ಮಹಿಳೆಯರ ಮೇಲಿನ ದೌರ್ಜನ್ಯದ ಸಮಸ್ಯೆ ಇಂದಿಗೂ ಬಹುದೊಡ್ಡ ಜಾಗತಿಕ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ವರದಿಯೊಂದರ ಪ್ರಕಾರ ಜಗತ್ತಿನಾದ್ಯಂತ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆ ಯಾವುದಾರರೂ ಹಿಂಸೆಗೆ ಬಲಿಯಾಗುತ್ತಿದ್ದಾಳೆ. ಇಂದಿಗೂ ಟಿವಿಗಳಲ್ಲಿ ದಿನಪತ್ರಿಕೆಗಳಲ್ಲಿ ಪ್ರತಿನಿತ್ಯ ಒಂದಾದರೂ ಸುದ್ದಿಗಳು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಪಟ್ಟಿದ್ದಿರುತ್ತವೆ. ಪ್ರಪಂಚ ಎಷ್ಟೇ ಮುಂದುವರಿದರೂ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಮಾತ್ರ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಲು ಮತ್ತು ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ನವೆಂಬರ್ 25 ರಂದು ವಿಶ್ವ ಮಹಿಳಾ ಶೋಷಣೆ ನಿವಾರಣಾ ದಿನವನ್ನು ಆಚರಿಸಲಾಗುತ್ತದೆ.
1981 ರಲ್ಲಿ ಲ್ಯಾಟಿನ್ ಅಮೇರಿಕಾ ಮತ್ತು ಕೆರೆಬಿಯನ್ ಸ್ತ್ರೀವಾದಿ ಕಾರ್ಯಕರ್ತರು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬೇಕು, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಬೇಕು ಎಂಬ ನಿಟ್ಟಿನಲ್ಲಿ ನವೆಂಬರ್ 25 ರಂದು ಮಹಿಳಾ ಶೋಷಣೆ ನಿವಾರಣಾ ದಿನವನ್ನು ಆಚರಿಸಬೇಕೆಂದು ತೀರ್ಮಾನಿಸಿದರು. ಮಹಿಳಾ ಶೋಷಣೆ ನಿವಾರಣಾ ದಿನಾಚರಣೆಯನ್ನು, ಈ ನಿರ್ಧಿಷ್ಟ ದಿನದಂದು ಆಚರಿಸಲು ಕಾರಣವೇನೆಂದರೆ,
1960 ನವೆಂಬರ್ 25 ರಲ್ಲಿ ಮೂವರು ಸಹೋದರಿಯರಾದ ಪ್ಯಾಟ್ರಿಯಾ ಮರ್ಸಿಡಿಸ್ ಮೆರಾಬೆಲ್, ಮರಿಯಾ ಅರ್ಜೆಂಟೀನಾ ಮಿನಾರ್ವಾ ಮೆರಾಬೆಲ್ ಮತ್ತು ಆಂಟೋನಿಯಾ ಮಾರಿಯಾ ತೆರೇಸಾ ಮೆರಾಬೆಲ್ ಅವರನ್ನು ಡೊಮಿನಿಕನ್ ರಿಪಬ್ಲಿಕ್ ಆಡಳಿತಗಾರ ರಾಫೆಲ್ ಟ್ರುಜೆಲ್ಲೊನ ಆದೇಶದ ಮೇರೆಗೆ ಕ್ರೂರವಾಗಿ ಕೊಲ್ಲಲಾಯಿತು. ಏಕೆಂದರೆ ಆ ಮೂವರು ಸಹೋದರಿಯರು ಈತನ ಸರ್ವಾಧಿಕಾರವನ್ನು ವಿರೋಧಿಸಿದ್ದರು. ಈ ಕಾರಣಕ್ಕೆ ಅವರನ್ನು ಕೊಲ್ಲಲಾಯಿತು. ಹಾಗಾಗಿ ಈ ಮೂವರು ದಿಟ್ಟ ಮಹಿಳೆಯರನ್ನು ಸ್ಮರಿಸುವ ಸಲುವಾಗಿ ನವೆಂಬರ್ 25 ರಂದು ಈ ವಿಶೇಷ ದಿನವನ್ನು ಆಚರಿಸುವುದೆಂದು ನಿರ್ಧರಿಸಲಾಯಿತು.
ನಂತರ ಮಹಿಳೆಯರ ಮೇಲಿ ದೌರ್ಜನ್ಯದ ಪ್ರಮಾಣ ತೀವ್ರವಾಗಿ ಹೆಚ್ಚಾದ ಕಾರಣ 1999 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ನವೆಂಬರ್ 25 ರಂದು ವಿಶ್ವ ಮಹಿಳಾ ಶೋಷಣೆ ನಿವಾರಣಾ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ, ಅಂತರಾಷ್ಟ್ರೀಯ ದಿನಾಚರಣೆ
ಈ ವಿಶೇಷ ದಿನವು ಮಹಿಳೆಯರ ಅಸ್ತಿತ್ವ ಮತ್ತು ಸಮಾಜದಲ್ಲಿ ಅವರ ಗುರುತಿಗೆ ಸಂಬಂಧಿಸಿದ ದಿನವಾಗಿದೆ. ಮಹಿಳೆಯರ ಮೇಲಾಗುವ ದೈಹಿಕ ಮತ್ತು ಮಾನಸಿಕ ಹಿಂಸಾಚಾರಗಳನ್ನು ತಡೆಗಟ್ಟಲು ಮತ್ತು ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು, ಮುಖ್ಯವಾಗಿ ಮಹಿಳೆಯರಿಗೆ ಈ ಸಮಾಜದಲ್ಲಿ ಮುಕ್ತವಾಗಿ ಬದುಕಲು ಅವಕಾಶ ನೀಡಬೇಕು ಎನ್ನುವ ನಿಟಿನಲ್ಲಿ ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲದೆ ಈ ದಿನ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಮತ್ತು ಅದರ ನಿರ್ಮೂಲನೆಗೆ ಕರೆ ನೀಡಲು ಪ್ರಪಂಚದಾದ್ಯಂತ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಹಲವು ಅಭಿಯಾನ ಕಾರ್ಯಕ್ರಮಗಳನ್ನು ನಡೆಸುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: