AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಟ್ರಿಕ್ಸ್‌ ಗೊತ್ತಿದ್ರೆ, ಮನೆಯಲ್ಲಿಯೇ ಬಲು ಸುಲಭವಾಗಿ ಬೆಳೆಯಬಹುದು ಏಲಕ್ಕಿ ಗಿಡ

ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಏಲಕ್ಕಿ ಅತ್ಯಂತ ದುಬಾರಿ ಮಸಾಲೆ ಪದಾರ್ಥ. ಮಸಾಲೆಗಳ ರಾಣಿ ಅಂತಾನೇ ಕರೆಲ್ಪಡುವ ಈ ದುಬಾರಿ ಮಸಾಲೆಯನ್ನು ಮನೆಯ ಅಂಗಳ, ಬಾಲ್ಕನಿಯಲ್ಲಿರುವ ಕೊಂಚ ಜಾಗದಲ್ಲಿಯೆ ಬಲು ಸುಲಭವಾಗಿ ಬೆಳೆಯಬಹುದು. ಸ್ವಲ್ಪ ಕಾಳಜಿಯನ್ನು ವಹಿಸಿದರೆ, ಪಾಟ್‌ನಲ್ಲಿಯೇ ಏಲಕ್ಕಿ ಗಿಡವನ್ನು ಬೆಳೆಯಬಹುದು. ಏಲಕ್ಕಿ ಗಿಡ ಬೆಳೆಯುವುದು ಹೇಗೆ ಎಂಬ ಸರಳ ವಿಧಾನ ಇಲ್ಲಿದೆ.

ಈ ಟ್ರಿಕ್ಸ್‌ ಗೊತ್ತಿದ್ರೆ, ಮನೆಯಲ್ಲಿಯೇ ಬಲು ಸುಲಭವಾಗಿ ಬೆಳೆಯಬಹುದು ಏಲಕ್ಕಿ ಗಿಡ
ಏಲಕ್ಕಿ ಗಿಡImage Credit source: Getty Images
ಮಾಲಾಶ್ರೀ ಅಂಚನ್​
|

Updated on: Oct 07, 2026 | 5:32 PM

Share

ಮಸಾಲೆಗಳ ರಾಣಿ ಎಂದು ಕರೆಯಲ್ಪಡುವ ಏಲಕ್ಕಿ (cardamom) ಒಂದು ಅದ್ಭುತ ಮಸಾಲೆಯಾಗಿದ್ದು, ಇದು ಆಹಾರಕ್ಕೆ ಉತ್ತಮ ರುಚಿ ಮತ್ತು ಘಮವನ್ನು ನೀಡುತ್ತದೆ. ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಸಣ್ಣ ಗಾತ್ರದ ಈ ಮಸಾಲೆ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಹೌದು ಏಲಕ್ಕಿ ಉತ್ಕರ್ಷಣ ನಿರೋಧಕ, ಸತು, ಪೊಟ್ಯಾಸಿಯಂ, ವಿಟಮಿನ್‌ ಸಿ ಸೇರಿದಂತೆ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಗೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ. ಸಾಮಾನ್ಯವಾಗಿ ದುಬಾರಿ ಮಸಾಲೆಯನ್ನು ಮಾರುಕಟ್ಟೆಯಿಂದಲೇ ಕೊಳ್ಳುತ್ತೇವೆ. ಈ ಏಲಕ್ಕಿಯನ್ನು ಮನೆಯಲ್ಲೂ ಸಹ ಬೆಳೆಯಬಹುದು. ಅಂಗಳ ಹಾಗೂ ಬಾಲ್ಕನಿಯಲ್ಲಿರುವ ಸ್ವಲ್ಪ ಜಾಗದಲ್ಲಿ ಪಾಟ್‌ನಲ್ಲಿಯೇ ಏಲಕ್ಕಿ ಗಿಡವನ್ನು ಬೆಳೆಯಬಹುದು. ಉತ್ತಮ ಫಸಲು ಬರಲು ನೀವು ಈ ಒಂದಷ್ಟು ಸರಳ ಸಲಹೆಗಳನ್ನು ಪಾಲಿಸಿದರೆ ಸಾಕು.

ಪಾಟ್‌ನಲ್ಲಿ ಸುಲಭವಾಗಿ ಬೆಳೆಸಬಹುದು ಏಲಕ್ಕಿ ಗಿಡ:

ಮನೆಯಲ್ಲಿರುವ ಸಣ್ಣ ಜಾಗದಲ್ಲಿ ಪಾಟ್‌ ಇಟ್ಟು ಅದರಲ್ಲಿ ಏಲಕ್ಕಿ ಗಿಡ ಬೆಳೆಯುವುದು ತುಂಬಾ ಸುಲಭ. ಅದನ್ನು ಬೆಳೆಸಲು ಸರಿಯಾದ ಕಾಳಜಿ ಮತ್ತು ಕೆಲವು ವಿಷಯಗಳ ಬಗ್ಗೆ ಗಮನ ಕೊಡುವುದು ಅವಶ್ಯಕ. ಏಲಕ್ಕಿ ಸಸ್ಯಗಳ ಬೆಳವಣಿಗೆ ತುಂಬಾ ನಿಧಾನವಾಗಿರುತ್ತದೆ. ಆದ್ದರಿಂದ ಇದಕ್ಕೆ ತುಸು ಹೆಚ್ಚು ಕಾಳಜಿ ವಹಿಸಬೇಕು. ಸಾಮಾನ್ಯವಾಗಿ, ಏಲಕ್ಕಿ ಗಿಡ ಬೆಳೆಯಲು ಮತ್ತು ಫಲ ಬರಲು ಸುಮಾರು ಒಂದರಿಂದ ಮೂರು ವರ್ಷ ತೆಗೆದುಕೊಳ್ಳಬಹುದು.

ಏಲಕ್ಕಿ ಗಿಡವನ್ನು ಎರಡು ರೀತಿಯಲ್ಲಿ ಬೆಳೆಸಬಹುದು:

ನೀವು ಮಾರುಕಟ್ಟೆಯಿಂದ ಸಸಿಗಳನ್ನು ಖರೀದಿಸುವ ಮೂಲಕ ಏಲಕ್ಕಿ ಗಿಡಗಳನ್ನು ಬೆಳೆಸಬಹುದು. ಪರ್ಯಾಯವಾಗಿ, ನೀವು ಬೀಜಗಳಿಂದಲೂ ಏಲಕ್ಕಿ ಗಿಡ ಬೆಳೆಸಬಹುದು. ನೀವು ಬೀಜದ ಸಹಾಯದಿಂದ ಗಿಡ ಬೆಳೆಯಲು ಬಯಸಿದರೆ, ಮಾರುಕಟ್ಟೆಯಿಂದ ಹಸಿರು ಏಲಕ್ಕಿ ಬೀಜಗಳನ್ನೇ ಖರೀದಿಸಿ.  ಬೀಜಗಳು ತಾಜಾ ಮತ್ತು ರಾಸಾಯನಿಕ ಮುಕ್ತವಾಗಿದ್ದರೆ ಒಳ್ಳೆಯದು.  ಹೀಗೆ ತಂದ ಏಲಕ್ಕಿಯ ಸಿಪ್ಪೆ ಸುಳಿದು, ಅದರ ಬೀಜಗಳನ್ನು ಚೆನ್ನಾಗಿ ತೊಳೆದು ನಂತರ ಮೊಳಕೆಯೊಡೆಯಲು ಅನುಕೂಲವಾಗುವಂತೆ ಸುಮಾರು ಒಂದು ದಿನ ನೀರಿನಲ್ಲಿ ನೆನೆಸಿಡಿ. ಮೊಳಕೆಯೊಡೆದ ಕಾಳುಗಳನ್ನು ಮಣ್ಣಿನಲ್ಲಿ ನೆಟ್ಟರಾಯಿತು.

ಏಲಕ್ಕಿ ಗಿಡ ಬೆಳೆಯಲು ಯಾವ ರೀತಿಯ ಮಣ್ಣು ಬೇಕು?

ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಏಲಕ್ಕಿ ಗಿಡವನ್ನು ಬೆಳೆಯಲು ಸೂಕ್ತವಾಗಿದೆ. ಇದಕ್ಕಾಗಿ ತೋಟದ ಮಣ್ಣನ್ನು ಬಳಸಬಹುದು. ಈ ಮಣ್ಣಿಗೆ ಮರಳು, ಕೊಕೊಪೀಟ್ ಮತ್ತು ಸಾವಯವ ಗೊಬ್ಬರವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಪಾಟ್‌ನಲ್ಲಿ ಹಾಕಿ. ಈ ಮಿಶ್ರಣವು ಮಣ್ಣನ್ನು ಹಗುರಗೊಳಿಸುತ್ತದೆ ಮತ್ತು ಬೇರುಗಳಲ್ಲಿ ನೀರು ನಿಲ್ಲದಂತೆ ತಡೆಯುತ್ತದೆ.

ಏಲಕ್ಕಿ ಬೀಜ ಬಿತ್ತನೆ ವಿಧಾನ:

ಮೊದಲು, ನೆನೆಸಿದ ಬೀಜಗಳನ್ನು ಸಣ್ಣ ಪಾತ್ರೆಯಲ್ಲಿ ಬಿತ್ತಿ. ಬೀಜಗಳನ್ನು ತುಂಬಾ ಆಳವಾಗಿರದೆ, ಹಗುರವಾದ ಮಣ್ಣಿನ ಪದರದಿಂದ ಮುಚ್ಚಿ. ನಂತರ, ಸ್ವಲ್ಪ ನೀರು ಸಿಂಪಡಿಸಿ ಮತ್ತು ಬೀಜ ಬಿತ್ತನೆ ಮಾಡಿದ ಪಾತ್ರೆಯನ್ನು ನೆರಳು ಮತ್ತು ಸ್ವಲ್ಪ ಸೂರ್ಯನ ಬೆಳಕನ್ನು ಪಡೆಯುವ ಸ್ಥಳದಲ್ಲಿ ಇರಿಸಿ. ಬೀಜಗಳು ಕೆಲವು ವಾರಗಳಲ್ಲಿ ಮೊಳಕೆಯೊಡೆದು,  ಸಸ್ಯವು ಸುಮಾರು 3 ರಿಂದ 4 ಇಂಚು ಎತ್ತರವಾಗಿ ಬೆಳೆದಾಗ ಆ ಗಿಡವನ್ನು ಪಾಟ್‌ನಲ್ಲಿ ಜೋಪಾನವಾಗಿ ನೆಟ್ಟು ಬಿಡಿ. ನೆಟ್ಟ ಗಿಡಕ್ಕೆ ಬೆಳಿಗ್ಗೆ ಮತ್ತು ಸಂಜೆ ನೀರು ಸಿಂಪಡಿಸಿ. 30 ರಿಂದ 40 ದಿನಗಳ ಬಳಿಕ ಗಿಡ ಸೊಂಪಾಗಿ ಬೆಳೆಯಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: 7 ದಿನಗಳವರೆಗೆ ತಪ್ಪದೇ ಜೀರಿಗೆ ನೀರು ಕುಡಿಯಿರಿ, ಈ ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ಏಲಕ್ಕಿ ಗಿಡ ಬೆಳೆಯಲು ವಾತಾವರಣ ಹೇಗಿರಬೇಕು?

ಏಲಕ್ಕಿ ಗಿಡಗಳು ತೇವಾಂಶವುಳ್ಳ ಮತ್ತು ನೆರಳಿನ ವಾತಾವರಣದಲ್ಲಿ ಬೆಳೆಯುತ್ತವೆ. ಆದ್ದರಿಂದ, ಅವುಗಳನ್ನು ನೇರ ಸೂರ್ಯನ ಬಿಸಿಲಿನಲ್ಲಿ ಇಡುವ ಬದಲು, ಸೌಮ್ಯವಾದ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇರಿಸಿ. ನೀವು ಪಾಟ್‌ ಅನ್ನು ಬಾಲ್ಕನಿಯಂತಹ ಸ್ಥಳದಲ್ಲಿ ಅಥವಾ ದೊಡ್ಡ ಸಸ್ಯದ ಕೆಳಗೆ ಇಡಬಹುದು.

ಏಲಕ್ಕಿ ಫಸಲು ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಏಲಕ್ಕಿ ಗಿಡವು ವರ್ಷಪೂರ್ತಿ ಹಸಿರಿನಿಂದ ಕೂಡಿರುತ್ತದೆ. ಆದರೆ ಏಲಕ್ಕಿ ಕಾಯಿಗಳು ಕಾಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಗಿಡ ನೆಟ್ಟ ನಂತರ ಸಸ್ಯವು ಹೂವುಗಳು ಅರಳಲು ಮತ್ತು ಕಾಯಿಗಳು ಕಾಣಿಸಿಕೊಳ್ಳಲು ಸಾಮಾನ್ಯವಾಗಿ ಎರಡರಿಂದ ನಾಲ್ಕು ವರ್ಷಗಳು ಬೇಕಾಗುತ್ತದೆ. ಈ ಸಸ್ಯವು ನಿಧಾನವಾಗಿ ಬೆಳೆಯುವುದರಿಂದ ತಾಳ್ಮೆ ಮತ್ತು ಸರಿಯಾದ ಆರೈಕೆ ಅತ್ಯಗತ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More