ಕಷ್ಟ ಪಟ್ಟು ದುಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ. ಕಾರ್ಮಿಕರೆಂದರೆ ದುಡಿಯುವ ವರ್ಗದವರು. ಬಿಸಿಲು, ಮಳೆ ಎಂದು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ದುಡಿಯುವ ಈ ಕಾರ್ಮಿಕರನ್ನು ಗುಲಾಮರಂತೆ ದುಡಿಸಿಕೊಳ್ಳುವ ವರ್ಗವು ಒಂದು ಕಾಲದಲ್ಲಿತ್ತು. ಆದರೆ ಇದೀಗ ಕಾಲ ಬದಲಾಗಿದ್ದು ಕಾರ್ಮಿಕರಿಗೂ ಇಂತಿಷ್ಟು ಸಮಯಕ್ಕೆ ಇಂತಿಷ್ಟು ವೇತನ ಎನ್ನುವುದು ನಿಗದಿಯಾಗಿದೆ. ಕಾರ್ಮಿಕರಿಗಾಗಿ ಒಂದು ದಿನವನ್ನು ಮೀಸಲಾಗಿ ಇಡಲಾಗಿದ್ದು, ಮೇ 1 ರಂದು ಅಂತರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
ಮೇ 1, 1886 ರಲ್ಲಿ ದಿನದ 15 ಗಂಟೆಗಳ ಕಾಲ ಇದ್ದ ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ತರಬೇಕು ಎಂದು ಬೇಡಿಕೆಯೊಂದಿಗೆ ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಪ್ರತಿಭಟನೆಗೆ ಮುಂದಾದರು. ಈ ಪ್ರತಿಭಟನೆಯ ಕಾವು ಜೋರಾಗಿದ್ದ ಕಾರಣ ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಯಿತು. ಪ್ರತೀ ವರ್ಷ ಮೇ 1ರಂದು ಕಾರ್ಮಿಕ ದಿನವನ್ನಾಗಿ ಆಚರಿಸಬೇಕೆನ್ನುವ ಬೇಡಿಕೆಯನ್ನು ಮುಂದಿಟ್ಟ ಕಾರ್ಮಿಕರ ಬೇಡಿಕೆಯು ಕೊನೆಗೂ ಈಡೇರಿತು. ಪ್ರತಿಭಟನೆಯ ಪರಿಣಾಮವಾಗಿ 1916ರಲ್ಲಿ ಅಮೆರಿಕ ಸರ್ಕಾರವು ಕೆಲಸದ ಅವಧಿಯನ್ನು ಕಡಿಮೆಗೊಳಿಸಿ 8 ಗಂಟೆಗಳ ಕೆಲಸ ಅವಧಿ ಹಾಗೂ ಕಾರ್ಮಿಕರ ದಿನವನ್ನಾಗಿ ಆಚರಿಸುವುದಕ್ಕೆ ಮುಂದಾಯಿತು. ಅಂದಿನಿಂದ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಭಾರತದಲ್ಲಿ 1923 ನೇ ಇಸವಿಯ ಮೇ 1 ರಂದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ. ಅದಲ್ಲದೇ, ಸದನದಲ್ಲಿ ಕಾರ್ಮಿಕರ ದಿನಾಚರಣೆಯಂದು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಬೇಕು ಹಾಗೂ ಕಾರ್ಮಿಕರಿಗೆ ರಜೆ ನೀಡಬೇಕೆಂದು ಮಸೂದೆ ಮಂಡಿಸಲಾಯಿತು. ಅಂದಿನಿಂದ ಪ್ರತಿ ವರ್ಷ 1 ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಬಡಜನರ ಆಯಸ್ಸು ಹೆಚ್ಚಿಸಿದ ಆಯುಷ್ಮಾನ್ ಭಾರತ್ ಯೋಜನೆ
ಕಾರ್ಮಿಕರ ದಿನಾಚರಣೆ ಅಥವಾ ಮೇ ದಿನವು ಕಾರ್ಮಿಕರ ಕೊಡುಗೆಗಳು, ಕಾರ್ಮಿಕರಿಗಿರುವ ಕಾನೂನುಗಳು, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕೆಲಸದ ಅವಧಿ ಹೀಗೆ ಹತ್ತು ಹಲವು ವಿಚಾರದ ಬಗ್ಗೆ ಅರಿವು ಮೂಡಿಸುವ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ