ರಾತ್ರಿ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಒತ್ತಡದಿಂದ ಮುಕ್ತರಾಗಿ

ಇತ್ತೀಚಿನ ದಿನಗಳಲ್ಲಿ ಬ್ಯುಸಿ ಜೀವನಶೈಲಿಯಿಂದಾಗಿ ಒತ್ತಡದವು ಜೀವನದ ಭಾಗವಾಗಿ ಹೋಗಿದ್ದು, ಬಹುತೇಕ ಮಂದಿ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಈ ಒತ್ತಡವು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಒತ್ತಡ ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ನೀವು ಕೂಡ ಸ್ಟ್ರೆಸ್‌ಫುಲ್‌ ಜೀವನವನ್ನು ನಡೆಸುತ್ತಿದ್ದೀರಿ, ಇದರಿಂದ ಮುಕ್ತರಾಗಲು ರಾತ್ರಿ ಮಲಗುವ ಮುನ್ನ ಈ ಐದು ಅಭ್ಯಾಸಗಳನ್ನು ಪಾಲಿಸಿ.

ರಾತ್ರಿ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಒತ್ತಡದಿಂದ ಮುಕ್ತರಾಗಿ
ಸಾಂದರ್ಭಿಕ ಚಿತ್ರ
Image Credit source: freepik

Updated on: Oct 19, 2025 | 6:31 PM

ಒತ್ತಡ (stress) ಎನ್ನುವಂತಹದ್ದು ಇಂದಿನ ದಿನಗಳಲ್ಲಿ ಜಾಗತಿಕ ಕಾಯಿಲೆಯಾಗಿದೆ. ಕೆಲಸ, ಸಂಸಾರ, ಜವಾಬ್ದಾರಿ ಈ ಎಲ್ಲಾ ಕಾರಣದಿಂದಾಗಿ ಬಹುತೇಕ ಮಂದಿ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಹೌದು ಒತ್ತಡದ ಕಾರಣದಿಂದಾಗಿ ಸರಿಯಾದ ನಿದ್ರೆ, ವಿಶ್ರಾಂತಿಯಿಲ್ಲದೆ ಖಿನ್ನತೆಗೊಳಗಾಗಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಹಾಗಾಗಿ ದೈಹಿಕ, ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಬಹು ಮುಖ್ಯವಾಗಿದೆ. ನೀವು ಕೂಡ ಒತ್ತಡಕ್ಕೊಳಗಾಗಿದ್ದೀರಾ? ಹಾಗಿದ್ರೆ ಪ್ರತಿ ರಾತ್ರಿ ಮಲಗುವ ಮುನ್ನ ಈ ಐದು ಅಭ್ಯಾಸಗಳನ್ನು ಪಾಲಿಸುವ ಮೂಲಕ ಒತ್ತಡದಿಂದ ಮುಕ್ತರಾಗಿ.

ಒತ್ತಡ ಕಡಿಮೆ ಮಾಡಲು ನೀವು ಪಾಲಿಸಬೇಕಾದ ಅಭ್ಯಾಸಗಳಿವು:

ಮಲಗುವ ಮುನ್ನ ಡಿಜಿಟಲ್ ಡಿಟಾಕ್ಸ್: ಹೆಚ್ಚಿನ ಜನರು ಕೆಲಸದಿಂದ ಮನೆಗೆ ಹಿಂದಿರುಗಿದ ನಂತರ ಮೊಬೈಲ್ ಫೋನ್‌ ನೋಡುತ್ತಾ ಸಮಯ ಕಳೆಯುತ್ತಾರೆ. ಆದರೆ ಈ ಸಾಧನಗಳಿಂದ ಹೊರಸೂಸುವ ನೀಲಿ ಬೆಳಕು ನಿದ್ರೆಗೆ ಅಡ್ಡಿಪಡಿಸಬಹುದು. ಹಾಗಾಗಿ ಮಲಗುವ ಕನಿಷ್ಠ 30 ರಿಂದ 60 ನಿಮಿಷಗಳ ಮೊದಲು ಮೊಬೈಲ್ ಫೋನ್‌, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳನ್ನು ಆಫ್ ಮಾಡಿ. ಮತ್ತು ಇದರ ಬದಲಿಗೆ ನೀವು ಪುಸ್ತಕವನ್ನು ಓದಬಹುದು ಅಥವಾ ಪ್ರೀತಿಪಾತ್ರರೊಂದಿಗೆ ಸಂಭಾಷಣೆಯನ್ನು ನಡೆಸಬಹುದು. ಈ ಅಭ್ಯಾಸವು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುವುದರ ಜೊತೆಗೆ ಒತ್ತಡದಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.

ಆಳವಾದ ಉಸಿರಾಟ ಅಥವಾ ಧ್ಯಾನ: ಮಲಗುವ ಸ್ವಲ್ಪ ಹೊತ್ತಿನ  ಮೊದಲು ನೀವು ಆಳವಾದ ಉಸಿರಾಟದ ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡಿ. ಇದು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಶಾಂತ ವಾತಾವರಣದಲ್ಲಿ ಹಾಸಿಗೆಯಲ್ಲಿ ಕುಳಿತು ಧ್ಯಾನ ಮಾಡಿ. ಇದು ದೇಹ ಮತ್ತು ಮನಸ್ಸು ಎರಡನ್ನೂ ವಿಶ್ರಾಂತಿ ನೀಡುತ್ತದೆ ಮತ್ತು ನೀವು ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

ನಿಮಗಾಗಿ ಸಮಯ ಮೀಸಲಿಡಿ: ಕೆಲಸ ಮಾತ್ರವಲ್ಲ ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ನಂತರ ನಿಮಗಾಗಿ ನೀವು ಸ್ವಲ್ಪ ಸಮಯವನ್ನು ಮೀಸಲಿಡಿ.  ದೇಹಕ್ಕೆ ಸಾಕಷ್ಟು ವಿಶ್ರಾಂತಿಯನ್ನು ನೀಡಿ, ಚರ್ಮದ ಆರೈಕೆಯ ಬಗ್ಗೆಯೂ ಗಮನ ಕೊಡಿ. ನೆಮ್ಮದಿಯಿಂದ ಆರೋಗ್ಯಕರ ಊಟವನ್ನು ಮಾಡಿ. ಮತ್ತು ಮೊಬೈಲ್‌ ಫೋನ್‌ನಿಂದ ಆದಷ್ಟು ದೂರವಿರಿ. ಇದೆಲ್ಲವೂ ನಿಮ್ಮನ್ನು ಒತ್ತಡದಿಂದ ಮುಕ್ತಿಗೊಳಿಸುತ್ತದೆ.

ಜರ್ನಲಿಂಗ್: ಒತ್ತಡವನ್ನು ಕಡಿಮೆ ಮಾಡಿ ಶಾಂತ ಮನಸ್ಥಿತಿಯಿಂದಿರಲು ಉತ್ತಮ ಮಾರ್ಗವೆಂದರೆ ನಿಮ್ಮ ದಿನದ ಚಟುವಟಿಕೆಗಳು ಮತ್ತು ಭಾವನೆಗಳನ್ನು ದಿನಚರಿಯಲ್ಲಿ ಬರೆಯುವುದು. ವಿಶೇಷವಾಗಿ ಏನಾದರೂ ನಿಮ್ಮನ್ನು ಕಾಡುತ್ತಿದ್ದರೆ, ಅದನ್ನು ಕಾಗದ ಅಥವಾ ಪುಕ್ತಕದಲ್ಲಿ ಬರೆಯಿರಿ.  ಇದು ನಿಮ್ಮ ಮನಸ್ಸು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪ್ಯಾಕೇಜ್ಡ್‌ ಮಾತ್ರವಲ್ಲ ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನೂ ಪ್ರತಿನಿತ್ಯ ತಿನ್ನೋದು ಒಳ್ಳೆಯದಲ್ಲ

ಯೋಗ ಅಥವಾ ಸ್ಟ್ರೆಚಿಂಗ್ ಮಾಡಿ: ದಿನವಿಡೀ ಆಯಾಸಗೊಂಡಿರುವ ದೇಹದ ಸ್ನಾಯುಗಳಿಗೆ ಲಘು ಯೋಗ ಅಥವಾ ಸ್ಟ್ರೆಚಿಂಗ್ ವಿಶ್ರಾಂತಿ ನೀಡುತ್ತದೆ. ನೀವು ರಾತ್ರಿಯಲ್ಲಿ ಶವಾಸನ ಮತ್ತು ಬಾಲಾಸನ ಮಾಡಬಹುದು. ಇದು ಒತ್ತಡವನ್ನು ಕಡಿಮೆ ಮಾಡಿ ದೇಹವನ್ನು ವಿಶ್ರಾಂತಿ ಮಾಡುತ್ತದೆ. ಇದಲ್ಲದೆ, ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಅದರ ನಂತರ, ನೀವು ವಾಕಿಂಗ್‌ ಮಾಡಬಹುದು ಅಥವಾ ಸ್ವಲ್ಪ ಹೊತ್ತು ಸ್ಟ್ರೆಚಿಂಗ್ ಮಾಡಬಹುದು.

ಸಮಯಕ್ಕೆ ಸರಿಯಾಗಿ ಮಲಗಿ: ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಕೆಲಸದಿಂದ ಮನೆಗೆ ಬಂದ ನಂತರ ಸೋಷಿಯಲ್‌ ಮೀಡಿಯಾದಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಮತ್ತು ತಡವಾಗಿ ಮಲಗಿ ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗ್ತಾರೆ. ಇದರಿಂದ ನೀವು ಸರಿಯಾದ ನಿದ್ರೆ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಈ ಅಂಶ ಒತ್ತಡಕ್ಕೂ ಕಾರಣವಾಗುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ