ಕಿರಿಕಿರಿಯನ್ನುಂಟು ಮಾಡುವ ಗಂಟಲು ನೋವಿನಿಂದ ಮುಕ್ತಿಗೆ ಈ ಮನೆ ಮದ್ದನ್ನು ಟ್ರೈ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 28, 2024 | 5:51 PM

ಹವಾಮಾನದಲ್ಲಾಗುವ ಸಣ್ಣ ಪುಟ್ಟ ಬದಲಾವಣೆಗಳು ಆರೋಗ್ಯದ ಮೇಲೆ ಪರಿಣಾಮಗಳನ್ನು ಬೀರುತ್ತವೆ. ಈ ವೇಳೆ ಹೆಚ್ಚಿನವರಲ್ಲಿ ಗಂಟಲು ನೋವಿನ ಸಮಸ್ಯೆಯು ಬಾಧಿಸಬಹುದು. ಗಂಟಲು ನೋವಿನಿಂದ ಕಿರಿಕಿರಿ ಅನುಭವಿಸುತ್ತಿದ್ದರೆ ಮನೆ ಮದ್ದಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

ಕಿರಿಕಿರಿಯನ್ನುಂಟು ಮಾಡುವ ಗಂಟಲು ನೋವಿನಿಂದ ಮುಕ್ತಿಗೆ ಈ ಮನೆ ಮದ್ದನ್ನು ಟ್ರೈ ಮಾಡಿ
Follow us on

ಕುಡಿಯುವ ನೀರಿನಿಂದ, ಹವಾಮಾನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗಂಟಲು ನೋವು ಕಾಡುತ್ತದೆ. ಗಂಟಲಿನಲ್ಲಿ ಕಿರಿಕಿರಿ ಅನುಭವವಾದರೆ ಸಾಕು, ಶೀತ ಕೆಮ್ಮಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಮುನ್ಸೂಚನೆಯಾಗಿದೆ. ಆಹಾರ ಸೇವಿಸುವುದಕ್ಕೆ, ರಾತ್ರಿ ನಿದ್ದೆ ಮಾಡುವುದಕ್ಕೂ ಕಷ್ಟವಾಗುತ್ತದೆ. ಬಿಸಿ ಬಿಸಿ ನೀರು ಕುಡಿದರೆ ಸ್ವಲ್ಪ ಆರಾಮದಾಯಕವಾಗುತ್ತದೆ. ಈ ಗಂಟಲು ಕೆರೆತ ಹಾಗೂ ನೋವು ಕಾಣಿಸಿಕೊಂಡಾಗ ಪ್ರಾರಂಭದಲ್ಲೇ ಮನೆಮದ್ದಿನ ಮೂಲಕ ತಕ್ಷಣದ ಪರಿಹಾರ ಕಂಡುಕೊಳ್ಳಬಹುದು.

* ಗಂಟಲು ನೋವಿಗೆ ಶುಂಠಿ ಜಜ್ಜಿಕೊಂಡು ರಸ ತೆಗೆದು ಜೇನು ತುಪ್ಪದೊಂದಿಗೆ ಮಿಶ್ರಣ ಮಾಡಿ ಸೇವಿಸಿದರೆ ಗಂಟಲು ನೋವಿನ ಸಮಸ್ಯೆಯು ಕಡಿಮೆಯಾಗುತ್ತದೆ.

* ಗಂಟಲು ನೋವಿನ ಸಮಸ್ಯೆ ಕಾಣಿಸಿಕೊಂಡರೆ ಕರಿಮೆಣಸಿನ ಪುಡಿ ಕಷಾಯ ಮಾಡಿ ಸೇವಿಸಿದರೆ ಪರಿಣಾಮಕಾರಿ.

* ಸ್ವಲ್ಪ ಕರಿಮೆಣಸಿನ ಪುಡಿಗೆ ಅರ್ಧ ಚಮಚ ಚಕ್ಕೆ ಪುಡಿ ಹಾಗೂ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಗಂಟಲು ನೋವಿಗೆ ಉತ್ತಮವಾದ ಮನೆ ಮದ್ದು.

* ತುಳಸಿ ಎಲೆಯ ರಸಕ್ಕೆ ಬಿಸಿ ನೀರು, ಅರಿಶಿಣ ಮತ್ತು ಸೈಂಧವ ಉಪ್ಪು ಹಾಕಿ ಬಾಯಿ ಮುಕ್ಕಳಿಸುವುದರಿಂದ ನೋವು ಶಮನವಾಗುತ್ತದೆ.

* ಬೆಳ್ಳುಳ್ಳಿ ರಸ ಮತ್ತು ನಿಂಬೆರಸವನ್ನು ಬೆರೆಸಿ ಸೇವಿಸುವುದರಿಂದ ಗಂಟಲು ನೋವಿನೊಂದಿಗೆ ಕಫದ ಸಮಸ್ಯೆಯಿದ್ದಲ್ಲಿ ನಿವಾರಣೆಯಾಗುತ್ತದೆ.

* ಮೋಸಂಬಿ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಗಂಟಲು ಕೆರೆತವು ಕಡಿಮೆಯಾಗುತ್ತದೆ.

* ಉಪ್ಪನ್ನು ಬಿಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಆರಾಮದಾಯಕ ಅನುಭವವಾಗುತ್ತದೆ.

* ಓಮಿನ ಕಷಾಯಕ್ಕೆ ಅಡಿಗೆ ಉಪ್ಪನ್ನು ಸೇರಿಸಿ, ಆಗಾಗ ಬಾಯಿ ಮುಕ್ಕಳಿಸುವುದರಿಂದ ಗಂಟಲು ಹುಣ್ಣು ಗುಣ ಮುಖ ಕಾಣುತ್ತದೆ.

* ಅಳಲೆಕಾಯಿಯನ್ನು ಜೇನುತುಪ್ಪದಲ್ಲಿ ತೇದು, ಗಂಟಲಿಗೆ ಹಚ್ಚುತ್ತಿದ್ದರೆ ಗಂಟಲ ಕೆರೆತವು ದೂರವಾಗುತ್ತದೆ

* ಮಾವಿನ ತೊಗಟೆಯ ಕಷಾಯಕ್ಕೆ ಉಪ್ಪು ಸೇರಿಸಿ, ಬಾಯಿ ಮುಕ್ಕುಳಿಸುವುದ ರಿಂದ ಗಂಟಲು ನೋವಿಗೆ ಪರಿಣಾಮಕಾರಿ ಔಷಧಿ.

ಇದನ್ನೂ ಓದಿ: ಅಧಿಕ ವರ್ಷಗಳು ಇಲ್ಲದಿದ್ದರೆ ಏನಾಗುತ್ತಿತ್ತು ಗೊತ್ತಾ?

* ಹಸಿಶುಂಠಿಯ ಸಣ್ಣ ಸಣ್ಣ ಚೂರುಗಳೊಂದಿಗೆ ಕಲ್ಲು ಸಕ್ಕರೆಯ ಚೂರುಗಳನ್ನು ಬೆರೆಸಿ ಜಗಿದು ರಸವನ್ನು ನುಂಗುತ್ತಿದ್ದರೆ ಗಂಟಲುನೋವು ಕಡಿಮೆಯಾಗುವುದು.

* ಅಡಿಕೆ ಕಷಾಯದಿಂದ ಬಾಯಿ ಮುಕ್ತಳಿಸಿದರೆ ಗಂಟಲುನೋವು ಗುಣ ಮುಖ ಕಾಣುತ್ತದೆ.

* ಲವಂಗವನ್ನು ಉಪ್ಪಿನ ಹರಳಿನೊಂದಿಗೆ ಚಪ್ಪರಿಸುತ್ತಿದ್ದರೆ ಗಂಟಲ ಕೆರೆತ ಕಡಿಮೆ ಆಗುವುದು.

* ಲವಂಗವನ್ನು ಜಗಿದು ರಸವನ್ನು ನುಂಗುವುದರಿಂದ ಗಂಟಲು ನೋವು ಶಮನವಾಗುತ್ತದೆ.

* ಗಂಟಲು ನೋವು ಬಾಧಿಸುತ್ತಿದ್ದರೆ, ತುಳಸಿ ಎಲೆ, ದೊಡ್ಡ ಪತ್ರೆ ಎಲೆಗಳನ್ನು ಅರೆದು, ಅರ್ಧ ಲೀಟರ್ ನೀರಿನಲ್ಲಿ ಕುದಿಸಬೇಕು. ಈ ನೀರಿಗೆ ಉಪ್ಪು ಬೆರೆಸಿ ದಿನಕ್ಕೆ ಮೂರು ಸಲ ಊಟಕ್ಕೂ ಮುನ್ನ ಕುಡಿಯುವುದರಿಂದ ಗಂಟಲಿಗೆ ಸಂಬಂಧ ಪಟ್ಟ ಸಮಸ್ಯೆಗಳು ಗುಣಮುಖ ಕಾಣುವುದು.

ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಬಳಿ ಚರ್ಚಿಸುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ