ಗೊರಕೆಯೆಂಬುದು ಒಂದು ರೋಗವೆಂದು ಬಹುತೇಕ ಜನರು ಒಪ್ಪಿಕೊಳ್ಳುವುದೇ ಇಲ್ಲ. ನಿದ್ರೆ ಮಾಡುವಾಗ ಗೊರಕೆ (Snoring) ಬರುವುದು ಸಾಮಾನ್ಯವೆಂಬುದು ಹಲವರ ಅಭಿಪ್ರಾಯ. ಆದರೆ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಗೊರಕೆ ಹೊಡೆಯುತ್ತಿದ್ದರೆ ಅವರಿಗೆ ಅಪಾಯ ಬಂದೊದಗುವ ಸಾಧ್ಯತೆಗಳು ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ. ಈ ಸಂಶೋಧನೆಯ ಪ್ರಕಾರ, ರಾತ್ರಿಯಲ್ಲಿ ಗೊರಕೆ ಹೊಡೆಯುವ ಯುವ ವಯಸ್ಕರಲ್ಲಿ ಪಾರ್ಶ್ವವಾಯು (Stroke) ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಂಡುಬರುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ.
ಆಂಸ್ಟರ್‌ಡ್ಯಾಮ್‌ನಲ್ಲಿರುವ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಈ ಕುರಿತು ಅಧ್ಯಯನ ನಡೆಸಿದ್ದು, ಗೊರಕೆ ಹೊಡೆಯುವ 50 ವರ್ಷದೊಳಗಿನ ಜನರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂಬ ಆತಂಕಕಾರಿ ಸಂಗತಿಯನ್ನು ತಿಳಿಸಿದೆ.
ಇದನ್ನೂ ಓದಿ: Snoring: ನೀವು ಕೂಡ ಗೊರಕೆಯ ಸಮಸ್ಯೆ ಎದುರಿಸುತ್ತಿದ್ದರೆ ಈ ಆಯುರ್ವೇದ ವಿಧಾನದಿಂದ ಪರಿಹಾರ ಕಂಡುಕೊಳ್ಳಿ
ರಾತ್ರಿ ವೇಳೆ ಗೊರಕೆ ಹೊಡೆಯುವ ಯುವ ವಯಸ್ಕರು ಮಧ್ಯವಯಸ್ಸಿನಲ್ಲಿ ಪಾರ್ಶ್ವವಾಯು ಅನುಭವಿಸುವ ಸಾಧ್ಯತೆ ಶೇ. 60ರಷ್ಟು ಹೆಚ್ಚಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಹಾಗೇ, ಅವರಲ್ಲಿ ಹೃದಯದ ಸಮಸ್ಯೆ ಹೆಚ್ಚುವ ಅಪಾಯವು 5 ಪಟ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ.
ಈ ಅಧ್ಯಯನಕ್ಕೆ ಅಮೆರಿಕಾದ 20 ರಿಂದ 50 ವರ್ಷ ವಯಸ್ಸಿನ 7,66,000 ವಯಸ್ಕರ ಡಾಟಾವನ್ನು ಸಂಗ್ರಹಿಸಲಾಗಿತ್ತು. 10 ವರ್ಷದ ಅವಧಿಯಲ್ಲಿ ಸ್ಲೀಪ್ ಅಪ್ನಿಯ ಹೊಂದಿರುವ ವ್ಯಕ್ತಿಗಳು ಕಡಿಮೆ ಬಾರಿ ಅಥವಾ ಗೊರಕೆ ಹೊಡೆಯುವವರಿಗೆ ಹೋಲಿಸಿದರೆ ಶೇ. 60ರಷ್ಟು ಹೆಚ್ಚು ಪಾರ್ಶ್ವವಾಯು ಅಪಾಯವನ್ನು ಎದುರಿಸುತ್ತಾರೆ ಎಂದು ಅಧ್ಯಯನವು ತಿಳಿಸಿದೆ.
ಇದನ್ನೂ ಓದಿ: Snoring Problem: ಈ ಸುಲಭ ವ್ಯಾಯಾಮದಿಂದ ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು
ಗೊರಕೆಗೆ ಕಾರಣವೇನು?:
ಒಬ್ಬ ವ್ಯಕ್ತಿಯು ಮಲಗಿದಾಗ ಮೂಗಿನ ಶ್ವಾಸನಾಳದ ಮೂಲಕ ಗಾಳಿಯು ಸುಲಭವಾಗಿ ಹರಿಯಲು ಸಾಧ್ಯವಾಗದಿದ್ದಾಗ ಗೊರಕೆ ಉಂಟಾಗುತ್ತದೆ ಎಂದು ಸ್ಲೀಪ್ ಫೌಂಡೇಶನ್ ಹೇಳಿದೆ. ಇದಿಷ್ಟೇ ಅಲ್ಲದೆ ವ್ಯಕ್ತಿಯ ಜೀವನಶೈಲಿ ಅಥವಾ ಅಭ್ಯಾಸಗಳಿಂದ ಗೊರಕೆ ಉಂಟಾಗುತ್ತದೆ. ಇದು ವ್ಯಕ್ತಿಯ ನಿದ್ರೆಯನ್ನು ಅಡ್ಡಿಪಡಿಸಬಹುದು, ಇದು ಇತರ ಆರೋಗ್ಯ ಸಮಸ್ಯೆಗಳಿಗೆ ಕೂಡ ಕಾರಣವಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ