
ತೋಟಗಾರಿಕೆಯಲ್ಲಿ ಆಸಕ್ತಿ ಇರುವವರಿಗೆ ಗಿಡಗಳನ್ನು ಕೀಟಗಳು ಮತ್ತು ಶಿಲೀಂಧ್ರಗಳಿಂದ ರಕ್ಷಿಸುವುದು ದೊಡ್ಡ ಸವಾಲು. ಕೆಲವೊಮ್ಮೆ ದುಬಾರಿ ರಾಸಾಯನಿಕ ಸಿಂಪಡಣೆಗಳೂ (Pesticides) ನಿರೀಕ್ಷಿತ ಫಲಿತಾಂಶ ನೀಡುವುದಿಲ್ಲ. ಆದರೆ ನಿಮ್ಮ ಅಡುಗೆಮನೆಯಲ್ಲಿರುವ ಸಾಮಾನ್ಯ ಬೆಳ್ಳುಳ್ಳಿಯಿಂದಲೇ ತೋಟದ ಗಿಡಗಳ ಆರೈಕೆಗೆ ನೆರವಾಗಬಹುದು ಎಂಬುದು ನಿಮಗೆ ಗೊತ್ತೇ?. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ರಾಸಾಯನಿಕ ಕೀಟನಾಶಕಗಳ ಬದಲಿಗೆ ಅಡುಗೆಮನೆಯಲ್ಲಿರುವ ಬೆಳ್ಳುಳ್ಳಿಯನ್ನು ಸಣ್ಣ ಕೀಟಗಳು ಮತ್ತು ಶಿಲೀಂಧ್ರಗಳಿಂದ ಗಿಡಗಳ ಬೇರುಗಳಿಗೆ ಹಾನಿ ಉಂಟುಮಾಡುವುದನ್ನು ತಡೆಗಟ್ಟಲು ಬಳಸಬಹುದು ಎಂದು ತೋಟಗಾರಿಕೆ ತಜ್ಞರು ಸಲಹೆ ನೀಡಿದ್ದಾರೆ.
ಕುಂಡದಲ್ಲಿರುವ ಮಣ್ಣಿನಲ್ಲಿ ಒಂದು ಬೆಳ್ಳುಳ್ಳಿ ಎಸಳನ್ನು ಹೂಳುವುದರಿಂದ ಕೆಲವು ಕೀಟಗಳು ಮತ್ತು ಶಿಲೀಂಧ್ರಗಳ ಬಾಧೆಯನ್ನು ಕಡಿಮೆ ಮಾಡಬಹುದು. ಇದರಿಂದ ಗಿಡಗಳ ಬೇರುಗಳ ಆರೋಗ್ಯ ಕಾಪಾಡಲು ಮತ್ತು ಬೆಳವಣಿಗೆಗೆ ನೆರವಾಗಬಹುದು ಎನ್ನಲಾಗಿದೆ. ಹಾಗಾದರೆ ಈ ವಿಧಾನವನ್ನು ಹೇಗೆ ಅನುಸರಿಸಬೇಕು ಎಂಬುದನ್ನು ತಿಳಿಯೋಣ.
ಬೆಳ್ಳುಳ್ಳಿಯಲ್ಲಿ ನೈಸರ್ಗಿಕವಾಗಿ ಗಂಧಕ ಮತ್ತು ಅಲಿಸಿನ್ ಎಂಬ ಅಂಶಗಳಿವೆ. ಇವುಗಳಿಗೆ ತೀಕ್ಷ್ಣವಾದ ವಾಸನೆ ಇರುತ್ತದೆ. ಕುಂಡದ ಮಣ್ಣಿನಲ್ಲಿ ಬೆಳ್ಳುಳ್ಳಿ ಎಸಳನ್ನು ಹೂಳಿದಾಗ ಅದರ ವಾಸನೆ ಮಣ್ಣಿನಲ್ಲಿ ಹರಡುತ್ತದೆ. ಈ ವಾಸನೆಯಿಂದ ಮಣ್ಣಿನಲ್ಲಿರುವ ಕೆಲವು ಸಣ್ಣ ಕೀಟಗಳು, ಇರುವೆಗಳು, ಗೆದ್ದಲುಗಳು ಮತ್ತು ಗಿಡಗಳ ಬೇರುಗಳಿಗೆ ಹಾನಿ ಉಂಟುಮಾಡುವ ಕೀಟಗಳ ಮರಿಹುಳುಗಳು ದೂರವಾಗುತ್ತದೆ.
ಮಳೆಗಾಲದಲ್ಲಿ ಅಥವಾ ಕುಂಡಕ್ಕೆ ಅತಿಯಾಗಿ ನೀರು ಹಾಕಿದಾಗ ಮಣ್ಣಿನಲ್ಲಿ ಶಿಲೀಂಧ್ರಗಳ ಬೆಳವಣಿಗೆ ಹೆಚ್ಚಾಗಬಹುದು. ಇದರಿಂದ ಗಿಡಗಳ ಬೇರುಗಳು ಕೊಳೆಯುವ ಸಾಧ್ಯತೆಯಿದೆ. ಬೆಳ್ಳುಳ್ಳಿಯಲ್ಲಿ ಶಿಲೀಂಧ್ರ ವಿರೋಧಿ ಗುಣಗಳಿವೆ. ಮಣ್ಣಿನಲ್ಲಿ ಹೂಳಿದ ಬೆಳ್ಳುಳ್ಳಿ ಎಸಳು ನಿಧಾನವಾಗಿ ತನ್ನಲ್ಲಿರುವ ಕೆಲವು ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಶಿಲೀಂಧ್ರಗಳ ಬೆಳವಣಿಗೆಯ ಅಪಾಯ ಕಡಿಮೆಯಾಗಬಹುದು.
ಈ ಮನೆಮದ್ದನ್ನು ಅನುಸರಿಸುವುದು ಸುಲಭ. ಇದಕ್ಕೆ ಒಂದು ಇಡೀ ಬೆಳ್ಳುಳ್ಳಿಯಿಂದ ತಾಜಾ ಮತ್ತು ಆರೋಗ್ಯಕರವಾದ ಒಂದು ಎಸಳನ್ನು ಬೇರ್ಪಡಿಸಿಕೊಳ್ಳಿ. ನಂತರ ಕುಂಡದಲ್ಲಿರುವ ಗಿಡದ ಮುಖ್ಯ ಕಾಂಡದಿಂದ ಸ್ವಲ್ಪ ದೂರದಲ್ಲಿ ಬೆರಳು ಅಥವಾ ಸಣ್ಣ ಉಪಕರಣದ ಸಹಾಯದಿಂದ ಮಣ್ಣನ್ನು ಸ್ವಲ್ಪ ಅಗೆಯಿರಿ. ಸಣ್ಣ ಗುಂಡಿ ಮಾಡಿ ಅದರಲ್ಲಿ ಬೆಳ್ಳುಳ್ಳಿ ಎಸಳನ್ನು ಇರಿಸಿ. ಬಳಿಕ ಅದರ ಮೇಲೆ ಮಣ್ಣನ್ನು ಹಾಕಿ ಮುಚ್ಚಿ.
ಈ ಸಿಂಪಲ್ ಟಿಪ್ಸ್ ಅನುಸರಿಸುವ ಮೂಲಕ ಫ್ರೀಜರ್ನಲ್ಲಿ ಅತಿಯಾಗಿ ಐಸ್ ಕಟ್ಟಿಕೊಳ್ಳುವುದನ್ನು ತಡೆಯಬಹುದು
ಗಿಡಗಳ ಬೇರುಗಳು ಕೀಟಗಳು ಮತ್ತು ಶಿಲೀಂಧ್ರಗಳಿಂದ ಮುಕ್ತವಾಗಿದ್ದರೆ ಮಣ್ಣಿನಿಂದ ನೀರು ಹಾಗೂ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಗಂಧಕ ಸೇರಿದಂತೆ ಕೆಲವು ಪೋಷಕಾಂಶಗಳು ಮಣ್ಣಿನ ಗುಣಮಟ್ಟ ಸುಧಾರಿಸಲು ನೆರವಾಗುತ್ತದೆ. ಇದರಿಂದ ಗಿಡಗಳ ಎಲೆಗಳು ಆರೋಗ್ಯಕರವಾಗಿ ಬೆಳೆಯಲು ಮತ್ತು ಗಿಡದ ಒಟ್ಟಾರೆ ಬೆಳವಣಿಗೆಗೆ ಸಹಾಯವಾಗುತ್ತದೆ.
ಈ ವಿಧಾನ ಅನುಸರಿಸುವಾಗ ಸಣ್ಣ ಗಾತ್ರದ ಕುಂಡದಲ್ಲಿ ಒಂದೇ ಒಂದು ಬೆಳ್ಳುಳ್ಳಿ ಎಸಳನ್ನು ಹೂಳಬೇಕು. ಹೆಚ್ಚು ಎಸಳುಗಳನ್ನು ಹಾಕಬಾರದು. ಬೆಳ್ಳುಳ್ಳಿ ಎಸಳನ್ನು ಗಿಡದ ಮುಖ್ಯ ಬೇರಿಗೆ ತಾಗುವಂತೆ ಹೂಳದೆ, ಕುಂಡದ ಅಂಚಿನ ಭಾಗದಲ್ಲಿ ಹೂಳುವುದು ಉತ್ತಮ.
ಕೆಲವು ದಿನಗಳ ಬಳಿಕ ಮಣ್ಣಿನಲ್ಲಿ ಹೂಳಿದ ಬೆಳ್ಳುಳ್ಳಿ ಎಸಳು ಮೊಳಕೆಯೊಡೆದು ಬೆಳೆಯಲು ಆರಂಭಿಸಿದರೆ ಅದರ ಹಸಿರು ಎಲೆಗಳನ್ನು ಕತ್ತರಿಸಿ ಬಳಸಬಹುದು ಅಥವಾ ಹಾಗೆಯೇ ಬೆಳೆಯಲು ಬಿಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:25 am, Mon, 16 November 26