ಮತ್ತೆ ಗಣೇಶನ ಹಬ್ಬ ಬಂದಿದೆ. ಎಲ್ಲೆಡೆ ಹಬ್ಬದ ಸಿದ್ಧತೆ ಸಡಗರದಿಂದ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ, ಜನರೆಲ್ಲರೂ ಹಬ್ಬವನ್ನು ಆಚರಿಸಲು ಕಾತರದಿಂದ ಕಾಯುತ್ತಿರುವುದು ಅದೆಷ್ಟು ಸೊಗಸು! ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕೆಲವೊಂದು ಮನೆಗಳಲ್ಲಿ ಗಣಪನ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಾರೆ. ಹೀಗೆ ಪ್ರತಿಷ್ಠಾಪಿಸುವಾಗ ಜನರು ಮೂರ್ತಿಯ ಬಗೆಗೆ ಎಚ್ಚರ ತಾಳಿದರೆ ಉತ್ತಮ. ಗಣಪತಿಯ ವಿಗ್ರಹ ಪ್ರಕೃತಿಯಲ್ಲಿ ಲೀನವಾಗುವ ಜೈವಿಕ ವಸ್ತುಗಳಿಂದ ಮಾಡಿದ್ದರೆ ಮಾತ್ರ ನಮಗೆ ಹಾಗೂ ಪರಿಸರಕ್ಕೆ ಒಳಿತು. ಪರಿಸರ ಸ್ನೇಹಿ ಗಣಪತಿ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಿಗರಿವು ಮೂಡಿದ್ದು, ಹಳ್ಳಿ ಹಳ್ಳಿಗಳಲ್ಲಿ ಅಂತಹ ಗಣಪತಿಯನ್ನು ತಯಾರಿಸುತ್ತಿದ್ದಾರೆ. ವಿಗ್ರಹ ಕೊಳ್ಳುವವರು ಮುನ್ನೆಚ್ಚರಿಕೆ ವಹಿಸಿ, ಪರಿಸರ ಸ್ನೇಹಿ ಗಣಪತಿಯನ್ನೇ ಕೊಳ್ಳಬೇಕು.
ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದ ಛತ್ರಪತಿ ಶಿವಾಜಿ ಹಾಗೂ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಹಬ್ಬವನ್ನು ಪುನರ್ ಪ್ರಾರಂಭಿಸಿದ ಬಾಲಗಂಗಾಧರ ತಿಲಕ್ ಅವರುಗಳ ಉದ್ದೇಶ ಸಮಾಜವನ್ನು ಒಂದುಗೂಡಿಸುವುದಾಗಿತ್ತು. ಈ ಹಬ್ಬದ ಮುಖೇನವಾಗಿಯೇ ಅವರುಗಳು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸಿದ್ದರು. ಇಂದಿನ ಕಾಲಘಟ್ಟದಲ್ಲಿಯೂ, ಸಾರ್ವಜನಿಕ ಗಣೇಶೋತ್ಸವದ ಉದ್ದೇಶ ಮೇಲ್ನೋಟಕ್ಕೆ ಅದೇ ಆಗಿದೆ. ಆದರೂ, ಹಬ್ಬದ ದಿನವೇ ಕ್ಷುಲಕ ಕಾರಣಗಳಿಗಾಗಿ ಜನರ ನಡುವೆ ಅಸಮಾಧಾನ ಸ್ಪೋಟಿಸುತ್ತಿವೆ. ಹಾಗಾಗದೆ, ಹಬ್ಬವು ಮನಮನಗಳನ್ನು ಬೆಸೆಯುವ ಸೇತುವೆಯಾಗಬೇಕು. ಮಾತ್ರವಲ್ಲದೆ, ಸಾರ್ವಜನಿಕ ಗಣೇಶೋತ್ಸವಗಳಿಗೆ ವಂತಿಗೆ ರೂಪದಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಕ್ರೋಢೀಕರಿಸಿದ ಹಣವು ದುರುದ್ದೇಶಗಳಿಗೆ ಅಥವಾ ವೈಯಕ್ತಿಕ ಸ್ವಾರ್ಥಕ್ಕಾಗಿ ಉಪಯೋಗಿಸದೆ ಸಮಾಜದ ಉನ್ನತಿಗೆ ಬಳಕೆಯಾಗಬೇಕು.
ಇದನ್ನೂ ಓದಿ: ಗಣೇಶನ ಹಬ್ಬದಂದು ನಿಮ್ಮ ಆತ್ಮೀಯರಿಗೆ ಈ ರೀತಿ ಶುಭಾಶಯ ಕೋರಿ
ಇತ್ತೀಚಿನ ವರುಷಗಳಲ್ಲಿ, ಸಾರ್ವಜನಿಕ ಗಣೇಶೋತ್ಸವಗಳ ವಿಗ್ರಹ ವಿಸರ್ಜನೆಯ ಸಂದರ್ಭದಲ್ಲಿ, ಆಧುನಿಕ ಸಿನಿಮಾ ಪದ್ಯಗಳಿಗೆ ಕುಣಿಯುತ್ತಾ, ಮೆರವಣಿಗೆ ಹೋಗುವ ವಿಚಿತ್ರ ಸನ್ನಿವೇಶಗಳು ಕಾಣುತ್ತಿವೆ. ಆದಿಯಿಂದ ಬಂದ ಸಂಸ್ಕ್ರತಿಯನ್ನು ಅನುಸರಿಸಬೇಕು. ಭಜನೆಯನ್ನು ಹಾಡುತ್ತಾ, ಭಜನೆಗೆ ಹೆಜ್ಜೆ ಹಾಕುತ್ತಾ ಮೆರವಣಿಗೆ ಸಾಗುವುದನ್ನು ನೋಡುವುದೇ ಚಂದ. ಆಡಂಬರದ ಆಚರಣೆಗಳಿಗೆ ಮಾರುಹೋಗದೆ ನೈಜ ಭಕ್ತಿಯನ್ನು ಮರೆಯಬೇಕು. ಶ್ರದ್ಧಾಭಕ್ತಿಯಿಂದ ಗಣಪತಿಯನ್ನು ಆರಾಧಿಸಬೇಕು. ಎಷ್ಟೇ ಹೊಸ ಸಂಪ್ರದಾಯಗಳು ಎದುರಿಗಿದ್ದರೂ, ಮೂಲವನ್ನು ಮರೆಯದೆ ನಡೆದರೆ ಹಬ್ಬವನ್ನು ಆಚರಿಸಿದ ಶಾಂತಿ ನಮ್ಮೊಳಗೆ ನೆಲೆಸುತ್ತದೆ!
ಪಂಚಮಿ ಬಾಕಿಲಪದವು
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 am, Sat, 7 September 24