Leh Ladakh: ಚಂಗ್ಲಾ ಪಾಸ್ ಎಂಬ ಬೆಳ್ಳಿ ಬೆಟ್ಟದಲ್ಲೊಂದು ಮಂಜಿನ ಸರೋವರ!

|

Updated on: Jul 21, 2023 | 9:52 PM

ಲೇಹ್ ಮಾರುಕಟ್ಟೆ ಸ್ವಚ್ಛ, ಸುಂದರ. ಈ ಪ್ರದೇಶದಲ್ಲಿ ಹುಡುಕಿದರೂ ಕೊಳಕು, ಗಲೀಜು ಕಾಣಸಿಗದು. ಹೆಚ್ಚೇಕೆ ಒಂದು ತುಣುಕು ಕಸ ಸಹ ಬೀದಿಯಲ್ಲಿ ಕಾಣಲಾರದು. ಇಲ್ಲಿನ ಜನರ ನೈರ್ಮಲ್ಯ ಪ್ರಜ್ಞೆ ಬಹಳ ಮೇಲ್ಮಟ್ಟದ್ದು.

Leh Ladakh: ಚಂಗ್ಲಾ ಪಾಸ್ ಎಂಬ ಬೆಳ್ಳಿ ಬೆಟ್ಟದಲ್ಲೊಂದು ಮಂಜಿನ ಸರೋವರ!
ಸೋಲ್ತಕ್ ಲೇಕ್
Follow us on

ಲೇಹ್ ಲಡಾಖ್ ಸುತ್ತಾಟ; ಭಾಗ – 3

ಪ್ಯಾಂಗಾಂಗ್‌ನಿಂದ ಲೇಹ್‌ಗೆ ಮರಳಲು ಚಂಗ್ಲಾ ಪಾಸ್ (Chang La Pass) ಬೆಟ್ಟ ಏರಿ ಇಳಿಯಬೇಕು. ಒಂದಷ್ಟು ಕಚ್ಚಾ ರಸ್ತೆ, ಟಾರು ರಸ್ತೆಯಲ್ಲಿ ಸಂಚರಿಸಿ ಬೆಟ್ಟ ಏರಲು ಆರಂಭಿಸಿದರೆ ಮೊದಲಿಗೆ ‘ಸೋಲ್ತಕ್ ಲೇಕ್ (Tso Ltak Lake)‘ ಸಿಗುತ್ತದೆ. ಇಲ್ಲಿ ಸರೋವರಕ್ಕೆ ಇಳಿದು ನಡೆದಾಡಿದರೂ ನಾವು ಮುಳುಗಲಾರೆವು! ಯಾಕೆಂದರೆ ಅದರಲ್ಲಿರುವುದು ಮಂಜುಗಡ್ಡೆ ಹಾಗೂ ಮಂಜಿನ ರಾಶಿಯಷ್ಟೆ‌. ಪ್ರವಾಸಿಗರು ಇಲ್ಲಿ ಮಂಜಿನ ರಾಶಿಯಲ್ಲಿ ಸಂಭ್ರಮಿಸಿ ಮುಂದುವರಿಯುತ್ತಾರೆ. ನಂತರ ರಸ್ತೆಯ ಇಕ್ಕೆಲಗಳಲ್ಲಿ ಹಿಮ ರಾಶಿಯ ದರ್ಶನವಾಗುತ್ತದೆ. ಮಾರ್ಗದ ಎರಡು ಬದಿಗಳಲ್ಲಿ ಬೆಳ್ಳಿಯ ಲೇಪನ ಮಾಡಲಾಗಿದೆಯೋ ಎಂಬಂತೆ ಭಾಸವಾಗುತ್ತದೆ. ಅಷ್ಟರಲ್ಲಿ ಚಂಗ್ಲಾ ಪಾಸ್ ತಲುಪಿರುತ್ತೇವೆ. ಈ ಪ್ರದೇಶ ಸಮುದ್ರ ಮಟ್ಟದಿಂದ 17,664 ಅಡಿ ಎತ್ತರದಲ್ಲಿದೆ. ಇಲ್ಲಿ ಭೌಗೋಳಿಕ ಸಂಶೋಧನಾ ಸಂಸ್ಥೆಯೊಂದನ್ನು ಭಾರತೀಯ ರಕ್ಷಣಾ ಇಲಾಖೆ ಸ್ಥಾಪಿಸಿದೆ. ಇದು ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿರುವ ಸಂಶೋಧನಾ ಸಂಸ್ಥೆ ಎಂದೆ ಪ್ರಸಿದ್ಧಿ ಪಡೆದಿದೆ.

ಬಿಆರ್‌ಒ (BRO) ಎಟ್ ಯುವರ್ ಸರ್ವೀಸ್

ಈ ರಸ್ತೆಯಲ್ಲಿ ಸಂಚರಿಸುವಾಗ ಎಲ್ಲೆಂದರಲ್ಲಿ ಕಾಣಿಸುವ ಫಲಕಗಳು ‘ಬಿಆರ್‌ಒ (BRO) ಎಟ್ ಯುವರ್ ಸರ್ವೀಸ್’ ಎಂಬುದು. ಇದರ ಅರ್ಥವಿಷ್ಟೇ, ಗಡಿ ರಸ್ತೆಗಳ ಸಂಘಟನೆ. ಲೇಹ್ ಲಡಾಖ್ ಗಡಿ ಪ್ರದೇಶಗಳಲ್ಲಿ ತರಾತುರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದನ್ನು ನಾವು ಗಮನಿಸಬಹುದು. ಎಲ್ಲೆಂದರಲ್ಲಿ ಈ ಸಂಘಟನೆಯ ಕಾರ್ಮಿಕರು ರಸ್ತೆ ನಿರ್ಮಾಣ, ಡಾಮರೀಕರಣ, ಸಂಚಾರಕ್ಕೆ ತಡೆಯುಂಟಾದಲ್ಲಿ ಅವುಗಳ ಸುಗಮ ನಿರ್ವಹಣೆ ಮಾಡುವುದನ್ನು ಕಾಣಬಹುದು. ದೇಶದ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಈ ಸಂಘಟನೆಯ ಪಾತ್ರ ದೊಡ್ಡದು.

ಥಿಕ್ಸೆ ಮೊನಾಸ್ಟ್ರಿ ಹಾಗೂ ರ‍್ಯಾಂಚೊ ಸ್ಕೂಲ್

ಇನ್ನೇನು ಲೇಹ್ ತಲುಪಲು ಕೆಲವೇ ಕಿಲೋಮೀಟರ್ ದೂರ ಇರುವಾಗ ಸಿಗುವುದೇ ಈ ಥಿಕ್ಸೆ ಮೊನಾಸ್ಟ್ರಿ ಎಂಬ ಬೌದ್ಧ ದೇಗುಲ ಹಾಗೂ ರ‍್ಯಾಂಚೊ ಸ್ಕೂಲ್. ಬೌದ್ಧ ಧರ್ಮದ ಅನುಯಾಯಿಗಳೇ ಹೆಚ್ಚಿರುವ ಲೇಹ್‌ನಲ್ಲಿ ಬೌದ್ಧ ದೇಗುಲಗಳು ಸಾಮಾನ್ಯ. ಈ ಮೊನಾಸ್ಟ್ರಿ ತುಸು ಎತ್ತರದ ಪ್ರದೇಶದಲ್ಲಿದ್ದು ಲೇಹ್ ಕಣಿವೆಯ ಸೌಂದರ್ಯ ಆಸ್ವಾದನೆಗೆ ಇದೊಂದು ಉತ್ತಮ ವ್ಯೂ ಪಾಯಿಂಟ್ ಆಗಿದೆ. ಇನ್ನು ತ್ರೀ ಈಡಿಯಟ್ಸ್ ಸಿನಿಮಾ ಶೂಟಿಂಗ್‌ನ ಭಾಗವಾದ ರ‍್ಯಾಂಚೊ ಸ್ಕೂಲ್‌ನಲ್ಲಿ ಪುಟ್ಟದೊಂದು ವಸ್ತು ಸಂಗ್ರಹಾಲಯ, ಮಾರಾಟ ಮಳಿಗೆ ಇದೆ.

ಸ್ವಚ್ಛಭಾರತದ ಕೈಗನ್ನಡಿ ಲೇಹ್ ಮಾರುಕಟ್ಟೆ

ಲೇಹ್ ಮಾರುಕಟ್ಟೆ ಸ್ವಚ್ಛ, ಸುಂದರ. ತರಹೇವಾರಿ ಆಭರಣಗಳ ಅಂಗಡಿಗಳ ಸಾಲು ಒಂದೆಡೆಯಾದರೆ, ಇನ್ನೊಂದೆಡೆ ಲೇಹ್ ಲಡಾಖ್ ಪ್ರದೇಶದ ವಿಶೇಷ ವಸ್ತುಗಳ ಮಾರಾಟ ಮಳಿಗೆಗಳು. ಸಂಜೆಗತ್ತಲಾಗುತ್ತಿದ್ದಂತೆಯೇ ಜಗಮಗಿಸುವ ವಿದ್ಯುತ್ ದೀಪಗಳು. ಲೇಹ್ ಪ್ರದೇಶದ ಸಾಂಪ್ರದಾಯಿಕ ತಿನಿಸುಗಳ ಅಂಗಡಿಗಳು, ಬೇಕರಿಗಳು ಹತ್ತಾರು. ವಿಶೇಷವೆಂದರೆ, ಜನ ಗಿಜಿಗುಟ್ಟುವ ಈ ಮಾರುಕಟ್ಟೆ ಪ್ರದೇಶದಲ್ಲಿ ಹುಡುಕಿದರೂ ಕೊಳಕು, ಗಲೀಜು ಕಾಣಸಿಗದು. ಹೆಚ್ಚೇಕೆ ಒಂದು ತುಣುಕು ಕಸ ಸಹ ಬೀದಿಯಲ್ಲಿ ಕಾಣಲಾರದು. ಇಲ್ಲಿನ ಮಾರುಕಟ್ಟೆ ಅಷ್ಟೊಂದು ಸ್ವಚ್ಛ. ಜನರ ನೈರ್ಮಲ್ಯ ಪ್ರಜ್ಞೆ ಬಹಳ ಮೇಲ್ಮಟ್ಟದ್ದು.

ಭಾಗ – 1 ಓದಲು; Leh Ladakh: ಲೇಹ್ ಲಡಾಖ್; ಕಣಿವೆಗಳ ವಿಸ್ಮಯ ಲೋಕದಲ್ಲೊಂದು ಸುತ್ತು

ಮೈತುಂಬಾ ರೋಮ ಹೊದ್ದುಕೊಂಡ ನಾಯಿಗಳು ಅಲ್ಲಲ್ಲಿ ಬಿದ್ದುಕೊಂಡು, ತಿರುಗಾಡುತ್ತಾ ಕಾಣಸಿಗುತ್ತವೆ. ಹಾಗೆಂದು, ಇವುಗಳ ಹಾವಳಿ ಹೆಚ್ಚೇನಿಲ್ಲ. ಇಲ್ಲಿನ ದನ, ಕರು, ಜಾನುವಾರುಗಳೆಲ್ಲ ಮೈತುಂಬ ರೋಮದ ಹೊದಿಕೆಯುಳ್ಳವೇ. ಚಳಿ ಪ್ರದೇಶವಾದ್ದರಿಂದ ಇಲ್ಲಿ ಇದು ಪ್ರಕೃತಿ ಸಹಜ.

ಲೇಹ್ ಅರಮನೆ

ಲೇಹ್ ಪಟ್ಟಣದ ಇನ್ನೊಂದು ಪ್ರಮುಖ ಆಕರ್ಷಣೆ ಶತಮಾನಗಳ ಹಿಂದಿನ ಅರಮನೆ. ಇದಕ್ಕೆ ಸುಮಾರು 450 ವರ್ಷಗಳಿಗಿಂತಲೂ ಹೆಚ್ಚಿನ ಐತಿಹ್ಯವಿದೆ. ಎಂಟು ಮಹಡಿಗಳ ಪುರಾತನ ಅರಮನೆಯಲ್ಲಿ ವಸ್ತು ಸಂಗ್ರಹಾಲಯವೂ ಇದ್ದು ಲಡಾಖ್ ಪ್ರದೇಶದ ಪ್ರಾಚೀನ ಬಳಕೆಯ ಅನೇಕ ವಸ್ತುಗಳನ್ನು ಇಲ್ಲಿ ಕಾಣಬಹುದು. ಶತಮಾನಗಳಷ್ಟು ಹಳೆಯದಾಗಿದ್ದರೂ ಆವಾಗಲೇ ಶೌಚಾಲಯದ ಪರಿಕಲ್ಪನೆ ಈ ಅರಮನೆಯಲ್ಲಿತ್ತು ಎಂಬುದು ಗಮನಾರ್ಹ!

ಭಾಗ – 2 ಓದಲು; Leh Ladakh: ನೂಬ್ರಾ ಕಣಿವೆಯೆಂಬ ವೈರುಧ್ಯಗಳ ಖನಿ; ಪ್ಯಾಂಗಾಂಗ್ ತ್ಸೊ ಪರ್ವತ ಸಾಗರ!

ಅದೊಂದು ಪುಟ್ಟ ಹಳ್ಳಿ. ಲಡಾಖಿ ಸಂಪ್ರದಾಯದ ಪ್ರತಿನಿಧಿಯಂತಿರುವ ಅಲ್ಲಿ ಇನ್ನೂರು ವರ್ಷಗಳ ಹಳೆಯ ಮನೆಯೊಂದಿದೆ. ಆ ಮನೆ ಹೇಳುವ ಕಥೆಯೇನು? ಅಲ್ಲಿ ಸಿಗುವ ಲಡಾಖಿ ಸಾಂಪ್ರದಾಯಿಕ ಪುಷ್ಕಳ ಭೋಜನದ ಸವಿಯೇನು? ಉತ್ತರ ಮುಂದಿನ ಭಾಗದಲ್ಲಿ.

ಮುಂದಿನ ಭಾಗದಲ್ಲಿ: ಲಡಾಖ್ ಸಂಪ್ರದಾಯದ‌ ಪ್ರತಿನಿಧಿ ಸ್ಟಾಕ್ ವಿಲೇಜ್

ಪ್ರವಾಸ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಮತ್ತಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Fri, 21 July 23