ಮತದಾನ ಸಂವಿಧಾನ ನಮಗೆಲ್ಲರಿಗೂ ನೀಡಿರುವ ಅತ್ಯಮೂಲ್ಯ ಹಕ್ಕಾಗಿದೆ. ಜೊತೆಗೆ ಮತ ಚಲಾಯಿಸುವ ಮೂಲಕ ಉತ್ತಮ ಪ್ರತಿನಿಧಿಯನ್ನು ಆರಿಸುವುದು ಕೂಡಾ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಸುಮಾರಷ್ಟು ಜನ ಲೈನ್‌ನಲ್ಲಿ ಯಾರು ನಿಂತುಕೊಳ್ಳುತ್ತಾರೆ, ಯಾಕೆ ಸುಮ್ಮನೆ ಸಮಯ ವ್ಯರ್ಥ ಮಾಡೋದು ಅರಾಮವಾಗಿ ಮನೆಯಲ್ಲಿರೋಣ ಅಥವಾ ಸುತ್ತಾಡಲು ಹೋಗೋಣ ಎಂದು ಬೇಜವಾಬ್ದಾರಿಯಿಂದ ವೋಟ್ ಮಾಡಲು ಹೋಗುವುದಿಲ್ಲ. ಈ ನಿಟ್ಟಿನಲ್ಲಿ ಮತದಾರನ್ನು ಸೆಳೆಯಲು, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಗತ್ಯತೆಯ ಬಗ್ಗೆ ತಿಳಿ ಹೇಳಲು ಜೊತೆಗೆ ಈ ಅತ್ಯಮೂಲ್ಯ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವದ ಮುನ್ನಾ ದಿನದಂದು ಅಂದರೆ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು (National Voters’ Day) ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಭಾರತದ ಎಲ್ಲಾ ನಾಗರಿಕರಿಗೆ ರಾಷ್ಟ್ರದ ಅಭಿವೃದ್ಧಿ, ಏಳಿಗೆಯ ಕಡೆಗೆ ಅವರ ಜವಾಬ್ದಾರಿ, ಕರ್ತವ್ಯವನ್ನು ನೆನಪಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ತೇಜಿಸುವ ದೃಷ್ಟಿಯಿಂದ ಭಾರತ ಸರ್ಕಾರವು 1950 ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ಸವಿನೆನಪಿಗಾಗಿ 2011 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿವರ್ಷ ಜನವರಿ 25 ರಂದು ಈ ವಿಶೇಷ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಬರಲಾಗುತ್ತಿದೆ.
ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ದೇಶದ ನಾಗರಿಕರಿಗೆ ಅವರಿಗಿರುವ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಯಾವುದೇ ಆಮಿಷಕ್ಕೆ ಒಳಗಾಗದೆ ದೇಶದ ಅಬಿವೃದ್ಧಿಗಾಗಿ ನಿಷ್ಪಕ್ಷಪಾತವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸುದಾಗಿದೆ. ಅಲ್ಲದೆ 18 ವರ್ಷ ತುಂಬಿದ ಎಲ್ಲಾ ವಯಸ್ಕರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಅವರಿಗೆ ಅವರ ಮತದಾನದ ಬಗ್ಗೆ ಅರಿವು ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
ದೇಶದ ಉತ್ತಮ ಸರ್ಕಾರ ಮತ್ತು ಅಭಿವೃದ್ಧಿಗಾಗಿ ಮತದಾನ ಮಾಡುವುದು ನಾಗರಿಕರ ಹಕ್ಕು ಮತ್ತು ಜವಾಬ್ದಾರಿಯಾಗಿದೆ. ಭಾರತೀಯ ಪ್ರಜೆಯ ಈ ಜವಾಬ್ದಾರಿಯನ್ನು ಶ್ಲಾಘಿಸಲು, ಚುನಾವಣೆಯ ಮಹತ್ವ ಮತ್ತು ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
ದೇಶದ ಪ್ರಗತಿಗೆ ಪ್ರತಿಯೊಬ್ಬ ಪ್ರಜೆಯ ಮತ ಅಗತ್ಯ. ಆದ್ದರಿಂದ, ಮತದಾರರ ದಿನವನ್ನು ಆಚರಿಸುವ ಉದ್ದೇಶವು ಎಲ್ಲಾ ನಾಗರಿಕರನ್ನು (18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಮತದಾನ ಮಾಡುವಂತೆ ಪ್ರೇರೇಪಿಸುವುದಾಗಿದೆ. ಇದಲ್ಲದೆ, ಮತದಾನದ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು, ನಾಗರಿಕರಲ್ಲಿ ಚುನಾವಣಾ ಜಾಗೃತಿ ಮೂಡಿಸುವುದು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು. ಇದುವರೆಗೆ ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳದವರನ್ನು ಪ್ರೋತ್ಸಾಹಿಸುವುದುಈ ದಿನದ ಆಚರಣೆಯ ಉದ್ದೇಶವಾಗಿದೆ.
ಇದನ್ನೂ ಓದಿ: ರಾಷ್ಟ್ರೀಯ ಪ್ರವಾಸೋದ್ಯಮ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಪ್ರತಿವರ್ಷವೂ ವಿವಿಧ ಥೀಮ್‌ಗಳ ಅಡಿಯಲ್ಲಿ ಈ ವಿಶೇಷ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷದ ಥೀಮ್ “ಮತದಾನ ಮಾಡೋದಕ್ಕಿಂತ ದೊಡ್ಡದೇನು ಇಲ್ಲ, ನಾನು ಖಚಿತವಾಗಿ ಮತ ಚಲಾಯಿಸುತ್ತೇನೆ” (Nothing Like Voting, I Vote For Sure)
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಮತ್ತೊಂದು ದಾಖಲೆಯನ್ನು ಮಾಡಿದೆ. ಹೌದು ಕಳೆದ ವರ್ಷ ಲೋಕಸಭೆ ಚುನಾವಣೆ ವೇಳೆಯಲ್ಲಿ 96.88 ಕೋಟಿ ಇದ್ದ ಭಾರತದ ಮತದಾರರ ಸಂಖ್ಯೆ ಈಗ 99.1 ಕೋಟಿಗೆ ತಲುಪಿದೆ. ರಾಷ್ಟ್ರೀಯ ಮತದಾರರ ದಿನಾಚರಣೆಗೆ ಮುನ್ನ ನೀಡಿದ ಹೇಳಿಕೆಯಲ್ಲಿ, ಚುನಾವಣಾ ಆಯೋಗವು ಮತದಾರರ ಪಟ್ಟಿಯು ಯುವ ಮತ್ತು ಲಿಂಗ ಸಮತೋಲಿತವಾಗಿ ಕಾಣುತ್ತದೆ ಎಂದು ಹೇಳಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಮತದಾರರ ದಿನದಂದು ಜನರಿಗೆ ಶುಭಾಶಯ ತಿಳಿಸಿದ್ದಾರೆ. ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ, ‘ರಾಷ್ಟ್ರೀಯ ಮತದಾರರ ದಿನವು ನಮ್ಮ ರೋಮಾಂಚಕ ಪ್ರಜಾಪ್ರಭುತ್ವವನ್ನು ಆಚರಿಸುವುದು. ಪ್ರತಿಯೊಬ್ಬ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅಧಿಕಾರ ನೀಡುವುದಾಗಿದೆ. ಇದು ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾಗವಹಿಸುವಿಕೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗದ ಪ್ರಯತ್ನಗಳನ್ನು ಶ್ಲಾಘಿಸುತ್ತೇನೆಂದು’ ತಿಳಿಸಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 am, Sat, 25 January 25