International Day of the Girl Child 2023: ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಮಹತ್ವ ಏನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 10, 2023 | 6:00 PM

ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ಹಕ್ಕುಗಳ  ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಅಕ್ಟೋಬರ್ 11 ರಂದು ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ  ಆಚರಣೆ ಯಾವಾಗ ಪ್ರಾರಂಭವಾಯಿತು, ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ.

International Day of the Girl Child 2023: ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಮಹತ್ವ ಏನು?
ಸಾಂದರ್ಭಿಕ ಚಿತ್ರ
Follow us on

ಹಲವಾರು ಜಾಗತಿಕ ವರದಿಗಳು ಮತ್ತು ಅಂಕಿಅಂಶಗಳ ಪ್ರಕಾರ ಕೌಟುಂಬಿಕ ಹಿಂಸಾಚಾರ, ಬಲವಂತದ ವಿವಾಹಗಳು, ಶಿಕ್ಷಣದ ಕೊರತೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಪ್ರಪಂಚದಾದ್ಯಂತ ಅದೆಷ್ಟೋ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಶಿಕ್ಷಣ, ಉದ್ಯೋಗ ಸೇರಿದಂತೆ  ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಷ್ಟೇ ಪ್ರಾಬಲ್ಯವನ್ನು ಸಾಧಿಸಿದ್ದಾರೆ. ಹೀಗೆ ಸಮಾಜ ಎಷ್ಟೇ ಮುಂದುವರೆದಿದ್ದರೂ ಕೂಡಾ ಇಲ್ಲಿ ಹೆಣ್ಣುಮಕ್ಕಳಿಗೆ ಹೇಳಿಕೊಳ್ಳುವಷ್ಟು ಸಮಾನ ಸ್ಥಾನಮಾನ ದೊರೆತಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ, ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ, ಪೋಷಣೆ,  ಕಾನೂನು ಹಕ್ಕುಗಳು, ಔಷಧೀಯ ಹಕ್ಕುಗಳ ಕೊರತೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ದೌರ್ಜನ್ಯ, ತಾರತಮ್ಯ ಹಾಗೂ  ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 11 ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಆಚರಣೆ ಯಾವಾಗ ಪ್ರಾರಂಭವಾಯಿತು?

ಹೆಣ್ಣು ಮಕ್ಕಳ ದಿನವನ್ನು ಆಚರಿಸುವ ಅಭಿಯಾನವನ್ನು ಸರ್ಕಾರೇತರ ಸಂಸ್ಥೆಯಾದ  ʼಪ್ಯಾನ್ ಇಂಟರ್ನ್ಯಾಷನಲ್ʼ ಸಂಸ್ಥೆಯು ಪ್ರಾರಂಭಿಸಿತು. ಈ ಅಭಿಯಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕೆನ್ನುವ ಸಲುವಾಗಿ ಈ ಸಂಸ್ಥೆ ಕೆನಡಾ ಸರ್ಕಾರವನ್ನು ಸಂಪರ್ಕಿಸಿತು.  ಕೆನಡಾ ಸರ್ಕಾರವು  ವಿಶ್ವ ಸಂಸ್ಥೆಯ  ಸಾಮಾನ್ಯ ಸಭೆಯಲ್ಲಿ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸುವ  ಪ್ರಸ್ತಾಪವನ್ನು ಮಂಡಿಸಿತು. ವಿಶ್ವ ಸಂಸ್ಥೆಯು ಡಿಸೆಂಬರ್ 19, 2011 ರಂದು ಈ ನಿರ್ಣಯವನ್ನು ಅಂಗೀಕರಿಸಿತು ಮತ್ತು  ಅಕ್ಟೋಬರ್ 11 ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುವುದಾಗಿ ಘೋಷಿಸಿತು.  ನಂತರ  ಅಕ್ಟೋಬರ್ 11, 2012 ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಈ  ವಿಶೇಷ ದಿನವನ್ನು ಪ್ರತಿವರ್ಷ ಜಾಗತಿಕ ಮಟ್ಟದಲ್ಲಿ ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಸ್ವತಂತ್ರ ಭಾರತದ ಅಮೃತಕಾಲದಲ್ಲಿ ಈಡೇರಲಿ ಹೆಣ್ಣುಮಕ್ಕಳ ಕನಸುಗಳು

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುವ ಉದ್ದೇಶ:

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 11 ರಂದು ವಿಶ್ವದ 50 ಕ್ಕೂ ಹೆಚ್ಚು ದೇಶಗಳು ಆಚರಿಸುತ್ತವೆ. ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವು  ಬಾಲ್ಯವಿವಾಹ, ಶಿಕ್ಷಣ, ತಾರತಮ್ಯ ಮತ್ತು ಹಿಂಸೆ ಸೇರಿದಂತೆ ಪ್ರಪಂಚದಾದ್ಯಂತ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ಆಧಾರಿತ ಅಸಮಾನತೆಯನ್ನು ಕೊನೆಗೊಳಿಸುವುದಾಗಿದೆ.  ಈ ದಿನ ಹೆಣ್ಣು ಮಕ್ಕಳ ಹಕ್ಕುಗಳು, ಸುರಕ್ಷತೆ ಮತ್ತು ಸಮಾನತೆಯ ಬಗ್ಗೆ ಅವರಿಗೆ ಅರಿವು ಮೂಡಿಸಲಾಗುತ್ತದೆ. ಇದರಿಂದ ಅವರು ಮುಂಬರುವ ಎಲ್ಲಾ ಸವಾಲುಗಳು ಮತ್ತು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬಹುದು.  ಅಲ್ಲದೆ ಹೆಣ್ಣು ಮಕ್ಕಳಿಗೆ ಸಮಾನ ಗೌರವ ಮತ್ತು ಹಕ್ಕುಗಳನ್ನು ನೀಡಲು ಅನೇಕ ದೇಶಗಳಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯಂದು  ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ