ಡಿಸೆಂಬರ್, ವರ್ಷದ ಅಂತ್ಯ ಮತ್ತು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಜೊತೆಗೆ ಈ ತಿಂಗಳಲ್ಲಿ ಪ್ರಮುಖ ಹಬ್ಬಗಳಿದ್ದು, ಇವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಬೆರೆಸುವ ಸಂಪ್ರದಾಯಗಳ ನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಧಾರ್ಮಿಕ ಆಚರಣೆಗಳಿಂದ ಹಿಡಿದು ಸಾಂಸ್ಕೃತಿಕ ಆಚರಣೆಗಳವರೆಗೆ, ಈ ತಿಂಗಳು ವೈವಿಧ್ಯತೆ ಮತ್ತು ಅನೇಕ ರೀತಿಯ ಸಂಪ್ರದಾಯಗಳನ್ನು ಪ್ರಪಂಚದಾದ್ಯಂತ ತೋರಿಸಿ ಕೊಡುವ ಕೈ ಗನ್ನಡಿ ಎಂದರೆ ತಪ್ಪಾಗಲಾರದು. ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳಾವವು? ಅದರ ಪ್ರಾಮುಖ್ಯತೆಯೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಉತ್ಪನ್ನ ಏಕಾದಶಿ ಅಥವಾ ಕಾರ್ತಿಕ ಬಹುಳ ಏಕಾದಶಿ ಕಾರ್ತಿಕ ಪೂರ್ಣಿಮೆಯ ನಂತರ ಬರುವ ಕೃಷ್ಣ ಪಕ್ಷದ ಏಕಾದಶಿಯಾಗಿದೆ. ಅತ್ಯಂತ ಪ್ರಮುಖ ಏಕಾದಶಿಗಳಲ್ಲಿ ಒಂದಾದ ಇದು ದೇವುತ್ಥಾನ ಏಕಾದಶಿಯ ನಂತರ ಬರುವ ಏಕಾದಶಿಯಾಗಿದೆ. ಈ ವರ್ಷ ಇದು ಡಿಸೆಂಬರ್ 8 ರಂದು ಬರುತ್ತದೆ. ಈ ದಿನವನ್ನು ಕೆಲವು ಕಡೆಗಳಲ್ಲಿ ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನವನ್ನಾಗಿಯೂ ಆಚರಿಸಲಾಗುತ್ತದೆ.
ಪ್ರತಿ ಸೋಮವಾರವು ಭಗವಾನ್ ಶಿವನಿಗೆ ಸಮರ್ಪಿತವಾಗಿದ್ದರೂ, ಮಹಾದೇವನನ್ನು ಮೆಚ್ಚಿಸಲು ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ, ಈ ತಿಥಿಯನ್ನು ಮಾಸ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ಬಾರಿಯ ಮಾಸ ಶಿವರಾತ್ರಿಯನ್ನು ಡಿಸೆಂಬರ್ 11ರಂದು ಆಚರಿಸಲಾಗುತ್ತದೆ.
ಭಗವಾನ್ ಶಿವನಿಗೆ ಅಚ್ಚುಮೆಚ್ಚಿನ ಮಾಸವಾದ ಕಾರ್ತಿಕ ಮಾಸದ ಅಮಾವಾಸ್ಯೆಯನ್ನು ಡಿಸೆಂಬರ್ 12 ರಂದು ಮಂಗಳವಾರ ಆಚರಿಸಲಾಗುತ್ತದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನವನ್ನು ಮಾಡಿ, ದಾನ ಮಾಡುವುದು ಬಹಳ ಮಹತ್ವದ್ದಾಗಿದೆ. ಇದಲ್ಲದೇ ಜಾತಕದಲ್ಲಿ ಪಿತೃದೋಷ ಇರುವವರು ಅಮಾವಾಸ್ಯೆಯ ದಿನ ಕೆಲವು ಪೂಜಾ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ತಿಕ ಅಮಾವಾಸ್ಯೆಯನ್ನು ಛಟ್ಟಿ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆಯೆಂದೂ ಕರೆಯಲಾಗುತ್ತದೆ.
ಚಂಪಾ ಷಷ್ಠಿಯನ್ನು ಈ ಬಾರಿ ಡಿಸೆಂಬರ್ 18 ರಂದು ಆಚರಿಸಲಾಗುತ್ತದೆ. ಈ ದಿನದಂದು ಶಿವ ಮತ್ತು ಅವನ ಹಿರಿಯ ಮಗ ಕಾರ್ತಿಕೇಯನನ್ನು ಪೂಜಿಸಲಾಗುತ್ತದೆ. ಈ ದಿನದಂದು ಉಪವಾಸ ಮತ್ತು ಪೂಜೆಯಿಂದ ಪಾಪಗಳು ನಿವಾರಣೆಯಾಗುತ್ತದೆ, ತೊಂದರೆಗಳು ದೂರವಾಗುತ್ತವೆ, ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಪುಷ್ಯ ಪುತ್ರದ ಏಕಾದಶಿಯಂದು ಅಥವಾ ವೈಕುಂಠ ಏಕಾದಶಿಯಂದು ಮೂರು ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಈ ಶುಭ ಯೋಗಗಳು ಸಿದ್ಧ, ಸಧ್ಯ, ರವಿ ಯೋಗ. ಈ ಯೋಗದಲ್ಲಿ ಮಾಡುವ ಪೂಜೆಯು ಹಲವು ಪಟ್ಟು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆ. ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ, ಪುತ್ರದಾ ಏಕಾದಶಿ ಎಂದೂ ಕೂಡ ಕರೆಯುತ್ತಾರೆ. ಈ ಬಾರಿಯ ವೈಕುಂಠ ಏಕಾದಶಿಯನ್ನು ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ. ಈ ದಿನದಂದು ವೈಕುಂಠದ ಉತ್ತರ ದ್ವಾರ ತೆರೆಯುತ್ತದೆ. ದೇವತೆಗಳೆಲ್ಲ ಮಹಾವಿಷ್ಣುವಿನ ದರ್ಶನ ಪಡೆಯುವ ಸಲುವಾಗಿ ಆ ದ್ವಾರದ ಮೂಲಕ ತೆರಳುತ್ತಾರೆ. ಆ ಮೂಲಕ ದರ್ಶನ ಪಡೆಯುತ್ತಾರೆ ಎಂಬ ನಂಬಿಕೆ ಇದೆ.
ಏಕಾದಶಿಯ ಮರು ದಿನವಾದ ದ್ವಾದಶಿಯಂದು ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರು ಬಂದಿದೆ. ಕಷ್ಟಗಳು ಬಂದರೂ ವಿಚಲಿತರಾಗದೆ ಎಲ್ಲವನ್ನೂ ಸ್ವೀಕರಿಸಿದಾಗ ಹರಿಯು ನಮ್ಮ ಜೊತೆಗೆ ನಿಲ್ಲುತ್ತಾನೆ. ಭಗವದ್ಭಕ್ತರನ್ನು ಪೋಷಿಸದೆ ಇರುವುದಿಲ್ಲ ಎಂಬುದೇ ಈ ಮುಕ್ಕೋಟಿ ದ್ವಾದಶಿಯ ಸಂದೇಶವಾಗಿದೆ.
ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ, ಅಂತರಾಷ್ಟ್ರೀಯ ದಿನಾಚರಣೆ
ಕ್ರಿಸ್ಮಸ್ ಕ್ರಿಶ್ಚಿಯನ್ ಹಬ್ಬವಾಗಿದ್ದರೂ, ಇದನ್ನು ಭಾರತದಾದ್ಯಂತ ವ್ಯಾಪಕವಾಗಿ ಆಚರಿಸಲಾಗುತ್ತದೆ. ಈ ದಿನ ಬೀದಿಗಳು ವರ್ಣರಂಜಿತ ದೀಪಗಳಿಂದ ಅಲಂಕಾರಗೊಳ್ಳುತ್ತದೆ ಮತ್ತು ಚರ್ಚುಗಳಲ್ಲಿ ಪ್ರಾರ್ಥನೆ ಪ್ರತಿಧ್ವನಿಸುತ್ತವೆ. ಕುಟುಂಬಗಳ ಮಧ್ಯೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಇನ್ನು ಗೋವಾ, ಕೋಲ್ಕತ್ತಾ ಮತ್ತು ಮುಂಬೈನಂತಹ ನಗರಗಳಲ್ಲಿ ಈ ಹಬ್ಬದ ಪ್ರಯುಕ್ತ ಭವ್ಯ ಆಚರಣೆಗಳನ್ನು ಆಯೋಜಿಸಲಾಗುತ್ತದೆ.
ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಸಂಯೋಜಿತ ರೂಪವೆಂದು ಪರಿಗಣಿಸಲ್ಪಟ್ಟ ಭಗವಾನ್ ದತ್ತಾತ್ರೇಯ ಜಯಂತಿಯನ್ನು ದೇಶದ ಹಲವು ಭಾಗಗಳಲ್ಲಿ ಪೂಜಿಸುವ ಪರಿಪಾಠ ನಡೆದುಕೊಂಡು ಬಂದಿದೆ. ದತ್ತಾತ್ರೇಯ ಜಯಂತಿಯನ್ನು ಅತ್ಯಂತ ಮಹತ್ವದ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ತ್ರಿದೇವ ಅಂದರೆ ದತ್ತಾತ್ರೇಯನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಇದರಿಂದ ಭಕ್ತನ ಕಷ್ಟಗಳು ದೂರವಾಗಿ ಆತ ಸುಖದ ಹಾದಿಯಲ್ಲಿ ಸಾಗುತ್ತಾನೆ ಎಂದು ನಂಬಲಾಗಿದೆ. ಈ ಬಾರಿ ದತ್ತಾತ್ರೆಯ ಜಯಂತಿಯನ್ನು ಡಿಸೆಂಬರ್ 26 ರಂದು ಆಚರಿಸಲಾಗುತ್ತದೆ.
ಡಿಸೆಂಬರ್ 30 ಕೃಷ್ಣ ಪಕ್ಷದ ಚತುರ್ಥಿಯಾದ್ದರಿಂದ ಇದನ್ನು ಸಂಕಷ್ಟ ಚತುರ್ಥಿ ಅಥವಾ ಸಂಕಷ್ಟಹರ ಚತುರ್ಥಿ ಎಂದು ಕರೆಯುತ್ತಾರೆ. ಈ ದಿನ ಗಣೇಶನನ್ನು ಮೆಚ್ಚಿಸಲು ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಸಂಕಷ್ಟ ಎಂಬ ಪದದ ಅರ್ಥ ಕಷ್ಟದ ಸಮಯಗಳಿಂದ ಮುಕ್ತಿ ನೀಡುವುದು ಎಂಬುದಾಗಿದೆ. ಹಾಗಾಗಿ ಈ ದಿನ ಎಲ್ಲ ಕಷ್ಟಗಳನ್ನು ಪರಿಹರಿಸು ಎಂದು ಕೇಳಿಕೊಳ್ಳಲಾಗುತ್ತದೆ. ಈ ದಿನ ಚಂದ್ರೋದಯದ ಸಮಯ ರಾತ್ರಿ 9.12.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: