Event Calendar February 2024: ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಗಳು
2024 ರ ಮೊದಲ ತಿಂಗಳು ಕಳೆದು ಎರಡನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ವರ್ಷದ ಎರಡನೇ ತಿಂಗಳು ಈ ಫೆಬ್ರವರಿಯಲ್ಲಿ ಕೆಲವು ಉದ್ದೇಶಗಳಿಗಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲಾ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಗಳಿವೆ ಎನ್ನುವುದರ ಮಾಹಿತಿ ಇಲ್ಲಿದೆ.
ಈ ವರ್ಷದ ಎರಡನೇ ತಿಂಗಳಾದ ಫೆಬ್ರವರಿ ಚಳಿಗಾಲದ ಕೊನೆಯ ತಿಂಗಳಾಗಿದ್ದು, ಈ ತಿಂಗಳಿನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ದಿನಗಳು ಬರುತ್ತದೆ. ಹೀಗಾಗಿ ಪ್ರತಿಯೊಂದು ದಿನವೂ ಅದರದ್ದೇ ಆದ ಮಹತ್ವವನ್ನು ಹೊಂದಿದ್ದು, ರಾಷ್ಟ್ರೀಯ, ಅಂತರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನ ಸೇರಿದಂತೆ ಪ್ರಮುಖ ದಿನಗಳನ್ನು ಆಚರಿಸಲಾಗುತ್ತದೆ.
ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಗಳು
ಫೆಬ್ರವರಿ 01 ಭಾರತೀಯ ಕರಾವಳಿ ಕಾವಲು ಪಡೆ ದಿನ:
ಭಾರತೀಯ ಕೋಸ್ಟ್ ಗಾರ್ಡ್ ದಿನವನ್ನು ಪ್ರತಿ ವರ್ಷ ಫೆಬ್ರವರಿ 1 ರಂದು ಆಚರಿಸಲಾಗುತ್ತದೆ. 18 ಆಗಸ್ಟ್ 1978 ರಂದು, ಭಾರತದ ಸಂಸತ್ತು ಭಾರತೀಯ ಕೋಸ್ಟ್ ಗಾರ್ಡ್ (ICG) ದಿನವನ್ನು ಜಾರಿಗೊಳಿಸಿತು. ಕಡಲ ತೀರದ ಭದ್ರತೆ ಮತ್ತು ದೇಶದ ಅಗತ್ಯವನ್ನು ನೋಡಿಕೊಳ್ಳುವ ಪ್ರತಿಯೊಂದು ದೇಶದ ಸಂಸ್ಥೆಗಳ ಗೌರವಾರ್ಥವಾಗಿ ಕೋಸ್ಟ್ ಗಾರ್ಡ್ ದಿನವನ್ನು ಆಚರಿಸಲಾಗುತ್ತದೆ.
ಫೆಬ್ರವರಿ 02, ವಿಶ್ವ ಜೌಗು ಪ್ರದೇಶ ದಿನ:
ಪ್ರತಿ ವರ್ಷವು ಫೆಬ್ರವರಿ 2 ರಂದು ವಿಶ್ವ ಜೌಗು ಪ್ರದೇಶ ದಿನವನ್ನು ಆಚರಿಸಲಾಗುತ್ತದೆ. ಫೆಬ್ರವರಿ 2 1971 ರಂದು ಇರಾನ್‌ನ ರಾಮ್‌ಸರ್‌ನಲ್ಲಿ ಅಂತರಾಷ್ಟ್ರೀಯ ಪ್ರಾಮುಖ್ಯತೆಯ ವೆಟ್‌ಲ್ಯಾಂಡ್‌ಗಳ ಸಮಾವೇಶಕ್ಕೆ (ರಾಮ್‌ಸರ್ ಕನ್ವೆನ್ಷನ್) ಸಹಿ ಹಾಕಿದ ದಿನವಾಗಿದೆ.1997 ರಿಂದ ವಿಶ್ವ ಜೌಗುಪ್ರದೇಶ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿವೆ. ಈ ದಿನದಂದು ವಿಶ್ವ ಜೌಗು ಪ್ರದೇಶದ ಮೌಲ್ಯಗಳು ಮತ್ತು ಪ್ರಯೋಜನಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು. ಜೌಗು ಪ್ರದೇಶಗಳನ್ನು ಸಂರಕ್ಷಣೆಯನ್ನು ಹೇಗೆ ಮಾಡಬಹುದು ಎನ್ನುವುದನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.
ಫೆಬ್ರವರಿ 04, ವಿಶ್ವ ಕ್ಯಾನ್ಸರ್ ದಿನ:
ವಿಶ್ವದ ಜನರನ್ನು ಕಾಡುತ್ತಿರುವ eಮಹಾ ಮಾರಿ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಸಂಘಟನೆಯು ವಿವಿಧ ಕ್ಯಾನ್ಸರ್ ಸೊಸೈಟಿಗಳು, ಸಂಶೋಧನಾ ಸಂಸ್ಥೆಗಳ ಜತೆಗೂಡಿ 1993ರಲ್ಲಿ ಸ್ವಿಡ್ಜರ್‌ಲೆಂಡ್‌ನ ಜಿನೀವಾದಲ್ಲಿ 1933ರಲ್ಲಿ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸುವ ಬಗ್ಗೆ ಯೋಜನೆ ರೂಪಿಸಿತು. ಹೀಗಾಗಿ 2008ರಿಂದ ಪ್ರತಿ ವರ್ಷ ಫೆಬ್ರವರಿ 4ರಂದು ಜಾಗತಿಕ ಕ್ಯಾನ್ಸರ್ ದಿನ ಎಂದು ಆಚರಿಸಲಾಗುತ್ತಾ ಬರಲಾಗುತ್ತಿದೆ.
ಫೆಬ್ರವರಿ 06, ಸ್ತ್ರೀ ಜನನಾಂಗ ಊನಗೊಳಿಸುವಿಕೆಗೆ ಶೂನ್ಯ ಸಹಿಷ್ಣುತೆಯ ಅಂತರಾಷ್ಟ್ರೀಯ ದಿನ:
ಪ್ರತಿ ವರ್ಷ ಫೆಬ್ರವರಿ 6 ರಂದು ಸ್ತ್ರೀ ಜನನಾಂಗ ಊನಗೊಳಿಸುವಿಕೆಗೆ ಶೂನ್ಯ ಸಹಿಷ್ಣುತೆಯ ಅಂತರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಜನನಾಂಗ ಊನಗೊಳಿಸುವಿಕೆಯಿಂದ ಮಹಿಳೆಯರು ಎದುರಿಸುವ ಪರಿಣಾಮಗಳು ಮತ್ತು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಮನವರಿಕೆ ಮಾಡುವ ಉದ್ದೇಶವನ್ನು ಹೊಂದಿದೆ.
ಫೆಬ್ರವರಿ 08, ಸುರಕ್ಷಿತ ಇಂಟರ್ನೆಟ್ ದಿನ:
ಪ್ರತಿ ವರ್ಷ ಫೆಬ್ರವರಿ 8 ರಂದು ಸುರಕ್ಷಿತ ಇಂಟರ್ನೆಟ್ ದಿನವನ್ನು ಆಚರಿಸಲಾಗುತ್ತದೆ. ಎಲ್ಲಾ ಮಕ್ಕಳು ಮತ್ತು ಯುವ ವೃತ್ತಿಪರರಿಗೆ ಇಂಟರ್ನೆಟ್ ಬಳಕೆಯನ್ನು ಸುರಕ್ಷಿತವಾಗಿ ಮತ್ತು ಸುಲಭವಾಗಿಸುವ ಉದ್ದೇಶವು ಈ ದಿನದ್ದಾಗಿದೆ.
ಫೆಬ್ರವರಿ 10, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ :
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ 2015 ರಿಂದ ಆಚರಿಸಲಾಯಿತು. ಅಂದಿನಿಂದ ಫೆಬ್ರವರಿ 10 ರಂದು ಪ್ರತಿ ವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಜಂತು ಹುಳು ಸೋಂಕನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
ಫೆಬ್ರವರಿ 10, ವಿಶ್ವ ದ್ವಿದಳ ಧಾನ್ಯಗಳ ದಿನ:
ಪ್ರತಿ ವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಬೇಳೆಕಾಳುಗಳು ಸೇರಿದಂತೆ ಪೌಷ್ಟಿಕ ಆಹಾರವನ್ನು ಪಡೆಯಲು ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ.
ಫೆಬ್ರವರಿ 11, ವಿಶ್ವ ರೋಗಿಗಳ ದಿನ:
ಪ್ರತಿ ವರ್ಷ ಫೆಬ್ರವರಿ 11 ರಂದು ವಿಶ್ವ ರೋಗಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಪ್ರಾರ್ಥಿಸುವ ಸಲುವಾಗಿ ಪೋಪ್ ಜಾನ್ ಪಾಲ್ II ಪರಿಚಯಿಸಿದರು.
ಫೆಬ್ರವರಿ 11, ವಿಜ್ಞಾನದಲ್ಲಿ ಮಹಿಳಾ ಮತ್ತು ಹುಡುಗಿಯರ ಅಂತರಾಷ್ಟ್ರೀಯ ದಿನ :
ಪ್ರತಿ ವರ್ಷ ಫೆಬ್ರವರಿ 11, ವಿಜ್ಞಾನದಲ್ಲಿ ಮಹಿಳಾ ಮತ್ತು ಹುಡುಗಿಯರ ಅಂತರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರವೇಶ ಹಾಗೂ ಭಾಗವಹಿಸುವಿಕೆಯನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಈ ದಿನವನ್ನು ಆಚರಿಸಲು ನಿರ್ಧರಿಸಿತು.
ಇದನ್ನೂ ಓದಿ: ನಟಿ ಸಾಯಿ ಪಲ್ಲವಿಯ ಉದ್ದ ಕೂದಲಿನ ರಹಸ್ಯವೇನು?
ಫೆಬ್ರವರಿ 13, ಸರೋಜಿನಿ ನಾಯ್ಡು ಜಯಂತಿ:
ಸರೋಜಿನಿ ನಾಯ್ಡು ಅವರ ಜನ್ಮದಿನವನ್ನು ಪ್ರತಿ ವರ್ಷ ಫೆಬ್ರವರಿ 13 ರಂದು ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಸರೋಜಿನಿ ನಾಯ್ಡು ಅವರ ಹುಟ್ಟಿದ ದಿನವಾಗಿದೆ. ಫೆಬ್ರವರಿ 13, 1879 ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಸರೋಜಿನಿ ನಾಯ್ಡು ಒಬ್ಬ ಭಾರತೀಯ ರಾಜಕೀಯ ಕಾರ್ಯಕರ್ತೆ, ಕವಿ ಹಾಗೂ ಸಾಮ್ರಾಜ್ಯಶಾಹಿ ವಿರೋಧಿ ವಿಚಾರಗಳ ಪ್ರತಿಪಾದಕರಾಗಿದ್ದರು.
ಫೆಬ್ರವರಿ 13, ವಿಶ್ವ ರೇಡಿಯೋ ದಿನ:
ವಿಶ್ವ ರೇಡಿಯೋ ದಿನವನ್ನು ಪ್ರತಿ ವರ್ಷ ಫೆಬ್ರವರಿ 13ರಂದು ಪ್ರಪಂಚದದ್ಯಾಂತ ಆಚರಿಸಲಾಗುತ್ತದೆ. ಯುನೆಸ್ಕೋ ಅದರ 39ನೇ ಅಧಿವೇಶನದ ಭಾಗವಾಗಿ 2011ರ ಜನರಲ್ ಕಾನ್ಫರೆನ್ಸ್ನಲ್ಲಿ ಫೆಬ್ರವರಿ 13ರನ್ನು ವಿಶ್ವ ರೇಡಿಯೋ ದಿನವನ್ನಾಗಿ ಘೋಷಿಸಿತು. ಈ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶ ರೇಡಿಯೋ ಬಳಕೆಯನ್ನು ಪ್ರೋತ್ಸಾಹಿಸುವುದಾಗಿದೆ.
ಫೆಬ್ರವರಿ 14, ಪ್ರೇಮಿಗಳ ದಿನ
ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ವಾಲೈಂಟೈನ್ ಎಂಬ ಸಂತರು ಮರಣ ಹೊಂದಿದ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂತ ವ್ಯಾಲೆಂಟೈನ್ ಅವರು ಸಂತರಾಗಿದ್ದರೂ ಕೂಡ ಪ್ರೇಮಿಗಳನ್ನು ಒಗ್ಗೂಡಿಸಲು ಜೀವವನ್ನೇ ಮುಡಿಪಾಗಿಟ್ಟಿದ್ದನು. ಹೀಗಾಗಿ ಅವರ ಮರಣ ದಿನವನ್ನು ರೋಮ್ ಫಾದರ್‌ಗಳು ಪ್ರೇಮಿಗಳ ದಿನವನ್ನಾಗಿ ಆಚರಿಸಲು ನಿರ್ಧರಿಸುತ್ತಾರೆ. ಅಂದಿನಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರೇಮಿಗಳ ದಿನಕ್ಕೂ ಮುಂಚಿತವಾಗಿ ಒಂದು ವಾರಗಳ ಕಾಲ ಅಂದರೆ ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಪ್ರೇಮಿಗಳ ವಾರವನ್ನು ಆಚರಿಸುತ್ತ ಬರಲಾಗುತ್ತಿದೆ.
ಫೆಬ್ರವರಿ 20, ಸಾಮಾಜಿಕ ನ್ಯಾಯದ ವಿಶ್ವ ದಿನ:
ಬಡತನ ನಿರ್ಮೂಲನೆಗೆ ಸಾಮಾಜಿಕ ನ್ಯಾಯವು ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಜನರಿಗೆ ತಿಳಿಸಲು ಪ್ರತಿ ವರ್ಷ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಗುರಿಯು ವಿಶ್ವದೆಲ್ಲೆಡೆ ಉದ್ಯೋಗವನ್ನು ಸಾಧಿಸುವುದು, ಸಾಮಾಜಿಕ ಏಕೀಕರಣಕ್ಕೆ ಬೆಂಬಲ ನೀಡುವುದಾಗಿದೆ.
ಫೆಬ್ರವರಿ 21, ಅಂತರಾಷ್ಟ್ರೀಯ ಮಾತೃಭಾಷಾ ದಿನ:
ಭಾಷೆಯ ವೈವಿಧ್ಯತೆ ಮತ್ತು ಅದರ ವೈವಿಧ್ಯತೆಯನ್ನು ಅರಿಯಲು ವಿಶ್ವಾದ್ಯಂತ ವಾರ್ಷಿಕವಾಗಿ ಫೆಬ್ರವರಿ 21 ರಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ. 17 ನವೆಂಬರ್ 1999 ರಂದು ಯುನೆಸ್ಕೋ ಈ ದಿನವನ್ನು ಘೋಷಿಸಿತು. ಈ ದಿನದಂದು ಪ್ರಪಂಚದಾದ್ಯಂತ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಅರಿವನ್ನು ಮೂಡಿಸುವ ಉದ್ದೇಶವಾಗಿದೆ
ಫೆಬ್ರವರಿ 22, ವಿಶ್ವ ಚಿಂತನಾ ದಿನ:
ವಿಶ್ವ ಚಿಂತನಾ ದಿನವನ್ನು ಥಿಂಕಿಂಗ್ ಡೇ ಎಂದೂ ಕರೆಯಲಾಗುವ ಈ ದಿನವನ್ನು ಪ್ರತಿ ವರ್ಷ ಫೆಬ್ರವರಿ 22 ರಂದು 150 ದೇಶಗಳಲ್ಲಿ ಗರ್ಲ್ ಸ್ಕೌಟ್ಸ್ ಮತ್ತು ಗರ್ಲ್ ಗೈಡ್ಸ್ ಆಚರಿಸಲಾಗುತ್ತದೆ.
ಫೆಬ್ರವರಿ 23, ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನ:
ಪ್ರತಿ ವರ್ಷ ಫೆಬ್ರವರಿ 23 ರಂದು ವಿಶ್ವ ತಿಳುವಳಿಕೆ ಮತ್ತು ಶಾಂತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ರೋಟರಿ ಇಂಟರ್‌ನ್ಯಾಶನಲ್‌ನ ಉದ್ಘಾಟನಾ ಸಮಾವೇಶವನ್ನು ನೆನಪಿಸಿಕೊಳ್ಳಲಾಗುತ್ತದೆ. ವಿಶ್ವಾದ್ಯಂತ ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
ಫೆಬ್ರವರಿ 24, ಕೇಂದ್ರ ಅಬಕಾರಿ ದಿನ:
ಪ್ರತಿ ವರ್ಷ ಫೆಬ್ರವರಿ 24 ರಂದು ಭಾರತದಲ್ಲಿ ಕೇಂದ್ರ ಅಬಕಾರಿ ದಿನವನ್ನು ಆಚರಿಸಲಾಗುತ್ತದೆ. ವ್ಯವಹಾರದಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು, ಕೇಂದ್ರೀಯ ಅಬಕಾರಿ ಸುಂಕವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಅಬಕಾರಿ ಇಲಾಖೆಯ ನೌಕರರನ್ನು ಉತ್ತೇಜಿಸಲು ಉದ್ದೇಶವನ್ನು ಹೊಂದಿದೆ.
ಫೆಬ್ರವರಿ 27, ವಿಶ್ವ ಎನ್‌ಜಿಒ ದಿನ
ಪ್ರತಿ ವರ್ಷ ಫೆಬ್ರವರಿ 27 ರಂದು ವಿಶ್ವ ಎನ್‌ಜಿಒ ದಿನ ಆಚರಿಸಲಾಗುತ್ತದೆ. ವಿಶ್ವ ಎನ್‌ಜಿಒ ದಿನವು ಎಲ್ಲಾ ಸರ್ಕಾರೇತರ ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವುದಾಗಿದೆ.
ಫೆಬ್ರವರಿ 28, ರಾಷ್ಟ್ರೀಯ ವಿಜ್ಞಾನ ದಿನ:
ಭಾರತೀಯ ಭೌತಶಾಸ್ತ್ರಜ್ಞ ಸರ್ ಚಂದ್ರಶೇಖರ ವೆಂಕಟ ರಾಮನ್ ಅವರು ರಾಮನ್ ಪರಿಣಾಮದ ಆವಿಷ್ಕಾರವನ್ನು ಗುರುತಿಸುವ ಮೂಲಕ ಪ್ರತಿ ವರ್ಷ ಫೆಬ್ರವರಿ 28 ರಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಚಂದ್ರಶೇಖರ ವೆಂಕಟ ರಾಮನ್ 28 ಫೆಬ್ರವರಿ 1928 ರಂದು ರಾಮನ್ ಪರಿಣಾಮವನ್ನು ಕಂಡುಹಿಡಿದರು. ತಮ್ಮ ಈ ಸಂಶೋಧನೆಗಾಗಿ 1930 ರಲ್ಲಿ ಭೌತಶಾಸ್ತ್ರ ವಿಷಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.
ಫೆಬ್ರವರಿ 28, ಅಪರೂಪದ ರೋಗ ದಿನ:
ಪ್ರತಿ ವರ್ಷ ಫೆಬ್ರವರಿ 28 ರಂದು ಅಪರೂಪದ ಕಾಯಿಲೆಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಅಪರೂಪದ ಕಾಯಿಲೆಯೊಂದಿಗೆ ಬದುಕುತ್ತಿರುವವರಿಗೆ ಹಾಗೂ ಅವರ ಕುಟುಂಬಗಳಿಗೆಗಳಿಗೆ ಅಪರೂಪದ ರೋಗಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Tue, 30 January 24