ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪರಿಸರ ನಮಗೆ ಸಾಕಷ್ಟು ನೀಡಿದೆ. ಹೀಗಾಗಿ ಅದನ್ನು ಸಂರಕ್ಷಣೆ ಮಾಡುವುದು ಹಾಗೂ ಕಾಳಜಿ ವಹಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಇಂದು ಮಾನವನ ಸ್ವಾರ್ಥ ಚಟುವಟಿಕೆಗಳಿಂದ ಭಾರತ ಮಾತ್ರವಲ್ಲ, ಇಡೀ ಜಗತ್ತು ಮಾಲಿನ್ಯದಿಂದ ಕಲುಷಿತಗೊಂಡಿದೆ. ವಾಯುಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಜಲಮಾಲಿನ್ಯವು ಮಾನವ, ಸಸ್ಯಗಳು ಮತ್ತು ಪ್ರಾಣಿಗಳ ಜೀವನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಪ್ರತಿವರ್ಷ 24 ಲಕ್ಷ ಜನರು ಮಾಲಿನ್ಯದ ಕಾರಣದಿಂದ ಸಾಯುತ್ತಿದ್ದಾರೆ ಎಂಬುದು ಅಂಕಿಂಶದಿಂದ ಬಹಿರಂಗವಾಗಿದೆ. ಈ ಪೈಕಿ 16.7 ಲಕ್ಷ ಸಾವುಗಳು ವಾಯು ಮಾಲಿನ್ಯದಿಂದಲೇ ಸಂಭವಿಸಿದೆ. ಹೀಗಾಗಿ ಈ ಗಾಳಿ, ನೀರು, ಮಣ್ಣು ಮತ್ತು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸಲು ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತಿದೆ.
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಇತಿಹಾಸವನ್ನು ಗಮನಿಸಿದರೆ ಭೋಪಾಲ್ ನಗರದಲ್ಲಿ ಸಂಭವಿಸಿದ ಅನಿಲ ದುರಂತದ ದಿನವಾಗಿದೆ. ಡಿಸೆಂಬರ್ 2, 1984 ರಂದು ಭೋಪಾಲ್ ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ನ ಕೀಟನಾಶಕ ಸ್ಥಾವರದಿಂದ ʼಮೀಥೈಲ್ ಐಸೊಸೈನೇಟ್ʼ ಅನಿಲ ಸೋರಿಕೆಯಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದರು. ಈ ದುರಂತದಲ್ಲಿ ಸಿಲುಕಿನೂರಾರು ಜನರು ಅಸ್ವಸ್ಥಗೊಂಡರು. ಈ ಘಟನೆಯನ್ನು ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕ ವಿಪತ್ತುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದವರ ನೆನಪಿಗಾಗಿ ಭಾರತದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಪ್ರತಿ ವರ್ಷ ಡಿಸೆಂಬರ್ 2 ರಂದು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಭಾರತದ ಈ ಭಾಗಗಳಲ್ಲಿ ನಡೆಯುವ ಜನಪ್ರಿಯ ಹಬ್ಬಗಳಲ್ಲಿ ಪಾಲ್ಗೊಳ್ಳಿ
ವಿವಿಧ ಮಾಲಿನ್ಯದಿಂದ ಉಂಟಾಗುತ್ತಿರುವ ಎಲ್ಲಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಮಾಲಿನ್ಯದಿಂದ ಮಾನವರ ಆರೋಗ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವು ಈ ದಿನದ್ದಾಗಿದೆ. ಮಾಲಿನ್ಯದ ಕಾರಣದಿಂದಾಗಿ ಜೀವರಾಶಿಗಳು ಅನೇಕ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುತ್ತಿವೆ. ಹಾಗಾಗಿ ಎಲ್ಲಾ ರೀತಿಯ ಮಾಲಿನ್ಯಗಳನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಹಿನ್ನಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.
* ಕಡಿಮೆ ಪ್ಯಾಕೇಜ್ ಮಾಡಿದ ಆಹಾರವನ್ನು ಖರೀದಿಸಿ. ನಿಮ್ಮ ಪರ್ಸ್, ಬ್ಯಾಗ್ ಅಥವಾ ವಾಹನದಲ್ಲಿ ಯಾವಾಗಲೂ ಬಟ್ಟೆಯ ಚೀಲವನ್ನು ಇಟ್ಟುಕೊಳ್ಳಿ,
* ಮನೆಯ ಸುತ್ತಮುತ್ತಲೂ ಕಸವನ್ನು ಸುಡಬೇಡಿ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಬೇಡಿ.
* ಅರಣ್ಯವನ್ನು ಸಂರಕ್ಷಿಸುವ ಸಲುವಾಗಿ ಗಿಡ ನೆಟ್ಟು ವೃಕ್ಷ ಸಂಪತ್ತನ್ನು ಹೆಚ್ಚಿಸುವತ್ತ ಗಮನ ಹರಿಸಿ. ಅದಲ್ಲದೇ, ಮನೆಯ ಸುತ್ತ ಮುತ್ತ ಗಿಡಗಳನ್ನು ನೆಡಿ. ಇದು ಮಾಲಿನ್ಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
* ಹೆಚ್ಚಿನ ಓಡಾಟಕ್ಕೆ ಸಾರ್ವಜನಿಕ ಸಾರಿಗೆಯನ್ನೇ ಉಪಯೋಗಿಸಬೇಕು. ಹತ್ತಿರದ ಸ್ಥಳಗಳಿಗೆ ನೆಡೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳಿ.
* ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಖರೀದಿಸಿ, ಬಳಕೆ ಮಾಡುವತ್ತ ಗಮನ ಹರಿಸಿ.
* ಕಾಲಕಾಲಕ್ಕೆ ವಾಹನವನ್ನು ಸರ್ವಿಸ್ ಗೆ ನೀಡಿ. ನಿಮ್ಮ ವಾಹನವನ್ನು ಸುಸ್ಥಿತಿಯಲ್ಲಿಟ್ಟರೆ ಮಾತ್ರ ಪರಿಸರವನ್ನೂ ಕಾಪಾಡಬಹುದು. ಪ್ರತಿ ಮೂರು ತಿಂಗಳ ಚಾಲನೆಯ ನಂತರ ತೈಲವನ್ನು ಬದಲಿಸಿ.
* ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸಿ. ಬದಲಾಗಿ ನೈಸರ್ಗಿಕ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿ.
* ಆಹಾರ ತ್ಯಾಜ್ಯಗಳು, ಮತ್ತಿತರೆ ಕೊಳೆಯುವ ವಸ್ತುಗಳನ್ನು ನದಿ, ಕೆರೆ, ಸರೋವರಗಳಿಗೆ ಬಿಡುವುದನ್ನು ತಪ್ಪಿಸಿ. ಬದಲಾಗಿ ತ್ಯಾಜ್ಯಗಳನ್ನು ಬಳಸಿ ಗೊಬ್ಬರವನ್ನು ತಯಾರಿಸಿ.
* ಕಟ್ಟಿಗೆ, ಧ್ರವೀಕೃತ ಅನಿಲ ಇಂಧನಗಳನ್ನು ಅಡುಗೆಗೆ ಉರುವಲಾಗಿ ಉಪಯೋಗಿಸುವ ಬದಲು, ಸೌರಶಕ್ತಿ ಬಳಸುವುದು ಸೂಕ್ತ.
* ಇಂಧನಗಳನ್ನು ಮಿತವಾಗಿ ಬಳಸಿ. ವಾಹನಗಳು,ದೀಪಗಳನ್ನು ಅಗತ್ಯವಿಲ್ಲದಿರುವಾಗ ನಂದಿಸಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ