
ವೈದ್ಯರು ಔಷಧಿ (Medicine) ಬರೆದುಕೊಟ್ಟ ಬಳಿಕ ಅದನ್ನು ಸರಿಯಾದ ಸಮಯಕ್ಕೆ ಸೇವಿಸುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುವುದೂ ಅಷ್ಟೇ ಮುಖ್ಯ. ಆದರೆ ಔಷಧಿ ತೆಗೆದುಕೊಳ್ಳುವಾಗ ಎಷ್ಟು ನೀರು ಕುಡಿಯಬೇಕು, ನೀರಿನ ಬದಲು ಚಹಾ ಅಥವಾ ಹಾಲಿನೊಂದಿಗೆ ಮಾತ್ರೆ ಸೇವಿಸಬಹುದೇ ಎಂಬ ಬಗ್ಗೆ ಹಲವರಿಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಕೆಲವೊಮ್ಮೆ ಇಂತಹ ಸಣ್ಣ ತಪ್ಪುಗಳು ಔಷಧಿ ದೇಹದಲ್ಲಿ ಸರಿಯಾಗಿ ಸೇರುವುದರ ಮೇಲೆ ಪರಿಣಾಮ ಬೀರುವುದಲ್ಲದೆ, ಗಂಟಲು ಅಥವಾ ಹೊಟ್ಟೆಯಲ್ಲಿ ಅಸ್ವಸ್ಥತೆಯನ್ನೂ ಉಂಟುಮಾಡಬಹುದು.
ಎಂಎಂಜಿ ಆಸ್ಪತ್ರೆಯ ಫಾರ್ಮಸಿಸ್ಟ್ ನರೇಂದ್ರ ಶರ್ಮಾ ಅವರ ಪ್ರಕಾರ, ಮಾತ್ರೆ ಅಥವಾ ಕ್ಯಾಪ್ಸೂಲ್ ತೆಗೆದುಕೊಳ್ಳುವಾಗ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಇದರಿಂದ ಔಷಧಿ ಗಂಟಲಿನಲ್ಲಿ ಸಿಲುಕಿಕೊಳ್ಳದೆ ಸುಲಭವಾಗಿ ಹೊಟ್ಟೆ ತಲುಪಲು ಸಹಾಯವಾಗುತ್ತದೆ.
ಅತಿ ಕಡಿಮೆ ನೀರಿನೊಂದಿಗೆ ಮಾತ್ರೆ ನುಂಗಿದರೆ ಅದು ಗಂಟಲು ಅಥವಾ ಅನ್ನನಾಳದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಅಲ್ಲಿ ಉರಿ ಅಥವಾ ಅಸ್ವಸ್ಥತೆ ಉಂಟಾಗಬಹುದು. ಕೆಲವು ಔಷಧಿಗಳು ಅನ್ನನಾಳ ಮತ್ತು ಹೊಟ್ಟೆಯ ಒಳಪದರಕ್ಕೆ ಕಿರಿಕಿರಿ ಉಂಟುಮಾಡುವ ಸಾಧ್ಯತೆಯೂ ಇರುವುದರಿಂದ, ಸಾಕಷ್ಟು ನೀರಿನೊಂದಿಗೆ ಔಷಧಿ ಸೇವಿಸುವುದು ಮುಖ್ಯ.
ಸಾಮಾನ್ಯವಾಗಿ ಮಾತ್ರೆಯನ್ನು ನುಂಗಲು ಸಾಕಾಗುವಷ್ಟು ನೀರು ಕುಡಿಯಬೇಕು. ಎಷ್ಟು ನೀರು ಬೇಕು ಎಂಬುದು ಔಷಧಿಯ ಪ್ರಕಾರ ಬದಲಾಗಬಹುದು. 60 ಮಿಲಿಲೀಟರ್‌ಗಿಂತ ಕಡಿಮೆ ನೀರಿನೊಂದಿಗೆ ಮಾತ್ರೆ ಸೇವಿಸುವುದರಿಂದ ಸಮಸ್ಯೆಯಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದ್ದರಿಂದ ಅತಿ ಕಡಿಮೆ ನೀರಿನೊಂದಿಗೆ ಮಾತ್ರೆ ನುಂಗುವ ಅಭ್ಯಾಸವನ್ನು ತಪ್ಪಿಸುವುದು ಉತ್ತಮ.
ಆದರೆ ಎಲ್ಲ ಔಷಧಿಗಳಿಗೂ ಒಂದೇ ಪ್ರಮಾಣದ ನೀರು ಅಗತ್ಯ ಎಂಬ ನಿಯಮವಿಲ್ಲ. ಔಷಧಿಯ ಲೇಬಲ್‌ನಲ್ಲಿ ನೀಡಿರುವ ಸೂಚನೆ ಅಥವಾ ವೈದ್ಯರು ತಿಳಿಸಿರುವ ವಿಧಾನಕ್ಕೆ ಆದ್ಯತೆ ನೀಡಬೇಕು.
ಡೋರ್, ಗ್ಯಾಸ್ ಮತ್ತೆ ಮತ್ತೆ ಪರಿಶೀಲಿಸುತ್ತೀರಾ?: ನಿಮಗೂ ಒಸಿಡಿ ಇದ್ದರೆ ಇಲ್ಲಿ ಒಮ್ಮೆ ಗಮನಿಸಿ
ಕೆಲವರು ಬೆಳಿಗ್ಗೆ ಸೇವಿಸಬೇಕಾದ ಮಾತ್ರೆಗಳನ್ನು ಚಹಾ ಅಥವಾ ಹಾಲಿನೊಂದಿಗೆ ತೆಗೆದುಕೊಳ್ಳುತ್ತಾರೆ. ಆದರೆ ಇದು ಎಲ್ಲ ಔಷಧಿಗಳಿಗೂ ಸರಿಯಾದ ವಿಧಾನವಲ್ಲ. ಕೆಲವು ಔಷಧಿಗಳ ಹೀರಿಕೊಳ್ಳುವಿಕೆಯ ಮೇಲೆ ಹಾಲು, ಚಹಾ, ಕಾಫಿ ಅಥವಾ ಇತರ ಪಾನೀಯಗಳು ಪರಿಣಾಮ ಬೀರಬಹುದು. ಹೀಗಾಗಿ ವೈದ್ಯರು ಅಥವಾ ಔಷಧಿಯ ಲೇಬಲ್‌ನಲ್ಲಿ ನಿರ್ದಿಷ್ಟವಾಗಿ ಬೇರೆ ಪಾನೀಯದೊಂದಿಗೆ ಸೇವಿಸುವಂತೆ ಸೂಚಿಸದಿದ್ದರೆ, ಸಾಮಾನ್ಯವಾಗಿ ಸಾದಾ ನೀರಿನೊಂದಿಗೆ ಔಷಧಿ ತೆಗೆದುಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕೆಲವು ಮಾತ್ರೆಗಳು ಅನ್ನನಾಳದಲ್ಲಿ ಸಿಲುಕಿಕೊಂಡರೆ ಉರಿ ಅಥವಾ ಇತರ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಮಾತ್ರೆ ಸೇವಿಸಿದ ತಕ್ಷಣ ಮಲಗುವ ಬದಲು, ಔಷಧಿಯ ನಿರ್ದಿಷ್ಟ ಸೂಚನೆಗಳನ್ನು ಪಾಲಿಸುವುದು ಮುಖ್ಯ. ಮಾತ್ರೆಯನ್ನು ಪುಡಿ ಮಾಡುವುದು, ಕ್ಯಾಪ್ಸೂಲ್ ತೆರೆಯುವುದು ಅಥವಾ ಅದರ ಪ್ರಮಾಣವನ್ನು ಸ್ವತಃ ಬದಲಿಸುವುದನ್ನೂ ವೈದ್ಯರು ಅಥವಾ ಫಾರ್ಮಸಿಸ್ಟ್ ಸಲಹೆಯಿಲ್ಲದೆ ಮಾಡಬಾರದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ