Kannada News Lifestyle Parenting Tips : Creative ways to get your kids to brush their teeth Kannada News
Parenting Tips: ನಿಮ್ಮ ಮಕ್ಕಳು ಹಲ್ಲುಜ್ಜಲ್ಲ ಎಂದು ಹಠ ಮಾಡ್ತಾರಾ? ಇಲ್ಲಿದೆ ಸಿಂಪಲ್ ಟಿಪ್ಸ್
ಹಲ್ಲಿನ ಆರೋಗ್ಯವು ಚೆನ್ನಾಗಿರಬೇಕಾದರೆ ದಿನಕ್ಕೆರಡು ಬಾರಿ ಹಲ್ಲು ಉಜ್ಜಬೇಕು. ನಾವು ಹೇಗೆ ಹಲ್ಲುಜ್ಜುತ್ತೇವೋ ಅದೇ ರೀತಿ ಮಕ್ಕಳಿಗೂ ಕೂಡ ಹಲ್ಲುಜ್ಜಲು ಹೇಳಿಕೊಡಬೇಕು. ಸ್ವಲ್ಪ ಅಸಡ್ಡೆ ತೋರಿದರೂ ಮಕ್ಕಳ ಹಲ್ಲುಗಳು ಹಳದಿಗಟ್ಟುತ್ತವೆ ಅಥವಾ ಹುಳುಕಾಗುತ್ತದೆ. ಆದರೆ ಈ ಪುಟಾಣಿ ಮಕ್ಕಳಿಗೆ ಹಲ್ಲುಜ್ಜಿಸುವುದೇ ಸವಾಲಿನ ಕೆಲಸ. ಒಂದು ವೇಳೆ ನಿಮ್ಮ ಮಕ್ಕಳು ಬ್ರಷ್ ಮಾಡಲ್ಲ ಎಂದು ಹಠ ಹಿಡಿದರೆ ಹೆಚ್ಚು ತಲೆ ಕೆಡಿಸಿಕೊಳ್ಬೇಡಿ, ಈ ಕೆಲವು ಸಲಹೆಗಳನ್ನು ಪಾಲಿಸಿ.
ಸಾಂದರ್ಭಿಕ ಚಿತ್ರ
Follow us on
ಹಲ್ಲುಜ್ಜು ಅಂದ್ರು ಕೇಳಲ್ಲ, ಬೈದೂ ಬೈದೂ ಸಾಕಾಗಿದೆ. ಏನು ಮಾಡೋದು?’ ಈ ರೀತಿ ಮಕ್ಕಳಿರುವ ಹೆತ್ತವರು ಹೇಳುವುದನ್ನು ಕೇಳಿರಬಹುದು. ಈ ಸಣ್ಣ ಮಕ್ಕಳಿಗೆ ಹಲ್ಲುಜ್ಜುವುದೇ ಕಷ್ಟಕರವಾದ ಕೆಲಸ. ಸಣ್ಣ ಮಕ್ಕಳಂತೂ ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜಲ್ಲ ಎಂದು ಹಠ ಮಾಡುತ್ತಾರೆ. ಈ ಸಮಯದಲ್ಲಿ ಮಕ್ಕಳಿಗೆ ಗದರದೇ ಸಮಾಧಾನವಾಗಿ ಹೇಳಬೇಕು. ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಈ ಕೆಲವು ಟಿಪ್ಸ್ ಫಾಲೋ ಮಾಡುವ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ಸುಲಭವಾಗಿ ಹಲ್ಲುಜ್ಜಿಸಬಹುದು.
ಮಕ್ಕಳೊಂದಿಗೆ ನೀವು ಕೂಡ ಹಲ್ಲುಜ್ಜಿ : ಸಣ್ಣ ಮಕ್ಕಳು ಹೆತ್ತವರನ್ನು ನೋಡಿ ಕಲಿಯುವುದೇ ಹೆಚ್ಚು. ಹೀಗಾಗಿ ಬ್ರಷ್ ಮಾಡಲ್ಲ ಎಂದು ಹಠ ಮಾಡಿದರೆ ಅವರೊಂದಿಗೆ ನೀವು ಕೂಡ ಹಲ್ಲುಜ್ಜಿ. ಈ ವೇಳೆಯಲ್ಲಿ ಹೇಗೆಲ್ಲಾ ಬ್ರಷ್ ಮಾಡಬೇಕು ಎಂದು ಹೇಳಿಕೊಡಿ. ನಾನು ಮಾಡಿದ್ದಂತೆ ನೀನು ಮಾಡು, ಯಾರ ಹಲ್ಲು ಬಿಳಿಯಾಗುತ್ತದೆ ನೋಡೋಣ ಎಂದು ಹೇಳಿ ಮಗುವನ್ನು ಪ್ರೋತ್ಸಾಹಿಸಿ.
ಮಕ್ಕಳಿಗೆ ಆಕರ್ಷಕ ಟೂತ್‌ಬ್ರಷ್ ಕೊಡಿಸಿ : ಮಕ್ಕಳ ಇಷ್ಟದ ಬ್ರಷ್ ಮತ್ತು ಟೂತ್ಪೇಸ್ಟ್ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುವುದು ಬಹಳ ಮುಖ್ಯ. ನಿಮ್ಮ ಇಷ್ಟದ ಬ್ರಷ್ ಕೊಡಿಸಿದರೆ ಮಗುವಿಗೆ ಬೇಸರವಾಗಬಹುದು. ಅದಲ್ಲದೇ, ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಆಕರ್ಷಕ ಟೂತ್ ಬ್ರಷ್ ಗಳು ಲಭ್ಯವಿದೆ. ಈ ಬ್ರಷ್ ಗಳು ಸಹಜವಾಗಿ ಮಕ್ಕಳನ್ನು ಆಕರ್ಷಿಸುತ್ತವೆ. ನನ್ನ ಇಷ್ಟದ ಹೊಸ ಬ್ರಷ್ ಎನ್ನುವ ಕಾರಣ ಖುಷಿಯಾಗಿಯೇ ಹಲ್ಲುಜ್ಜಲು ಮನಸ್ಸು ಮಾಡುತ್ತಾರೆ.
ಮಕ್ಕಳಿಗೆ ಗಿಫ್ಟ್ ಕೊಡುತ್ತೇನೆ ಎಂದು ಹೇಳಿ : ಮಕ್ಕಳಿಗೆ ಏನಾದ್ರೂ ಕೊಡುತ್ತೇವೆ ಎಂದರೆ ಎಲ್ಲಾ ಕೆಲಸವನ್ನು ಬೇಗನೇ ಮಾಡಿ ಮುಗಿಸುತ್ತಾರೆ. ನೀವು ಚೆನ್ನಾಗಿ ಹಲ್ಲುಜ್ಜಿದರೆ ಗಿಫ್ಟ್ ಕೊಡುವೆ ಎಂದು ಹೇಳಿ. ಉಡುಗೊರೆಯ ಆಸೆಗೆ ಮಕ್ಕಳು ಹಲ್ಲುಜ್ಜುತ್ತಾರೆ. ಹೆತ್ತವರು ಮಕ್ಕಳಿಗೆ ಗಿಫ್ಟ್ ನೀಡುವುದನ್ನು ಮರೆಯಬೇಡಿ ಹೀಗೆ ಮಾಡುವುದರಿಂದ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಪ್ರೇರೇಪಿಸಿದಂತೆ ಆಗುತ್ತದೆ.
ಮಕ್ಕಳಿಗೆ ಕಥೆ ಹೇಳಿ ಹಲ್ಲುಜ್ಜಲು ಪ್ರೇರೇಪಿಸಿ : ಮಕ್ಕಳಿಗೆ ಕಥೆಗಳೆಂದರೆ ಇಷ್ಟ. ಕಥೆ ಹೇಳುವೆ ಎಂದರೆ ಏನೇ ಕೆಲಸ ಹೇಳಿದ್ರು ಮಾಡಿ ಮುಗಿಸುತ್ತಾರೆ. ಬ್ರಷ್ ಮಾಡೋದಿಲ್ಲ ಎಂದು ಹಠ ಹಿಡಿದರೆ ಕಥೆಗಳನ್ನ ಹೇಳಿ. ನಿಮ್ಮ ಮಗುವಿಗೆ ಇಷ್ಟವಾದ ಪ್ರಾಣಿಗಳ ಬಗ್ಗೆ ಅಥವಾ ನಿನ್ನ ಇಷ್ಟವಾದ ಪ್ರಾಣಿ ಕೂಡ ಹಲ್ಲುಜ್ಜುತ್ತೆ, ಹೇಗೆ ಉಜ್ಜುತ್ತೆ ಎಂದು ಕಥೆಯ ಮಾಲಕ ಹೇಳಿ. ಈ ಟ್ರಿಕ್ಸ್ ಉಪಯೋಗಿಸಿದ್ರೆ ಮಕ್ಕಳು ಹಲ್ಲುಜ್ಜಲು ಹಠ ಮಾಡಲ್ಲ.
ಸಣ್ಣ ವಯಸ್ಸಿನಲ್ಲಿಯೇ ಹಲ್ಲುಜ್ಜಲು ಪ್ರಾರಂಭಿಸಿ : ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಏನೇ ಹೇಳಿದ್ರೂ ಬೇಗನೇ ಕಲಿತು ಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ಮೂರು ವರ್ಷದೊಳಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಹಲ್ಲನ್ನು ಹೇಗೆ ಉಜ್ಜಬೇಕು ಎಂದು ಹೇಳಿ ಕೊಡಿ. ಹೀಗೆ ಕಲಿಸಿ ಕೊಟ್ಟರೆ ಮಕ್ಕಳು ದೊಡ್ಡವರಾದ ಮೇಲೆ ಹಠ ಮಾಡುವುದಿಲ್ಲ.