದ ಆಟಿ ತಿಂಗಳಿನವರೆಗೆ ದೇಹಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಬಹುಶಃ ಇದೇ ಕಾರಣಕ್ಕೇನೋ ನಮ್ಮ ಹಿರಿಯರು ಯಾವುದೇ ಕಾಯಿಲೆಗಳಿಗೆ ತುತ್ತಾಗದೆ ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದದ್ದು. ಅಲ್ಲದೆ ಆಯುರ್ವೇದದಲ್ಲಿ ಚರ್ಮದ ಕಾಯಿಲೆಗಳು, ಮಲೇರಿಯಾ ಜ್ವರ, ಭೇದಿ, ಹಾವು ಕಡಿತ ಇತ್ಯಾದಿ ರೋಗ, ಕಾಯಿಲೆಗಳಿಗೆ ಹಾಲೆ ಮರದ ತೊಗಟೆಯನ್ನು ಕಹಿ ಸಂಕೋಚನ ಮೂಲಿಕೆಯಾಗಿ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ.
ಇದನ್ನೂ ಓದಿ: ದೇವರ ದರ್ಶನ ಪಡೆದು ಹೊರ ಬರುವ ಮುನ್ನ ಸ್ವಲ್ಪ ಹೊತ್ತು ದೇವಾಲಯದಲ್ಲಿ ಕುಳಿತುಕೊಳ್ಳುವುದೇಕೆ?
ಮುಂಜಾನೆ ಬೇಗ ಎದ್ದು, ಮನೆಯ ಪುರುಷರು ಮೊದಲೇ ಗುರುತಿಸಿಟ್ಟ ಪಾಲೆ ಮರದ ತೊಗಟೆಯನ್ನು ಕತ್ತಿಯಂತಹ ಯಾವುದೇ ಲೋಹ ಸ್ಪರ್ಷ ಮಾಡದೆ ಕಲ್ಲಿನಿಂದ ಜಜ್ಜಿ ತೊಗಡೆ ತೆಗೆಯುತ್ತಾರೆ. ಹೀಗೆ ತಂದ ಹಾಲೆಯ ಮರದ ತೊಗಟೆಯನ್ನು ಸ್ವಚ್ಛಗೊಳಿಸಿ ಬೆಳ್ಳುಳ್ಳಿ, ಅರಶಿನ, ಕರಿಮೆಣಸು ಅಥವಾ ಕೆಂಪು ಮೆಣಸಿನಕಾಯಿ ಹಾಕಿ ಅದನ್ನು ಅರೆಯುವ ಕಲ್ಲಿನಲ್ಲಿ ಅರೆದು ರಸ ತೆಗೆದು ನಂತರ ಆ ರಸಕ್ಕೆ ಬೆಣಚು ಕಲ್ಲನ್ನು ಬಿಸಿ ಮಾಡಿ ಹಾಕಿ ಒಂದು ರೀತಿಯ ಒಗ್ಗರಣೆ ಕೊಡುತ್ತಾರೆ. ಏಕೆಂದರೆ ಏನಾದರೂ ವಿಷಾಂಶ ಇದ್ದರೆ ಹೋಗಲಿ ಎಂದು. ಹೀಗೆ ಪಾಲೆದ ಕಷಾಯ ತಯಾರಾದ ಬಳಿಕ ಒಂದು ತುಂಡು ಬೆಲ್ಲ ತಿಂದು ಖಾಲಿ ಹೊಟ್ಟೆಯಲ್ಲಿ ಈ ಕಷಾಯವನ್ನು ಸೇವನೆ ಮಾಡುತ್ತಾರೆ. ನಂತರ ಮೆತ್ತದ ಗಂಜಿ ಅಂದರೆ ಮೆಂತ್ಯ ಗಂಜಿಯನ್ನು ಸಹ ಸೇವನೆ ಮಾಡುತ್ತಾರೆ. ಏಕೆಂದರೆ ಈ ಕಷಾಯ ಔಷಧೀಯ ಗುಣಗಳನ್ನು ಹೊಂದಿದ್ದರೂ ಅದನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಇದನ್ನು ಸಮತೋಲನಗೊಳಿಸಲು ಮೆಂತ್ಯೆ ಗಂಜಿಯನ್ನು ಸೇವಿಸುತ್ತಾರೆ. ಕೆಲವರು ಕೆಸುವಿನ ಎಲೆಯ ಪತ್ರೊಡೆಯನ್ನು ಸಹ ಮಾಡಿ ಸವಿಯುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 am, Thu, 24 July 25