ಪ್ರೀತಿ ಎನ್ನುವ ಎರಡಕ್ಷರದಲ್ಲಿ ನೂರಾರು ಅರ್ಥಗಳೇ ಅಡಗಿವೆ. ತಂದೆ, ತಾಯಿ, ಬಂಧು-ಬಳಗ, ಸ್ನೇಹಿತರ ನಡುವೆ ಇರುವಂಥದ್ದೂ ಪ್ರೀತೀನೆ, ಅಂತೆಯೇ ಒಂದು ಹುಡುಗ ಮತ್ತು ಹುಡುಗಿಯ ನಡುವೆ ಮೊಳಕೆಯೊಡೆಯುವ ವಿಶೇಷ ಬಂಧವೂ ಪ್ರೀತಿಯೇ… ಹೀಗೆ ಪ್ರೀತಿಯದು ಎರಡು ಮನಸುಗಳ ನಡುವಿನ ಸ್ನೇಹಮಿಲನ. ಪ್ರೀತಿಯ ದಿನ. ಒಂದಾದ ಎರಡು ಮನಸುಗಳಿಗಾಗಿ ಮೀಸಲಾದ ದಿನ. ಈ ದಿನಕ್ಕೆ ಪ್ರೀತಿ ಪಾತ್ರರ ಬಗ್ಗೆ ಹೇಳೋದು ಕೂಡಾ ಖುಷಿ ವಿಚಾರ. ಆತ ತುಂಬಾ ಸರಳ ಸ್ವಭಾವದ ನೇರ ನಡೆ ನುಡಿಯ ಜತೆಗೆ ತುಂಬಾ ಮೌನಜೀವಿ. ತುಂಬು ಯೌವನದ, ಚೆಲ್ಲು ಚೆಲ್ಲಾಡದ, ನಾನು ಬಾಲಿಶವಾದರೂ ಆತನ ಪ್ರೌಢಿಮೆಯೇ ನಂಗಿಷ್ಟವಾದದ್ದು. ಕೆಲಸ ಅಂದರೆ ಪ್ರಾಣ ಅನ್ನುವ ಆತ ತುಂಬಾ ಮುಗ್ಧ ಕೂಡ. ನಗ್ತಾ ನಗ್ತಾ ಇರುವ ಸ್ನೇಹಜೀವಿ. ಶೂಟಿಂಗ್ ಒಂದರಲ್ಲಿ ಪರಸ್ಪರ ಮುಖ ಪರಿಚಯ ಇಲ್ಲದೇ ಭೇಟಿಯೇನೋ ಆಯಿತು. ಕಾರ್ಯಕ್ರಮ ಮುಗಿದು ಮನೆಗೆ ತೆರಳಿದ್ದರೂ ನಾವಿಬ್ಬರು ಅಲ್ಲೂ ಕೂಡ ಮುಖತಃ ಮಾತನಾಡಲೇ ಇಲ್ಲ. ಕಡೆಗೆ ಆತನೇ ನನ್ನ ಕನಸಿನ ಹುಡುಗ ಎನ್ನುವ ಸತ್ಯ ಇನ್ಯಾರಿಂದಲೋ ತಿಳಿಯಿತು. ಯಾಕಂದ್ರೆ ಆತ ಮತ್ತು ನಾನು ಒಂದೇ ವಾಟ್ಸಾಪ್ ಗ್ರೂಪೊಂದರಲ್ಲಿದ್ದೆವು. ಎಲ್ಲರೂ ಆತನನ್ನು ಹೊಗಳೋದೇನು.. ಆಗೆಲ್ಲಾ ಈತ ನನ್ನವನಾಗಬೇಕೆಂಬ ಕನಸು ಶುರುವಾಗುತ್ತಿತ್ತು.
ಅಂತೂ ಆಕಸ್ಮಿಕ ಎಂಬಂತೆ ಇಬ್ಬರೂ ವೈಯಕ್ತಿಕವಾಗಿ ಸಂದೇಶ ಕಳುಹಿಸಲಾರಂಭಿಸಿ, ಅದೇ ಈ ದಿನಕ್ಕೂ ಬಿಡಲಾರದ ಸ್ನೇಹವಾಗಿಬಿಟ್ಟಿದೆ. ಆತನ ಮನದಲ್ಲಿ ಪ್ರೀತಿ ಇದೆಯೋ ಗೊತ್ತಿಲ್ಲ, ಆದರೆ ನಂಗಂತೂ ಆತನೆಂದರೆ ಇವತ್ತಿಗೂ ತುಂಬಾ ಇಷ್ಟ. ಆತನಿಗಾಗಿ ಸದಾ ಕಾಯ್ತಾ ಇರ್ತೇನೆ, ಆತನಿಗಾಗಿ ಅಳೋದು ಸಾಮಾನ್ಯವೇ ಆಗಿದೆ. ಆತನ ಬ್ಯುಸಿ ಮಧ್ಯೆ ಕೇರ್ ಮಾಡಲ್ಲ ಅನ್ನೋ ಕಂಪ್ಲೈಂಟ್ ಮಾಡೋ ನಾನು ಸ್ವಾರ್ಥೀನೋ ಗೊತ್ತಿಲ್ಲ.. ಆದರೂ ನಾನೇ ಕಾಲ್ ಮಾಡಿ ತೊಂದರೆ ಕೊಡೋದಂತೂ ಸತ್ಯ. ಆದರೂ ಆತನ ತಾಳ್ಮೆ ಮುಂದೆ ನಾನು ಸಣ್ಣವಳಾಗೋದು ಖಚಿತ.
ಎರಡು ವರ್ಷದ ಹಿಂದೆ ಕ್ರಷ್ ಆದಾತ ಇಂದಿಗೂ ನನ್ನ ಜತೆ ಮಾತನಾಡುತ್ತಲೇ ಇದ್ದಾನೆ ಅನ್ನೋದು ಹೆಮ್ಮೆ. ನನ್ನ ಬಾಲಿಶ ಸ್ವಭಾವ ಆತನಿಗೆ ಸದಾ ನೋವನ್ನುಂಟುಮಾಡುತ್ತಲೇ ಇರುತ್ತೆ.. ಆತನ ಮೆಚೂರಿಟಿ ಒಮ್ಮೊಮ್ಮೆ ನನ್ನನ್ನೂ ಸೋಲಿಸಿಬಿಡುತ್ತೆ. ನನ್ನ ಪ್ರೀತೀನ ಆತನ ಮುಂದೆ ಹೇಳಲು ಪ್ರಯತ್ನಿಸಿದರೂ ಕೇಳಿಯೂ ಕೇಳದಂತೆ ಮೌನಿಯಾಗಿರುವನು ಆತ.. ಆತನಲ್ಲೂ ನನ್ನ ಬಗ್ಗೆ ಅಗಾಧ ಪ್ರೀತಿ ಇದೆ ಎನ್ನುವ ವಿಚಾರ ನನಗೂ ಅರಿವಿದೆ. ಆದರೆ ಅದನ್ನು ನನ್ನೊಡನೆ ಮುಖತಃ ಎಂದು ಹೇಳುವನೋ ಅನ್ನೋ ಕುತೂಹಲ, ಆಸೆ ಎರಡೂ ಇದೆ.. ಅದೇನೆ ಆಗಲಿ, ಉಡುಪಿಯ ಆ ನನ್ನ ಕೃಷ್ಣ ಆತನ ಭಾವನೆಯನ್ನು ನೇರವಾಗಿ ಹೇಳಲಿ ಅನ್ನೋದೆ ಇವತ್ತಿಗೂ ನನ್ನ ಪ್ರಾರ್ಥನೆ.. ಆತನಲ್ಲೇ ಇತ್ತೀಚೆಗೆ ‘ಪ್ರೀತಿಯ ದಿನ, ಏನಿದೆ ನಂಗಾಗಿ ವಿಶೇಷ?’ ಅಂತ ಪರೋಕ್ಷವಾಗಿ ಕೇಳಿದ್ದೆ. ಅದಕ್ಕೂ ಉತ್ತರ ಸಿಕ್ಕಿಲ್ಲ.. ಆತನ ಉತ್ತರದ ನಿರೀಕ್ಷೆಯಲ್ಲಿ… ಆ ಪ್ರೀತಿ ಬೆಸುಗೆಯ ನಿರೀಕ್ಷೆಯಲ್ಲಿ… ಆತನೇ ನನ್ನವನಾಗುವನೆಂಬ ಭರವಸೆಯಲ್ಲಿ.. ಈ ದಿನವಾದರೂ ಈ ಬರಹವನ್ನೋದಿ ಪ್ರೀತಿ ಪದಗಳು ಆತನಿಂದ ಹೊರಹೊಮ್ಮಲಿ..ಈ ಮೂಲಕ ನನ್ನ ಹೃದಯ ಕದ್ದ ಚೋರನಿಗೆ ಪ್ರೀತಿ ದಿನದ ಶುಭಾಶಯಗಳು.
ಪ್ರಜ್ಞಾ ಓಡಿಲ್ನಾಳ
ದ್ವಿತೀಯ ಎಂಸಿಜೆ