
ಪವನ್ ಕುಮಾರ್ ಎಂಬ 24 ವರ್ಷದ ಯುವಕ ಬೆಂಗಳೂರಿನ ಪ್ರಸಿದ್ಧ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮಾಡುತ್ತಿದ್ದಾರೆ. ಪ್ರತಿದಿನ ಕ್ಲಾಸ್, ಆಮೇಲೆ ಪ್ರಾಜೆಕ್ಟ್ ವರ್ಕ್ ಗಳಲ್ಲೇ ಕಳೆಯುವ ಕುಮಾರ್… ಹಸಿವಾದರೆ ಆನ್ ಲೈನ್ ನಲ್ಲಿ ಪಿಜ್ಜಾ ಆರ್ಡರ್ ಮಾಡುವುದು ಅಥವಾ ಕ್ಯಾಂಟೀನ್ ಗೆ ಹೋಗಿ ಕೂಲ್ ಡ್ರಿಂಕ್ಸ್ ಕುಡಿದು ಚಿಪ್ಸ್ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ದಿನಚರಿ ಆತನಿಗೆ ಕಾಮನ್ ಆಗಿಬಿಟ್ಟಿದೆ. ಕಾರಣ ಕೇಳಿದರೆ ಒಂದೆಡೆ ಬಿಡುವಿಲ್ಲದ ದುಡಿತ… ಮತ್ತೊಂದೆಡೆ ಬಾಯಿಗೆ ರುಚಿಯಾಗಿರುವ ಆಹಾರ ಅದಾಗಿರುತ್ತದೆ ಎಂದು ನಗೆಯಾಡುತ್ತಾರೆ. ನನ್ನ ಬಿಡುವಿಲ್ಲದ ಶೆಡ್ಯೂಲ್‌ನಲ್ಲಿ ನಾನು ಅತ್ಯುತ್ತಮವಾದ ಆಹಾರವನ್ನು ತಿನ್ನಲು ಸಿದ್ಧನಾಗಿದ್ದೇನೆ. ಇದಲ್ಲದೆ, ಹೆಚ್ಚು ಶ್ರಮವಿಲ್ಲದೆ ಆರಾಮವಾಗಿ ಈ ಆಹಾರವನ್ನು ತಿನ್ನಬಹುದು. ಖರ್ಚು ಸ್ವಲ್ಪ ಹೆಚ್ಚಾದರೂ.. ಸಮಯ ಉಳಿಯುತ್ತದೆ ಎಂಬ ಸಿದ್ದಾಂತಕ್ಕೆ ಆತ ಜೋತುಬಿದ್ದಿದ್ದಾನೆ. ಫಾಸ್ಟ್ ಫುಡ್ ಎಂಬ ಅಪಾಯಕಾರಿ ಚಟ ವಾಸ್ತವವಾಗಿ ಇದು ಕುಮಾರ್ ಎಂಬೊಬ್ಬರ ಸಮಸ್ಯೆ ಮಾತ್ರವಲ್ಲ.. ಇದು ಇಂದಿನ ಬಹುತೇಕ ಯುವಕ-ಯುವತಿಯರ ಸಮಸ್ಯೆಯೂ ಹೌದು. ಮದ್ಯದ ವ್ಯಸನಿಗಳ ಗೋಳು ಏನೆಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಸಿಗರೇಟ್ ಇಲ್ಲದೇ ಹೋದರೆ ಸ್ಮೋಕರ್ಸ್ ನರಳಾಡುವ ಬಗ್ಗೆ ನಮಗೆ ತಿಳಿದಿದೆ. ಹಾಗೆಯೇ ಡ್ರಗ್ ಅಡಿಕ್ಟ್ಗಳ ಬಗ್ಗೆಯೂ ತಿಳಿಸಿದೆ. ಆದರೆ ಫಾಸ್ಟ್ ಫುಡ್ ಗೆ ಅಡಿಕ್ಟ್ ಆಗಿರುವವರ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ..? ಅಲ್ಲ ಹಸಿವಾದರೆ ಹೊಟ್ಟೆ ತುಂಬಿಸಿಕೊಳ್ಳಲು ಫುಡ್ ತೆಗೆದುಕೊಳ್ಳುವುದು ಚಟ ಹೇಗಾದೀತು? ಅಂದರೆ ಕುಡಿತ ತಪ್ಪು, ಧೂಮಪಾನ ಇನ್ನೂ ತಪ್ಪು, ಡ್ರಗ್ಸ್ ತೆಗೆದುಕೊಳ್ಳುವುದು ಮತ್ತಷ್ಟು ಮಗದಷ್ಟು ತಪ್ಪು. ಆದರೆ ಫಾಸ್ಟ್ ಫುಡ್ ಅಥವಾ ಜಂಕ್ ಫುಡ್ ಎಂಬ ಆಹಾರ ಸೇವನೆಯೂ ತಪ್ಪೇ?...