ತಿನ್ನುವ ಪ್ರತಿ ಅಗುಳುನ ಮೇಲೆಯೂ ತಿನ್ನುವವನ ಹೆಸರು ಬರೆದಿದೆ ಎಂಬ ಮಾತಿದೆ. ಆದರೆ ನಮ್ಮಲ್ಲಿಂದು ಶೋಕಿಗೋ, ತಿಳಿವಳಿಕೆಯ ಕೊರತೆಗೋ ಅನ್ನ, ಆಹಾರವನ್ನು ಚೆಲ್ಲುವವರೇ ಅಧಿಕ. ಹೌದು ಹೊಟೇಲ್‌ಗಳಲ್ಲಿ, ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಇಂತಹ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಲೇ ಇರುತ್ತವೆ. ಬಟ್ಟಲಿಗೆ ಬೇಕಾಬಿಟ್ಟಿ ತುಂಬಿಸಿಕೊಂಡು ಸ್ವಲ್ಪವೇ ತಿಂದು ಕೊನೆಗೆ ಉಳಿದ ಆಹಾರವನ್ನು ಕಸದ ಬುಟ್ಟಿಗೆ ಚೆಲ್ಲುವ ಅನೇಕರನ್ನು ಕಾಣುತ್ತೇವೆ. ನಮ್ಮಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಆಹಾರ ನಷ್ಟ ಮತ್ತು ಆಹಾರ ತ್ಯಾಜ್ಯ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಆಹಾರವನ್ನು ವ್ಯರ್ಥ ಮಾಡದಿರೊಣ ಎಂಬುದರ ಬಗ್ಗೆ ಜನರಿಗೆ ಜಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ಆಹಾರ ನಷ್ಟ ಮತ್ತು ತ್ಯಾಜ್ಯದ ಜಾಗೃತಿ ದಿನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ.
2019 ರಲ್ಲಿ ವಿಶ್ವಸಂಸ್ಥೆಯ 74 ನೇ ಸಾಮಾನ್ಯ ಸಭೆಯಲ್ಲಿ ಆಹಾರ ಸುರಕ್ಷತೆ ಮತ್ತು ಪೋಷಣೆಯನ್ನು ಉತ್ತೇಜಿಸುವಲ್ಲಿ ಸುಸ್ಥಿರ ಆಹಾರ ಉತ್ಪಾದನೆಯು ವಹಿಸುವ ಮೂಲಭೂತ ಪಾತ್ರವನ್ನು ಗುರುತಿಸಿ ಹಾಗೂ ಆಹಾರ ನಷ್ಟವನ್ನು ತಡೆಯಲು ಅಂತರಾಷ್ಟ್ರೀಯ ಆಹಾರ ನಷ್ಟ ಹಾಗೂ ತ್ಯಾಜ್ಯದ ಬಗ್ಗೆ ಜಾಗೃತಿ ದಿನವನ್ನು ಗೊತ್ತುಪಡಿಸಲಾಯಿತು. ಅಂದಿನಿಂದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಈ ದಿನವನ್ನು ಆಚರಿಸಲು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.
ಆಹಾರ ನಷ್ಟ ಮತ್ತು ಆಹಾರ ತ್ಯಾಜ್ಯವು ನಮ್ಮ ಆಹಾರ ವ್ಯವಸ್ಥೆಗಳ ಸುಸ್ಥಿರತೆಯನ್ನು ಹಾಳು ಮಾಡುತ್ತದೆ. ಹೌದು ಆಹಾರವು ವ್ಯರ್ಥವಾದಾಗ ನೀರು, ಭೂಮಿ, ಶಕ್ತಿ, ಶ್ರಮ ಮತ್ತು ಬಂಡವಾಳ ಸೇರಿದಂತೆ ಆಹಾರವನ್ನು ಉತ್ಪಾದಿಸಲು ಬಳಸಿದ ಎಲ್ಲಾ ಸಂಪನ್ಮೂಲಗಳು ವ್ಯರ್ಥವಾಗುತ್ತದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಮಾನವನ ಬಳಕೆಗಾಗಿ ಉತ್ಪಾದಿಸಲಾದ ಎಲ್ಲಾ ರೀತಿಯ ಆಹಾರದ ಮೂರನೇ ಒಂದು ಭಾಗವು ಪ್ರತಿ ವರ್ಷ ವ್ಯರ್ಥವಾಗುತ್ತಿದೆ. ಆಹಾರ ಉತ್ಪಾದನೆಯಿಂದ ಸಂಸ್ಕರಣೆ, ಸಾಗಾಣೆ, ವಿತರಣೆ ಮತ್ತು ಬಳಕೆಯವರೆಗೆ ಅಂದರೆ ಆಹಾರ ಉತ್ಪಾದನೆಯಿಂದ ತಿನ್ನುವವರೆಗೆ ಆಹಾರ ಪೂರೈಕೆ ಸರಪಳಿಯ ಎಲ್ಲಾ ಹಂತಗಳಲ್ಲಿ ಆಹಾರ ನಷ್ಟ ಮತ್ತು ಆಹಾರ ತ್ಯಾಜ್ಯ ಸಂಭವಿಸುತ್ತಿದೆ. ಹೀಗಿರುವಾಗ ಆಹಾರ ನಷ್ಟ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ ನಾವು ಆಹಾರ ಮೂಲವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದು ಇದು ಭವಿಷ್ಯದ ಪೀಳಿಗೆಗೆ ಆಹಾರದ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಅಲ್ಲದೆ ನಾವು ದೊಡ್ಡ ಮಟ್ಟದಲ್ಲಿ ಎಸೆಯುವ ಆಹಾರಗಳು ಭೂಮಿಯಲ್ಲಿ ಕೊಳೆತು ಹಸಿರುಮನೆ ಅನಿಲವನ್ನು ಉತ್ಪಾದಿಸುತ್ತದೆ. ಇದು ಹವಾಮಾನ ಬದಲಾವಣೆಗೆ ಕಾರಣವಾಗಿ ಪರಿಸರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಆಹಾರ ನಷ್ಟವನ್ನು ತಡೆಗಟ್ಟುವುದು ಅತ್ಯಗತ್ಯ. ಇದಲ್ಲದೆ ಆಹಾರ ನಷ್ಟ ಮತ್ತು ತ್ಯಾಜ್ಯವು ಆಹಾರದ ಒಟ್ಟಾರೆ ಲಭ್ಯತೆಯನ್ನು ಕಡಿಮೆ ಮಾಡುವ ಮೂಲಕ ಆಹಾರ ಭದ್ರತೆಯ ಮೇಲೂ ಋಣಾತ್ಮಕವಾಗಿ ಪರಿಣಾಮ ಬೀರಬಹುದು. ಲಕ್ಷಾಂತರ ಜನರು ಇನ್ನೂ ಹಸಿವು ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಆಹಾರ ಪೂರೈಕೆಯಾಗುವಂತೆ ನೋಡಿಕೊಳ್ಳಲು ಹಾಗೂ ಪ್ರತಿಯೊಬ್ಬರೂ ಹಸಿವು ಮುಕ್ತರಾಗಲು ಆಹಾರವನ್ನು ಪೋಲು ಮಾಡದೆ ಸಂರಕ್ಷಿಸುವುದು ಬಹಳ ಮುಖ್ಯವಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿ ಆಗುತ್ತಾ?: ಈ ಟ್ರಿಕ್ ಮೂಲಕ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಿ
ಒಂದೆಡೆ ಈ ಜಗತ್ತಿನಲ್ಲಿ ಪೌಷ್ಠಿಕ ಆಹಾರವಿಲ್ಲದೆ ಹಸಿವು ಹಸಿವು ಎಂದು ಕೂಗುತ್ತಿದ್ದರೆ ಮತ್ತೊಂದೆಡೆ ಬೇಕಾಬಿಟ್ಟಿ ಊಟ ಹಾಕಿಸಿಕೊಂಡು ಕೊನೆಗೆ ಅದನ್ನು ತಿನ್ನದೆ ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳನ್ನು ಬಿಸಾಡುವ ಅನೇಕರಿದ್ದಾರೆ. ಆದರೆ ಈ ಆಹಾರ ಪೋಲು ಹೆಚ್ಚಿನವರಿಗೆ ದೊಡ್ಡ ಸಮಸ್ಯೆಯೆಂದು ಅನ್ನಿಸುವುದಿಲ್ಲ. ಆದರೆ ಇದು ಹವಾಮಾನದಿಂದ ಹಿಡಿದು ಆಹಾರ ಭದ್ರತೆಯವರೆಗೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಮಗೆ ಎಷ್ಟು ಬೇಕೋ ಅಷ್ಟೇ ಆಹಾರವನ್ನು ತಿನ್ನಿ. ಒಂದು ವೇಳೆ ಬಟ್ಟಲಿನಲ್ಲಿ ಆಹಾರ ಮಿಕ್ಕರೆ ಅದನ್ನು ಕಸದ ಬುಟ್ಟಿಗೆ ಎಸೆಯದೆ ಹಸಿದ ಪ್ರಾಣಿಗಳಿಗೆ ಹಾಕಿ. ಇನ್ನೂ ಯಾವುದೇ ರೀತಿಯ ಆಹಾರವನ್ನು ವ್ಯರ್ಥ ಮಾಡದೇ ಹಸಿವು ಎಂದು ಬಂದವರಿಗೆ ಒಳ್ಳೆಯ ಊಟವನ್ನು ನೀಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ