ಹೆಣ್ಣು ಎಂದರೆ ಮನೆಯ ಬೆಳಕು. ಹುಟ್ಟಿನಿಂದ ಸಾಯುವ ತನಕ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವವಳು. ಜಗದ ಸೃಷ್ಟಿಕರ್ತೆಯೇ ಅವಳಾಗಿರುವಾಗ ಆಕೆ ಇಲ್ಲದೆ ಜೀವಿಸುವುದು ಕಷ್ಟದಾಯಕ. ಆದರೆ ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ಮಾದರಿಯಾಗಿದ್ದಾರೆ. ಆದರೆ ಇಂದಿಗೂ ಕೆಲವೆಡೆ ಹೆಣ್ಣನ್ನು ತಾತ್ಸರದಿಂದ ನೋಡಲಾಗುತ್ತಿದೆ. ಕೆಲವು ಹೆಣ್ಣುಮಕ್ಕಳಿಗೂ ಹೇಳಿಕೊಳ್ಳುವಷ್ಟು ಸಮಾನ ಸ್ಥಾನಮಾನವು ಇವತ್ತಿಗೂ ದೊರೆತಿಲ್ಲ ಎನ್ನುವುದು ಬೇಸರದ ಸಂಗತಿ. ಹೀಗಾಗಿ ಶಿಕ್ಷಣ, ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ, ಪೋಷಣೆ, ಕಾನೂನು ಹಕ್ಕುಗಳು, ಔಷಧೀಯ ಹಕ್ಕುಗಳ ಕೊರತೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ದೌರ್ಜನ್ಯ, ತಾರತಮ್ಯ ಹಾಗೂ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಹೆಣ್ಣು ಮಕ್ಕಳ ದಿನವನ್ನು ಆಚರಿಸುವ ಅಭಿಯಾನವನ್ನು ಸರ್ಕಾರೇತರ ಸಂಸ್ಥೆಯಾದ ʼಪ್ಯಾನ್ ಇಂಟರ್ನ್ಯಾಷನಲ್ʼ ಸಂಸ್ಥೆಯು ಪ್ರಾರಂಭಿಸಿತು. ಈ ಅಭಿಯಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕೆನ್ನುವ ಸಲುವಾಗಿ ಈ ಸಂಸ್ಥೆ ಕೆನಡಾ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಕೆನಡಾ ಸರ್ಕಾರವು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸುವ ಪ್ರಸ್ತಾಪವಿಟ್ಟಿತು. ವಿಶ್ವ ಸಂಸ್ಥೆಯು ಡಿಸೆಂಬರ್ 19, 2011 ರಂದು ಈ ನಿರ್ಣಯವನ್ನು ಅಂಗೀಕರಿಸಿತು. ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಆ ಬಳಿಕ 2012, ಅಕ್ಟೋಬರ್ 11 ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಬಾಲ್ಯವಿವಾಹ, ಶಿಕ್ಷಣ, ತಾರತಮ್ಯ ಮತ್ತು ಹಿಂಸೆ, ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ಆಧಾರಿತ ಅಸಮಾನತೆಯನ್ನು ಅಂತ್ಯ ಹಾಡುವುದು. ಹೆಣ್ಣು ಮಕ್ಕಳ ಹಕ್ಕುಗಳು, ಹೆಣ್ಣು ಮಕ್ಕಳಿಗೆ ಸಮಾನ ಗೌರವ ಮತ್ತು ಹಕ್ಕುಗಳನ್ನು ನೀಡಲು, ಸುರಕ್ಷತೆ ಮತ್ತು ಸಮಾನತೆಯ ಬಗ್ಗೆ ಅವರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಹೆಣ್ಣು ಮಕ್ಕಳ ದಿನಾಚರಣೆಯಂದು ಸೆಮಿನಾರ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇದನ್ನೂ ಓದಿ: ಮಕ್ಕಳು ನಿಮ್ಮ ಮೇಲೆ ಕೈ ಮಾಡುತ್ತಾರಾ? ಈ ಕೆಟ್ಟ ಅಭ್ಯಾಸಕ್ಕೆ ಹೀಗೆ ಬ್ರೇಕ್ ಹಾಕಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣು ಮಗುವನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಲಿಂಗ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ 2015ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಜನನ ದರ ಹೆಚ್ಚಿಸಲು, ಸುಶಿಕ್ಷಿತರನ್ನಾಗಿಸಲು ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ (ಭೇಟಿ ಬಚಾವೋ, ಭೇಟಿ ಪಡಾವೋ) ಎಂಬ ಘೋಷವಾಕ್ಯದೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಿತ್ತು. ಅದಲ್ಲದೇ, ಹೆಣ್ಣು ಮಕ್ಕಳಿಗೆಂದೇ ಸುಕನ್ಯಾ ಸಮೃದ್ಧಿ ಯೋಜನೆ, ಧನಲಕ್ಷ್ಮೀ ಯೋಜನೆ, ಬಾಲಿಕಾ ಸಮೃದ್ಧಿ ಯೋಜನೆ, ಕರ್ನಾಟಕ ಭಾಗ್ಯಲಕ್ಷ್ಮಿ ಯೋಜನೆ, ಸಿಬಿಎಸ್ಇ ಉಡಾನ್ ಯೋಜನೆಗಳು ಜಾರಿಗೆ ಬಂದಿವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ