ಕುದುರೆ ಏರಿ ರೇಸ್ ಶುರು ಮಾಡಿದ ಕಿರಣ್ ರಾಜ್; ಹೊಸ ಸಿನಿಮಾ ‘ಜಾಕಿ 42’
‘ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್ ಆದ ಕಿರಣ್ ರಾಜ್ ಅವರು ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಅವರ ಹೊಸ ಸಿನಿಮಾದ ಶೀರ್ಷಿಕೆ ಬಹಿರಂಗ ಆಗಿದೆ. ‘ಜಾಕಿ 42’ ಸಿನಿಮಾದಲ್ಲಿ ಕಿರಣ್ ರಾಜ್ ಅವರಿಗೆ ಡಿಫರೆಂಟ್ ಪಾತ್ರ ಇರಲಿದೆ. ‘ರಾನಿ’ ಸಿನಿಮಾ ಖ್ಯಾತಿಯ ಗುರುತೇಜ್ ಶೆಟ್ಟಿ ಅವರು ‘ಜಾಕಿ 42’ ಸಿನಿಮಾಗೆ ನಿರ್ದೇಶಕ ಮಾಡಲಿದ್ದಾರೆ.

ಕನ್ನಡದ ಕಿರುತೆರೆಯಲ್ಲಿ ನಟ ಕಿರಣ್ ರಾಜ್ (Kiran Raj) ಅವರು ಹೆಸರು ಮಾಡಿದ್ದಾರೆ. ‘ಕನ್ನಡತಿ’ (Kannadathi) ಸೀರಿಯಲ್ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಹಾಗಂತ ಕಿರಣ್ ರಾಜ್ ಅವರು ಕಿರುತೆರೆಗೆ ಮಾತ್ರ ಸೀಮಿತವಲ್ಲ. ಹಿರಿತೆರೆಯಲ್ಲಿ ಕೂಡ ಅವರು ಆ್ಯಕ್ಟೀವ್ ಆಗಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳನ್ನು ಮಾಡಿರುವ ಅವರು ಈಗ ಹೊಸ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಕಿರಣ್ ರಾಜ್ ನಟಿಸಲಿರುವ ಹೊಸ ಸಿನಿಮಾಗೆ ‘ಜಾಕಿ 42’ (Jockey 42) ಎಂದು ಶೀರ್ಷಿಕೆ ಇಡಲಾಗಿದೆ.
ಈ ಮೊದಲು ಕಿರಣ್ ರಾಜ್ ಅವರು ‘ರಾನಿ’ ಸಿನಿಮಾ ಮಾಡಿದ್ದರು. ಆ ಸಿನಿಮಾಗೆ ನಿರ್ದೇಶಕ ಗುರುತೇಜ್ ಶೆಟ್ಟಿ ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಈಗ ಮತ್ತೆ ಕಿರಣ್ ರಾಜ್ ಮತ್ತು ಗುರುತೇಜ್ ಶೆಟ್ಟಿ ಒಂದಾಗಿದ್ದಾರೆ. ಹೌದು, ‘ಜಾಕಿ 42’ ಸಿನಿಮಾಗೆ ಗುರುತೇಜ್ ಶೆಟ್ಟಿ ಅವರು ನಿರ್ದೇಶನ ಮಾಡಲಿದ್ದಾರೆ. ‘ರಾನಿ’ ಸಿನಿಮಾದಲ್ಲಿ ಲಾಂಗ್ ಹಿಡಿದು ಮಾಸ್ ಅವತಾರ ತಾಳಿದ್ದ ಕಿರಣ್ ರಾಜ್ ಅವರು ‘ಜಾಕಿ 42’ ಚಿತ್ರದಲ್ಲಿ ಕುದುರೆ ಏರಿ ಜಾಕಿ ಆಗಲಿದ್ದಾರೆ.
‘ಜಾಕಿ 42’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಅಭಿಮಾನಿಗಳ ಕುತೂಹಲ ಹೆಚ್ಚಿಸುವಲ್ಲಿ ಈ ಪೋಸ್ಟರ್ ಯಶಸ್ವಿ ಆಗಿದೆ. ‘ರಾನಿ’ ಸಿನಿಮಾಗೆ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ಈಗ ‘ಜಾಕಿ 42’ ಚಿತ್ರದಲ್ಲಿ ಕೆಲಸ ಮಾಡಲಿದೆ. ರಾಘವೇಂದ್ರ ಬಿ. ಕೋಲಾರ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಸತೀಶ್ ಅವರು ಕಲಾ ನಿರ್ದೇಶನ ಮಾಡಲಿದ್ದಾರೆ. ಉಮೇಶ ಆರ್.ಬಿ. ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
ಭಾರತಿ ಸತ್ಯನಾರಾಯಣ ಅವರು ‘ಗೋಲ್ಡನ್ ಗೇಟ್ ಸ್ಟುಡಿಯೋಸ್’ ಮೂಲಕ ‘ಜಾಕಿ 42’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇದು ಕಮರ್ಷಿಯಲ್ ಸಿನಿಮಾವಾಗಿದ್ದು, ಶೀರ್ಷಿಕೆಯೇ ಸೂಚಿಸುವಂತೆ ಹಾರ್ಸ್ ರೇಸ್ ಹಿನ್ನೆಲೆಯ ಕಥೆ ಇರಲಿದೆ. ಇದರೊಳಗೆ ಲವ್, ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ ಕೂಡ ಇರಲಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಜೀ ಕನ್ನಡಕ್ಕೆ ಬಂದ ಕಿರಣ್ ರಾಜ್; ಬರುತ್ತಿದೆ ಹೊಸ ಧಾರಾವಾಹಿ ‘ಕರ್ಣ’
ಮೇ 15ರಂದು ‘ಜಾಕಿ 42’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಬೆಂಗಳೂರು, ಮೈಸೂರು ಹಾಗೂ ವಿದೇಶದಲ್ಲಿ ಚಿತ್ರೀಕರಣ ಮಾಡಲು ಪ್ಲ್ಯಾನ್ ಸಿದ್ಧವಾಗಿದೆ. ಟೈಟಲ್ ಪೋಸ್ಟರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯಲಾಗಿದೆ. ಕಿರಣ್ ರಾಜ್ ಜೊತೆ ಇನ್ನೂ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಿಟ್ಟುಕೊಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.