
ಈ ಬಾರಿ ಸಂಪೂರ್ಣ ಚಂದ್ರಗ್ರಹಣ (Blood Moon Eclipse) ಅದರಲ್ಲಿಯೂ ರಕ್ತ ಚಂದ್ರ ಗ್ರಹಣ ಸಂಭವಿಸಲಿರುವುದು ಬಹಳ ವಿಶೇಷ. 2025ರ ಸೆ. 7ರ ರಾತ್ರಿ ಈ ಚಂದ್ರ ಗ್ರಹಣ ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಇದು ಗೋಚರವಾಗಲಿದೆ. ಬರಿಗಣ್ಣಿನಿಂದ ಸುಲಭವಾಗಿ ನೋಡಬಹುದಾದ ಈ ಅಪರೂಪದ ಈ ಘಟನೆಯನ್ನು ಪ್ರತಿಯೊಬ್ಬನೂ ಕಣ್ಣುತುಂಬಿಕೊಳ್ಳಬೇಕಾಗಿದೆ. ಸೂರ್ಯರ ನಡುವೆ ಭೂಮಿ ಬಂದಾಗ ನಡೆಯುವ ಈ ಅಪೂರ್ವ ಅವಕಾಶ ಮಿಸ್ ಮಾಡಿಕೊಂಡ್ರೆ ಇನ್ನು ಮೂರು ವರ್ಷ ಕಾಯಬೇಕಾಗುತ್ತದೆ. ಹೌದು. ಭಾರತದಲ್ಲಿ ವೀಕ್ಷಣೆಗೆ ಸಿಗಬಹುದಾದ ಮುಂದಿನ ಸಂಪೂರ್ಣ ಚಂದ್ರಗ್ರಹಣ ಡಿ. 31 2028ಕ್ಕೆ. ಹಾಗಾಗಿ ಗಾಢ ಕೆಂಪು ಅಥವಾ ತಾಮ್ರವರ್ಣದಲ್ಲಿ ಗೋಚರಿಸುವ ಈ ಚಂದ್ರಗ್ರಹಣದ ಬಗ್ಗೆ ತಿಳಿದುಕೊಳ್ಳಿ.
ಚಂದ್ರಗ್ರಹಣವು ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಸಂಭವಿಸುತ್ತದೆ. ಈ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಕೆಲಕಾಲ ಅದು ಮರೆಮಾಡಲ್ಪಡುತ್ತದೆ. ಭೂಮಿಯನೆರಳಿನಲ್ಲಿ ಎರಡು ಭಾಗಗಳಿರುತ್ತವೆ. ಒಳಗಿನ ಗಾಢ ಕತ್ತಲೆಯ ಭಾಗವನ್ನು ‘ಅಂಬ್ರಾ’ ಎಂದು ಕರೆಯಲಾಗುತ್ತದೆ; ಹೊರಗಿನ ಮಬ್ಬಾದ ಭಾಗವನ್ನು ‘ಪೆನಂಬ್ರಾ’ ಎಂದು ಕರೆಯಲಾಗುತ್ತದೆ. ಚಂದ್ರನು ಅಂಬ್ರಾ ನೆರಳಿನೊಳಗೆ ಪ್ರವೇಶಿಸುವಾಗ ಅಥವಾ ಅದನ್ನು ತೊರೆಯುವಾಗ, ನಾವು ಪಾರ್ಶ್ವ ಚಂದ್ರಗ್ರಹಣವನ್ನು ಬರಿಗಣ್ಣಿನ ಮೂಲಕ ಸುಲಭವಾಗಿ ಗಮನಿಸಬಹುದು. ಚಂದ್ರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸಿದಾಗ, ಸಂಪೂರ್ಣ ಗ್ರಹಣವಾಗಿ ಚಂದ್ರ ತಾಮ್ರವರ್ಣದ ಅಥವಾ ಗಾಢ ಕೆಂಪು ಬಣ್ಣದಲ್ಲಿ ಕಾಣಿಸುಕೊಳ್ಳುತ್ತದೆ. ಪೆನಂಬ್ರಾ ನೆರಳಿನೊಳಗೆ ಚಂದ್ರ ಇರುವಾಗ, ಅದರ ಪ್ರಕಾಶದಲ್ಲಿ ಸ್ವಲ್ಪ ಕಡಿಮೆಯಾದರೂ ಅದನ್ನು ಬರಿಗಣ್ಣಿನಿಂದ ಗುರುತಿಸುವುದು ಕಷ್ಟವಾಗುತ್ತದೆ.
ಸೆಪ್ಟೆಂಬರ್ 7ರಂದು ರಾತ್ರಿ 9:57 ಕ್ಕೆ ಚಂದ್ರನು, ಭೂಮಿಯ ಗಾಢ ನೆರಳಾದ ಅಂಬ್ರಾ ಒಳಗೆ ಪ್ರವೇಶಿಸಲು ಆರಂಭಿಸುತ್ತದೆ, ಇದು ಪಾರ್ಶ್ವ ಚಂದ್ರಗ್ರಹಣದ ಆರಂಭ. ನಂತರ ಚಂದ್ರನ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಆವರಿಸಲ್ಪಡುತ್ತಾ, 11:01 ಕ್ಕೆ ಅದು ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ. ಸಂಪೂರ್ಣ ಚಂದ್ರಗ್ರಹಣವು 82 ನಿಮಿಷಗಳ ವರೆಗೆ, ಅಂದರೆ 12:23ರವರೆಗೆ, ಮುಂದುವರಿದು ಬಳಿಕ ಚಂದ್ರನು ನಿಧಾನವಾಗಿ ಅಂಬ್ರಾದಿಂದ ಹೊರಬರಲಾರಂಭಿಸಿ, ಈ ಪಾರ್ಶ್ವ ಹಂತವು 1:26ರ ವರೆಗೆ ಮುಂದುವರಿಯುತ್ತದೆ. ಪಾರ್ಶ್ವಛಾಯಾ ಹಂತವು ರಾತ್ರಿ 8:58ಕ್ಕೆ ಆರಂಭವಾಗಿ, ಬೆಳಗಿನ ಜಾವ 2:25ಕ್ಕೆ ಅಂತ್ಯಗೊಳ್ಳುತ್ತದೆ. ಈ ಸಂಪೂರ್ಣ ಚಂದ್ರಗ್ರಹಣವು ಗಾಢ ಕೆಂಪು ಅಥವಾ ತಾಮ್ರವರ್ಣದಲ್ಲಿ ಗೋಚರಿಸುತ್ತದೆ. ಇದಕ್ಕೆ ಕಾರಣವೆಂದರೆ, ಸೂರ್ಯನ ಬೆಳಕಿನ ಕೆಂಪು ಬಣ್ಣದ ಕಿರಣಗಳು ಭೂಮಿಯ ತೆಳುವಾದ ವಾತಾವರಣದ ಮೂಲಕ ಹಾದುಹೋಗಿ ಚಂದ್ರನ ಮೇಲೆ ತಲುಪುತ್ತವೆ. ನೀಲಿ ಬಣ್ಣದ ಕಿರಣಗಳು ಮಾತ್ರ ಭೂಮಿಯ ಹಗಲಿನ ಆಕಾಶದಲ್ಲಿ ಆಗುವಂತೆ ಚದುರಿಬಿಡುತ್ತವೆ.
ಚಂದ್ರಗ್ರಹಣವನ್ನು ವೀಕ್ಷಿಸಲು ಯಾವುದೇ ವಿಶೇಷ ಸಾಧನಗಳ ಅಗತ್ಯವಿಲ್ಲ. ಬರಿಗಣ್ಣಿನಿಂದ ನೋಡಲು ಇದು ಸಂಪೂರ್ಣ ಸುರಕ್ಷಿತ. ಆದರೆ ದೂರದರ್ಶಕ ಅಥವಾ ದುರ್ಬೀನನ್ನು ಬಳಸಿದರೆ ವೀಕ್ಷಣೆಯ ಅನುಭವ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಇದನ್ನು ಭಾರತದಲ್ಲಿ ಆರ್ಯಭಟನ ಕಾಲದಲ್ಲೇ ತಿಳಿಯಲಾಗಿತ್ತು. ಇದರಿಂದ ಮಾನವರಿಗೆ, ಪ್ರಾಣಿಗಳಿಗೆ, ಸಸ್ಯಗಳಿಗೆ ಅಥವಾ ಆಹಾರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಆದ್ದರಿಂದ ಜನರು ಹೊರಗೆ ಬಂದು ಗ್ರಹಣವನ್ನು ವೀಕ್ಷಿಸುವಾಗ ಆಹಾರ ಸೇವಿಸುವುದೂ ಸಂಪೂರ್ಣ ಸುರಕ್ಷಿತ. ಇನ್ನು ಕರ್ನಾಟಕದ ಹಲವೆಡೆ ಅನೇಕ ಸಂಸ್ಥೆಗಳು ಸಾರ್ವಜನಿಕರಿಗಾಗಿ ಗ್ರಹಣ ವೀಕ್ಷಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಉದಾಹರಣೆಗೆ, ಬೆಂಗಳೂರು ಜವಾಹರಲಾಲ್ ನೆಹರು ತಾರಾಲಯ ಕೂಡ ವೀಕ್ಷಣಾ ಕಾರ್ಯಕ್ರಮವನ್ನು ನಡೆಸಲಿದೆ. ಇದಲ್ಲದೆ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಅಸ್ಟ್ರೋ ಫಿಸಿಕ್ಸ್) ಲಡಾಖ್, ಕೊಡೈಕನಾಲ್ ಮತ್ತು ಬೆಂಗಳೂರಿನಿಂದ ಈ ಚಂದ್ರಗ್ರಹಣವನ್ನು ನೇರಪ್ರಸಾರ (livestream) ಮಾಡಲಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ