ಪ್ರಸ್ತುತ ಜಗತ್ತಿನಲ್ಲಿ ಯುವಜನತೆ ಮೊಬೈಲ್ ವೈಶಿಷ್ಟ್ಯಗಳಿಗೆ ಮಾರುಹೋಗಿರುವ ಹಿನ್ನೆಲೆ ಅನೇಕರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾರೆ. ಸೌಂಡ್ ಬಂದರೆ ಬೇರೆಯವರಿಗೆ ತೊಂದರೆ ಆಗುತ್ತದೆ ಎಂದು ಭಾವಿಸಿ ಹೆಚ್ಚಿನವರು ಹಾಡುಗಳನ್ನು ಆಸ್ವಾದಿಸಲು ಇಯರ್ ಫೋನ್ ಬಳಸುತ್ತಾರೆ. ಪ್ರಯಾಣ ಮಾಡುವಾಗ ಅಥವಾ ಬಿಡುವಿನ ವೇಳೆಯಲ್ಲಿ ಸಂಗೀತವನ್ನು ಕೇಳಲು ಇಯರ್ ಫೋನ್ ಬಳಕೆ ಮಾಡುತ್ತಾರೆ. ಈ ಸಾಧನವನ್ನು ಸೀಮಿತವಾಗಿ ಬಳಸಿದರೆ ತೊಂದರೆ ಇಲ್ಲ. ಅದರೆ ಅತಿಯಾಗಿ ಬಳಸುವವರು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸದಿದ್ದರೆ ಮುಂದೆ ಶ್ರವಣ ಸಮಸ್ಯೆ ಜೊತೆಗೆ ಇನ್ನಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ತಜ್ಞರ ಹೇಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯೂ ಎಚ್ಚರಿಕೆ ನೀಡಿದೆ.
ಹೆಚ್ಚಿನ ವಾಲ್ಯೂಮ್ ಇರುವ ಹಾಡುಗಳನ್ನು ಕೇಳುವುದರಿಂದ ಶ್ರವಣ ದೋಷದ ಅಪಾಯವಿದೆ. ಇಯರ್ ಫೋನ್, ಇಯರ್ ಬಡ್, ಏರ್ ಪ್ಯಾಡ್, ಬ್ಲೂಟೂತ್ ಹಾಕಿಕೊಂಡು ಮೊಬೈಲ್ನಲ್ಲಿ ಮಾತನಾಡುವುದು, ಜೋರಾಗಿ ಸಂಗೀತ ಕೇಳುವುದು ಶ್ರವಣದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅವುಗಳನ್ನು ದಿನವಿಡೀ ಬಳಸಿದರೆ ಕಿವಿ ಸೋಂಕಿನ ಅಪಾಯವೂ ಎದುರಾಗಲಿದೆ. ಹಾಗಿದ್ದರೆ ಇಯರ್ ಫೋನ್ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಕಿವುಡುತನ: ಇಯರ್‌ಫೋನ್‌ಗಳ ಅತಿಯಾದ ಬಳಕೆ ಕಿವಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇವುಗಳ ಅತಿಯಾದ ಬಳಕೆ ಸೋಂಕುಗಳಿಗೆ ಕಾರಣವಾಗಬಹುದು. ಕಿವಿಯಲ್ಲಿ ನೋವನ್ನು ಉಂಟುಮಾಡಬಹುದು. ಕ್ರಮೇಣ ಈ ಸಮಸ್ಯೆ ಹೆಚ್ಚಾಗಬಹುದು. ಕೆಲವರಿಗೆ ತಲೆಸುತ್ತು ಬರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಏಕಾಗ್ರತೆಯ ಕೊರತೆ: ಇಯರ್‌ಫೋನ್‌ಗಳ ಅತಿಯಾದ ಬಳಕೆಯು ಏಕಾಗ್ರತೆಯ ಕೊರತೆಗೆ ಕಾರಣವಾಗುತ್ತದೆ. ಇತರರು ಬಳಸಿದ ಇಯರ್‌ಫೋನ್‌ಗಳನ್ನು ಬಳಸುವುದು ಸೋಂಕುಗಳಿಗೆ ಕಾರಣವಾಗಬಹುದು. ಇದು ಕಿವಿಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.
ಹಾಗಿದ್ದರೆ ಇಯರ್ಫೋನ್ನ ಬಳಕೆ ಹೇಗೆ?
ಹೆಡ್‌ಫೋನ್ ಬಳಕೆ: ಬೇರೆಯವರ ಇಯರ್ ಫೋನ್ ಬದಲು ಹೆಡ್ ಫೋನ್ ಬಳಸಿದರೆ ಎದುರಾಗಬಹುದಾದ ದೊಡ್ಡ ಸಮಸ್ಯೆಗಳಿಂದ ಪಾರಾಗಬಹುದು ಎನ್ನುತ್ತಾರೆ ತಜ್ಞರು. ಹೆಡ್‌ಫೋನ್‌ಗಳನ್ನು ಧರಿಸುವುದರಿಂದ ಕಿವಿಯೋಲೆ ಮತ್ತು ಧ್ವನಿಯ ನಡುವೆ ಅಂತರವಿರುತ್ತದೆ. ಇದರಿಂದ ಕಿವಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.
ಸೀಮಿತ ಧ್ವನಿ: ಇಯರ್‌ಫೋನ್‌ಗಳನ್ನು ಬಳಸುವಾಗ ಧ್ವನಿ ಕಡಿಮೆ ಇಡಬೇಕು. ವಾಲ್ಯೂಮ್ 60 ಡೆಸಿಬಲ್‌ಗಳಿಗಿಂತ ಕಡಿಮೆಯಿದೆ ಎಂದು ಖಚಿತಪಡಿಸಿಕೊಳ್ಳಿ. 85 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಫೋನ್ ಸೆಟ್ಟಿಂಗ್‌ಗಳಲ್ಲಿ ವಾಲ್ಯೂಮ್ ಅನ್ನು ಶೇಕಡಾ 50 ರಷ್ಟು ಇರಿಸಿ. ನೀವು ಧ್ವನಿಯನ್ನು ಹೆಚ್ಚಿಸಲು ಪ್ರಯತ್ನಿಸಿದರೆ ನಿಮಗೆ ಎಚ್ಚರಿಕೆ ಬರುತ್ತದೆ. ಆ ಸಂದರ್ಭದಲ್ಲಿ ನಾವು ನಮ್ಮ ಧ್ವನಿಯನ್ನು ಮಿತಿಯಲ್ಲಿಟ್ಟುಕೊಂಡು ಹಾಡುಗಳನ್ನು ಕೇಳಬಹುದು.
ಮತ್ತಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ