Leh Ladakh: ನೂಬ್ರಾ ಕಣಿವೆಯೆಂಬ ವೈರುಧ್ಯಗಳ ಖನಿ; ಪ್ಯಾಂಗಾಂಗ್ ತ್ಸೊ ಪರ್ವತ ಸಾಗರ!

ಒಂದೆಡೆ ಹರಿಯುವ ನದಿ, ಇನ್ನೊಂದೆಡೆ ಪಕ್ಕಾ ಮರುಭೂಮಿಯಂತೆ ಭಾಸವಾಗುವ ಮರಳಿನ ರಾಶಿ ಹಾಗೂ ಬಯಲು. ಮತ್ತೊಂದೆಡೆ ಹರಿಯುವ ತಿಳಿ ನೀರು ಹಾಗೂ ಸುಂದರ ಹಸಿರು. ದಿಢೀರಾಗಿ ಉಂಟಾಗುವ ಚಳಿ, ಬೀಸಿ ಬರುವ ಬೆಚ್ಚಗಿನ ಗಾಳಿ, ಹನಿ ಹನಿ ಸುರಿಯುವ ಸೋನೆ ಮಳೆ, ಎಲ್ಲವನ್ನೂ ಅನುಭವ ವೇದ್ಯವಾಗಿಸುವುದೇ ನೂಬ್ರಾ ಕಣಿವೆಯ ವಿಶೇಷ.

Leh Ladakh: ನೂಬ್ರಾ ಕಣಿವೆಯೆಂಬ ವೈರುಧ್ಯಗಳ ಖನಿ; ಪ್ಯಾಂಗಾಂಗ್ ತ್ಸೊ ಪರ್ವತ ಸಾಗರ!
ನೂಬ್ರಾ ಕಣಿವೆ
Follow us
Ganapathi Sharma
|

Updated on:Jul 20, 2023 | 9:21 PM

ಲೇಹ್ ಲಡಾಖ್ ಸುತ್ತಾಟ; ಭಾಗ – 2

ಲೇಹ್ ಲಡಾಖ್ (Leh Ladakh) ವ್ಯಾಪ್ತಿಯಲ್ಲಿ ಇರುವ ನೂಬ್ರಾ ಕಣಿವೆ (Nubra Valley) ನಿಜಕ್ಕೂ ಒಂದು ವಿಸ್ಮಯ. ಬಹು ದೂರಕ್ಕೆ ಹರಡಿಕೊಂಡಿರುವ ಈ ಕಣಿವೆಯಲ್ಲಿ ಹಲವು ವೈರುಧ್ಯಗಳಿವೆ. ಒಂದೆಡೆ ಹರಿಯುವ ನದಿ, ಇನ್ನೊಂದೆಡೆ ಪಕ್ಕಾ ಮರುಭೂಮಿಯೇ ಎಂದು ಭಾವಿಸುವಂತೆ ಮಾಡುವ ಮರಳಿನ ರಾಶಿ ಹಾಗೂ ಬಯಲು, ಮತ್ತೊಂದೆಡೆ ಹರಿಯುವ ತಿಳಿ ನೀರು ಹಾಗೂ ಸುಂದರ ಹಸಿರು. ದಿಢೀರಾಗಿ ಉಂಟಾಗುವ ಚಳಿ, ಅಷ್ಟೇ ಬೇಗನೆ ಬೀಸಿ ಬರುವ ಬೆಚ್ಚಗಿನ ಗಾಳಿ, ಹನಿ ಹನಿ ಸುರಿಯುವ ಸೋನೆ ಮಳೆ, ಎಲ್ಲವೂ ಈ ಕಣಿವೆಯಲ್ಲಿ ಅನುಭವಕ್ಕೆ ಬರುತ್ತವೆ.

ಕಣಿವೆಯ ಒಂದು ಪಾರ್ಶ್ವದಲ್ಲಿರುವ ‘ಹುಂದರ್’ ಎಂಬ ಪ್ರದೇಶವಂತೂ ಪಕ್ಕಾ ಮರುಭೂಮಿಯೇ! ಮರಳುದಿಬ್ಬಗಳ ವಿಸ್ಮಯ ಲೋಕವೇ ಅಲ್ಲಿದೆ. ಮರುಭೂಮಿಯಲ್ಲಿರುವಂತೆ ಒಂಟೆ ಸವಾರಿಯನ್ನೂ ಅಲ್ಲಿ ಕಾಣಬಹುದು, ಮಾಡಬಹುದು.

ನೂಬ್ರಾ ಕಣಿವೆಯ ವಿಹಂಗಮ ನೋಟ

ಕಣಿವೆಯ ಒಂದು ಪಾರ್ಶ್ವದಲ್ಲಿ ತುಸು ಎತ್ತರದ ಜಾಗದಲ್ಲಿ ಬೌದ್ಧ ಮಂದಿರವಿದೆ. ಈ ಜಾಗಕ್ಕೆ ಡಿಸ್ಕಿತ್ ಗೋಂಪಾ ಎಂದು ಹೆಸರು. ಕಣಿವೆಯಲ್ಲಿ ಪ್ರವಾಸಿಗಳಿಗೆ ತಂಗಲು ವಿವಿಧ ಹೋಂ ಸ್ಟೇಗಳು, ರೂಂಗಳ ವ್ಯವಸ್ಥೆ ಇದೆ. ಆಧುನಿಕ ಪ್ರಪಂಚದ ಇತರೆಡೆಗಳಲ್ಲಿ ಕಾಣುವ ಅಭಿವೃದ್ಧಿಯ ಓಟಕ್ಕೆ ಈ ಕಣಿವೆ ಈಗಷ್ಟೇ ತೆರೆದುಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ನೂಬ್ರಾದಿಂದ ಪ್ಯಾಂಗಾಂಗ್‌ಗೆ ದುರ್ಗಮ ಹಾದಿ

ನೂಬ್ರಾದಿಂದ ಪ್ಯಾಂಗಾಂಗ್​ಗೆ ತೆರಳುವ ಹಾದಿ

ನೂಬ್ರಾ ಕಣಿವೆಯಿಂದ ಪ್ಯಾಂಗಾಂಗ್‌ಗೆ ಸುಮಾರು 160 ಕಿಲೋಮೀಟರ್​​ಗಳ ದುರ್ಗಮ ರಸ್ತೆಯಲ್ಲಿ ಸಾಗಬೇಕು. ಕಿರಿದಾದ ರಸ್ತೆಯಲ್ಲಿ ಬೆಟ್ಟಗಳ ಮಧ್ಯೆ ಸಂಚರಿಸುವಾಗ ಎಲ್ಲಿ ಬಂಡೆಗಳು ನಮ್ಮ ಮೇಲೆ ಬಿದ್ದುಬಿಡುತ್ತವೆಯೋ ಎಂಬ ಭೀತಿ ಆವರಿಸುವುದು ಸುಳ್ಳಲ್ಲ. ಕೆಲವೊಂದು ಕಡೆ ಗುಡ್ಡಜರಿತ, ಭೂಕುಸಿತ ಇತ್ಯಾದಿಗಳ ಕಾರಣಕ್ಕೆ ಗಂಟೆಗಟ್ಟಲೆ ಮಾರ್ಗ ಮಧ್ಯೆ ಕಾಯಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಒಂದಷ್ಟು ಕಡಿದಾದ ಮಾರ್ಗ ಕ್ರಮಿಸಿದ ಮೇಲೆ ‘ಆಗಮ್‌‌’ ಎಂಬ ಪುಟ್ಟ ಊರು ಸಿಗುತ್ತದೆ. ಅಲ್ಲಿ ದಣಿವಾರಿಸಿಕೊಂಡು, ಕಣಿವೆಯ ತಳ ಭಾಗದ ಉಂಡೆ ಕಲ್ಲುಗಳು, ಮರಳಿನಿಂದ ಕೂಡಿದ ಕಚ್ಚಾ ರಸ್ತೆಯಲ್ಲಿ ಪ್ರಯಾಣಿಸಬೇಕು. ನಂತರ ನದಿ ತಟದಲ್ಲಿ ಬೃಹತ್ ಗಾತ್ರದ ಬಂಡೆಗಳ ನಡುವೆ ನಿರ್ಮಿಸಿರುವ ಏರುತಗ್ಗಿನ ಟಾರು ರಸ್ತೆಯಲ್ಲಿ ಸಂಚರಿಸಬೇಕು. ಇದಾದ ನಂತರ ಸಿಗುವುದೇ ‘ದುರ್ಬುಕ್’ ಪ್ರದೇಶ. ಇಲ್ಲಿ ಮತ್ತೆ ಶಿಖರಗಳನ್ನು ಏರಲು ಆರಂಭಿಸಿದರೆ ಸಿಗುವುದು ಆಳವಾದ ಕಣಿವೆಗಳ ನಡುವಣ ಕಡಿದಾದ ಹಾದಿ. ಇವುಗಳನ್ನೆಲ್ಲ ದಾಟಿ ಮುಂದುವರಿದ ಮೇಲೆ ಮತ್ತೆ ಕಚ್ಚಾ ರಸ್ತೆಯ ಪಯಣ. ಮಣ್ಣು ಕಲ್ಲುಗಳು, ಮರಳಿನಿಂದಲೇ ಕೂಡಿದ ಈ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಓಡಿಸಬೇಕಿದ್ದರಂತೂ ತುಸುವಾದರೂ ಸಾಹಸ ಪ್ರವೃತ್ತಿಯವರಾಗಿರಲೇಬೇಕು. ಅಷ್ಟೇ ನಯ ನಾಜೂಕಿನ ಅಗತ್ಯವೂ ಇದೆ.

ನೂಬ್ರಾದಿಂದ ಪ್ಯಾಂಗಾಂಗ್​ಗೆ ತೆರಳುವ ಹಾದಿ

ಇನ್ನೇನು ಪ್ಯಾಂಗಾಂಗ್‌ ತ್ಸೊ ಸರೋವರ ಸಮೀಪಿಸುತ್ತದೆ ಎನ್ನುವಷ್ಟರಲ್ಲಿ ಗೋಚರವಾಗುವ ದೃಶ್ಯಗಳಂತೂ ಪರಮಾದ್ಭುತ. ಸರೋವರದ ಒಂದು ಬದಿಯಲ್ಲಿ ಕಿರಿದಾದ ಡಾಮರು ರಸ್ತೆಯಲ್ಲಿ ಬೈಕ್ ಪ್ರಯಾಣವಂತು ರೋಚಕ. ಎಡಬದಿಗೆ ನೀಲಿ ಬಣ್ಣದಲ್ಲಿ ಕಾಣುವ ಸರೋವರ, ಬಲಬದಿಯಲ್ಲಿ ಕಾಣುವ ಹಿಮ ಬೆಟ್ಟಗಳು ಮೈ ನವಿರೇಳಿಸುತ್ತವೆ. ಇವುಗಳ ನಡುವೆ ಸಂಚರಿಸುತ್ತಿದ್ದಂತೆಯೇ ಅಲ್ಲಲ್ಲಿ ಮರದ ಹಲಗೆ, ಪಟ್ಟಿಗಳಿಂದ ನಿರ್ಮಿಸಿರುವ ಚಿಕ್ಕ ಪುಟ್ಟ ಕಾಟೇಜುಗಳು, ಶಿಬಿರಗಳು ಕಾಣಿಸುತ್ತವೆ.

ಪ್ಯಾಂಗಾಂಗ್‌ ತ್ಸೊ ಸರೋವರ ಎಂಬ ಸೋಜಿಗ!

ಪ್ಯಾಂಗಾಂಗ್ ತ್ಸೊ ಸರೋವರ

ಚೀನಾ ಗಡಿಯಿಂದ 10-20 ಮೈಲಿ ಆಸುಪಾಸಿನಲ್ಲಿ ಪ್ಯಾಂಗಾಂಗ್‌ ಸರೋವರ ಇದೆ. ಕಣ್ಣು ಹಾಯಿಸಿದಷ್ಟೂ ತುದಿ ಕಾಣದ ಈ ಸರೋವರ ಅಕ್ಷರಶಃ ಪರ್ವತಗಳ ಮೇಲಿನ ಸಾಗರದಂತೆ ನೋಡುಗರಿಗೆ ಭಾಸವಾದರೆ ಅಚ್ಚರಿಯೇನಿಲ್ಲ. ಕೆಲವು ವರದಿಗಳ ಪ್ರಕಾರ, ಇದರ ಶೇ 30ರಷ್ಟು ಭಾಗ ಭಾರತದ ವ್ಯಾಪ್ತಿಯಲ್ಲಿದ್ದರೆ, ಇನ್ನುಳಿದ ಶೇ 70ರಷ್ಟು ಚೀನಾ ವ್ಯಾಪ್ತಿಯಲ್ಲಿದೆ. ಸರೋವರದ ಇನ್ನೊಂದು ಅಂಚಿನಲ್ಲಿ ಕಾಣುವ ಕೆಲ ಬೆಟ್ಟ ಗುಡ್ಡಗಳು ಭಾರತ-ಚೀನಾ ನಡುವಣ ವಿವಾದಿತ ಗಡಿ ಪ್ರದೇಶವಾಗಿದೆ ಎನ್ನುತ್ತಾರೆ ಸ್ಥಳೀಯರು. ಈ ಸರೋವರದಲ್ಲಿ ಭಾರತೀಯ ಸೇನೆಯ ಬೋಟ್ ಒಂದು ಆಗಾಗ್ಗೆ ಗಸ್ತು ಕಾರ್ಯಾಚರಣೆ ನಡೆಸುತ್ತಿರುವುದನ್ನು ಕಾಣಬಹುದು. 2020ರ ಜೂನ್ ತಿಂಗಳಲ್ಲಿ ಭಾರತೀಯ ಯೋಧರು ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ಗಾಲ್ವನ್ ಕಣಿವೆ ಇಲ್ಲಿಂದ ಕೆಲವೇ ಮೈಲಿಗಳ ದೂರದಲ್ಲಿದೆ.

ಪ್ಯಾಂಗಾಂಗ್ ತ್ಸೊ ಸರೋವರ

ಪ್ಯಾಂಗಾಂಗ್ ತ್ಸೊ ಸರೋವರ ಸಮುದ್ರ ಮಟ್ಟದಿಂದ 4,350 ಮೀಟರ್ ಎತ್ತರದಲ್ಲಿದೆ. ಅಂದಹಾಗೆ, ಈ ಸರೋವರದಲ್ಲಿರುವುದು ಉಪ್ಪುನೀರು! ಹೌದು, ಇದು ಜಗತ್ತಿನ ಅತಿ ಎತ್ತರದ ಪ್ರದೇಶದಲ್ಲಿರುವ ಉಪ್ಪುನೀರಿನ ಸರೋವರ ಎಂದೇ ಪ್ರಸಿದ್ಧಿಪಡೆದಿದೆ. ಈ ಪ್ರದೇಶದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಕಣ್ತುಂಬಿಕೊಳ್ಳುವುದು ಒಂದು ಅದ್ಭುತ ಅನುಭವ. ಲೇಹ್ ಲಡಾಖ್‌ನ ಇತರ ಪ್ರದೇಶಗಳಂತಲ್ಲದೆ ಇಲ್ಲಿ ಸಂಜೆ 6 ಗಂಟೆಗೆಲ್ಲ ಸೂರ್ಯಾಸ್ತವಾಗುತ್ತದೆ. ಮುಂಜಾನೆ 5.15 ರ ಸುಮಾರಿಗೆ ಸೂರ್ಯೋದಯವೂ ಆಗುತ್ತದೆ. ಹೀಗಾಗಿ ಇಲ್ಲಿ ಸೂರ್ಯೋದಯ ನೋಡಬೇಕಿದ್ದರೆ ಬಹಳ ಬೇಗನೆ ಎದ್ದೇಳಲೇಬೇಕು!

ಗಡಿ ಭಾಗಕ್ಕೇ ಇಲ್ಲ ಮೂಲಸೌಕರ್ಯ!

ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ, ವ್ಯೂಹಾತ್ಮಕವಾಗಿಯೂ ಭಾರತಕ್ಕೆ ಬಹುಮುಖ್ಯವಾಗಿರುವ ಈ ಪ್ರದೇಶದಲ್ಲಿರುವ ಮೂಲಸೌಕರ್ಯ ವ್ಯವಸ್ಥೆ ಅಷ್ಟಕ್ಕಷ್ಟೇ. ಸಂಚರಿಸಲು ಸರಿಯಾದ ರಸ್ತೆ ಇಲ್ಲ, ಪ್ಯಾಂಗಾಂಗ್‌ ಪ್ರದೇಶಕ್ಕಂತೂ ಇನ್ನೂ ವಿದ್ಯುತ್ ಸಂಪರ್ಕವೇ ಇಲ್ಲ. ಪ್ರವಾಸಿಗರಿಗಾಗಿ ನಿರ್ಮಿಸಿರುವ ಸಣ್ಣಪುಟ್ಟ ಕುಟೀರಗಳಲ್ಲಿ ವಿದ್ಯುತ್ತಿಗಾಗಿ ಜನರೇಟರ್ ಅವಲಂಬಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ವೇಗವಾಗಿ ಸುಧಾರಣೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ಪ್ರವಾಸಿ ಮಾರ್ಗದರ್ಶಕರು. ಪ್ಯಾಂಗಾಂಗ್‌ ವರೆಗೆ ವಿದ್ಯುತ್ ತಂತಿಗಳನ್ನು ಎಳೆಯುವ ಕಾರ್ಯ ಭರದಿಂದ ಸಾಗುತ್ತಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅದೇ ರೀತಿ ವೇಗವಾಗಿ ರಸ್ತೆ ಅಗಲೀಕರಣ, ಡಾಮರೀಕರಣವೂ ಸಾಗುತ್ತಿದೆ.

ಮುಂಬರುವ ಅಕ್ಟೋಬರ್ ತಿಂಗಳ ವೇಳೆಗೆಲ್ಲ ಇಲ್ಲಿ ಅತ್ಯುತ್ತಮವಾದ ಹೆದ್ದಾರಿ ನಿರ್ಮಾಣವಾಗಲಿದೆ. ವಿದ್ಯುತ್ ಸೌಕರ್ಯವೂ ದೊರೆಯಲಿದೆ. ಇನ್ನು ಮುಂದಿನ ದಿನಗಳಲ್ಲಿ ಬರುವ ಪ್ರವಾಸಿಗರಿಗೆ ಉತ್ತಮ ಸೌಕರ್ಯ ದೊರೆಯಲಿದೆ ಎನ್ನುತ್ತಾರೆ ಸ್ಥಳೀಯ ಪ್ರವಾಸಿ ಮಾರ್ಗದರ್ಶಕ ರಿಗ್ಜಿನ್.

ಮರ್ಮೊಟ್ ಎಂಬ ಸ್ನೇಹಜೀವಿ

ಮರ್ಮೊಟ್

ಪ್ಯಾಂಗಾಂಗ್‌ ಸರೋವರದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಕಣಿವೆ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ಮೊಲದ ಆಕೃತಿಯ ಪುಟ್ಟ ಜೀವಿಗಳು ಪಟಪಟನೆ ಓಡಾಡುತ್ತಿರುವುದು ಕಾಣಸಿಗುತ್ತದೆ. ಅವುಗಳ ಹೆಸರು ಮರ್ಮೊಟ್ ಎಂಬುದಾಗಿ. ಈ ಪ್ರಾಣಿಗಳು ಪ್ರವಾಸಿಗರ ಕ್ಯಾಮರಾ ಕಣ್ಣುಗಳಿಗೆ ಚೆಂದನೆಯ ಪೋಸ್ ನೀಡುತ್ತವೆ! ಅತ್ತಿತ್ತ ಓಡಾಡುತ್ತಾ ಜನರ ಜೊತೆ ಆಟವಾಡುತ್ತವೆ. ಕೆಲವೊಬ್ಬರು ಕೊಟ್ಟ ತಿನಿಸುನ್ನು ಸವಿಯುತ್ತವೆ. ಸಾಮಾನ್ಯವಾಗಿ ಮಾರ್ಚ್ ನಂತರ ಸೆಪ್ಟೆಂಬರ್, ಅಕ್ಟೋಬರ್‌ವರೆಗಷ್ಟೇ ಇವುಗಳು ಆ ಪ್ರದೇಶದಲ್ಲಿ ಕಾಣಿಸುತ್ತವಂತೆ. ನಂತರ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಮಣ್ಣಿನೊಳಗಡೆ ಬಿಲಗಳಲ್ಲಿ ಸೇರಿಕೊಂಡು ಬಿಟ್ಟರೆ ಹೊರಬರುವುದು ಚಳಿಗಾಲ ಮುಗಿದ ನಂತರವೇ! ಅಷ್ಟಾದರೂ ಮನುಷ್ಯರ ಜೊತೆ ಇವುಗಳು ಬೆರೆಯುವುದನ್ನು ಕಂಡಾಗ ಅಚ್ಚರಿಯಾಗದೆ ಇರದು.

ಭಾಗ – 1 ಓದಲು; Leh Ladakh: ಲೇಹ್ ಲಡಾಖ್; ಕಣಿವೆಗಳ ವಿಸ್ಮಯ ಲೋಕದಲ್ಲೊಂದು ಸುತ್ತು

ಎಲ್ಲಿ ನೋಡಿದರೂ ಮಂಜು. ಕಿರಿದಾದ ರಸ್ತೆ ಬಿಟ್ಟರೆ ಸುತ್ತಲೆಲ್ಲ ಹಿಮರಾಶಿಯೇ ಮೈತೆಳದಿರುವ ಭುವಿ. ಬೆಳ್ಳಿಯ ಕಣಗಳನ್ನೇ ಸುರಿದಿದ್ದಾರೆಯೋ ಎಂಬಂತೆ ಭಾಸವಾಗುವ ಹಿಮ ಸರೋವರ. ಇವುಗಳೆಲ್ಲ ಕಾಣಿಸಿದ್ದೆಲ್ಲಿ? ನಿರೀಕ್ಷಿಸಿ ಮುಂದಿನ ಭಾಗದಲ್ಲಿ.

ಮುಂದಿನ ಭಾಗದಲ್ಲಿ: ಚಂಗ್ಲಾ ಪಾಸ್ ಎಂಬ ಬೆಳ್ಳಿ ಬೆಟ್ಟದಲ್ಲೊಂದು ಮಂಜಿನ ಸರೋವರ!

ಪ್ರವಾಸ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಮತ್ತಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:23 pm, Thu, 20 July 23

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ