ಕೊಳಕು ಪಾತ್ರೆಗಳನ್ನು ತೊಳೆಯದೆ ರಾತ್ರಿಯಿಡಿ ಸಿಂಕ್‌ನಲ್ಲಿಟ್ಟರೆ ಆಗುವ ತೊಂದರೆಗಳೇನು ಗೊತ್ತೇ?
ಸಾಮಾನ್ಯವಾಗಿ ಕೆಲವರು ರಾತ್ರಿ ಊಟದ ಬಳಿಕ ಪಾತ್ರೆಗಳನ್ನು ತೊಳೆಯದೆ ಸಿಂಕ್‌ನಲ್ಲಿ ಹಾಗೆಯೇ ಇಟ್ಟು ಬಿಡುತ್ತಾರೆ ಮತ್ತು ಆ ಕೊಳಕು ಪಾತ್ರೆಗಳನ್ನು ಬೆಳಗ್ಗಿನ ಹೊತ್ತಿನಲ್ಲಿ ತೊಳೆದು ಬಿಡುತ್ತಾರೆ. ಊಟದ ನಂತರ ಪಾತ್ರೆ ತೊಳೆಯುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಅನೇಕರು ಈ ರೀತಿ ಮಾಡ್ತಾರೆ. ತೀರಾ ಸಾಮಾನ್ಯದಂತೆ ಕಾಣುವ ಈ ಅಭ್ಯಾಸವು ಅರೋಗ್ಯ ಮತ್ತು ಅಡುಗೆ ಮನೆಯ ನೈರ್ಮಲ್ಯದ ಮೇಲೆ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತವೆ ಗೊತ್ತಾ? ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಕೊಳಕು ಪಾತ್ರೆಗಳನ್ನು ತೊಳೆಯದೆ ರಾತ್ರಿಯಿಡೀ ಸಿಂಕ್‌ನಲ್ಲಿ ಇಡುವುದು ಒಳ್ಳೆಯ ಅಭ್ಯಾಸವಲ್ಲ
- ಕೊಳಕು ಪಾತ್ರೆಯನ್ನು ದೀರ್ಘಕಾಲದವರೆಗೆ ಸಿಂಕ್‌ನಲ್ಲಿಟ್ಟರೆ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ
- ಕೊಳಕು ಪಾತ್ರೆಗಳು ಜಿರಳೆ, ನೊಣ, ಇರುವೆಗಳನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚು
ಕೊಳಕು ಪಾತ್ರೆಗಳನ್ನು (utensils) ರಾತ್ರಿಯಿಡೀ ಸಿಂಕ್‌ನಲ್ಲಿ ಇಡಬಾರದು, ಇದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎಂದು ಹಿರಿಯರು ಆಗಾಗ್ಗೆ ಹೇಳುವುದುಂಟು. ಹೀಗಿದ್ದರೂ ಕೂಡ ಅನೇಕ ಮಂದಿ ವಿಶೇಷವಾಗಿ ರಾತ್ರಿ ಊಟದ ಬಳಿ ತಟ್ಟೆ, ಲೋಟ ಇತ್ಯಾದಿ ಪಾತ್ರೆಗಳನ್ನು ತೊಳೆಯದೆ ಸಿಂಕ್‌ನಲ್ಲಿ ಹಾಗೆಯೇ ಇಟ್ಟು ಬಿಡ್ತಾರೆ ಮತ್ತು ಮರು ದಿನ ಬೆಳಗ್ಗೆ ಅವುಗಳನ್ನು ಸ್ವಚ್ಛಗೊಳಿಸುತ್ತಾರೆ. ಇದರಿಂದ ಯಾವುದೇ ರೀತಿಯ ತೊಂದರೆಗಳಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದ್ರೆ ಏನು ಗೊತ್ತಾ, ನಿಮ್ಮ ಸೋಮಾರಿತನವು ಅನೇಕ ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಹೌದು ಈ ಅಭ್ಯಾಸ ಅಡುಗೆ ಮನೆಯ ನೈರ್ಮಲ್ಯದ ಮೇಲೆ ಪರಿಣಾಮವನ್ನು ಬೀರುವುದು ಮಾತ್ರವಲ್ಲ ಅನೇಕಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಹಾಗಿದ್ದರೆ ಕೊಳಕು ಪಾತ್ರೆಗಳನ್ನು ತೊಳೆಯದೆ ರಾತ್ರಿಯಿಡೀ ಸಿಂಕ್‌ನಲ್ಲಿಯೇ ಇಡುವ ಸಣ್ಣ ಅಭ್ಯಾಸದಿಂದ ಎದುರಾಗುವ ಗಂಭೀರ ಪರಿಣಾಮಗಲೇನು ಎಂಬುದನ್ನು ನೋಡೋಣ ಬನ್ನಿ.
ಕೊಳಕು ಪಾತ್ರೆಗಳನ್ನು ರಾತ್ರಿಯಿಡೀ ಸಿಂಕ್‌ನಲ್ಲಿ ಏಕೆ ಬಿಡಬಾರದು?
ಸಾಲ್ಮೊನೆಲ್ಲಾ, ಲಿಸ್ಟೇರಿಯಾ ಮತ್ತು ಇ. ಕೋಲಿ ಯಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಸಿಂಕ್‌ನಲ್ಲಿ ಅಥವಾ ಅಡುಗೆಮನೆಯಲ್ಲಿ ದೀರ್ಘಕಾಲದವರೆಗೆ ಇಟ್ಟಿರುವ ಕೊಳಕು ಪಾತ್ರೆಗಳ ಮೇಲೆ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಆ ಬ್ಯಾಕ್ಟೀರಿಯಾಗಳು ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರವೂ ಸಾಯುವುದಿಲ್ಲ. ಪರಿಣಾಮವಾಗಿ, ಅಂತಹ ಪಾತ್ರೆಗಳಲ್ಲಿ ಆಹಾರವನ್ನು ಬಡಿಸಿದಾಗ, ಆ ಬ್ಯಾಕ್ಟೀರಿಯಾಗಳು ಆಹಾರದ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲ ಹಲವು ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ಉಂಟು ಮಾಡುತ್ತವೆ.
ಇರುವೆಗಳು ಮತ್ತು ಜಿರಳೆಗಳ ಕಾಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ:
ಕೊಳಕು ಪಾತ್ರೆಗಳನ್ನು ತೊಳೆಯದೆ ರಾತ್ರಿಯಿಡೀ ಸಿಂಕ್‌ನಲ್ಲಿ ಹಾಗೆಯೇ ಇಟ್ಟು ಬಿಡುವುದರಿಂದ ಅಡುಗೆ ಮನೆಯಲ್ಲಿ ಇರುವೆ, ಕೀಟ ಮತ್ತು ಜಿರಳೆಗಳ ಕಾಟ ಹೆಚ್ಚಾಗುತ್ತದೆ. ಆಹಾರದ ಕಣಗಳು ಮತ್ತು ವಾಸನೆ ಇರುವೆ ಮತ್ತು ಕೀಟಗಳನ್ನು ಆಕರ್ಷಿಸುತ್ತದೆ. ಹೀಗೆ ಆಹಾರವನ್ನು ಅರಸುತ್ತಾ ಬರುವ ಜಿರಳೆಗಳು ಅಡುಗೆ ಮನೆಯಲ್ಲಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಇದರಿಂದ ಜಿರಳೆಗಳ ಕಾಟವೂ ಹೆಚ್ಚಾಗುತ್ತದೆ. ಆದ್ದರಿಂದ, ಪಾತ್ರೆಗಳನ್ನು ಮಾತ್ರವಲ್ಲದೆ ರಾತ್ರಿಯಲ್ಲಿ ಸಿಂಕ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ.
ಕೊಳಕು ಪಾತ್ರೆಗಳಿಂದ ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ:
ಕೊಳಕು ಪಾತ್ರೆಗಳಿಂದ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಮನೆಯ ವಾತಾವರಣವನ್ನು ಕಲುಷಿತಗೊಳಿಸಬಹುದು. ಈ ನಕಾರಾತ್ಮಕ ಶಕ್ತಿಯು ಮನೆಯಾದ್ಯಂತ ಹರಡಬಹುದು ಮತ್ತುಕುಟುಂಬ ಸದಸ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅದೇ ರಾತ್ರಿ ಊಟ ಮಾಡಿದ ತಕ್ಷಣವೇ ಪಾತ್ರೆಗಳನ್ನು ತೊಳೆದು ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಅನಾರೋಗ್ಯ ಮತ್ತು ಸೋಂಕಿನ ಅಪಾಯ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಬೆಳಿಗ್ಗೆ ಅಥವಾ ಸಂಜೆ; ನೆಲ ಒರೆಸಲು ಉತ್ತಮ ಸಮಯ ಯಾವುದು?
ರಾತ್ರಿ ಮಲಗುವ ಮುನ್ನ ಸಿಂಕ್ ಅನ್ನು ಯಾವ ರೀತಿ ಸ್ವಚ್ಛಗೊಳಸಬೇಕು?
ರಾತ್ರಿಯಿಡಿ ಕೊಳಕು ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೆಯೇ ಇಡುವ ಬದಲು, ಊಟವಾದ ತಕ್ಷಣವೇ ಎಲ್ಲಾ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಅಷ್ಟೇ ಅಲ್ಲದೆ ಸಿಂಕ್‌ನಲ್ಲಿ ವಾಸನೆ ಬರುವುದನ್ನು ತಪ್ಪಿಸಲು, ಸಿಂಕ್‌ನಲ್ಲಿ ಸಿಲುಕಿರುವ ಆಹಾರ ಕಣಗಳನ್ನು ತೆಗೆದುಹಾಕಿ ನಂತರ ಸಿಂಕನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಒದ್ದೆಯಾದ ಸ್ಪಂಜುಗಳು ಮತ್ತು ಸ್ಕ್ರಬ್ಬರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಅಡುಗೆ ಮನೆ ಕೌಂಟರ್ ಟಾಪ್ ಕ್ಲೀನ್ ಮಾಡಿ. ಇದು ಅಡುಗೆಮನೆಯನ್ನು ಸ್ವಚ್ಛವಾಗಿಡುವುದಲ್ಲದೆ, ಜಿರಳೆ, ನೊಣಗಳು ಅಡುಗೆ ಮನೆಯನ್ನು ಪ್ರವೇಶಿಸುವುದನ್ನು ತಡೆಯುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




