Onam 2023: ದೇವರ ನಾಡಿಗೆ ಓಣಂ ಹಬ್ಬ ತುಂಬಾ ವಿಶೇಷ, ಈ ಆಚರಣೆಯ ಇತಿಹಾಸ, ಮಹತ್ವ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 29, 2023 | 10:06 AM

ಓಣಂ ಹಬ್ಬವು ವಿಶೇಷವಾಗಿ ಕೇರಳದಲ್ಲಿ ಬಹಳ ವಿಜೃಂಭನೆಯಿಂದ ಆಚರಿಸಲಾಗುವ ಸುಗ್ಗಿ ಹಬ್ಬವಾಗಿದೆ. 10 ದಿನಗಳ ಕಾಲ ನಡೆಯುವ ಈ ಹಬ್ಬದಂದು ಭೂಮಿಯ ಮೇಲಿನ ಜನರನ್ನು ಆಶೀರ್ವದಿಸಲು ಪಾತಾಳಲೋಕದಿಂದ ಬಲಿರಾಜನು ಬರುತ್ತಾನೆ ಎಂಬ ನಂಬಿಕೆಯಿದೆ. ಇಂದು ಓಣಂ ಹಬ್ಬದ ಕೊನೆಯ ದಿನವಾದ ತಿರುವೋಣಂ. ಈ ದಿನ ಬಹಳ ವಿಜೃಂಭನೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಇತಿಹಾಸ ಮತ್ತು ಮಹತ್ವ ಏನೆಂಬುವುದನ್ನು ನೋಡೋಣ.

Onam 2023: ದೇವರ ನಾಡಿಗೆ ಓಣಂ ಹಬ್ಬ ತುಂಬಾ ವಿಶೇಷ, ಈ ಆಚರಣೆಯ ಇತಿಹಾಸ, ಮಹತ್ವ ಇಲ್ಲಿದೆ
ಓಣಂ ಹಬ್ಬ 2023
Follow us on

ಓಣಂ ಹಬ್ಬವು (Onam 2023) ದೇವರ ನಾಡು ಎಂದೇ ಕೆರೆಯಲ್ಪಡುವ ಕೇರಳದಲ್ಲಿ ಬಹಳ ವಿಜೃಂಭನೆಯಿಂದ ಆರಿಸಲಾಗುವ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ಈ ಬಾರಿ ಆಗಸ್ಟ್ 29 ಅಂದರೆ ಇಂದು ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಮಲಯಾಳಂ ಪಂಚಾಂಗದ ಪ್ರಕಾರ ಓಣಂ ಹಬ್ಬವನ್ನು ಚಿಂಗಂ ಮಾಸದ ತಿರುವೋಣಂ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಬಲಿರಾಜನಿಗೆ ಸಮರ್ಪಿಸಲಾಗಿದೆ. ಮತ್ತು ಈ ಹಬ್ಬದಂದು ಕೇರಳದಲ್ಲಿ ಪುಕ್ಕಳಂ, ವಲ್ಲಂಕಾಳಿ, ಪುಲಿಕಲಿ ಸೇರಿದಂತೆ ಹಲವಾರು ಸಂಪ್ರದಾಯಿಕ ಆಚರಣೆಗಳನ್ನು ಪ್ರದರ್ಶಿಸಲಾಗುತ್ತದೆ. 10 ದಿನಗಳ ಕಾಲ ನಡೆಯುವ ಓಣಂ ಹಬ್ಬದ ಕೊನೆಯ ದಿನವಾದ ತಿರುವೋಣಂ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದ ಆಚರಣೆಯ ಇತಿಹಾಸ ಮತ್ತು ಮಹತ್ವದ ಕುರಿತ ಮಾಹಿತಿ ಇಲ್ಲಿದೆ.

ಇತಿಹಾಸ:

ಪುರಾಣಗಳ ಪ್ರಕಾರ, ಒಂದು ಕಾಲದಲ್ಲಿ ರಾಜ ಮಹಾಬಲಿ ಭೂಲೋಕವನ್ನು ಆಳುತ್ತಿದ್ದನು. ಆತ ಅಸುರನಾದರೂ ತನ್ನ ಪ್ರಜೆಗಳ ಮೇಲೆ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದನು. ಮತ್ತು ದಯೆಯುಳ್ಳವನಾಗಿದ್ದನು. ಹಾಗೂ ಬಲಿರಾಜನ ರಾಜ್ಯವು ಬಹಳ ಸಮೃದ್ಧಿಯಿಂದ ಕೂಡಿತ್ತು ಮತ್ತು ಪ್ರಜೆಗಳೆಲ್ಲರೂ ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಹೀಗೆ ಭೂ ಲೋಕದಲ್ಲಿ ಆಡಳಿತ ನಡೆಸುತ್ತಿದ್ದ ಮಹಾಬಲಿಯು ತನ್ನ ಪರಾಕ್ರಮದಿಂದ ಮೂರು ಲೋಕವನ್ನು ವಶಪಡಿಸಿಕೊಂಡಾಗ, ಇಂದ್ರನು ದೇವಲೋಕದ ನಿಯಂತ್ರಣವವನ್ನು ಮರಳಿ ಪಡೆಯಲು ವಿಷ್ಣು ದೇವರ ಸಹಾಯವನ್ನು ಕೋರಿದನು. ಮಹಾಬಲಿ ವಿಷ್ಣುವಿನ ಮಹಾನ್ ಭಕ್ತನಾಗಿದ್ದ ಕಾರಣ ವಿಷ್ಣುವಿಗೆ ಇವರ ನಡುವೆ ಪಕ್ಷಪಾತ ಮಾಡಲು ಕಷ್ಟವಾಯಿತು. ಆದರೂ ದೇವಲೋಕವನ್ನು ಇಂದ್ರನಿಗೆ ಮರಳಿಸುವ ಸಲುವಾಗಿ ವಿಷ್ಣು ಕುಬ್ಜ ವಾಮನನ ಅವತಾರವನ್ನು ತಾಳಿ, ಮಹಾಬಲಿಯನ್ನು ಭೇಟಿಯಾಗಿ ಮೂರು ಹೆಜ್ಜೆ ಗಾತ್ರದ ಜಮೀನಿನ ಮಾಲಿಕತ್ವದ ಹಕ್ಕನ್ನು ಕೇಳಿದನು. ರಾಜನು ಇದಕ್ಕೆ ಒಪ್ಪಿಗೆ ನೀಡಿದನು. ಈ ಸಂದರ್ಭದಲ್ಲಿ ವಾಮನ ಅವತಾರದಲ್ಲಿದ್ದ ವಿಷ್ಣುವಿನ ಗಾತ್ರ ಹಿಗ್ಗುತ್ತಾ ಹೋಯಿತು. ಮತ್ತು ಬಲಿ ರಾಜ ವಶಪಡಿಸಿಕೊಂಡ ಸಂಪೂರ್ಣ ಪ್ರದೇಶವನ್ನು ಎರಡು ಹೆಜ್ಜೆಗಳನ್ನಿಡುವ ಮೂಲಕ ಆವರಿಸಿಕೊಂಡರು. ಮೂರನೇ ಹೆಜ್ಜೆಯನ್ನು ಎಲ್ಲಿ ಇಡುವುದೆಂದು ನೋಡಿದಾಗ, ಉದಾತ್ತನಾಗಿದ್ದ ಮಹಾಬಲಿಯು ಮೂರನೇ ಹಜ್ಜೆಯನ್ನು ತನ್ನ ತಲೆಯ ಮೇಲಿಡಲು ಹೇಳಿದನು. ಹೀಗೆ ವಾಮನ ರೂಪದಲ್ಲಿದ್ದ ವಿಷ್ಣುವು ಮಹಾಬಲಿಯ ತಲೆ ಮೇಲೆ ಕಾಲನ್ನಿಟ್ಟಾಗ ಆತ ಪಾತಳ ಲೋಕಕ್ಕೆ ಹೋಗುತ್ತಾನೆ. ಮತ್ತು ಈತನ ನಿಷ್ಠೆಗೆ ಮೆಚ್ಚಿದ ವಿಷ್ಣು ಮಹಾಬಲಿಗೆ ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ಭೇಟಿಯಾಗುವ ವರವನ್ನು ನೀಡುತ್ತಾರೆ. ಬಲಿರಾಜ ಭೂಮಿಗೆ ಬರುವ ಸುದಿನವನ್ನು ಕೇರಳದಲ್ಲಿ ಓಣಂ ಹಬ್ಬವೆಂದು ಆಚರಿಸಲಾಗುತ್ತದೆ.

ಇದನ್ನೂ ಓದಿ:ಕಾಲೇಜ್​ನಲ್ಲಿ ಮುಗಿಲು ಮುಟ್ಟಿದ ಓಣಂ ಸಂಭ್ರಮ- ಮಿರ ಮಿರ ಮಿಂಚಿದ ವಿದ್ಯಾರ್ಥಿನಿಯರು

ಓಣಂ ಮಹತ್ವ:

ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕೇರಳದಲ್ಲಿ ಓಣಂ ಹಬ್ಬವು ತಿರುವೋಣಂ ನಕ್ಷತ್ರದ ಸಮಯದಲ್ಲಿ ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ಭೇಟಿಯಾಗಲು ಭೂಮಿಗೆ ಬಲಿರಾಜ ಬರುವ ಸುದಿನವನ್ನು ಆಚರಿಸಲಾಗುವ ಹಬ್ಬವಾಗಿದೆ. ಸಡಗರ ಉತ್ಸಾಹ ಮತ್ತು ಸಂಪ್ರದಾಯಗಳ ಒಗ್ಗೂಡುವಿಕೆಯಿಂದ ಕೂಡಿದ ಈ ಹಬ್ಬವು 10 ದಿನಗಳ ಕಾಲ ನಡೆಯುತ್ತದೆ. ಮೊದಲ ದಿನವನ್ನು ಅಥಾನ್, ಎರಡನೇ ದಿನವನ್ನು ಚಿಥಿರಾ, ಮೂರನೇ ದಿನವನ್ನು ಚೋಧಿ ಪೂಕ್ಕಳಮ್, ನಾಲ್ಕನೇ ದಿನವನ್ನು ವಿಶಾಖಂ, ಐದನೇ ದಿನವನ್ನು ಅನಿಜಂ, ಆರನೇ ದಿನವನ್ನು ತ್ರಿಕೇಟಾ, ಏಳನೇ ದಿನವನ್ನು ಮೂಲಂ, ಎಂಟನೇ ದಿನವನ್ನು ಪೂರದಂ, ಒಂಬತ್ತನೇ ದಿನವನ್ನು ಉತಿರಾದಂ ಮತ್ತು ಹತ್ತನೇ ದಿನವನ್ನು ತಿರುವೋಣಂ ಎಂದು ಕರೆಯುತ್ತಾರೆ. ತಿರುವೋಣಂನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಈ ದಿನದಂದು ಕೇರಳದ ಪ್ರಸಿದ್ಧ ದೋಣಿ ಸ್ಪರ್ಧೆ (ವಲ್ಲಂಕಾಳಿ), ಪುಲಿಕಲಿ, ಅಥಾಚಮಯಂ, ಥ್ರುವತಿರಕಳಿ, ಓಣಂ ಕಲಿ ಮತ್ತು ಕಥಕ್ಕಳಿ ನೃತ್ಯ ಮುಂತಾದ ಸಂಪ್ರದಾಯಿಕ ಆಚರಣೆಗಳನ್ನು ಮಾಡಲಾಗುತ್ತದೆ. ಅಲ್ಲದೆ ಪ್ರತಿಯೊಬ್ಬರೂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು, ಮನೆಯನ್ನು ಹೂಗಳಿಂದ ಅಲಂಕರಿಸಿ, ರುಚಿಕರರವಾದ ಬಗೆಬಗೆಯ ಭಕ್ಷ್ಯಗಳನ್ನು ತಯಾರಿಸಿ, ಬಲಿರಾಜನನ್ನು ಮನೆಗೆ ಸ್ವಾಗತಿಸುತ್ತಾರೆ. ಅಲ್ಲದೆ ರೈತರು ಉತ್ತಮ ಬೆಳೆ ಮತ್ತು ಇಳುವರಿಗಾಗಿ ಕೂಡಾ ಈ ಹಬ್ಬವನ್ನು ಆಚರಿಸುತ್ತಾರೆ. ಭೂಮಿ ತಾಯಿ ಒದಗಿಸಿದ ಸಮೃದ್ಧ ಫಸಲಿಗೆ ಧನ್ಯವಾದ ಸಲ್ಲಿಸುತ್ತಾರೆ. ಅದಕ್ಕಾಗಿ ಈ ಹಬ್ಬವನ್ನು ಸುಗ್ಗಿ ಹಬ್ಬವೆಂದೂ ಕರೆಯುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ