
ಲೇಹ್ ಲಡಾಖ್ ಸುತ್ತಾಟ; ಭಾಗ – 1
ಎತ್ತ ನೋಡಿದರೂ ಪರ್ವತಗಳ ಸಾಲು. ಬೆಳ್ಳಿಯ ಕಿರೀಟವನ್ನು ಹೊತ್ತುಕೊಂಡಿವೆಯೋ ಎಂಬಂತೆ ದೂರದಲ್ಲಿ ಕಾಣಿಸುವ ಹಿಮ ಶಿಖರಗಳು. ಬೆಟ್ಟಗುಡ್ಡಗಳ ಅಂಚಿನಲ್ಲಿ ಹಾವಿನಂತೆ ಸುತ್ತಿ ಬಳಸಿಕೊಂಡಿರುವ ರಸ್ತೆಗಳು. ಕಣ್ಣು ಹಾಯಿಸಿದಷ್ಟೂ ಕಾಣುವ ಕಣಿವೆ ಪ್ರದೇಶ. ಅಲ್ಲೋ ಇಲ್ಲೋ ತಗ್ಗು ಪ್ರದೇಶಗಳು ಒಂದಾಗುವ ಜಾಗದಲ್ಲಿ ಒಂದಷ್ಟು ಹಸಿರು. ಅವುಗಳ ಮಧ್ಯೆ ಹತ್ತಾರು ಕಟ್ಟಡಗಳು. ಭಾರತದ ಭೂಪಟದ ಮೇಲ್ಭಾಗದಲ್ಲಿ ನೋಡಿದರೆ ಬಲ ಭಾಗದ ಅಂಚಿನಲ್ಲಿ ಕಾಣುವ ಲೇಹ್ ಲಡಾಖ್ (Leh Ladakh) ಕೇಂದ್ರಾಡಳಿತ ಪ್ರದೇಶದ (Union Territory) ಉದ್ದಗಲಕ್ಕೂ ಕಾಣಿಸುವ ವಿಹಂಗಮ ದೃಶ್ಯಗಳಿವು. ಎಲ್ಲೆಂದರಲ್ಲಿ ಹಸಿರು ಕಾಣದ ಪರ್ವತಗಳು, ಹಿಮಶಿಖರಗಳೇ ಗೋಚರಿಸುವುದರಿಂದ ಇದನ್ನು ಭಾರತದ ಬೆಳ್ಳಿ ಕಿರೀಟ ಎಂದರೆ ತಪ್ಪಾಗಲಾರದೇನೋ.
ಈ ಪ್ರದೇಶ ಹೊಂದಿರುವ ಅಗಾಧ ಪ್ರಾಕೃತಿಕ ಸೌಂದರ್ಯ, ಪ್ರವಾಸೋದ್ಯಮ ಅವಕಾಶ ಅಷ್ಟಿಷ್ಟಲ್ಲ. ದೇಶದ ಭದ್ರತೆಯ ದೃಷ್ಟಿಯಿಂದಲೂ ಈ ಜಾಗಕ್ಕಿರುವ ವ್ಯೂಹಾತ್ಮಕ ಮಹತ್ವ ಕಡಿಮೆಯೇನಲ್ಲ. ಸುತ್ತಾಟ, ಚಾರಣ, ಬೈಕ್ ರೈಡಿಂಗ್ ಇಷ್ಟಪಡುವವರಂತೂ ಲೇಹ್ ಲಡಾಖ್ ಪ್ರದೇಶಕ್ಕೆ ಭೇಟಿ ನೀಡದೇ ಇರಲು ಕಾರಣಗಳೇ ಇಲ್ಲವೆನ್ನಬಹುದು. ಲೇಹ್ ಲಡಾಖ್ಗೆ ಇತ್ತೀಚೆಗೆ ಪ್ರವಾಸ ತೆರಳಿದ್ದಾಗ ಕಂಡುಕೊಂಡ ವಿಚಾರಗಳ, ವಿಸ್ಮಯಗಳ ಮತ್ತು ಅನುಭವಗಳ ಮೂಟೆ ಇಲ್ಲಿದೆ.
ಇಂಡಸ್ ನದಿಯಲ್ಲಿ ರಾಫ್ಟಿಂಗ್
ಲೇಹ್ ಪಟ್ಟಣದಿಂದ ಸರಿಸುಮಾರು 33 ಕಿಲೋಮೀಟರು ದೂರದಲ್ಲಿ ಇಂಡಸ್ ಮತ್ತು ಝಾನ್ಸ್‌ಕರ್ ನದಿಯ ಸಂಗಮ ಸ್ಥಳವಿದೆ. ಸಂಗಮ ಸ್ಥಳ ತಲುಪಲು ರಾಷ್ಟ್ರೀಯ ಹೆದ್ದಾರಿ 1ರ (ಲೇಹ್, ಕಾರ್ಗಿಲ್, ಶ್ರೀನಗರ ಹೆದ್ದಾರಿ) ಮೂಲಕ ಸಂಚರಿಸಬೇಕು. ಲೇಹ್ ಲಡಾಖ್ ಪ್ರವಾಸ ಕೈಗೊಂಡವರು ಇಲ್ಲಿಗೆ ಭೇಟಿ ನೀಡದಿರುವ ಸಾಧ್ಯತೆ ಕಡಿಮೆ. ಸಮುದ್ರಮಟ್ಟದಿಂದ ಅತಿ ಎತ್ತರದಲ್ಲಿರುವ (ಸುಮಾರು 11,500 ಅಡಿಗಿಂತಲೂ ಎತ್ತರ) ರಿವರ್ ರಾಫ್ಟಿಂಗ್ ಸ್ಥಳವೆಂದು ಇದು ಪ್ರಸಿದ್ಧಿ ಪಡೆದಿದೆ. ಇಲ್ಲಿ ಸುಮಾರು ಹತ್ತರಿಂದ ಹದಿನಾರು ಕಿಲೋಮೀಟರ್ಗಳಷ್ಟು ರಿವರ್ ರಾಫ್ಟಿಂಗ್ ಮಾಡಲು ಅವಕಾಶವಿದೆ. ಒಂದೆಡೆ ತಣ್ಣನೆ ಬೀಸುವ ಕುಳಿರ್ಗಾಳಿ, ಮತ್ತೊಂದೆಡೆ ಮೈ ಕೊರೆಯುವಷ್ಟು ತಣ್ಣನೆಯ ನೀರು. ಇವುಗಳ ಮಧ್ಯೆ ರಾಫ್ಟಿಂಗ್ ಮಾಡುವ ಅನುಭವ ಅದ್ಭುತವೆಂದು ಬೇರೆ ಹೇಳಬೇಕಿಲ್ಲ.
ಮ್ಯಾಗ್ನೆಟಿಕ್ ಹಿಲ್
ಸಂಗಮ ಸ್ಥಳದಿಂದ ಲೇಹ್ ಪಟ್ಟಣಕ್ಕೆ ವಾಪಸಾಗುವ ಮಾರ್ಗದಲ್ಲಿ ಮ್ಯಾಗ್ನೆಟಿಕ್ ಹಿಲ್ ಎಂಬ ಪ್ರದೇಶ ಕಾಣಸಿಗುತ್ತದೆ. ನುಣುಪಾದ ಪರ್ವತ ಸಾಲು, ವಿವ್ ಪಾಯಿಂಟ್ನಿಂದ ಪ್ರವಾಸಿಗರ ಸೆಳೆಯುವ ಈ ಪ್ರದೇಶದಲ್ಲಿ ಗುರುತ್ವಾಕರ್ಷಣ ಶಕ್ತಿಗೆ ಸಂಬಂಧಿಸಿದ ವಿಶೇಷ ಒಂದಿದೆ. ನಿರ್ದಿಷ್ಟ ಜಾಗ ಒಂದರಲ್ಲಿ ವಾಹನವನ್ನು ನ್ಯೂಟ್ರಲ್ನಲ್ಲಿಟ್ಟು ನಿಲ್ಲಿಸಿದರೆ ಅದು ಇಳಿಜಾರಿನತ್ತ ಸಾಗುವ ಬದಲು ಏರಿನ ಕಡೆಗೆ ತುಸುದೂರ ಸಾಗುತ್ತದೆ. ವಾಹನ ಸವಾರರು ಈ ವಿಶೇಷವನ್ನು ಪರೀಕ್ಷಿಸುವ ದೃಶ್ಯ ಇಲ್ಲಿ ಸರ್ವೇಸಾಮಾನ್ಯ. ನಮ್ಮದು ದ್ವಿಚಕ್ರ ವಾಹನವಾದ್ದರಿಂದ ಪರೀಕ್ಷಿಸಿ ನೋಡುವುದು ಸಾಧ್ಯವಾಗಿಲ್ಲವಷ್ಟೆ.
ಇದಾದ ನಂತರ ತುಸು ಮುಂದುವರಿದಾಗ ಗುರುದ್ವಾರ ಪಥಾರ್ ಸಾಹೀಬ್ ಕಾಣಸಿಗುತ್ತದೆ. ಅಲ್ಲಿ ಪ್ರವಾಸಿಗರಿಗೆ, ಯಾತ್ರಿಕರಿಗೆ ಪ್ರಸಾದ, ಪಾನೀಯ ವ್ಯವಸ್ಥೆಯು ಇದೆ. ಭಾರತೀಯ ಸೇನೆಯು ಈ ಗುರುದ್ವಾರದ ನಿರ್ವಹಣೆ ಮಾಡುತ್ತಿದೆ. ಚಿಕ್ಕದಾದ ಒಂದು ಟ್ರಕ್ಕಿಂಗ್ ಪಾಯಿಂಟ್ ಕೂಡ ಇದೆ. ಕೆಲವೇ ನಿಮಿಷಗಳಲ್ಲಿ ಹತ್ತಿಳಿಯಬಹುದಾದಂಥ ಚಿಕ್ಕ ಬೆಟ್ಟ ಇದಾದರೂ ಸಮುದ್ರ ಮಟ್ಟದಿಂದ ಎತ್ತರದಲ್ಲಿರುವ ಪ್ರದೇಶವಾದ್ದರಿಂದ ಕೆಲವೊಬ್ಬರಿಗೆ ಉಸಿರಾಟ ಸಂಬಂಧಿತ ಸಮಸ್ಯೆ (ಆಲ್ಟಿಟ್ಯೂಡ್ ಸಿಕ್ನೆಸ್) ಎದುರಾದರೂ ಆಗಬಹುದು.
ಗುರುದ್ವಾರ ಪಥಾರ್ ಸಾಹೀಬ್ ಬಳಿಯ ಟ್ರೆಕ್ಕಿಂಗ್ ಪ್ರದೇಶ
ನಂತರ ಸಿಗುವುದೇ ಶಾಂತಿ ಸ್ತೂಪ. ಹೆಸರಿಗೆ ತಕ್ಕಂತೆಯೇ ಒಂಥರಾ ಆಹ್ಲಾದಕರ ಎನಿಸುವ ವಾತಾವರಣ ಇರುವ ಜಾಗವಿದು. ಹೆದ್ದಾರಿಯಿಂದ ಬದಿಗೆ ಸರಿದು ಒಳಮಾರ್ಗದಲ್ಲಿ ಸಂಚರಿಸುತ್ತಿದ್ದಂತೆ ಎತ್ತರವಾದ ಬೆಟ್ಟವೊಂದು ಗೋಚರಿಸುತ್ತದೆ. ಸುತ್ತು ಬಳಸಿ ಈ ಬೆಟ್ಟವನ್ನೇರುವುದೇ ಒಂದು ಅವರ್ಣನೀಯ ಆನಂದ. ಒಂದೆಡೆ, ಇನ್ನೇನು ಅಸ್ತಮಿಸಲು ಸಿದ್ಧವಾಗುತ್ತಿರುವ ಅರುಣ ತುಸುಗೆಂಪಾಗಿದ್ದರೆ ಮತ್ತೊಂದೆಡೆ ಶಾಂತಿಯ ಸಂಕೇತವೋ ಎಂಬಂತೆ ಬೃಹದಾಕಾರದಲ್ಲಿರುವ ಬುದ್ಧನ ಸ್ತೂಪ. ಇದರ ಒಳಗಡೆ ಶಾಂತಚಿತ್ತನಾಗಿ ಕುಳಿತಿರುವ ಬುದ್ಧನ ಮೂರ್ತಿ ಹಾಗೂ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಇತಿಹಾಸದ ಹಲವು ಕುರುಹುಗಳಿವೆ.
ಶಾಂತಿ ಸ್ತೂಪದ ಬುದ್ಧ
ಸಂಜೆಗೆತ್ತಲಾಯಿತು, ಬೇಗನೆ ಗಮ್ಯ ತಲುಪಬೇಕು ಎಂದು ಆತಂಕಪಡುವ ಸನ್ನಿವೇಶವಂತೂ ಲೇಹ್ ಲಡಾಖ್ ಪ್ರದೇಶದಲ್ಲಿ ಪ್ರವಾಸಿಗರಿಗೆ ಎದುರಾಗದು. ಮೇ, ಜೂನ್ ತಿಂಗಳಲ್ಲಂತೂ ಇಲ್ಲಿ ಸೂರ್ಯಾಸ್ತ ಸುಮಾರು 7.30 ಗಂಟೆಯ ಮೊದಲು ಆಗುವುದೇ ಇಲ್ಲ. ಸೂರ್ಯೋದಯ ಬಹುಬೇಗ ಆಗಿಬಿಡುತ್ತದೆ. ಐದೂವರೆ ಆರು ಗಂಟೆಯ ಒಳಗೆಲ್ಲ ಇಲ್ಲಿ ಸೂರ್ಯ ಬೆಟ್ಟಗಳ ಮರೆಯಿಂದ ಇಣುಕಿ ನೋಡಲು ಆರಂಭಿಸಿರುತ್ತಾನೆ.
ಲೇಹ್ ಪಟ್ಟಣದಿಂದ ಖರ್‌ದುಂಗ್ಲಾ ಪಾಸ್ ಮೂಲಕ ನೂಬ್ರಾ ಕಣಿವೆಯತ್ತ ಸಾಗುವ ಪ್ರಯಾಣದ ಅನುಭವವೇ ರೋಚಕ. ವಿಶ್ವದಲ್ಲಿಯೇ ಸಮುದ್ರ ಮಟ್ಟದಿಂದ ಅತಿ ಎತ್ತರದ ಮೋಟಾರು ರೈಡಿಂಗ್ ಪ್ರದೇಶ (17,582 ಅಡಿ ಎತ್ತರ) ಎಂದು ಗುರುತಿಸಲ್ಪಟ್ಟಿರುವ ಖರ್‌ದುಂಗ್ಲಾ ಪಾಸ್ ಮೂಲಕ ಪ್ರಯಾಣಿಸುವುದು ಒಂದು ರೋಚಕ ಅನುಭವ. ಸುಮಾರು 120 ಕಿಲೋಮೀಟರ್ಗಳ ಈ ಪ್ರಯಾಣದಲ್ಲಿ ಪರ್ವತ ಸಾಲುಗಳ ಅಂಚಿನಲ್ಲಿ ಸಾಗುವ ಕಿರಿದಾದ ರಸ್ತೆಯಲ್ಲಿ ಸಾಗಬೇಕು. ಒಂದು ಬದಿಯಲ್ಲಿ ಆಳವಾದ ಕಣಿವೆಗಳು, ಮತ್ತೊಂದು ಬದಿಯಲ್ಲಿ ಹಿಮಕಿರೀಟವನ್ನು ಧರಿಸಿಕೊಂಡಿರುವ ಪರ್ವತಗಳನ್ನು ನೋಡುತ್ತಾ ಸಾಗುವುದು ಒಂದೊಳ್ಳೆಯ ಅನುಭವ. ಖರ್‌ದುಂಗ್ಲಾ ಪಾಸ್ ತಲುಪುತ್ತಿದ್ದಂತೆಯೇ ಏಕಾಏಕಿ ವಾತಾವರಣ ತಣ್ಣಗಾದ ಅನುಭವವಾಗುತ್ತದೆ. ಹಿಮ ಮಳೆಯೂ ಆರಂಭವಾಗುತ್ತದೆ. ಹಿಮ ಬೆಟ್ಟಗಳ ಬದಿ ನಿಂತು ಮಂಜಿನ ರಾಶಿಯನ್ನು ಎರಚಾಡಿ ಖುಷಿಪಡಲು ಇದೊಂದು ಪ್ರಶಸ್ತ ಸ್ಥಳ.
ನಂತರ ಕಡಿದಾದ ಕಣಿವೆಯನ್ನು ಇಳಿಯುತ್ತಾ ಸಾಗಿದರೆ ಒಂದಷ್ಟು ಕಚ್ಚಾ ರಸ್ತೆ ಸಿಗುತ್ತದೆ. ಇಲ್ಲಿ ಕೆಲವು ಕಡೆ ರಸ್ತೆ ಕಾಣಿಸುತ್ತದೆ ಬಿಟ್ಟರೆ ಉಳಿದೆಲ್ಲ ಜಾಗ ಹಿಮಮಯ. ಎಲ್ಲಿ ನೋಡಿದರೂ ಹಿಮ ರಾಶಿ. ಇನ್ನೊಂದಷ್ಟು ಇಳಿಜಾರು ಪ್ರದೇಶಕ್ಕೆ ಪ್ರಯಾಣಿಸಿದ ನಂತರ ಹಿಮ ರಾಶಿ ಮಾಯವಾಗತೊಡಗುತ್ತದೆ. ಇನ್ನಷ್ಟೇ ಡಾಮರು ಕಾಣಬೇಕಿರುವ ಇಳಿಜಾರಿನ ಈ ರಸ್ತೆಗಳಲ್ಲಿ ಬೈಕ್ ರೈಡ್ ಮಾಡುವುದು ಏನೋ ಒಂಥರಾ ಖುಷಿ. ಸ್ವಲ್ಪ ಎಚ್ಚರ ತಪ್ಪಿದರೂ ಆಳವಾದ ಪ್ರಪಾತಕ್ಕೆ ಬಿದ್ದುಬಿಟ್ಟೇವೆಂಬ ಎಚ್ಚರ ಸದಾ ಇರಲೇಬೇಕು.
ಇದಾದ ನಂತರ ಸಿಗುವುದು ಸೌತ್ ಪುಲ್ಲು. ಹಿಮಬೆಟ್ಟಗಳಿಂದ ಇಳಿದು ಬರುವ ಶುಭ್ರವಾದ ತಿಳಿನೀರ ಸೌಂದರ್ಯ ಆಸ್ವಾದನೆಗೆ ಈ ಜಾಗ ಹೇಳಿ ಮಾಡಿಸಿದಂತಿದೆ. ಮುಂದುವರಿಯುತ್ತಿದ್ದಂತೆಯೇ ನುಣುಪಾದ ಟಾರು ರಸ್ತೆ ಪ್ರಯಾಣದ ಖುಷಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕಣ್ಣು ಹಾಯಿಸಿದಷ್ಟು ತುದಿಗಾಣದ ನೂಬ್ರಾ ಕಣಿವೆ ಗೋಚರಿಸತೊಡಗುತ್ತದೆ. ಒಂದು ಬದಿಯಿಂದ ಕಣಿವೆಯ ಇಳಿದು ಮುಂದುವರಿಯುವಾಗ ಕಂಡ ಅಚ್ಚರಿಯೇನು ಗೊತ್ತೇ? ಮುಂದಿನ ಭಾಗದಲ್ಲಿ ನಿರೀಕ್ಷಿಸಿ.
ಮುಂದಿನ ಭಾಗದಲ್ಲಿ: ನೂಬ್ರಾ ಕಣಿವೆ ಎಂಬ ಪ್ರಕೃತಿ ಸೌಂದರ್ಯ, ವೈರುಧ್ಯಗಳ ಖನಿ!
ಪ್ರವಾಸ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಮತ್ತಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Wed, 19 July 23