ಪ್ರತಿ ವರ್ಷ ಫೆ.14ನ್ನು ವಿಶ್ವದ ಹಲವು ದೇಶಗಳಲ್ಲಿ ‘ಪ್ರೇಮಿಗಳ ದಿನ’ವನ್ನಾಗಿ ಆಚರಿಸಲಾಗತ್ತೆ. ಭಾರತದಲ್ಲೂ ಅತ್ಯಂತ ಸಂಭ್ರಮದಿಂದ ಈ ದಿನವನ್ನು ಯುವ ಸಮೂಹ ಆಚರಿಸುತ್ತದೆ. ಆದರೆ ಈ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸುವವರಿಗೆ ಫೆ.14ನ್ನೇ ಪ್ರೇಮಿಗಳ ದಿನವನ್ನಾಗಿ ಆಚರಿಸಬೇಕೆಂಬ ಕೌತುಕದ ಪ್ರಶ್ನೆ ಮೂಡಿದೆಯೇ ಮತ್ತು ಅದಕ್ಕೆ ಉತ್ತರವನ್ನು ಹುಡುಕುವ ಪ್ರಯತ್ನ ನಡೆದಿದೆಯೇ? ಎನ್ನುವುದು ಯಕ್ಷಪ್ರಶ್ನೆ ಆಗಿಯೇ ಉಳಿದಿದೆ. ನಮ್ಮ ನೆಲದ ಆಚರಣೆಗಳು ವೈಜ್ಞಾನಿಕವಾಗಿಯೂ ಮಹತ್ವವನ್ನು ಪಡೆದಿದ್ದರೂ, ಭಾರತೀಯ ಆಚರಣೆಗಳೆಲ್ಲದಕ್ಕೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪ್ರಶ್ನೆ ಮಾಡುವ ಮಹಿಮಾನ್ವಿತರು ಇಂತಹ ದಿನಾಚರಣೆಗಳು ಅಸ್ತಿತ್ವಕ್ಕೆ ಬಂದ ಬಗೆಯನ್ನು ತಿಳಿದುಕೊಳ್ಳುವುದರಲ್ಲಿ ಎಡವಿದ್ದೇಕೆ? ಈ ದಿನ ಮಾತ್ರ ನಮ್ಮ ಹೃದಯದ ಆಳದಲ್ಲಿ ಅಡಗಿರುವ ಪ್ರೀತಿಯೆಂಬ ನಿಷ್ಕಲ್ಮಶ ಭಾವನೆ ವಿಶೇಷವಾದ ಶಕ್ತಿಯನ್ನು ಪಡೆದು, ಅದರ ಪರಿಣಾಮದಿಂದಾಗಿ ಮನಸ್ಸಿನಲ್ಲಿರುವ ಪ್ರೇಮವನ್ನು ಪ್ರಕಟಗೊಳಿಸುವಂತಾಗುತ್ತದೆ ಎಂದು ವೈಜ್ಞಾನಿಕವಾಗಿ ಏನಾದರೂ ಸಾಬೀತಾಗಿದೆಯೇ? ಹಾಗೆ ಸಾಬೀತಾಗದಿದ್ದ ಮೇಲೆ ಅವೈಜ್ಞಾನಿಕ ಪ್ರೇಮಿಗಳ ದಿನಕ್ಕೆ ನಿಮ್ಮ ವಿರೋಧವಿಲ್ಲವೇಕೆ? ಪ್ರೇಮವೆನ್ನುವುದು ವಿಜ್ಞಾನಕ್ಕೂ ನಿಲುಕದ್ದು ಎಂಬ ವಾದಕ್ಕಾಗಿ ಈ ಆಚರಣೆಯೇ? ಪವಿತ್ರವಾದ ಪ್ರೀತಿಯ ಹೆಸರಲ್ಲಿ ನಿಮ್ಮ ತೆವಲನ್ನು ಈಡೇರಿಸಿಕೊಳ್ಳುವುದಕ್ಕಾಗಿ ಮೀಸಲಿರಿಸಿದ ದಿನವೆಂಬ ಅಂಧಾಭಿಮಾನ ನಿಮ್ಮ ಮಾತನ್ನು ಕಟ್ಟಿಹಾಕಿದೆಯೆ? ಎಲ್ಲದಕ್ಕಿಂತಲೂ ಮಿಗಿಲಾಗಿ ಪಾಶ್ಚಾತ್ಯರ ಬೌದ್ಧಿಕ ದಾಸ್ಯಕ್ಕೆ ಕುರುಹುಗಳಾಗಿ ಉಳಿಯುವ ಬಯಕೆಯೆ!
ಯಾವ ಆಚರಣೆಯನ್ನೂ ವಿರೋಧಿಸುವ ಉದ್ದೇಶದ ಪ್ರತಿಫಲ ಈ ಲೇಖನವಲ್ಲ. ಆದರೆ ನಾವು ಹಲವು ದಶಕಗಳಿಂದ ಆಚರಿಸಿಕೊಂಡು ಬರುತ್ತಿರುವ ಆಚರಣೆಯ ಕುರಿತು ಕನಿಷ್ಠ ಮಾಹಿತಿಯಾದರೂ ನಮಲ್ಲಿರಬೇಕಲ್ಲವೆ? ಫೆ.14ನ್ನೇ ಯಾಕೆ ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತೇವೆ ಎನ್ನುವ ಪ್ರಶ್ನೆಯನ್ನು ಗೂಗಲ್ ಗುರುವಿನ ಬಳಿ ಕೇಳಿ ನೋಡಿದಾಗ ಹಲವು ಉತ್ತರಗಳು ಸಿಕ್ಕವು. ಅವುಗಳಲ್ಲಿ ಪ್ರಮುಖವಾದದ್ದು ಇಬ್ಬರು ಪ್ರೇಮಿಗಳನ್ನು ಒಂದು ಮಾಡಿದ ರೋಮನ್ ಕ್ಯಾಥೋಲಿಕ್ ಚರ್ಚ್ ನ ವಾಲೆಂಟೈನ್ ಎಂಬಾತನ್ನು ಅಲ್ಲಿನ ರಾಜ ಎರಡನೇ ಕ್ಲಾಡಿಯಸ್ ಕೊಂದ ದಿನ ಕ್ರಿ.ಶ.270 ಫೆ.14. ಪ್ರೇಮಿಗಳಿಗಾಗಿ ಪ್ರಾಣಾರ್ಪಣೆ ಮಾಡಿದ ಈ ವ್ಯಕ್ತಿ ಮರಣ ಹೊಂದಿದ ದಿನ ಪ್ರೇಮಿಗಳ ದಿನವೆಂದು ಆಚರಣೆಗೆ ಬಂತು. ಇಷ್ಟು ಮಾಹಿತಿಯನ್ನಾದರೂ ಈ ದಿನವನ್ನು ಆಚರಿಸುವವರು ತಿಳಿದಿದ್ದರೆ ಅವರ ಆಚರಣೆಗೆ ಅರ್ಥವಿರುತ್ತಿತ್ತು! ಆದರೆ ಪ್ರೀತಿ ಎನ್ನುವುದು ಬತ್ತಿ ಹೋಗಿ, ಮೋಹ ಮಾತ್ರ ಉಳಿದವರಲ್ಲಿ ದಿನ ಯಾವುದಾದರೇನು? ಅದರ ಮಹತ್ವ ಏನಾಗಿದ್ದರೇನು?
ಭಾರತದಲ್ಲಿ 1990ರ ದಶಕದಲ್ಲಿ ಜಾಗತೀಕರಣದ ಕಾರಣಕ್ಕಾಗಿ ಈ ದಿನ ಹೆಚ್ಚು ಮುನ್ನೆಲೆಗೆ ಬಂತು. ಕೇವಲ ಮೂರು ದಶಕದ ಹಿಂದೆ ನಮಗೆ ಪರಿಚಯವಾದ ಈ ಆಚರಣೆಯನ್ನು ವೈಭವಯುತವಾಗಿ ಆಚರಿಸುವ ನಾವುಗಳು ಇದೆ ದಿನ ನಮ್ಮ ಗತವೈಭವವನ್ನು ಸ್ಮರಿಸಿಕೊಳ್ಳುವುದಕ್ಕಾಗಿ ಇರುವ ಸಂಗತಿಗಳನ್ನು ತಿಳಿಯುವ ಪ್ರಯತ್ನವೇ ಮಾಡುವುದಿಲ್ಲ. ಫೆ.14 ನ್ನು ಕೇವಲ ಪ್ರೇಮಿಗಳ ದಿನವನ್ನಾಗಿ ಆಚರಿಸದೆ, ದೇಶಪ್ರೇಮಿಗಳ ದಿನವನ್ನಾಗಿ ಆಚರಿಸಬೇಕೆಂಬ ವಿಸ್ತಾರವಾದ ಚಿಂತನೆ ಕೆಲವು ವರ್ಷಗಳಿಂದ ಆಚರಣೆಯಲ್ಲಿದೆ. ಅದಕ್ಕೆ ಪುಷ್ಟಿ ಕೊಡುವ ಒಂದು ಘಟನೆಯನ್ನು ಸ್ಮರಿಸುವುದಕ್ಕೂ ಈ ದಿನ ಬಳಕೆಯಾಗಬೇಕು.
ಈ ರಾಷ್ಟ್ರ ಕಂಡಂತಹ ಶ್ರೇಷ್ಠ ಸಂತ ಸ್ವಾಮಿ ವಿವೇಕಾಂದರ ಚಿಕಾಗೋ ಉಪನ್ಯಾಸದ ಬಗ್ಗೆ ಹಲವರಿಗೆ ತಿಳಿದೇ ಇದೆ. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಸಹಸ್ರಾರು ಜನರಿಗೆ ಪ್ರೇರಣೆಯನ್ನು ನೀಡಿದ ಸ್ವಾಮೀಜಿಯವರ ಮದ್ರಾಸಿನ ಉಪನ್ಯಾಸದ ಬಗ್ಗೆ ಹಲವರಿಗೆ ತಿಳಿದಿಲ್ಲ. ‘ಭಾರತದ ಭವಿಷ್ಯ’ ಎಂಬ ವಿಷಯದ ಕುರಿತು ಮಾತನಾಡಿದ ಸ್ವಾಮೀಜಿ ಭಾರತದ ಇಂದಿನ ಸ್ಥಿತಿಗೆ ಕಾರಣ ಮತ್ತು ಮುಂದಿನ ಉಜ್ವಲ ದಿನಗಳಿಗಾಗಿ ಈ ನಾಡಿನಲ್ಲಿ ಅನುಷ್ಠಾನಗೊಳಿಸಬೇಕಾದ ಅನೇಕ ಸಂಗತಿಗಳ ಕುರಿತು ಬೆಳಕನ್ನು ಚೆಲ್ಲುತ್ತಾರೆ. ರಾಷ್ಟ್ರದ ಜನರಿಗೆ ದಾರಿದೀಪದಂತೆ ಕಾರ್ಯನಿರ್ವಹಿಸಿದ ಸ್ವಾಮೀಜಿ ಅವರ ಈ ಭಾಷಣ ನಡೆದದ್ದು ಕೂಡ 1897ರ ಫೆ.14.
ಇದೇ ಭಾಷಣದಲ್ಲಿ ಸ್ವಾಮಿ ವಿವೇಕಾನಂದರು ಮುಂದಿನ ಐವತ್ತು ವರ್ಷ ಮಾತೃಭೂಮಿಯೇ ನಮ್ಮೆಲ್ಲರ ಆರಾಧ್ಯ ದೈವವಾಗಬೇಕು ಎಂದರು. ಈ ನಾಡಿನ ಆತ್ಮ ಅಧ್ಯಾತ್ಮ. ಇಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಮೊದಲು ಎಲ್ಲಾ ಮಾರ್ಗಗಳ ಒಳಿತನ್ನು ಸಾರುವ ಧಾರ್ಮಿಕ ಜಾಗೃತಿ ಆಗಬೇಕು. ಸಾಮಾಜಿಕ ಪಿಡುಗುಗಳನ್ನು ಸರಿಪಡಿಸಲು ಇಳಿಯುವ ಮುನ್ನ ನಮ್ಮ ಆಲೋಚನೆಗಳು ಶುದ್ಧವಾಗಿರಬೇಕು. ನಮ್ಮ ಶಾಸ್ತ್ರಗಳಲ್ಲಿ, ಮಠ ಮತ್ತು ಅರಣ್ಯಗಳಲ್ಲಿ ಅಡಗಿರುವ ಕೆಲವೇ ವ್ಯಕ್ತಿಗಳ ಸ್ವತ್ತಿನಂತಿರುವ ಆಧ್ಯಾತ್ಮಿಕ ರತ್ನಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಎಲ್ಲರೂ ಸಂಸ್ಕೃತವನ್ನು ಕಲಿಯುವವರೆಗೂ ದೇಶೀಯ ಭಾಷೆಗಳಲ್ಲಿ ಇವುಗಳ ಪ್ರಸಾರ ಆಗಬೇಕು ಎಂದು ನುಡಿದಿದ್ದರು.
ಅಷ್ಟೇಯಲ್ಲದೇ ಈ ನಾಡಿನಲ್ಲಿ ಪ್ರತಿಪಾದಿತ ಆರ್ಯ-ದ್ರಾವಿಡ ಎಂಬ ಅನರ್ಥ ಥಿಯರಿಯ ಕುರಿತು ತಿಳಿಸಿದರು. ಅನಿಷ್ಟ ಜಾತಿ ಪದ್ಧತಿಯ ಬಗ್ಗೆ ಮಾತನಾಡುತ್ತ ವರ್ಣಸಮಸ್ಯೆಗೆ ಪರಿಹಾರ ಕೆಳವರ್ಗ ಎಂದು ಕರೆಯಲ್ಪಡುವವರನ್ನು ಮೇಲ್ವರ್ಗದವರೆನಿಕೊಳ್ಳುವವರ ತತ್ಸಮಾನ ಅಭಿವೃದ್ಧಿಶೀಲರನ್ನಾಗಿಸುವುದು ಎಂದರು. ಹಾಗೆಯೇ ಈಗ ನಮ್ಮ ದೇಶದಲ್ಲಿರುವ ಪಾಶ್ಚಿಮಾತ್ಯರ ಶಿಕ್ಷಣ ಪದ್ಧತಿ ತನ್ನ ಸ್ವಂತ ಚಿಂತನೆಗಳ ಮೂಲಕ ಪುರುಷಸಿಂಹನಾಗಬಲ್ಲ ವಿದ್ಯಾರ್ಥಿಯನ್ನು ಗುಲಾಮನನ್ನಾಗಿಸುವಂತೆ ಮಾಡುತ್ತಿದೆ. ಇಂತಹ ಶಿಕ್ಷಣ ಪದ್ಧತಿ ಬದಲಾಗಬೇಕು ಮತ್ತು ದೇವಾಲಯಗಳ ಅಂಗವಾಗಿ ಧಾರ್ಮಿಕ ಜಾಗೃತಿಯನ್ನು ಮಾಡುವ ತರಬೇತು ಸಂಸ್ಥೆಯಿರಬೇಕು. ಆ ಮೂಲಕ ಆಶಿಷ್ಠರೂ, ಬಲಿಷ್ಠರೂ, ದೃಢಿಷ್ಠರೂ, ಮೇಧಾವಿಗಳೂ ಆದಂತಹ ತರುಣರನ್ನು ನಿರ್ಮಿಸಬೇಕು ಎಂದು ಭವಿಷ್ಯದ ಭಾರತದ ಕುರಿತಾದ ತಮ್ಮ ಕಲ್ಪನೆಯನ್ನು ತಿಳಿಸಿದರು.
ಇದು ರಾಷ್ಟ್ರಪ್ರೇಮಿಗಳ ದಿನಕ್ಕೆ ಒಂದು ನಿದರ್ಶನವಾದರೆ ಫೆ.14, 2019ರಲ್ಲಿ ಪುಲ್ವಾಮದಲ್ಲಿ ನಡೆದ ಒಂದು ದುರಂತ ಘಟನೆ ರಾಷ್ಟ್ರಾಭಿಮಾನ ಜಾಗೃತಿಯ ದಿನವಾಗಿ ನಮ್ಮ ಮುಂದಿದೆ. ಉಗ್ರರ ಕುತಂತ್ರಕ್ಕೆ ನಾವಂದು 40 ಜನ ವೀರಯೋಧರನ್ನು ಕಳೆದುಕೊಂಡು ಶೋಕ ಸಾಗರದಲ್ಲಿದ್ದೆವು. ಆದರೆ ಈ ಕುತಂತ್ರಕ್ಕೆ ಸುಮ್ಮನೇ ಕೂರದ ನಮ್ಮ ಹೆಮ್ಮೆಯ ಭಾರತೀಯ ಸೇನೆ ಫೆ.26ಕ್ಕೆ ಬಾಲಕೋಟ್ ನ ಉಗ್ರರ ನೆಲೆಯ ಮೇಲೆ ಏ ರ್ ಸ್ಟ್ರೈಕ್ ನಡೆಸಿ ಮುನ್ನೂರಕ್ಕೂ ಅಧಿಕ ಉಗ್ರರನ್ನು ಸೆದೆ ಬಡಿದು ವೀರಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿತು.
ಈ ಎರಡು ಪ್ರಮುಖ ಕಾರಣಗಳಿಂದಾಗಿ ಭಾರತೀಯರು ಈ ದಿನವನ್ನು ಹೆಚ್ಚು ವಿಸ್ತಾರವಾದ ಅರ್ಥದಲ್ಲಿ ಆಚರಿಸುವುದಕ್ಕೆ ನೆರವಾಗುತ್ತವೆ. “Indian youths are not useless, they are used less” ಎಂಬ ಮಾತಿನಂತೆ ನಮ್ಮ ತರುಣ ವರ್ಗಕ್ಕೆ ವಿದೇಶಿ ದಿನಗಳನ್ನು ಆಚರಿಸಬೇಡಿ, ವಿದೇಶಿ ವಸ್ತುಗಳನ್ನು ಬಳಸಬೇಡಿ ಎಂದು ಹೇಳುವ ಜೊತೆಗೆ ರಾಷ್ಟ್ರೀಯತೆಯ ಕುರಿತು ತಿಳಿಸುವ ಪರ್ಯಾಯ ಆಚರಣೆ ಮತ್ತು ವಸ್ತುಗಳ ಬಗ್ಗೆಯೂ ತಿಳಿಸಬೇಕು. ಆಗ ಅನರ್ಥ ಆಚರಣೆಗಳಿಂದ ನಾವು ಸಹಜವಾಗಿಯೇ ದೂರ ಬರುತ್ತೇವೆ.
ಅರುಣ್ ಕಿರಿಮಂಜೇಶ್ವರ
ವಿವೇಕಾನಂದ ಮಹಾವಿದ್ಯಾಲಯ
Published On - 2:30 pm, Mon, 14 February 22