ವಿಶ್ವದ ನಾಲ್ಕನೇ ಅತಿದೊಡ್ಡ ಕರಾವಳಿ ಕಾವಲು ಪಡೆ ಎನಿಸಿಕೊಂಡಿರುವ ಭಾರತೀಯ ಕಾವಲು ಪಡೆಯು, ಭಾರತದ ಕರಾವಳಿ ಮತ್ತು ಕಡಲ ವಲಯಗಳನ್ನು ಸುರಕ್ಷಿತವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ಸಮುದ್ರ ವಲಯಗಳಲ್ಲಿ ರಾಷ್ಟ್ರದ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ ಸೇವೆಯು ನಿರ್ವಹಿಸಿದ ಗಮನಾರ್ಹ ಪಾತ್ರವನ್ನು ಪ್ರಶಂಸಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ 1 ರಂದು ಭಾರತೀಯ ಕರಾವಳಿ ಕಾವಲು ಪಡೆಯ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ಕರಾವಳಿ ಕಾವಲು ಪಡೆ ದಿನವನ್ನು ಮೊದಲ ಬಾರಿಗೆ ಭಾರತದ ಸಂಸತ್ತು ಆಗಸ್ಟ್ 18, 1978 ರಂದು ಜಾರಿಗೆ ತಂದಿತು. ಆದರೆ ಭಾರತೀಯ ಕರಾವಳಿ ಕಾವಲು ಪಡೆ ದಿನವನ್ನು ಫೆಬ್ರವರಿ 1, 1977 ರಂದು ಪ್ರಾರಂಭವಾಯಿತು. ಭಾರತೀಯ ಕರಾವಳಿ ಕಾವಲು ಪಡೆಗೆ ಮಿಲಿಟರಿಯೇತರ ಕಡಲ ಸೇವೆಗಳನ್ನು ಒದಗಿಸಲು ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಸ್ಥಾಪಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 1 ರಂದು ಕರಾವಳಿ ಕಾವಲು ಪಡೆ ದಿನ ಆಚರಿಸುತ್ತಾ ಬರಲಾಗುತ್ತಿದೆ. ಆರಂಭದಲ್ಲಿ ಸಮುದ್ರ ಹಾಗೂ ವಿಶೇಷ ಆರ್ಥಿಕ ವಲಯದಲ್ಲಿ ಕಣ್ಗಾವಲುಗಾಗಿ ಏಳು ಹಡಗುಗಳು ಮಾತ್ರ ಇದ್ದವು. ಇದೀಗ ನೌಕಾಪಡೆಯಲ್ಲಿ 158 ಹಡಗುಗಳು ಮತ್ತು 78 ವಿಮಾನಗಳ ದಾಸ್ತಾನು ಹೊಂದಿದ್ದು, ಭಾರತೀಯ ಕೋಸ್ಟ್ ಗಾರ್ಡ್ ವಿಶ್ವದ ನಾಲ್ಕನೇ ಅತಿ ದೊಡ್ಡ ಕೋಸ್ಟ್ ಗಾರ್ಡ್ ಆಗಿ ಬೆಳೆದು ನಿಂತಿದೆ.
ಇದನ್ನೂ ಓದಿ; ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಗಳು
ಭಾರತೀಯ ಕೋಸ್ಟ್ ಗಾರ್ಡ್ ದಿನದ ಧ್ಯೇಯವಾಕ್ಯವು “ವಯಂ ರಕ್ಷಂ” ವಾಗಿದ್ದು, ‘ನಾವು ರಕ್ಷಿಸುತ್ತೇವೆ’ ಎನ್ನುವ ಅರ್ಥವನ್ನು ನೀಡುತ್ತದೆ. ಭಾರತೀಯ ಕರಾವಳಿ ಕಾವಲು ಪಡೆಗಳು ಕಡಲಾಚೆಯ ನಿಲ್ದಾಣಗಳ ರಕ್ಷಣೆ, ಮೀನುಗಾರರಿಗೆ ರಕ್ಷಣೆ ಹಾಗೂ ನೆರವು, ಸಮುದ್ರ ಸುತ್ತ ಮುತ್ತಲಿನ ಪ್ರದೇಶಗಳ ರಕ್ಷಣೆ, ಕಳ್ಳಸಾಗಣೆ-ವಿರೋಧಿ ಕಾರ್ಯಾಚರಣೆಗಳು, ಕಡಲ ಕಾನೂನುಗಳ ಜಾರಿ ಸೇರಿದಂತೆ ಇನ್ನಿತ್ತರ ಕಾರ್ಯವನ್ನು ನಿರ್ವಹಿಸುತ್ತದೆ. ಕೋಸ್ಟ್ ಗಾರ್ಡ್ ಭಾರತೀಯ ನೌಕಾಪಡೆ, ಮೀನುಗಾರಿಕೆ ಇಲಾಖೆ, ಕಂದಾಯ ಇಲಾಖೆ (ಕಸ್ಟಮ್ಸ್) ಮತ್ತು ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. ದೇಶೀಯ ಆರ್ಥಿಕತೆಗೆ ಸಮಸ್ಯೆಗಳನ್ನು ಉಂಟುಮಾಡುವ ಸರಕುಗಳ ಕಳ್ಳಸಾಗಣೆಯನ್ನು ತಡೆಗಟ್ಟುವ ಕೆಲಸವನ್ನು ಮಾಡುತ್ತದೆ. ಭಾರತೀಯ ಕೋಸ್ಟ್ ಗಾರ್ಡ್ ಭಾರತದ 7,51,660 ಕಿಮೀ ಕರಾವಳಿಯನ್ನು, ಹಲವಾರು ರಾಜ್ಯಗಳಲ್ಲಿ ಹಾಗೂ ಕೆಲವು ಜನನಿಬಿಡ ವ್ಯಾಪಾರ ಮಾರ್ಗಗಳಲ್ಲಿ ರಕ್ಷಿಸಿ, ದೇಶದ ರಕ್ಷಣೆಯನ್ನು ಮಾಡುತ್ತಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ