Chanakya Niti: ಬುದ್ಧಿವಂತ ಮಹಿಳೆ ಮಾತ್ರ ಈ ವಿಶೇಷ ಗುಣಗಳನ್ನು ಹೊಂದಿರುವುದಂತೆ
ಆಚಾರ್ಯ ಚಾಣಕ್ಯರು ರಾಜಕೀಯ ಮತ್ತು ರಾಜತಾಂತ್ರಿಕತೆಯ ಬಗ್ಗೆ ಮಾತ್ರವಲ್ಲದೆ, ಕುಟುಂಬ ಜೀವನ ಮತ್ತು ಪುರುಷರು ಮತ್ತು ಮಹಿಳೆಯರ ಗುಣಗಳ ಬಗ್ಗೆಯೂ ವಿವರಿಸಿದ್ದಾರೆ. ಮುಖ್ಯವಾಗಿ ಅವರು ಬುದ್ಧಿವಂತ ಮಹಿಳೆ ಹೇಗಿರುತ್ತಾಳೆ, ಅವಳು ಯಾವೆಲ್ಲಾ ವಿಶೇಷ ಗುಣಗಳನ್ನು ಹೊಂದಿರುತ್ತಾಳೆ ಎಂಬುದನ್ನು ಸಹ ಸೊಗಸಾಗಿ ವಿವರಿದ್ದಾರೆ. ಮಹಿಳೆಯರೇ ಆಚಾರ್ಯ ಚಾಣಕ್ಯರು ಹೇಳಿರುವಂತಹ ಗುಣಗಳು ನಿಮ್ಮಲ್ಲೂ ಇವೆಯೇ ಎಂಬುದನ್ನು ಪರೀಕ್ಷಿಸಿ.

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಎಲ್ಲ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೌದು ಶ್ರೀಮಂತಿಕೆ, ಯಶಸ್ಸು, ಬಡತನ, ದಾಂಪತ್ಯ ಜೀವನ, ಹಿತಶತ್ರುಗಳು, ಸ್ನೇಹಿತರು ಹೀಗೆ ನಮ್ಮ ಜೀವನದ ಪ್ರತಿಯೊಂದು ವಿಚಾರದ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ಮಹಿಳೆಯರ ಜೀವನಕ್ಕೂ ಸಂಬಂಧಿಸಿದ ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಬುದ್ಧಿವಂತ ಮಹಿಳೆಯ ಲಕ್ಷಣಗಳೇನು, ಆಕೆ ಯಾವೆಲ್ಲಾ ಗುಣಗಳನ್ನು ಹೊಂದಿರುತ್ತಾಳೆ ಎಂಬುದನ್ನು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಬುದ್ಧಿವಂತ ಮಹಿಳೆಯ ಗುಣಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಬುದ್ಧಿವಂತ ಮಹಿಳೆಯ ಲಕ್ಷಣಗಳೇನು?
ಸ್ವತಂತ್ರ ಚಿಂತನೆ: ಬುದ್ಧಿವಂತ, ಬಲಿಷ್ಠ ಮಹಿಳೆ ತನ್ನದೇ ಆದ ಆಲೋಚನೆಗಳನ್ನು ರೂಪಿಸಿಕೊಳ್ಳುತ್ತಾಳೆ. ಅವಳು ಇತರರ ಅಭಿಪ್ರಾಯಗಳನ್ನು ಕೇಳುತ್ತಾಳೆ, ಆದರೆ ಅವಳು ತನ್ನದೇ ತೀರ್ಪಿನ ಆಧಾರದ ಮೇಲೆ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ.
ಇತರರ ಮಿತಿಗಳನ್ನು ಅರ್ಥಮಾಡಿಕೊಳ್ಳುವುದು: ಬುದ್ಧಿವಂತ ಮಹಿಳೆಗೆ ಎಲ್ಲಿ ಹೇಗಿರಬೇಕು ಎಂಬುದು ತಿಳಿದಿರುತ್ತದೆ. ಆಕೆ ಇತರರ ಮಿತಿಗಳನ್ನು ಅರ್ಥಮಾಡಿಕೊಂಡು ಜೀವನ ಸಾಗಿಸುತ್ತಾರೆ. ಇತರರ ವಿಚಾರದಲ್ಲಿ ಹೆಚ್ಚು ಮೂಗು ತುರಿಸುವುದಿಲ್ಲ.
ಭಾವನೆಗಳನ್ನು ನಿಯಂತ್ರಿಸುವುದು: ಬುದ್ಧಿವಂತ ಮಹಿಳೆ ಯಾವತ್ತೂ ಅತಿಕೇರದ ವರ್ತನೆಯನ್ನು ತೋರುವುದಿಲ್ಲ, ಆಕೆಗೆ ತನ್ನ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಚೆನ್ನಾಗಿ ತಿಳಿದಿರುತ್ತದೆ. ಆಕೆ ಎಲ್ಲಾ ಸಂದರ್ಭಗಳನ್ನು ಸಹ ಶಾಂತವಾಗಿ ನಿಭಾಯಿಸುತ್ತಾಳೆ.
ಚಿಂತನಶೀಲ ಮನಸ್ಥಿತಿ: ನೀತಿವಂತಿಕೆಯ ಮಾರ್ಗವನ್ನು ಅನುಸರಿಸುವ ಮತ್ತು ತನ್ನ ಮೌಲ್ಯಗಳನ್ನು ಗೌರವಿಸುವ ಮಹಿಳೆ ಬುದ್ಧಿವಂತಳಾಗಿರುತ್ತಾರೆ. ಜೊತೆಗೆ ಕಷ್ಟದ ಸಮಯದಲ್ಲೂ ವಿಚಲಿತರಾಗದೆ ಮತ್ತು ಸಂದರ್ಭಗಳನ್ನು ಚಿಂತನಶೀಲವಾಗಿ ನಿಭಾಯಿಸುವ ಮಹಿಳೆ ಕೂಡ ಬುದ್ಧಿವಂತ ಮಹಿಳೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಭವಿಷ್ಯದ ಬಗ್ಗೆ ಯೋಚಿಸುವ ಮಹಿಳೆ: ಮನೆಯ ಸಂಪನ್ಮೂಲಗಳು ಮತ್ತು ಹಣಕಾಸು ವಿಚಾರಗಳನ್ನು ಸಮರ್ಥವಾಗಿ ನಿರ್ವಹಿಸುವ, ವ್ಯರ್ಥ ಖರ್ಚುಗಳನ್ನು ತಪ್ಪಿಸುವ ಮತ್ತು ಭವಿಷ್ಯಕ್ಕಾಗಿ ಉಳಿತಾಯ ಮಾಡುವ ಮಹಿಳೆ ತುಂಬಾನೇ ಬುದ್ಧಿವಂತೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಇದನ್ನೂ ಓದಿ: ಈ ಅಭ್ಯಾಸಗಳಿದ್ದರೆ ನೀವು ಜೀವನಪರ್ಯಂತ ಬಡವರಾಗಿಯೇ ಉಳಿಯುತ್ತೀರಿ ಜೋಕೆ!
ಸಮಯದ ಮಹತ್ವ ತಿಳಿದಿರುವಾಕೆ: ಸಮಯ ಎನ್ನುವಂತಹದ್ದು ಅತ್ಯಮೂಲ್ಯವಾದದ್ದು, ಅದರ ಮಹತ್ವವನ್ನು ತಿಳಿದಿರುವ ಮಹಿಳೆಯೇ ನಿಜವಾದ ಬುದ್ಧಿವಂತೆ ಎನ್ನುತ್ತಾರೆ ಚಾಣಕ್ಯ. ಸಮಯದ ಮಹತ್ವ ತಿಳಿದಿರುವವರು ನಿಷ್ಪ್ರಯೋಜಕ ವಿಷಯಗಳಿಗೆ ಸಮಯ ವ್ಯರ್ಥ ಮಾಡುವುದಿಲ್ಲ ಮತ್ತು ತನ್ನ ಅಭಿವೃದ್ಧಿಯತ್ತ ಗಮನಹರಿಸುತ್ತಾರೆ.
ಮನೆಯನ್ನು ಸಮರ್ಥವಾಗಿ ನಿಭಾಸುವ ಕಲೆ: ಒಳ್ಳೆಯ ನಡವಳಿಕೆಯೊಂದಿಗೆ ಮನೆ ಮತ್ತು ಮನೆಯವರನ್ನು ಅಚ್ಚುಕಟ್ಟಾಗಿ ನಿಭಾಯಿಸುವ, ಮನೆಯ ಸುಖ, ಶಾಂತಿಯನ್ನು ಕಾಪಾಡಿಕೊಳ್ಳುವ ಕಲೆಯನ್ನು ತಿಳಿದಿರುವ ಮಹಿಳೆ ಕೂಡ ಬುದ್ಧಿವಂತೆ ಎನ್ನುತ್ತಾರೆ ಚಾಣಕ್ಯ.
ಗುಣಗಳು ಯಾವುದೇ ಮಹಿಳೆಯನ್ನು ಬುದ್ಧಿವಂತಳನ್ನಾಗಿ ಮಾಡುವುದು ಮಾತ್ರವಲ್ಲದೆ, ಆಕೆಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ, ಸಮಾಜದಲ್ಲಿ ಆಕೆಯ ಗೌರವ, ಘನತೆಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




