ಮಧುಮೇಹ ಹೊಂದಿರುವವರು ಸಕ್ಕರೆ ಅಂಶದಿಂದಾಗಿ ಹಣ್ಣುಗಳಿಂದ ದೂರವಿರಬೇಕು ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ಹೆಚ್ಚಿನ ಸಕ್ಕರೆ ಅಂಶವಿರುವ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಠಾತ್ ಹೆಚ್ಚಿಸಲು ಕಾರಣವಾಗಬಹುದು ಎಂಬುದು ನಿಜವಾಗಿದ್ದರೂ, ಹಣ್ಣನ್ನು ತಿನ್ನಬಾರದು ಎಂದಲ್ಲ. ಅಲ್ಲದೆ ಹಣ್ಣುಗಳು ಅಗತ್ಯ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅಂಶವನ್ನು ನೀಡುತ್ತವೆ, ಹಾಗಾಗಿ ತಜ್ಞರು ಮಧುಮೇಹ ನಿರ್ವಹಣೆಗೆ ಸುರಕ್ಷಿತವಾದ ಕಡಿಮೆ ಸಕ್ಕರೆ ಅಂಶವಿರುವ ಹಣ್ಣುಗಳ ವರ್ಗವನ್ನು ಗುರುತಿಸಿದ್ದು, ಮಧುಮೇಹಿಗಳು ತಮ್ಮ ಆರೋಗ್ಯದಲ್ಲಿ ರಾಜಿ ಮಾಡಿಕೊಳ್ಳದೆ ಹಣ್ಣುಗಳ ಪ್ರಯೋಜನಗಳನ್ನು ಆನಂದಿಸಬಹುದು. ಹಾಗಾಗಿ ಈ ಬಗ್ಗೆ ಹೆಲ್ತ್ ಶಾಟ್ಸ್ ಬೆಂಗಳೂರಿನ ಸರ್ಜಾಪುರದ ಮದರ್ ಹುಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಡಯಟೀಷಿಯನ್ ಮತ್ತು ಪೌಷ್ಟಿಕ ತಜ್ಞೆ ದೀಪಿಕಾ ಜಯಸ್ವಾಲ್ ಅವರು ಮಧುಮೇಹಿಗಳಿಗಾಗಿ ಕಡಿಮೆ ಸಕ್ಕರೆ ಅಂಶವಿರುವ ಅತ್ಯುತ್ತಮ ಹಣ್ಣುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.
ಸ್ಟ್ರಾಬೆರಿ, ಬ್ಲೂಬೆರಿ ಮತ್ತು ರಾಸ್ಪ್ಬೆರಿಗಳಂತಹ ಬೆರ್ರಿ ಹಣ್ಣುಗಳು ರುಚಿಕರ ಮಾತ್ರವಲ್ಲ, ಸಕ್ಕರೆ ಅಂಶ ಕೂಡ ಅಸಾಧಾರಣವಾಗಿ ಕಡಿಮೆ ಇದೆ. ಅವು ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿವೆ. ಅವು ಕಡಿಮೆ ಕಾರ್ಬೋಹೈಡ್ರೇಟ್ಗಳನ್ನು ಸಹ ಹೊಂದಿರುತ್ತವೆ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತವೆ, ಇದು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತ ಆಯ್ಕೆಯಾಗಿದೆ. ಮೊಸರು, ಓಟ್ ಮೀಲ್, ಸ್ಮೂಥಿಗಳಿಗೆ ಅಥವಾ ಸರಳವಾಗಿ ಲಘು ಆಹಾರವಾಗಿ ಸೇರಿಸುವ ಮೂಲಕ ನೀವು ಬೆರ್ರಿಗಳನ್ನು ವಿವಿಧ ರೂಪಗಳಲ್ಲಿ ಆನಂದಿಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದೆ ನಿಮ್ಮ ಕಡುಬಯಕೆಗಳನ್ನು ಪೂರೈಸಲು ಸಹ ಸಹಾಯ ಮಾಡುತ್ತವೆ.
ಸೇಬು ವ್ಯಾಪಕವಾಗಿ ಸೇವಿಸುವ ಹಣ್ಣುಗಳಲ್ಲಿ ಒಂದಾಗಿದೆ ಮತ್ತು ಅವುಗಳು ನೈಸರ್ಗಿಕ ಸಿಹಿಗೆ ಹೆಸರುವಾಸಿಯಾಗಿದೆ. ಇತರ ಅನೇಕ ಹಣ್ಣುಗಳಿಗೆ ಹೋಲಿಸಿದರೆ ಅವುಗಳಲ್ಲಿ ಸಕ್ಕರೆ ತುಲನಾತ್ಮಕವಾಗಿ ಕಡಿಮೆ. ಅವು ಕರಗುವ ಫೈಬರ್ ಅನ್ನು ಹೊಂದಿರುತ್ತವೆ, ಇದು ಜೀರ್ಣಕ್ರಿಯೆ ಮತ್ತು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸೇಬುಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (ಜಿಐ) ಹೊಂದಿರುವ ಹಣ್ಣು, ಅಂದರೆ ಅವು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ. ಫೈಬರ್ ಅಂಶದಿಂದ ಪ್ರಯೋಜನ ಪಡೆಯಲು ಸೇಬಿನ ರಸ ಅಥವಾ ಸೇಬು ಸಾಸ್ ಬದಲಿಗೆ ಸೇಬು ಹಣ್ಣುಗಳನ್ನು ಆರಿಸಿ.
ಪೇರಳೆ ಮಧುಮೇಹಿಗಳಿಗೆ ಮತ್ತೊಂದು ಒಳ್ಳೆಯ ಆಯ್ಕೆಯಾಗಿದೆ. ಅವು ಕರಗುವ ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ ಮತ್ತು ಸಕ್ಕರೆ ಅಂಶ ಕಡಿಮೆ ಇರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಅವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಸಹ ಹೊಂದಿವೆ, ಹಾಗಾಗಿ ಇದು ನಿಮ್ಮ ಸಕ್ಕರೆ ತಿನ್ನುವ ಕಡುಬಯಕೆಯನ್ನು ನಿಯಂತ್ರಿಸುತ್ತದೆ. ಪೇರಳೆ ಹಣ್ಣಿನ ಫೈಬರ್ ಅಂಶವು ಸಕ್ಕರೆಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ, ಹೊಟ್ಟೆ ತುಂಬಿದ ಭಾವನೆಯನ್ನು ಉತ್ತೇಜಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪೇರಳೆ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಆನಂದಿಸಬಹುದು.
ಇದನ್ನೂ ಓದಿ:ಮಧುಮೇಹಿಗಳು ಕಲ್ಲಂಗಡಿ ಹಣ್ಣು ತಿನ್ನುವುದು ಎಷ್ಟು ಸುರಕ್ಷಿತ?
ದಾಳಿಂಬೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (ಜಿಐ) ಮತ್ತು ಗ್ಲೈಸೆಮಿಕ್ ಲೋಡ್ (ಜಿಎಲ್) ಅನ್ನು ಹೊಂದಿರುತ್ತದೆ, ಇದು ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಹೊಂದಿರುವ ವ್ಯಕ್ತಿಗಳಿಗೆ ಉಪಯುಕ್ತವಾಗಿದೆ. ಸಕ್ಕರೆ ಕಡಿಮೆ ಇರುವುದಲ್ಲದೆ, ಇದು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಇವೆಲ್ಲವೂ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಸಕ್ಕರೆ ಸೇರಿಸದೆ ದಾಳಿಂಬೆ ರಸವನ್ನು ಮಿತವಾಗಿ ಆನಂದಿಸಬಹುದು, ಅಥವಾ ನೀವು ದಾಳಿಂಬೆ ಬೀಜಗಳನ್ನು ಸಹ ತಿನ್ನಬಹುದು.
ಕಿತ್ತಳೆಯನ್ನು ಮಿತವಾಗಿ ಸೇವಿಸಿದಾಗ, ಮಧುಮೇಹ ಸ್ನೇಹಿ ಆಹಾರದ ಭಾಗವಾಗಬಹುದು. ಅವು ವಿಟಮಿನ್ ಸಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಸಕ್ಕರೆ ಅಂಶವು ಕಡಿಮೆಯಿದ್ದರೂ, ಜಾಗರೂಕರಾಗಿರುವುದು ಮುಖ್ಯ. ನೀವು ಕಿತ್ತಳೆಯನ್ನು ಲಘು ಆಹಾರವಾಗಿ ಆನಂದಿಸಬಹುದು ಅಥವಾ ಹಣ್ಣಿನ ಸಲಾಡ್ ಗಳಿಗೆ ಸೇರಿಸಬಹುದು.
ಕಡಿಮೆ ಸಕ್ಕರೆ ಅಂಶವಿರುವ ಹಣ್ಣುಗಳನ್ನು ಸೇವಿಸುವಾಗ ಸಹ ನಿಯಂತ್ರಣ ಮುಖ್ಯವಾಗುತ್ತದೆ. ಏಕೆಂದರೆ ಕಡಿಮೆ ಸಕ್ಕರೆ ಅಂಶವಿರುವ ಹಣ್ಣುಗಳನ್ನು ಅತಿಯಾಗಿ ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಸ್ಪೈಕ್ಗೆ ಕಾರಣವಾಗಬಹುದು. ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದು ಆರೋಗ್ಯ ಕಾಪಾಡಿಕೊಳ್ಳಲು ಆಹಾರ ತಜ್ಞರನ್ನು ಸಂಪರ್ಕಿಸುವುದು ಯಾವಾಗಲೂ ಒಳ್ಳೆಯದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: