ಅಕ್ಟೋಬರ್ 26 ರಂದು ವಿಶ್ವ ಸಂಸ್ಥೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಎರಡನೆಯ ಮಹಾಯುದ್ಧದ ಉಂಟಾದ ಘೋರ ಪರಿಣಾಮಗಳನ್ನು ಅರಿತು, ಮುಂದೆ ಯುದ್ಧಗಳಾಗುವುದನ್ನು ತಪ್ಪಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ, ಉತ್ತಮ ‘ಜಗತ್ತು‘ ನಿರ್ಮಿಸುವ ಉದ್ದೇಶದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಆ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಅಕ್ಟೋಬರ್ 24 ವಿಶ್ವ ಸಂಸ್ಥೆಯು ಸ್ಥಾಪಿತವಾದ ದಿನವಾಗಿದ್ದು ಇದರ ಸವಿನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವಸಂಸ್ಥೆಯನ್ನು ಅಧಿಕೃತವಾಗಿ 24 ಅಕ್ಟೋಬರ್ 1945 ರಂದು ಸ್ಥಾಪಿಸಲಾಯಿತು. ಎರಡನೆಯ ಮಹಾಯುದ್ಧದ ನಂತರ, ಪ್ರಪಂಚದಾದ್ಯಂತದ ದೇಶಗಳು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಹೆಚ್ಚಿಸಲು ಸಂಘಟನೆಯನ್ನು ರಚಿಸಲು ತಯಾರಿ ನಡೆಸಿತು. ಇದಕ್ಕಾಗಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಮ್ಮೇಳನವನ್ನು ಕರೆಯಲಾಯಿತು, ಇದರಲ್ಲಿ ವಿಶ್ವದ 50 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯ ಕೊನೆಯ ದಿನದಂದು, 24 ಅಕ್ಟೋಬರ್ 1945 ರಂದು ಜಾರಿಗೆ ಬಂದ ಚಾರ್ಟರ್ ಗೆ ಸಹಿ ಹಾಕಲಾಯಿತು. 31 ಅಕ್ಟೋಬರ್ 1947 ರಂದು, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಸಂಘಟನೆಯ ಗುರಿಗಳು ಮತ್ತು ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಕೆಲಸಕ್ಕೆ ಜನರನ್ನು ಒಟ್ಟುಗೂಡಿಸಲು ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿತು. 1971 ರಲ್ಲಿ, ಯುಎನ್ ಅಸೆಂಬ್ಲಿ ಈ ದಿನವನ್ನು ವಿಶ್ವಸಂಸ್ಥೆಯಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 24 ರಂದು ವಿಶ್ವ ಸಂಸ್ಥೆಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಶಾಂತಿ, ಭದ್ರತೆ ಕಾಪಾಡುವ ಮೂಲಕ ರಾಷ್ಟ್ರಗಳ ನಡುವೆ ಸೌಹಾರ್ದ ಸಂಬಂಧ ಬೆಳೆಸುವ ಗುರಿಯನ್ನು ಹೊಂದಿರುವ ಒಂದು ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಅಂತಾರಾಷ್ಟ್ರೀಯ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ದೇಶಗಳನ್ನು ಒಟ್ಟುಗೂಡಿಸಲು ಸಮನ್ವಯ ಕೇಂದ್ರವಾಗಿ ಈ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವಸಂಸ್ಥೆಯ ದಿನವನ್ನು ಸಾಮಾನ್ಯವಾಗಿ ನ್ಯೂಯಾರ್ಕ್‌ನ ಪ್ರಧಾನ ಕಚೇರಿಯಲ್ಲಿರುವ ಸಂಸ್ಥೆಯ ಜನರಲ್ ಅಸೆಂಬ್ಲಿ ಹಾಲ್‌ನಲ್ಲಿ ಏಕತೆಯ ಸಂಕೇತವಾಗಿ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಆಚರಿಸುತ್ತವೆ. ಯುಎನ್ ಸದಸ್ಯ ರಾಷ್ಟ್ರಗಳಲ್ಲಿ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಸಂಸ್ಥೆಗಳು ಯುಎನ್ ದಿನದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ, ಇದರಲ್ಲಿ ವಿಶ್ವಸಂಸ್ಥೆಯ ಪ್ರಮುಖ ಕೆಲಸಗಳು ಮತ್ತು ಸಾಧನೆಗಳನ್ನು ಚರ್ಚಿಸಲಾಗುತ್ತದೆ.
ವಿಶ್ವಸಂಸ್ಥೆಯ ದಿನವು ಮಾನವೀಯತೆ, ಏಕತೆ ಮತ್ತು ವಿಶ್ವ ಶಾಂತಿಯ ಕಲ್ಪನೆಯನ್ನು ಒಳಗೊಂಡಿರುವ ಈ ಸಂಸ್ಥೆಯನ್ನು ರಚಿಸಲಾದ ಪ್ರಮುಖ ವಿಷಯಗಳನ್ನು ನೆನಪಿಟ್ಟುಕೊಳ್ಳುವ ದಿನವಾಗಿದೆ. ವಿಶ್ವಸಂಸ್ಥೆಯು ಎರಡು ಮಹಾಯುದ್ಧಗಳು ಮತ್ತು ಶೀತಲ ಸಮರದ ನಂತರ ಮಾನವಕುಲವನ್ನು ಯುದ್ಧದ ಬಿಕ್ಕಟ್ಟು ಮತ್ತು ವಿನಾಶದ ಕ್ರೋಧದಿಂದ ರಕ್ಷಿಸಲು ಸ್ಥಾಪಿಸಲಾಯಿತು. ಅದರ ಗುರಿಯು ಎರಡನೆಯ ಮಹಾಯುದ್ಧದಂತಹ ಯುದ್ಧದಿಂದ ಜಗತ್ತನ್ನು ರಕ್ಷಿಸುವುದಾಗಿದೆ.
ಇದನ್ನೂ ಓದಿ: ಭಾರತದ ಈ ಗ್ರಾಮದಲ್ಲಿ ಶೂ, ಚಪ್ಪಲಿ ಧರಿಸುವಂತಿಲ್ಲ, ಯಾಕೆ ಗೊತ್ತಾ?
1945 ರ ಜೂನ್ 26 ರಂದು ಯುಎನ್ ಚಾರ್ಟರ್‌ಗೆ ಸಹಿ ಹಾಕಿದ ಮೊದಲ 50 ದೇಶಗಳಲ್ಲಿ ಭಾರತವೂ ಸೇರಿದೆ. ಭಾರತವು 30 ಅಕ್ಟೋಬರ್ 1945 ರಂದು ಅಧಿಕೃತವಾಗಿ ಯುಎನ್‌ನ ಭಾಗವಾಯಿತು.
ವಿಶ್ವಸಂಸ್ಥೆ ರಚನೆಯಾದಾಗ 50 ಸದಸ್ಯರಿದ್ದರು. ಇಂದು 193 ರಾಷ್ಟ್ರಗಳು ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಹೊಂದಿವೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯ ಹಲವಾರು ಶಾಖೆಗಳಿವೆ. ಇದು ಸಾಮಾನ್ಯ ಸಭೆ, ಭದ್ರತಾ ಮಂಡಳಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿ, ಧರ್ಮದರ್ಶಿತ್ವ ಮಂಡಳಿ, ಅಂತಾರಾಷ್ಟ್ರೀಯ ನ್ಯಾಯಾಲಯ ಹಾಗೂ ಸಚಿವಾಲಯವನ್ನು ಒಳಗೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ