‘ಜಸ್ಟ್ ಮ್ಯಾರೀಡ್’ ಆದ ಶೈನ್ ಶೆಟ್ಟಿ; ಪಾರ್ಟಿ ಮಾಡಿಕೊಂಡು ಹಾಯಾಗಿದ್ದ ಲೈಫ್ನಲ್ಲಿ ವಿವಾಹ ಎಂಬ ಚಿಂತೆ
ಶೈನ್ ಶೆಟ್ಟಿ ಅವರು ತಮ್ಮ ಹೊಸ ಚಿತ್ರ ‘ಜಸ್ಟ್ ಮ್ಯಾರೀಡ್’ನಲ್ಲಿನ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಅವರು ಮುದ್ದಿನಿಂದ ಬೆಳೆದ, ಬ್ಯಾಚುಲರ್ ಜೀವನ ನಡೆಸುತ್ತಿದ್ದ ಯುವಕನ ಪಾತ್ರವನ್ನು ನಿರ್ವಹಿಸಿದ್ದಾರೆ. ವಿವಾಹದ ನಂತರ ಅವರ ಜೀವನದಲ್ಲಿ ಉಂಟಾಗುವ ಬದಲಾವಣೆಗಳು ಚಿತ್ರದ ಮುಖ್ಯ ಥೀಮ್ ಆಗಿದೆ.

ನಟ ಶೈನ್ ಶೆಟ್ಟಿ (Shine Shetty) ಅವರು ಕನ್ನಡದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡಿ ಅವರು ಗಮನ ಸೆಳೆದಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿ ಮೆಚ್ಚುಗೆ ಪಡೆದ ‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ಶೆಟ್ಟಿ ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದರು. ಈಗ ಅವರು ‘ಜಸ್ಟ್ ಮ್ಯಾರೀಡ್’ ಆಗಿದ್ದಾರೆ. ಹಾಗಂತ ಅವರ ವಿವಾಹ ನೆರವೇರಿಲ್ಲ. ಈ ಶೀರ್ಷಿಕೆಯಲ್ಲಿ ಬರುತ್ತಿರೋ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
‘ಇಡೀ ಫ್ಯಾಮಿಲಿಯಲ್ಲಿರೋ ಎಲ್ಲರಿಗೂ ಹೆಣ್ಣು ಮಕ್ಕಳೇ. ಅಂಥ ಕುಟುಂಬದಲ್ಲಿ ಓರ್ವ ಹುಡುಗ ಹುಟ್ಟುತ್ತಾನೆ. ಆತನನ್ನು ತುಂಬಾನೇ ಮುದ್ದಿನಿಂದ ಬೆಳೆಸಲಾಗುತ್ತದೆ. ಆತ ಹಾಯಾಗಿ ಬ್ಯಾಚುಲರ್ ಜೀವನ ನಡೆಸುತ್ತಾ ಇರುತ್ತಾನೆ. ಅಂಥವನಿಗೆ ವಿವಾಹ ಆದರೆ ಏನಾಗುತ್ತದೆ ಎಂಬುದೇ ಜಸ್ಟ್ ಮ್ಯಾರೀಡ್ ಚಿತ್ರದ ಕಥೆ’ ಎಂದಿದ್ದಾರೆ ಶೈನ್ ಶೆಟ್ಟಿ.
‘ಹೋರಿಯನ್ನು ನಿಯಂತ್ರಿಸೋಕೆ ಮೂಗುದಾರ ಹಾಕುತ್ತಾರೆ. ಅದೇ ರೀತಿ ಈತನಿಗೂ ಒಂದು ಮೂಗುದಾರ ಹಾಕೋಣ ಎಂದು ಮದುವೆ ಮಾಡುತ್ತಾರೆ. ಆತರ ಮದುವೆ ಮಾಡಿದಾಗ ಏನಾಗುತ್ತದೆ? ಅವನು ಬದಲಾಗುತ್ತಾನಾ ಎಂಬಿತ್ಯಾದಿ ವಿಚಾರಗಳನ್ನು ಹೇಳುತ್ತಾ ಇದ್ದೇವೆ’ ಎಂಬುದು ಶೈನ್ ಶೆಟ್ಟಿ ಮಾತು. ಈ ಚಿತ್ರದಲ್ಲಿ ಅಂಕಿತಾ ಅಮರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಚಿತ್ರದ ನಾಯಕಿ. ಅವರ ಜೊತೆ, ದೇವರಾಜ್ ಜೊತೆ, ಅಚ್ಯುತ್ ಕುಮಾರ್ ಹೀಗೆ ಎಲ್ಲಾ ಕಲಾವಿದರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ ಎಂಬುದು ಶೈನ್ ಶೆಟ್ಟಿ ಅಭಿಪ್ರಾಯ. ಈಗಾಗಲೇ ‘ಜಸ್ಟ್ ಮ್ಯಾರೀಡ್’ ಚಿತ್ರದ ಹಾಡುಗಳು ರಿಲೀಸ್ ಆಗಿ ಗಮನ ಸೆಳೆದಿವೆ. ಸಿನಿಮಾ ರಿಲೀಸ್ಗೆ ಈಗಾಗಲೇ ಸಕಲ ಸಿದ್ಧತೆ ನಡೆದಿದೆ.
ಇದನ್ನೂ ಓದಿ: ಗಲ್ಲಿ ಕಿಚನ್ ಪಯಣಕ್ಕೆ ವಿದಾಯ; ಶೈನ್ ಶೆಟ್ಟಿ ಭಾವುಕ ಪೋಸ್ಟ್
‘ಮರ್ಯಾದೆ ಪ್ರಶ್ನೆ’ ಚಿತ್ರದಲ್ಲಿ ಶೈನ್ ಶೆಟ್ಟಿ ಅವರು ಹೆಚ್ಚು ಹೊತ್ತು ತೆರೆಮೇಲೆ ಬರೋದಿಲ್ಲ. ಆದರೆ, ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ‘ನೀವು ಇನ್ನೂ ಸ್ವಲ್ಪ ಹೊತ್ತು ತೆರೆಮೇಲೆ ಇರಬೇಕಿತ್ತು’ ಎಂದು ಕೆಲವರು ಶೈನ್ ಅವರಿಗೆ ಹೇಳಿದ್ದು ಇದೆಯಂತೆ. ‘ಯಾವುದೇ ಪಾತ್ರ ಸಿಕ್ಕರೂ ನಾನು ಮಾಡುತ್ತೇನೆ. ಅದಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ಬೇರೆ ರೀತಿ ಮಾಡಲು ಹೋದರೆ ಅದರ ತೂಕ ಹೋಗುತ್ತದೆ’ ಎಂದಿದ್ದಾರೆ ಶೈನ್ ಶೆಟ್ಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.