ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಅಂಶಗಳು ಇರುವುದರಿಂದ, ಮೊಟ್ಟೆ ಸೇವಿಸಲು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಅದರಂತೆ ದೈನಂದಿನ ಉಪಾಹಾರದಲ್ಲಿ ಅಥವಾ ಊಟದಲ್ಲಿ ನಾವು ಮೊಟ್ಟೆಗಳನ್ನು ಸೇವಿಸುತ್ತೇವೆ. ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ತಿನ್ನುವುದರಿಂದ ಹೆಚ್ಚು ಕಾಲ ಹಸಿವಾಗುವುದಿಲ್ಲ. ಆದರೆ ಮೊಟ್ಟೆಯನ್ನು ಬೇಯಿಸುವಾಗ ಸಾಕಷ್ಟು ಜನರು ಮೊಟ್ಟೆ ಒಡೆದು ಹೋಗುತ್ತದೆ ಅಥವಾ ಸರಿಯಾಗಿ ಸಿಪ್ಪೆ ತೆಗೆಯಲು ಆಗುವುದಿಲ್ಲ ಹೀಗೆ ಸಾಕಷ್ಟು ಸಮಸ್ಯೆಗಳನ್ನು ಹೇಳುವುದುಂಟು. ಮೊಟ್ಟೆಯನ್ನು ಕುದಿಸುವಲ್ಲಿ ಅನೇಕರು ಮಾಡುವ ಸಣ್ಣಪುಟ್ಟ ತಪ್ಪುಗಳು ಮೊಟ್ಟೆ ಒಡೆದುಹೋಗಲು ಕಾರಣವಾಹಬಹುದು. ಆದ್ದರಿಂದ ಇಲ್ಲಿ ನೀಡಿರುವ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಮೊಟ್ಟೆಯನ್ನು ಸರಿಯಾದ ಕ್ರಮದಲ್ಲಿ ಬೇಯಿಸಬಹುದಾಗಿದೆ.
ಅಗಲವಾದ ಪಾತ್ರೆಯಲ್ಲಿ ಬೇಯಿಸಿ:
ನೀವು ಎರಡು ಮೊಟ್ಟೆಗಳನ್ನು ಬೇಯಿಸುತ್ತಿದ್ದರೆ, ಅಗಲವಾದ ಪಾತ್ರೆಯನ್ನು ಆಯ್ಕೆ ಮಾಡಿ. ಎರಡು ಅಥವಾ ಎರಡಕ್ಕಿಂತ ಹೆಚ್ಚು ಮೊಟ್ಟೆಯನ್ನು ಬೇಯಿಸುವಾಗ ಚಿಕ್ಕ ಪಾತ್ರೆಯಲ್ಲಿ ಹಾಕಿದರೆ ಅದು ಪರಸ್ಪರ ಸ್ಪರ್ಶಿಸಿ ಒಡೆದು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅಗಲವಾದ ಪಾತ್ರೆಯಲ್ಲಿ ಬೇಯಿಸುವುದರಿಂದ ಪರಸ್ಪರ ಮೊಟ್ಟೆಗಳು ಸ್ಪರ್ಶಿಸುವುದಿಲ್ಲ.
ಫ್ರಿಡ್ಜ್ ನಿಂದ ತೆಗೆದ ತಕ್ಷಣ ಬೇಯಿಸಬೇಡಿ:
ಅತಿ ಹೆಚ್ಚು ತಂಪಿನ ವಾತಾವರಣದಲ್ಲಿರುವ ಕೋಳಿ ಮೊಟ್ಟೆಯನ್ನು ನೇರ ವಾಗಿ ಬೇಯಿಸಲು ಹೋದರೆ ಅದು ಒಡೆದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಫ್ರಿಡ್ಜ್ ನಿಂದ ನೇರವಾಗಿ ನೀರಿನಲ್ಲಿ ಹಾಕಿ ಕುದಿಸಿದರೆ ಅವು ಬಿರುಕು ಬಿಡುವುದು ಖಂಡಿತ. ಆದ್ದರಿಂದ ನೀವು ಮೊದಲು ಮೊಟ್ಟೆಗಳನ್ನು ಫ್ರಿಡ್ಜ್ ನಿಂದ ಹೊರತೆಗೆದು ಕೋಣೆಯ ಉಷ್ಣಾಂಶದಲ್ಲಿ 10 ಅಥವಾ 15 ನಿಮಿಷಗಳ ಕಾಲ ಇಡಿ. ನಂತರ ತಾಪಮಾನವು ಸಾಮಾನ್ಯವಾಗಿರುತ್ತದೆ. ಅದರ ನಂತರ ಅದನ್ನು ಕುದಿಸುವುದು ಉತ್ತಮ.
ಇದನ್ನೂ ಓದಿ: ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದೆಯಾ? ಇಂದೇ ಬಿಟ್ಟು ಬಿಡಿ
ಕುದಿಯುವ ನೀರಿಗೆ ಉಪ್ಪು ಸೇರಿಸಿ:
ಕೆಲವೊಮ್ಮೆ ಮೊಟ್ಟೆ ಸರಿಯಾಗಿ ಬೆಂದ ನಂತರವೂ ಅದರ ಸಿಪ್ಪೆ ತೆಗೆಯಲು ಕಷ್ಟವಾಗುತ್ತದೆ. ಆದ್ದರಿಂದ ನೀವು ಮೊಟ್ಟೆ ಬೇಯಿಸುವ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ. ಉಪ್ಪು ನೀರಿನಲ್ಲಿ ಮೊಟ್ಟೆಗಳನ್ನು ಕುದಿಸುವುದರಿಂದ ಸಿಪ್ಪೆ ಸುಲಿಯಲು ಸುಲಭವಾಗುತ್ತದೆ.
ಮಧ್ಯಮ ಉರಿಯಲ್ಲಿ ಬೇಯಿಸಿ:
ಮೊಟ್ಟೆಗಳನ್ನು ಕುದಿಸುವಾಗ ಉರಿ ಹೆಚ್ಚಿರಬಾರದು. ಮೊಟ್ಟೆಯನ್ನು ಯಾವಾಗಲೂ ಮಧ್ಯಮ ಉರಿಯಲ್ಲಿ ಬೇಯಿಸಬೇಕು. ಹೀಗೆ ಮಾಡುವುದರಿಂದ ಮೊಟ್ಟೆ ಒಡೆಯುವುದಿಲ್ಲ. ಇದಲ್ಲದೆ, ಸಿಪ್ಪೆಯು ಸುಲಭವಾಗಿ ತೆಗೆಯಬಹುದಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: