Armed Forces Flag Day 2024: ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 07, 2024 | 9:58 AM

ದೇಶದ ರಕ್ಷಣೆಗಾಗಿ ಅಪಾರ ತ್ಯಾಗ, ಸೇವೆಯನ್ನು ಮಾಡುವವರೆಂದರೆ ಯೋಧರು. ಇಂತಹ ಭಾರತೀಯ ಸಶಸ್ತ್ರ ಪಡೆಗಳ ವೀರ ಯೋಧರ ಶೌರ್ಯ, ತ್ಯಾಗ, ಸಮರ್ಪಣೆಯನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಹಾಗೂ ಯೋಧರ ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ನಮ್ಮ ದೇಶದಲ್ಲಿ ಡಿಸೆಂಬರ್‌ 7 ರಂದು ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವಿಶೇಷ ಆಚರಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳ ಮಾಹಿತಿ ಇಲ್ಲಿದೆ.

Armed Forces Flag Day 2024: ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us on

ದೇಶದ ರಕ್ಷಣೆ ಅಂತ ಬಂದಾಗ ಯಾರು ಮುಂದೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಎಂತಹದ್ದೇ ಪರಿಸ್ಥಿತಿ ಬಂದರೂ ಸಾವಿಗೂ ಅಂಜದೆ ದೇಶದ ರಕ್ಷಣೆಗಾಗಿ ಮೊದಲು ಮುನ್ನುಗ್ಗುವವರೇ ನಮ್ಮ ಹೆಮ್ಮೆಯ ಸೈನಿಕರು. ನಾವು ದೇಶದೊಳಗೆ ನೆಮ್ಮದಿಯಿಂದ ಇರಲು ವೀರ ಯೋಧರ ಕೊಡುಗೆಯು ಅಪಾರ. ಜೊತೆಗೆ ಇಂದು ನಮ್ಮ ದೇಶದ ಸಶಸ್ತ್ರ ಪಡೆಗಳು ವಿಶ್ವದ ಅತ್ಯುತ್ತಮ ಮತ್ತು ಹೆಚ್ಚು ವೃತ್ತಿಪರ ಪಡೆಗಳೆಂದು ಗುರುತಿಸಿಕೊಂಡಿದೆ. ಈ ಕೀರ್ತಿ ಬರಲು ಸೈನಿಕರ ತ್ಯಾಗ, ಧೈರ್ಯ, ಸಮರ್ಪಣೆಯೇ ಕಾರಣ ಎಂದು ಹೇಳಬಹುದು. ಇಂತಹ ಭಾರತೀಯ ಸೇನೆ, ವಾಯುಪಡೆ, ಭಾರತೀಯ ನೌಕಾಪಡೆಯ ಯೋಧರ ತ್ಯಾಗ, ಸೇವೆ, ಶೌರ್ಯ, ಸಮರ್ಪಣೆಯನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ನಮ್ಮ ದೇಶದಲ್ಲಿ ಡಿಸೆಂಬರ್‌ 7 ರಂದು ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವಿಶೇಷ ಆಚರಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳ ಮಾಹಿತಿ ಇಲ್ಲಿದೆ.

ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಇತಿಹಾಸ:

ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಪ್ರತಿ ವರ್ಷ ಡಿಸೆಂಬರ್ 7 ರಂದು ಆಚರಿಸಲಾಗುತ್ತದೆ. 1949 ರಲ್ಲಿ ಕೇಂದ್ರ ಸಚಿವ ಸಂಪುಟದ ರಕ್ಷಣಾ ಸಚಿವರ ಸಮಿತಿಯು ಭಾರತೀಯ ಸೇನೆಯ ಸೈನಿಕರಿಗಾಗಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಭಾರತೀಯ ಯೋಧರು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಧ್ವಜ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಪ್ರತಿವರ್ಷ ಈ ವಿಶೇಷ ದಿನದಂದು ಸಾರ್ವಜನಿಕರಿಗೆ ಧ್ವಜಗಳನ್ನು ಹಂಚುವ ಮೂಲಕ ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆಯನ್ನು ಸಂಗ್ರಹಿಸಲಾಗುತ್ತದೆ.

ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಮಹತ್ವ:

ಭಾರತೀಯ ಭೂ ಸೇನೆ, ಭಾರತೀಯ ವಾಯು ಪಡೆ ಮತ್ತು ಭಾರತೀಯ ನೌಕಾ ಪಡೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಸೇವೆ ಸಲ್ಲಿಸುತ್ತಿರುವ ಯೋಧರ ಶೌರ್ಯ, ತ್ಯಾಗ ಮತ್ತು ಸಮರ್ಪಣೆಯನ್ನು ಗೌರವಿಸಲು ಮತ್ತು ಯೋಧರ ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ಈ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಸಶಸ್ತ್ರ ಪಡೆಗಳ ಧ್ವಜ ದಿನವನ್ನು ದೇಶದ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತದೆ. ಹೌದು ದೇಶದ ಎಲ್ಲಾ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಸೇರಿದಂತೆ ಸಾಮಾನ್ಯ ನಾಗರಿಕರು ಸಹ ಧ್ವಜವನ್ನು ಖರೀದಿಸುವ ಮೂಲಕ ದೇಣಿಗೆ ನೀಡುತ್ತಾರೆ.

ಹುತಾತ್ಮ ಯೋಧಕ ಕುಟುಂಬಗಳಿಗೆ ಸಹಾಯ ಮಾಡಲು ನಿಧಿಯನ್ನು ಸಂಗ್ರಹಿಸಲಾಗುತ್ತದೆ:
ಈ ಈ ವಿಶೇಷ ದಿನದಂದು, ಹುತಾತ್ಮರಾದ ಸಶಸ್ತ್ರ ಪಡೆಗಳ ಸೈನಿಕರ ಕುಟುಂಬಗಳಿಗೆ ಸಹಾಯ ಮಾಡಲು ಸಹ ಹಣವನ್ನು ಸಂಗ್ರಹಿಸಲಾಗುತ್ತದೆ. ಕೆಂಪು, ಕಡು ನೀಲಿ ಮತ್ತು ತಿಳಿ ನೀಲಿ ಬಣ್ಣದ ಸೇನಾ ಧ್ವಜವನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ದೇಣಿಗೆಯ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. ಈ ಮೊತ್ತವನ್ನು ಧ್ವಜ ದಿನಾಚರಣೆ ನಿಧಿಯಲ್ಲಿ ಠೇವಣಿ ಇಡಲಾಗುತ್ತದೆ. ಈ ನಿಧಿಯು ಯುದ್ಧದಲ್ಲಿ ಹುತಾತ್ಮರಾದ ಅಥವಾ ಗಾಯಗೊಂಡ ಸೈನಿಕರ ಕುಟುಂಬಗಳ ಕಲ್ಯಾಣ ಮತ್ತು ಪುನರ್ವಸತಿಗಾಗಿ ಸಹಾಯವನ್ನು ಒದಗಿಸುತ್ತದೆ.

ಇದನ್ನೂ ಓದಿ: ಒಂದು ತುಂಡು ಬೆಲ್ಲ ತಿನ್ನಿ, ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಿ

ಈ ದಿನದ ಆಚರಣೆಯ ಮುಖ್ಯ ಉದ್ದೇಶ:

• ಹುತಾತ್ಮರಾದ ಮತ್ತು ನಿವೃತ್ತಿ ಹೊಂದಿದ ಮತ್ತು ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಗೌರವಿಸುವುದು.

• ಯುದ್ಧದಲ್ಲಿ ಗಾಯಗೊಂಡ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದು.

• ಮಾಜಿ ಸೈನಿಕರು ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ.

• ಈ ದಿನದಂದು, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ಅನೇಕ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದೇಶದ ಭದ್ರತೆಯಲ್ಲಿ ಸೇನೆಯ ಕೊಡುಗೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅವರ ಉದ್ದೇಶವಾಗಿದೆ.

ಅಲ್ಲದೆ ಈ ದಿನದಂದು ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಸೇರಿದಂತೆ ಭಾರತೀಯ ಸಶಸ್ತ್ರ ಪಡೆಗಳ ಸೇವೆ, ತ್ಯಾಗ, ಸಮರ್ಪಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರದರ್ಶನಗಳು, ನಾಟಕಗಳು ಮತ್ತು ಉತ್ಸವಗಳಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ದಿನದಂದು ಬ್ಯಾಡ್ಜ್‌, ಸ್ಟಿಕ್ಕರ್‌, ಧ್ವಜಗಳನ್ನು ಮಾರಾಟ ಮಾಡಿ ನಿಧಿ ಸಂಗ್ರಹಿಸಲಾಗುತ್ತದೆ. ಈ ಹಣವನ್ನು ಸೈನಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಬಳಸಲಾಗುತ್ತದೆ. ಮುಖ್ಯವಾಗಿ ನಾಗರಿಕರು ಮತ್ತು ಸಶಸ್ತ್ರ ಪಡೆಗಳ ನಡುವಿನ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಬಲಪಡಿಸುವುದು ಈ ದಿನದ ಉದ್ದೇಶವಾಗಿದೆ.

ನಿಧಿಸಂಗ್ರಹಣೆ ಮತ್ತು ಕಲ್ಯಾಣ ನಿಧಿ:

ಧ್ವಜ ದಿನದಂದು ಸಂಗ್ರಹಿಸಿದ ಹಣವನ್ನು ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಯಲ್ಲಿ ಠೇವಣಿ ಮಾಡಲಾಗುತ್ತದೆ. ಸಶಸ್ತ್ರ ಪಡೆಗಳ ಈ ವಿಶೇಷ ದಿನದಂದು ಧ್ವಜವನ್ನು ಖರೀದಿಸುವ ಮೂಲಕ ದೇಶದ ಸೈನಿಕರ ಕಲ್ಯಾಣಕ್ಕಾಗಿ ನೀವು ಕೂಡಾ ಸಹಾಯವನ್ನು ಮಾಡಬಹುದು. ಇದರ ಹೊರತಾಗಿ ಆನ್‌ಲೈನ್‌ ಬ್ಯಾಂಕಿಂಗ್‌ ಅಥವಾ ಚೆಕ್‌ ಮೂಲಕ ದೇಣಿಗೆ ನೀಡಬಹುದು. ಜೊತೆಗೆ ನೀವು https://ksb.gov.in/donateaffdf.htm ಮೂಲಕವು ದೇಣಿಗೆ ನೀಡಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ