ಹೆರಿಗೆ ಬಳಿಕ ಸಾಮಾನ್ಯವಾಗಿ ಮಹಿಳೆಯರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾರೆ. ಗರ್ಭಿಣಿಯಾದಾಗ ಕೇವಲ ದೇಹದ ಆಕಾರ ಬದಲಾಗುವುದಿಲ್ಲ. ಕೂದಲಿನಲ್ಲಿ ಕೆಲವು ವಿಚಿತ್ರವಾದ, ಅನಿರೀಕ್ಷಿತ ಬದಲಾವಣೆಗಳನ್ನು ಉಂಟುಮಾಡುತ್ತವೆ.
ಹಾಗೆಯೇ ಮಗುವನ್ನು ಸ್ವಾಗತಿಸಿ ಕೆಲವು ತಿಂಗಳುಗಳ ಕಾಲ ಕೂದಲು ಉದುರುವ ಸಮಸ್ಯೆಯನ್ನು ಸಾಮಾನ್ಯವಾಗಿ ಎದುರಿಸುತ್ತಾರೆ.
ಗರ್ಭಿಣಿಯಾದಾಗ ನಿಮ್ಮ ಕೂದಲು ದಟ್ಟವಾಗಿದ್ದು, ಹೊಳೆಯುವುದನ್ನು ನೋಡಿ ನೀವು ಖುಷಿಗೊಂಡಿರಬಹುದು. ಆದರೆ ಒಮ್ಮೆ ನೀವು ನಿಮ್ಮ ಮಗುವನ್ನು ಪಡೆದ ನಂತರ, ನಿಮ್ಮ ಕೂದಲು ಉದುರುತ್ತಿದೆ ಎಂದು ಕಂಡು ನೀವು ಗಾಬರಿಯಾಗುತ್ತೀರಿ.
ಆದರೆ ಹೆರಿಗೆಯ ನಂತರ ಹಾರ್ಮೋನುಗಳಲ್ಲಿ ಉಂಟಾಗುವ ಬದಲಾವಣೆಯ ಪರಿಣಾಮ ಕೂದಲು ಉದುರುತ್ತವೆ. ಆದರೆ ಪ್ರತಿಯೊಬ್ಬರ ಹಾರ್ಮೋನುಗಳ ಬದಲಾವಣೆಯು ವಿಭಿನ್ನವಾಗಿರುತ್ತದೆ. ಇದು ತುಂಬಾ ನೈಸರ್ಗಿಕ ಪ್ರಕ್ರಿಯೆ ಎಂದು ತಜ್ಞರು ಹೇಳುತ್ತಾರೆ.
ಆಹಾರ ಪದ್ಧತಿ ಹೇಗಿರಬೇಕು
ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಿ, ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸಿ, ಅದರಲ್ಲಿ ವಿಟಮಿನ್ ಹಾಗೂ ಮಿನರಲ್ಸ್ಗಳಿರಲಿ ಹಾಗೆಯೇ ದೇಹವನ್ನು ಹೈಡ್ರೇಟ್ ಆಗಿರಿಸಲು ನಿತ್ಯ ಹೆಚ್ಚು ನೀರು ಕುಡಿಯಿರಿ.
ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
ಒತ್ತಡವು ಹೆಚ್ಚಾದಂತೆ ಹಾರ್ಮೋನ್ ಅಸಮತೋಲನ ಉಂಟಾಗಲಿದೆ. ಹಾಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಂಡಾಗ ಹಾರ್ಮೋನ್ ಸಮತೋಲನ ಉಂಟಾಗಿ ಕೂದಲು ಉದುರುವ ಸಮಸ್ಯೆ ಕಡಿಮೆಯಾಗಲಿದೆ.
ಮೊಟ್ಟೆಯ ಬಿಳಿ ಭಾಗ: ನಿಮಗೆ ನಿಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಸಮಯವಿಲ್ಲದಿದ್ದರೆ, ಒಂದು ಮೊಟ್ಟೆಯ ಬಿಳಿ ಮತ್ತು 3 ಚಮಚ ಆಲಿವ್ ಎಣ್ಣೆಯ ಹೇರ್ ಪ್ಯಾಕ್ ಬಳಕೆ ಮಾಡಿ. ಇದರಿಂದ ಎಷ್ಟು ಪ್ರಯೋಜನವಿದೆ ಎಂಬುದು ಊಹಿಸಲು ಅಸಾಧ್ಯ. ಹೇರ್ ಕಂಡೀಷನಿಂಗ್ ರಿತಿ ಕಾರ್ಯನಿರ್ವಹಿಸುವ ಈ ಹೇರ್ ಪ್ಯಾಕ್ ನಿಮ್ಮ ನೆತ್ತಿಯ ಪೋಷಣೆಗೆ ಹೆಚ್ಚು ಸಹಾಯ ಮಾಡುತ್ತದೆ.
ಮೆಂತ್ಯೆ ಕಾಳು: ಮೆಂತ್ಯೆ ಕಾಳುಗಳು ಕೂದಲು ಉದುರುವಿಕೆಯನ್ನು ತಡೆಯಲು ತುಂಬಾ ಸಹಾಕಾರಿಯಾಗುತ್ತದೆ. ಸ್ವಲ್ಪ ಮೆಂತ್ಯೆ ಕಾಳುಗಳನ್ನು ನೀರಿನಲ್ಲಿ ನೆನೆಸಿ ನಂತರ ರಾತ್ರಿ ಅವುಗಳನ್ನು ಹಾಗೆಯೇ ಬಿಡಿ. ಮರುದಿನ ಬೆಳಿಗ್ಗೆ ಸೋಸಿದ ನೀರನ್ನು ನೆತ್ತಿಗೆ ಹಚ್ಚಿ 2 ಗಂಟೆಗಳ ಕಾಲ ಬಿಡಿ. ಈ ನೀರು ನಿಮ್ಮ ಕೂದಲನ್ನು ಆರೋಗ್ಯಕರವಾಗಿಸುವುದಲ್ಲದೆ, ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಮೊಸರು: ಮೊಸರು ಕೂದಲಿಗೆ ಉತ್ತಮ ಕಂಡಿಷನರ್‌ಗಳಲ್ಲಿ ಒಂದಾಗಿದೆ. ಒಂದು ಸಣ್ಣ ಬಟ್ಟಲಲ್ಲಿ ಮೊಸರನ್ನು ಹಾಕಿಕೊಂಡು ನಿಮ್ಮ ನೆತ್ತಿಗೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಬಿಟ್ಟು ನಂತರ ತಲೆ ಸ್ನಾನ ಮಾಡಿ, ಮ್ಯಾಜಿಕ್ ನೋಡಿ.
ತೆಂಗಿನ ಹಾಲು: ತೆಂಗಿನ ಎಣ್ಣೆಯನ್ನು ಬಳಸುವುದು ಸಾಮಾನ್ಯ ಆದರೆ ತೆಂಗಿನ ಹಾಲು ಸಹ ಕೂದಲು ಉದುರುವುದನ್ನ ತಡೆಯುತ್ತದೆ. ತೆಂಗಿನ ಹಾಲಿನ ನಿಯಮಿತ ಬಳಕೆಯು ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ಕೂದಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಸಾಬೀತಾಗಿದೆ.
ಕೂದಲು ಉದುರುವುದನ್ನ ತಡೆಯಲು ನಾವು ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ ಎನ್ನಲಾಗುತ್ತದೆ. ಹಾಗೆಯೇ ಕೂದಲು ಉದುರುವುದನ್ನ ನಿಲ್ಲಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡಲು ತೆಂಗಿನ ಹಾಲನ್ನು ಸಹ ಬಳಸುವುದು ಹೆಚ್ಚು ಪ್ರಯೋಜನ ನೀಡುತ್ತದೆ.
ಭೃಂಗರಾಜ್:ಭೃಂಗರಾಜ್ ಅಥವಾ ಡೈಸಿ ಕೂದಲು ಉದುರುವುದನ್ನ ತಡೆಯುತ್ತದೆ. ಒಂದು ಹಿಡಿ ಭೃಂಗರಾಜ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಪೇಸ್ಟ್ ಮಾಡಿ. ಆ ಪೇಸ್ಟ್ ಅನ್ನು ನೇರವಾಗಿ ನಿಮ್ಮ ಕೂದಲಿಗೆ ಹಚ್ಚಿ ಅಥವಾ ಹಾಲಿನೊಂದಿಗೆ ಮಿಶ್ರಣ ಮಾಡಿ ಅದನ್ನು ಕೂದಲಿಗೆ ಹೆಚ್ಚಿ. ಇದು ನಿಮ್ಮ ಕೂದಲು ಉದುರುವುದನ್ನ ತಡೆಯುವುದಲ್ಲದೇ, ಇದು ಕೂದಲ ಬೆಳವಣಿಗೆಗೆ ಸಹಕಾರಿ ಕೂಡ.
ನೆಲ್ಲಿಕಾಯಿ: ನೆಲ್ಲಿಕಾಯಿಯು ಕಣ್ಣು, ಕೂದಲು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು. ನೀವು ಪ್ರತಿದಿನ ನೆಲ್ಲಿಕಾಯಿ ರಸವನ್ನು ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜಾಮ್ ಅನ್ನು ತಿನ್ನಬಹುದು. ಇದಲ್ಲದೆ ನೀವು ಕೂದಲಿಗೆ ನೆಲ್ಲಿಕಾಯಿ, ಸೀಗೆಕಾಯಿಯನ್ನು ಮಿಶ್ರಣ ಮಾಡಿ ಹಚ್ಚಿ ಸ್ನಾನ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ.
ವಿಟಮಿನ್ ಇ: ಆರೋಗ್ಯಕರ ಕೂದಲಿಗೆ ವಿಟಮಿನ್ ಇ ಪೋಷಕಾಂಶವು ಮುಖ್ಯವಾಗಿದೆ ಮತ್ತು ನಿಮ್ಮ ಆಹಾರದಲ್ಲಿ ಬೀಜಗಳು ಮತ್ತು ನಟ್ಸ್ ಸೇರಿಸುವುದರಿಂದ ವಿಟಮಿನ್ ಇ ಕೊರತೆಯಾಗದಂತೆ ನೋಡಿಕೊಳ್ಳಬಹುದು.
ಹೆಚ್ಚು ಪ್ರೋಟೀನ್ ಸೇವಿಸಿ: ಕೂದಲು ಬೆಳವಣಿಗೆ ಹೊಂದಲು ಪ್ರೋಟೀನ್ ಇರುವ ಆಹಾರ ಸೇವಿಸುವ ಅವಶ್ಯಕತೆಯಿದೆ. ನಿಮ್ಮ ಕೂದಲು ಶುಷ್ಕವಾಗಿ, ಉದುರುತ್ತಿದ್ದರೆ ಮೊಟ್ಟೆ, ಮಸೂರ, ದ್ವಿದಳ ಧಾನ್ಯಗಳು,ಸೋಯಾ ಮತ್ತು ಕೋಳಿಯಂತಹ ಪ್ರೋಟೀನ್ ಹೊಂದಿರುವ ಆಹಾರಗಳನ್ನು ಸೇವಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ