ವಿದೇಶಗಳಂತೆ ಭಾರತದ ಪುರುಷರಲ್ಲೂ ಹೆಚ್ಚುತ್ತಿದೆ ಪಿತೃತ್ವ ರಜೆ ತೆಗೆದುಕೊಳ್ಳುವ ಕ್ರಮ: ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

| Updated By: Pavitra Bhat Jigalemane

Updated on: Mar 06, 2022 | 5:11 PM

ಹೆರಿಗೆಯ ಸಂದರ್ಭದಲ್ಲಿ ಪತಿಯ ಇರುವಿಕೆ ಪ್ರತೀ ಹೆಣ್ಣಿಗೆ ಒಂದಷ್ಟು ದೈರ್ಯ ನೀಡುತ್ತದೆ.  ಇದೇ ಕಾರಣದಿಂದ ಭಾರತದಲ್ಲಿಯೂ ಈಗ ಪುರುಷರಿಗೆ ವೇತನ ಸಹಿತ ಪಿತೃತ್ವ ರಜೆಯನ್ನು ಕೆಲವು ಕಂಪನಿಗಳು ನೀಡುತ್ತಿವೆ. 

ವಿದೇಶಗಳಂತೆ ಭಾರತದ ಪುರುಷರಲ್ಲೂ ಹೆಚ್ಚುತ್ತಿದೆ ಪಿತೃತ್ವ ರಜೆ ತೆಗೆದುಕೊಳ್ಳುವ ಕ್ರಮ: ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಪ್ರತೀ ದಂಪತಿಗೆ ತಂದೆ ತಾಯಿಗಳಾಗುವುದು ವಿಶೇಷ ಸಂದರ್ಭ. ಒಂದಷ್ಟು ಹೊಸ ಅನುಭವ, ಭರಪೂರ ಕಾಳಜಿಯನ್ನು ನೀಡುವ ದಿನಗಳವು.  ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ 26 ವಾರಗಳ ವೇತನ ಸಹಿತ ಮಾತೃತ್ವ ರಜೆ (Maternity Leave) ಯನ್ನು ನೀಡಲಾಗುತ್ತದೆ. ಭಾರತದಲ್ಲಿ ಜಗತ್ತಿನಲ್ಲಿಯೆ ಹೆಚ್ಚು ದಿನಗಳ ಮಾತೃತ್ವ ರಜೆಯನ್ನು ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಕಂಪನಿಗಳು ಪುರುಷರಿಗೂ ಪಿತೃತ್ವ ರಜೆ (Paternity Leave) ಯನ್ನು ನೀಡುತ್ತಿವೆ. ತಂದೆಯಾಗುತ್ತಿರುವ ಪುರುಷರಿಗೆ, ಮಗುವನ್ನು ದತ್ತು ತೆಗೆದುಕೊಂಡ ಪುರುಷರಿಗೆ ಅಷ್ಟೇ ಯಾಕೆ ಸಲಿಂಗಿ ದಂಪತಿಗೂ ಪಿತೃತ್ವ ರಜೆಯನ್ನು ನೀಡಲಾಗುತ್ತಿದೆ.  ಭಾರತದ ಫೆಡರಲ್ ಮತ್ತು ಹೆಚ್ಚಿನ ರಾಜ್ಯ ಸರ್ಕಾರಗಳು ವಿವಾಹಿತ ಪುರುಷ ಉದ್ಯೋಗಿಗಳಿಗೆ ಮಗುವಿನ ಜನನದ ಸಮಯದಲ್ಲಿ ಅಥವಾ ಆರು ತಿಂಗಳೊಳಗೆ ಹದಿನೈದು ದಿನಗಳ ರಜೆ ತೆಗೆದುಕೊಳ್ಳಲು ಅವಕಾಶ ನೀಡುತ್ತವೆ.

ಹಿಂದಿನ ಕಾಲದಲ್ಲಿ ಭಾರತದಲ್ಲಿ ಅವಿಭಕ್ತ ಕುಟುಂಬಗಳಿದ್ದವು. ಇದರಿಂದ ಹೆಣ್ಣು ತಾಯಿಯಾದರೆ ಆಕೆಯನ್ನು ಅರೈಕೆ ಮಾಡಲು ಸಾಕಷ್ಟು ಮಂದಿ ಹಿರಿಯರು ಇರುತ್ತಿದ್ದರು. ಆದರೆ ಈಗ ವಿಭಕ್ತ ಕುಟುಂಬಗಳೇ ಹೆಚ್ಚು. ಹೀಗಾಗಿ ಪತ್ನಿಯ ಆರೈಕೆಗೆ ಪತಿ ನಿಲ್ಲಲೇಬೇಕಾಗಿದೆ. ಅದರಲ್ಲೂ ಹೆರಿಗೆಯ ಸಂದರ್ಭದಲ್ಲಿ ಪತಿಯ ಇರುವಿಕೆ ಪ್ರತೀ ಹೆಣ್ಣಿಗೆ ಒಂದಷ್ಟು ದೈರ್ಯ ನೀಡುತ್ತದೆ.  ಇದೇ ಕಾರಣದಿಂದ ಭಾರತದಲ್ಲಿಯೂ ಈಗ ಪುರುಷರಿಗೆ ವೇತನ ಸಹಿತ ಪಿತೃತ್ವ ರಜೆಯನ್ನು ಕೆಲವು ಕಂಪನಿಗಳು ನೀಡುತ್ತಿವೆ.

ವಿದೇಶಗಳಲ್ಲಿ ಈ ರೀತಿ ವೇತನ ನೀಡಿ ಪಿತೃತ್ವ ರಜೆ ನೀಡುವುದು ಸಾಮಾನ್ಯವಾಗಿದೆ, ಸ್ವೀಡನ್​, ಲಂಡನ್​ನಂತಹ ದೇಶಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಭೇದ ಭಾವವಿಲ್ಲದೆ ಪೋಷಕರಾಗುವ ಖುಷಿಯನ್ನು ಅನುಭವಿಸಲು ರಜೆಯನ್ನು ನೀಡುತ್ತಾರೆ. ಅದಕ್ಕೆ ಉದಾಹರಣೆ ಎಂದರೆ ಲಂಡನ್​ನ  ಹಾಟ್​ ಡ್ರಿಂಕ್ಸ್​ಗಳನ್ನು ಪೂರೈಸುವ ಜಗತ್ತಿನ ಅತಿದೊಡ್ಡ ಕಂಪನಿ ಡಿಯಾಜಿಯೊ ಪುರುಷ ಮತ್ತು ಮಹಿಳೆ ಇಬ್ಬರಿಗೂ  26 ವಾರಗಳ ಪೋಷಕರ ರಜೆಯನ್ನು ನೀಡುತ್ತದೆ.

ಕಳೆದ ತಿಂಗಳು ಟ್ವಿಟರ್​ ಸಿಇಒ ಭಾರತೀಯ ಮೂಲದ ಪರಾಗ್​ ಅಗರ್ವಾಲ್​ ಎರಡನೇ ಮಗುವಿಗೆ ತಂದೆಯಾದರು. ಈ ವೇಳೆ ತಮ್ಮ ಉದ್ಯೋಗಕ್ಕೆ ಕೆಲವು ವಾರಗಳ ರಜೆಯನ್ನು ಘೋಷಿಸಿದ್ದರು. ಆ ಬಳಿಕ ಕೆಲವು ಕಂಪನಿಗಳು ಕೂಡ ಈಗ ಪಿತೃತ್ವ ರಜೆಯನ್ನುನೀಡುವುದಾಗಿ ಹೇಳುತ್ತಿವೆ ಎಂದು ವರದಿ ತಿಳಿಸಿದೆ.

ವೇತನ ಸಹಿತ ಪಿತೃತ್ವ ರಜೆಯನ್ನು ಪಡೆದ ಹಲವು ಪುರುಷ ಉದ್ಯೋಗಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.  ಈ ಬಗ್ಗೆ ಫೆಡರಲ್ ಸರ್ಕಾರದ ಉದ್ಯೋಗಿ ಹಿಮಾಂಶು ಧಂಡಾ, ತಂದೆಯರಿಗೆ ಒಂದು ತಿಂಗಳ ಸಂಬಳದ ರಜೆ ಬಹಳಷ್ಟು ಸಹಾಯ ಮಾಡುತ್ತದೆ. ವಿಶೇಷವಾಗಿ ನಮ್ಮಂತಹ ಅನುಭವವಿಲ್ಲದ ಜನರಿಗೆ ಇದು ತುಂಬಾ ಸವಾಲಿನ ಸಂಗತಿಯಾಗಿದೆ. ಬಹಳಷ್ಟು ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ಮಗುವಿನ ನಿದ್ರೆ, ತಾಯಿಯ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದಂತಹ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ ಎಂದಿದ್ದಾರೆ.

ಪಿತೃತ್ವ ರಜೆಯನ್ನು ಪಡೆದ ಖಾನ್​ ಎನ್ನುವವರು ಪಿತೃತ್ವ ರಜೆಯ ಬಗ್ಗೆ ಮಾತನಾಡಿ, ನಾನು 2020ರಲ್ಲಿ ಮೂರನೇ ಮಗುವಿಗೆ ತಂದೆಯಾಗಿದ್ದೇನೆ, ಈ ಸಮಯದಲ್ಲಿ, ಅನುಭವವು ಗಮನಾರ್ಹವಾಗಿ ವಿಭಿನ್ನವಾಗಿತ್ತು. ನಾನು ಕೆಲಸ ಮಾಡುತ್ತಿದ್ದ ಟೆಕ್ ಕಂಪನಿಯು ಪಿತೃತ್ವ ರಜೆಯನ್ನು ಒಂದರಿಂದ ಮೂರು ವಾರಗಳಿಗೆ ಹೆಚ್ಚಿಸಿದೆ. ಆರಂಭದ ದಿನಗಳಲ್ಲಿ ಕಷ್ಟವಾಗಿತ್ತು, ನಿದ್ದೆ, ದಿನಚರಿ ಎಲ್ಲವೂ ಬದಲಾಗಿತ್ತು. ಮಗುವಿನ ಆರೈಕೆಯಲ್ಲಿಯೇ ದಿನ ಕಳೆಯುತ್ತಿತ್ತು. ಇದೊಂದು ವಿಭಿನ್ನ ಅನುಭವವಾಗಿತ್ತು ಎಂದು ಅನುಭವ ಹಂಚಿಕೊಂಡಿದ್ದಾರೆ.

ಪುಣೆಯ ಯುನಿವರ್ಸಿಟಿಯೊಂದರ  ಪ್ರಾಧ್ಯಾಪಕಿ ಶ್ರೀಪರ್ಣ ಅವರು ಸ್ವೀಡನ್‌ನಂತೆಯೇ ಭಾರತವು ಶಾಸನಬದ್ಧ ಪೋಷಕರ ರಜೆನೀತಿಯನ್ನು ಹೊಂದಿರಬೇಕು ಇದರಿಂದ ಮಗು ಮತ್ತು ತಾಯಿಯ ಆರೈಕೆ ಪರಿಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ದಿನನಿತ್ಯದ ಜೀವನದಲ್ಲಿ ಉದ್ಯೋಗದೊಂದಿಗೆ ಕುಟುಂಬವನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸಿಂಪಲ್​ ಟಿಪ್ಸ್​

Published On - 5:09 pm, Sun, 6 March 22